ಬೆಂಗಳೂರು: ಶ್ರೀಮಂತರ ಮನೆಯಲ್ಲಿ ಸೆಕ್ಯೂರಿಟಿ ಸೇರಿದಂತೆ ಆಳು-ಕಾಳು ಇಟ್ಟುಕೊಳ್ಳುವುದು ಸಾಮಾನ್ಯ. ಹಲವರಂತೂ ಯಾವುದೇ ಪೂರ್ವಾಪರ ಇಲ್ಲದೆ, ಹಿಂದೆ- ಮುಂದೆ ನೋಡದೆ ಆಳುಗಳನ್ನು ನೇಮಿಸಿಕೊಂಡು ಬಿಡುತ್ತಾರೆ. ಸೆಕ್ಯೂರಿಟಿ, ಅಡುಗೆ, ಕಾರು ಚಾಲಕ ಸೇರಿದಂತೆ ಮನೆಗೆ ಬೇಕಾದವರನ್ನು ನೇಮಿಸಿಕೊಂಡು ಬಿಡುತ್ತಾರೆ. ಆದರೆ, ಅವರೆಲ್ಲ ಪ್ರಾಮಾಣಿಕರೇ…? ಅದರ ಬಗ್ಗೆ ಗಮನ ಹರಿಸುವುದೇ ಇಲ್ಲ. ಹೀಗೆ ಗಮನ ಹರಿಸದ ಹಿನ್ನೆಲೆಯಲ್ಲಿ ಸೆಕ್ಯೂರಿಟಿಯೇ ಮನೆ ಲೂಟಿ ಮಾಡಿ ಪರಾರಿಯಾಗಿರುವ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಅದೂ ಪ್ರತಿಷ್ಠಿತ ವ್ಯಕ್ತಿಯ ಮನೆಯಲ್ಲಿಯೇ ನಡೆದಿದ್ದು, ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸಿಲಿಕಾನ್ ಸಿಟಿಯ ಮಾಜಿ ಮೇಯರ್(Former Mayor) ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ(Theft) ವಾಗಿರುವ ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯಿ ಸಂಜಯನಗರದಲ್ಲಿ ಈ ಘಟನೆ ನಡೆದಿದೆ. ಮನೆಯ ಸೆಕ್ಯೂರಿಟಿ ಗಾರ್ಡ್ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಸೆಕ್ಯೂರಿಟಿ ಗಾರ್ಡ್ ನರಬಹದ್ದೂರ ಶಾಯಿ ಎಂಬಾತ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮನೆಯಲ್ಲಿಟ್ಟಿದ್ದ ಸುಮಾರು 1,29,17,000 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ವಾಚ್ ಗಳು ಹಾಗೂ ನಗದು ಕಳ್ಳತನವಾಗಿವೆ. 99,75,000 ರೂ. ಮೌಲ್ಯದ 1,425 ಗ್ರಾಂ ಚಿನ್ನಾಭರಣ, 18,92,000 ರೂ. ಮೌಲ್ಯದ 22 ಕೆಜಿ ಬೆಳ್ಳಿ ವಸ್ತುಗಳು, 6.50 ಲಕ್ಷ ರೂ. ಮೌಲ್ಯದ 3 ವಾಚ್ ಗಳು ಹಾಗೂ 4 ಲಕ್ಷ ರೂ. ನಗದು ಹಣ ದೋಚಿ ಪರಾರಿಯಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಈ ಕುರಿತು ದೂರು ದಾಖಲಿಸಿಕೊಂಡಿದ್ದು, ಸೆಕ್ಯೂರಿಟಿ ಗಾರ್ಡ್ ಗಾಗಿ ಹುಡುಕಾಟ ನಡೆಸಿದ್ದಾರೆ.