ಅಯೋಧ್ಯಾ ಶ್ರೀರಾಮ ಮಂದಿರ (Shreerama Mandir) ಉದ್ಘಾಟನೆಯನ್ನು ನೋಡಲು ಇಡೀ ದೇಶವೇ ಎದುರು ನೋಡುತ್ತಿದೆ. ಈ ವೇಳೆ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಮ ನಾಮ ಭಜನೆ ಮಾಡಿ ಎಂದು ವಿಡಿಯೋ ಸಂದೇಶ ನೀಡಿದ್ದ ಖ್ಯಾತ ಹಿನ್ನೆಲೆ ಗಾಯಕಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಕೆ .ಎಸ್. ಚಿತ್ರಾ (Chithra) ಅವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು ಪರ ಮತ್ತು ವಿರೋಧದ ಚರ್ಚೆ ಶುರುವಾಗಿದೆ.
ಗಾಯಕಿ ಚಿತ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಅಪ್‌ಡೇಟ್ ಮಾಡಿದ್ದರು. ಈ ವಿಡಿಯೋದಲ್ಲಿ ಚಿತ್ರಾ ಅವರು ಜನವರಿ 22ರಂದು ಮಧ್ಯಾಹ್ನ 12:20ಕ್ಕೆ ಎಲ್ಲರೂ ಶ್ರೀರಾಮ, ಜಯ ರಾಮ, ಜಯ ಜಯ ರಾಮ ಎಂಬ ಮಂತ್ರವನ್ನು ಭಜನೆ ಮಾಡುವಂತೆ ಮನವಿ ಮಾಡಿದ್ದರು.
ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗುವ ಹೊತ್ತಲ್ಲಿ ಎಲ್ಲರೂ ರಾಮ ನಾಮ ಭಜಿಸಿ ಧ್ಯಾನ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವಂತೆ ಚಿತ್ರ ಕೋರಿದ್ದರು. ಜೊತೆಗೆ 5 ದೀಪಗಳನ್ನು ಹಚ್ಚಿಡಬೇಕು ಎಂದು ಗಾಯಕಿ ಚಿತ್ರಾ ಅವರು ಕರೆ ನೀಡಿದ್ದರು. ಈ ವಿಡಿಯೋ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ
ಈ ವಿಡಿಯೋ ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಗಾಯಕಿ ಚಿತ್ರಾ ವಿರುದ್ಧ ಕೆಲವರು ಟೀಕೆ ಮಾಡಿದ್ದಾರೆ ಅಲ್ಲದೆ ನೀವು ರಾಜಕೀಯವಾಗಿ ಯಾರ ಪರ ಎಂದೆಲ್ಲಾ ಗಾಯಕಿ ಚಿತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಅವರಿಗೆ ತಮ್ಮ ನಿಲುವನ್ನು ಮಂಡಿಸುವ ಹಕ್ಕಿದೆ ಎಂದು ಹಲವರು ಚಿತ್ರಾ ಪರ ಬ್ಯಾಟ್ ಬೀಸಿದ್ದಾರೆ.











