—–ನಾ ದಿವಾಕರ—–
ಸಾಮಾಜಿಕ ತಲ್ಲಣಗಳನ್ನು ರಂಜನೀಯವಾಗಿ ತೆರೆದಿಡುವ ಅಪೂರ್ವ ನಾಟಕ ʼಚೆಕ್ಮೇಟ್ʼ
=====
ರಂಗಭೂಮಿಯಲ್ಲಿ ಒಂದು ಸೌಂದರ್ಯ ಇದೆ. ರಂಗಕಲೆಯ ಸೌಂದರ್ಯಶಾಸ್ತ್ರ ಅಡಗಿರುವುದು ಅದು ಸಮಾಜದ ಮುಂದೆ ತೆರೆದಿಡಬಹುದಾದ ಬಹುಮುಖಿ ಸಾಧ್ಯತೆಗಳು ಮತ್ತು ಆಯಾಮಗಳಲ್ಲಿ. ಮೂಲತಃ ಸಮಾಜದ ಒಡಲೊಳಗಿಂದ ಉಗಮಿಸುವ ಚಿಂತನಾಧಾರೆಗಳು ಮತ್ತು ಆಲೋಚನಾ ವಿಧಾನಗಳ ನೆಲೆಯಲ್ಲಿ ತನ್ನ ಇರುವನ್ನು ಕಾಣುವ ರಂಗಭೂಮಿ, ತಾನು ನಿಂತ ನೆಲೆಯಲ್ಲೇ ಸಮಾಜದ ಓರೆಕೋರೆಗಳನ್ನು, ಲೋಪದೋಷಗಳನ್ನು, ಅಪಸವ್ಯಗಳನ್ನು ಮತ್ತು ಅದರೊಳಗಿನ ಔದಾತ್ಯಗಳನ್ನೂ ತನ್ನೊಳಗೆ ಆವಾಹಿಸಿಕೊಂಡು ರಂಗರೂಪದಲ್ಲಿ ಅಳವಡಿಸಿಕೊಳ್ಳುತ್ತದೆ. ನಾಟಕ ಎಂದರೆ ಹೀಗೇ ಇರಬೇಕು ಎನ್ನುವ ತಾತ್ವಿಕ ಸರಳುಗಳ ಹಿಂದೆ ಕಟ್ಟಿಹಾಕಿಕೊಳ್ಳದೆ ಸಾಂದರ್ಭಿಕವಾಗಿ ಸಮಾಜದ ವಿಭಿನ್ನ ಚಹರೆಗಳನ್ನು ದಾಖಲಿಸುತ್ತಾ, ಎಲ್ಲ ಸ್ತರಗಳಲ್ಲೂ ತನ್ನ ಧ್ವನಿಯನ್ನು ದಾಖಲಿಸುವುದು ರಂಗಭೂಮಿಯ ಒಂದು ವೈಶಿಷ್ಟ್ಯ. ಕನ್ನಡದ ರಂಗಭೂಮಿ ಇದನ್ನು ಸಾಕಾರಗೊಳಿಸುತ್ತಲೇ ಬಂದಿದೆ.
ವರ್ತಮಾನದ ಸಾಮಾಜಿಕ ಪ್ರಕ್ಷುಬ್ಧತೆ, ಆರ್ಥಿಕ ಸಂದಿಗ್ಧತೆ ಮತ್ತು ಸಾಂಸ್ಕೃತಿಕ ಗೋಜಲುಗಳ ನಡುವೆ ರಂಗಭೂಮಿಯ ಜವಾಬ್ದಾರಿ ತುಸು ಹೆಚ್ಚಾಗಿರುವುದು ವಾಸ್ತವ. ಏಕೆಂದರೆ ತಳಸಮಾಜದಲ್ಲಿ ಹುದುಗಿರುವ, ಮೇಲ್ನೋಟಕ್ಕೆ ಕಾಣದಂತಹ, ಆತಂಕ ಮತ್ತು ತಲ್ಲಣಗಳಿಗೆ ಸ್ಪಂದಿಸುವ ಮತ್ತು ನೊಂದ ಸಮಾಜವನ್ನು ಸಂತೈಸುವ ಜವಾಬ್ದಾರಿಯನ್ನು ಸಾಂಸ್ಕೃತಿಕ ಜಗತ್ತು ಹೊರಬೇಕಿದೆ. ಇಲ್ಲಿ ಸಾಹಿತ್ಯ ಮತ್ತು ರಂಗಭೂಮಿ ಪ್ರಧಾನ ಭೂಮಿಕೆಯಲ್ಲಿ ತಮ್ಮ ಆದ್ಯತೆಗಳನ್ನು ನಿರ್ವಚಿಸಿಕೊಳ್ಳಬೇಕಾಗಿದೆ. 21ನೆಯ ಶತಮಾನದ ಭಾರತೀಯ ಸಮಾಜವನ್ನು ಆಧುನಿಕ ನಾಗರಿಕತೆಯೆಡೆಗೆ ಕರೆದೊಯ್ಯಬೇಕಾದ ಜವಾಬ್ದಾರಿ ಇರುವ ಸಾಂಸ್ಕೃತಿಕ ಲೋಕವೊಂದು ಸಾಂಪ್ರದಾಯಿಕತೆಯೆಡೆಗೆ ಹೊರಳುತ್ತಿರುವ ದುರಿತ ಕಾಲದಲ್ಲಿ ಈ ಆದ್ಯತೆಗಳು ಪ್ರಧಾನವಾಗಿ ಮುನ್ನಲೆಗೆ ಬರಬೇಕಿದೆ.
ರಂಗಭೂಮಿಯತ್ತ ಸಮಾಜದ ನೋಟ
ಈ ತುಮುಲಗಳ ಕಾರಣಕ್ಕಾಗಿಯೇ ಸಾಮಾಜಿಕ ಸಂವೇದನೆಯುಳ್ಳ ಸಮಾಜದ ಒಂದು ವರ್ಗ ಸಾಹಿತ್ಯದತ್ತ , ವಿಶೇ಼ವಾಗಿ ರಂಗಭೂಮಿಯತ್ತ ದೃಷ್ಟಿ ನೆಟ್ಟಿರುತ್ತದೆ. ಸಾಂಸ್ಕೃತಿಕ ಪಲ್ಲಟಗಳಿಗೆ ಸ್ಪಂದಿಸಲು, ಜಟಿಲ ಸಾಮಾಜಿಕ ಸಿಕ್ಕುಗಳಿಗೆ ಪರಿಹಾರೋಪಾಯಗಳನ್ನು ಸೂಚಿಸಲು ಮತ್ತು ಬದುಕಿನ ಜಂಜಾಟಗಳಿಂದ ಜರ್ಜರಿತವಾದ ಸಮಾಜಕ್ಕೆ ಸಾಂತ್ವನದ ಮುಲಾಮು ಹಚ್ಚುವ ಸಾಧನಗಳಿಗಾಗಿ ಹಪಹಪಿ ಸಹಜವಾಗಿಯೇ ಇರುತ್ತದೆ. ಈ ಪ್ರಕ್ಷುಬ್ಧ ವಾತಾವರಣದಲ್ಲಿ ಸಮಾಜವೂ ಸಹ ಒಂದು ತಿಳಿಯಾದ ವಾತಾವರಣಕ್ಕಾಗಿ, ಮನರಂಜನೆಗಾಗಿ, ಮನ-ಹೃದಯಗಳನ್ನು ಸಂತೈಸುವ ಸಂವಹನ ಸೇತುವೆಗಳಿಗಾಗಿ ಹಾತೊರೆಯುತ್ತಿರುತ್ತದೆ. ಏಕೋ ಏನೋ ಸಾಹಿತ್ಯ ಮತ್ತು ಸಿನೆಮಾ ಈ ನಿಟ್ಟಿನಲ್ಲಿ ಹಿಮ್ಮೆಟ್ಟಿವೆ. ಸಾಹಿತ್ಯದಲ್ಲಿ ಹಾಸ್ಯ-ಮನರಂಜನೆ ಸೀಮಿತ ವಲಯದಲ್ಲಿ ಮಾತ್ರ ಕಾಣುತ್ತಿದ್ದು, ಸಿನೆಮಾ ರಂಗದಲ್ಲಿ ಈ ಎರಡೂ ವಿದ್ಯಮಾನಗಳು ಮಾರುಕಟ್ಟೆಯ ಸರಕುಗಳಾಗಿ ದಾರಿ ತಪ್ಪಿದಂತಾಗಿವೆ. ಟಿ ವಿ ಮಾಧ್ಯಮಗಳಲ್ಲಿ ಹಾಸ್ಯಪ್ರಜ್ಞೆ ರಿಯಾಲಿಟಿ ಷೋಗಳ ನಡುವೆ ಸಿಲುಕಿ ಜಜ್ಜಿಹೋಗಿದೆ.
ಈ ವಾತಾವರಣದಲ್ಲಿ ಸಮಾಜದ ಒಳಗಿನ ಆತಂಕಗಳನ್ನು ಮರೆಸಿ ಕೆಲಕಾಲವಾದರೂ ಮನಸ್ಸಿಗೆ ಮುದ ನೀಡುವ ಒಂದು ರಂಗಪ್ರಯೋಗ ಬೇಕು ಎನಿಸುವುದು ಸಹಜ. ಈ ಸಹಜಾಕಾಂಕ್ಷೆಯನ್ನು ಪೂರೈಸಲೇನೋ ಎಂಬಂತೆ ಮೈಸೂರಿನ ರಂಗಾಯಣ ʼ ಚೆಕ್ಮೇಟ್ ʼ ಎಂಬ ಹಾಸ್ಯ ಮಿಶ್ರಿತ ಪತ್ತೇದಾರಿ ನಾಟಕವೊಂದನ್ನು ಪ್ರದರ್ಶಿಸಿದ್ದು, ನಾಟಕದ ನೂರನೇ ಪ್ರದರ್ಶನಕ್ಕೆ ಸಾಕ್ಷಿಯಾದದ್ದು ಖುಷಿ ನೀಡುವ ವಿಚಾರ. ರಂಗಭೂಮಿಯ ಪ್ರಯೋಗಗಳೆಲ್ಲವೂ ಸಂದೇಶಾತ್ಮಕವಾಗಿಯೇ ಇರಬೇಕೆಂಬ ವರ್ತಮಾನದ ಆಶಯಗಳ ನಡುವೆಯೇ ʼ ಚೆಕ್ಮೇಟ್ ʼ ಇದನ್ನು ಹೊರತಾದ ಒಂದು ಕಥಾ ಹಂದರವನ್ನು ಪ್ರೇಕ್ಷಕರ ಮುಂದಿಟ್ಟು, ರಂಗಭೂಮಿಯ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಅಪರಾಧ ಜಗತ್ತಿನ ಒಂದು ಆಯಾಮವನ್ನು ತೆರೆದಿಡುವ ʼಚೆಕ್ಮೇಟ್ʼ ಶೆರ್ಲಾಕ್ ಹೋಮ್ಸ್ ಅವರ ಕತೆಗಳನ್ನು ಸಹಜವಾಗಿಯೇ ನೆನಪಿಸುವ ಒಂದು ನಾಟಕ.
ವಿಭಿನ್ನ ಆಯಾಮಗಳ ರಂಗಪ್ರಯೋಗಗಳಿಗೆ ಸದಾ ತೆರೆದುಕೊಂಡಿರುವ ಮರಾಠಿ ರಂಗಭೂಮಿಯಲ್ಲಿ ಅರಳಿದ ಈ ಪತ್ತೇದಾರಿ ಕತೆಯ ಮೂಲ ಕರ್ತೃ ಯೋಗೇಶ್ ಸೋಮಣ್. ಪ್ರಶಾಂತ್ ಕಿರ್ವಾಡ್ಕರ್ ಈ ನಾಟಕವನ್ನು ಹಿಂದಿಗೆ ಅನುವಾದಿಸಿ, ಕನ್ನಡಕ್ಕೆ ತಂದವರು ನಮ್ಮ ನಡುವಿನ ವಿದ್ವಾಂಸರಾದ ಡಾ. ತಿಪ್ಪೇಸ್ವಾಮಿ. ಪತ್ತೇದಾರಿ ಕಥಾ ಹಂದರವನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸಲು ಬೇಕಾದ ಎಲ್ಲ ಸೂಕ್ಷ್ಮತೆಗಳನ್ನೂ ಅನುಸರಿಸಿ, ಚೆಕ್ ಮೇಟ್ ನಾಟಕವನ್ನು ಕನ್ನಡದ ರಂಗಪ್ರಯೋಗಕ್ಕೆ ಸಜ್ಜುಗೊಳಿಸಿದ ಹೆಚ್. ಕೆ. ದ್ವಾರಕಾನಾಥ್ ಅವರ ಪರಿಶ್ರಮವನ್ನು ಸಾರ್ಥಕಗೊಳಿಸುವ ಹಾಗೆ ನಿರ್ದೇಶಿಸಿರುವುದು ಅನೂಪ್ ಜೋಷಿ (ಬಂಟಿ). ಈ ಕನ್ನಡ ಅವತರಣಿಕೆಗೆ ಇಲ್ಲಿನ ಸಾಂಸ್ಕೃತಿಕ ಸೂಕ್ಷ್ಮತೆಗಳಿಗನುಗುಣವಾಗಿ ಹಿನ್ನೆಲೆ ಸಂಗೀತವನ್ನು ಆಯೋಜಿಸಿರುವುದು, ಈಗ ನಮ್ಮೊಡನಿಲ್ಲದ ಶ್ರೀನಿವಾಸ್ ಭಟ್ (ಚೀನಿ). ಈ ಎಲ್ಲ ಕಲಾವಿದರ ರಂಗಪ್ರಯೋಗಕ್ಕೆ ಮೆರುಗು ನೀಡಿರುವುದು ರಂಗಾಯಣದ ಹಿರಿಯ ಕಲಾವಿದರು.
ಬಿಗಿ ನಿರೂಪಣೆಯ ಕಥಾ ಹಂದರ
ಪತ್ತೇದಾರಿ ಕಥಾವಸ್ತುವನ್ನು ಹೊಂದಿರುವ ಚೆಕ್ ಮೇಟ್ ಒಂದು ಸರಳರೇಖೆಯಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಸಮಾಜವು ಆಧುನಿಕತೆಗೆ ತೆರೆದುಕೊಂಡಷ್ಟೂ ಅದರೊಳಗಿನ ಮನುಜ ಪ್ರಜ್ಞೆ ತನ್ನೊಳಗೆ ಹದುಗಿಕೊಂಡು, ತಾನು ತನ್ನ ಅಸ್ತಿತ್ವ ತನ್ನ ಏಳಿಗೆ ಮತ್ತು ವಿಕಾಸದ ಬಗ್ಗೆಯೇ ಯೋಚಿಸುವಂತೆ ಮಾಡುವುದು ಇತಿಹಾಸ ಕಂಡಿರುವ ಸತ್ಯ. ಆಧುನಿಕ ಶಿಕ್ಷಣ ಸಾಮಾನ್ಯರಲ್ಲಿ ನೈತಿಕ ಮೌಲ್ಯಗಳನ್ನು ಎಷ್ಟೇ ಉದ್ಧೀಪನಗೊಳಿಸಿದರೂ ಮನುಷ್ಯ ಸಮಾಜದ ಸ್ವಾರ್ಥ ಅದನ್ನು ಹಿಂದಕ್ಕೆ ನೂಕಿ ಅಪರಾಧಗಳತ್ತ ವಾಲುತ್ತದೆ. ಹಾಗಾಗಿಯೇ ನವ ನಾಗರಿಕತೆಯಾಗಲೀ, ಆಧುನಿಕತೆಯಾಗಲೀ ಅಪರಾಧಿಕ ಮನೋಭಾವವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ತಂತ್ರಜ್ಞಾನದ ಬೆಳವಣಿಗೆ ಈ ಪಾತಕ ಲೋಕವನ್ನು ಉತ್ತೇಜಿಸುವಂತಹ ಸಾಧನಗಳನ್ನು ಒದಗಿಸಿರುವುದು ಸಮಾಜ ಕಂಟಕ ಪ್ರವೃತ್ತಿ ಎಲ್ಲ ಸ್ತರಗಳಲ್ಲೂ, ಎಲ್ಲ ವೃತ್ತಿಗಳಿಗೂ, ಎಲ್ಲ ಶ್ರೇಣಿಗಳಲ್ಲೂ ವಿಸ್ತರಿಸಲು ಕಾರಣವಾಗಿದೆ.
ʼಚೆಕ್ಮೇಟ್ʼ ಇಂತಹ ಒಂದು ಅಪರಾಧ ಜಗತ್ತನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸುತ್ತದೆ. ಮಧ್ಯಮ ವರ್ಗಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಉನ್ನತಾಕಾಂಕ್ಷೆಯ ಆಶಯಗಳು ಹಣ ಸಂಪಾದಿಸುವ ಮಾರ್ಗಗಳನ್ನು ಅರಸುತ್ತಲೇ ಇರುತ್ತವೆ. ʼಚೆಕ್ಮೇಟ್ʼ ಆರಂಭವಾಗುವುದು ಇಂತಹ ಮಹತ್ವಾಕಾಂಕ್ಷಿ ದಂಪತಿಗಳು ಹೆಚ್ಚು ಹೆಚ್ಚು ಸಂಪಾದಿಸಲು ವಾಮ ಮಾರ್ಗಗಳನ್ನು ಹುಡುಕುವುದರ ಮೂಲಕ. ವಾಣಿಜ್ಯ-ವ್ಯಾಪಾರ ಲೋಕದಲ್ಲಿ ಉದ್ಯಮಿಗಳು ತಮ್ಮ ಸರಕು ಗೋದಾಮುಗಳನ್ನು ತಾವೇ ಸುಟ್ಟುಹಾಕಿ ವಿಮೆ ಹಣವನ್ನು ಕಬಳಿಸುವ ನಿದರ್ಶನಗಳು ಸಹಜವಾಗಿ ಕಾಣುವಂತಹುದು. ಅಂತಹುದೇ ಮಾರ್ಗವನ್ನು ಅನುಸರಿಸುವ ಮೂಲಕ ತನ್ನ ಸಾವನ್ನು ತಾನೇ ಘೋಷಿಸಿಕೊಂಡು, ಲಕ್ಷಾಂತರ ರೂಗಳ ವಿಮೆ ಹಣ ಗಳಿಸಿ, ಐಷಾರಾಮಿ ಬದುಕಿನತ್ತ ಸಾಗುವ ದಂಪತಿಗಳ ದುರಾಲೋಚನೆಯಿಂದ ಕತೆ ಬಿಚ್ಚಿಕೊಳ್ಳುತ್ತದೆ. ಭೋಗ ಜೀವನದ ಲಾಲಸೆ ಮನುಷ್ಯನಲ್ಲಿ ಏನೆಲ್ಲಾ ದುಷ್ಟತನವನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಹಂತಹಂತವಾಗಿ ಬಿಂಬಿಸುವ ಮೂಲಕ ಕತೆ ರೋಚಕತೆ ಪಡೆದುಕೊಳ್ಳುತ್ತದೆ.
ಆದರೆ ಸಮಾಜದಲ್ಲಿ ಅಪರಾಧ ಹೆಚ್ಚಾದಷ್ಟೂ ಪಾತಕ ಲೋಕವನ್ನು ನಿಯಂತ್ರಿಸುವ ಕಾನೂನಾತ್ಮಕ ಪ್ರಕ್ರಿಯೆಯೂ ಚುರುಕಾಗುವುದು ಸಹಜ. ಚೆಕ್ಮೇಟ್ ನಾಟಕದ ಕಥಾ ಹಂದರ ಕ್ರಮೇಣವಾಗಿ ಈ ದಿಕ್ಕಿನಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಕಾನೂನು ಪಾಲನೆಯ ಜವಾಬ್ದಾರಿ ಹೊತ್ತಿರುವ ವ್ಯಕ್ತಿಗಳು ತಮ್ಮ ವೃತ್ತಿಧರ್ಮವನ್ನೂ ಮರೆತು, ವೈಯುಕ್ತಿಕ ನೈತಿಕತೆಯನ್ನೂ ಬದಿಗೊತ್ತಿ ಹಣದ ಬೆನ್ನಟ್ಟಿ ಹೋಗುವ ಮೂಲಕ ಸಮಾಜದ ಅಪರಾಧಗಳನ್ನು ನಿಯಂತ್ರಿಸುವ ಅಧಿಕಾರವನ್ನು ಬಳಸಿಕೊಂಡೇ ತಮ್ಮ ವೈಯುಕ್ತಿಕ ಬದುಕಿನ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಪ್ರವೃತ್ತಿ ನಮ್ಮ ಸಮಾಜದಲ್ಲಿ ಇಂದಿಗೂ ಇದೆ. ʼಚೆಕ್ಮೇಟ್ʼ ಇಂತಹ ಒಂದು ವ್ಯಕ್ತಿತ್ವವನ್ನು ಸತ್ಯಶೀಲ್ ಸತ್ಯ ಎಂಬ ತನಿಖಾಧಿಕಾರಿಯಲ್ಲಿ ಬಿಂಬಿಸುತ್ತದೆ. ನಾಟಕದ ಆರಂಭದಲ್ಲಿ ಕಾಣುವ ನಚಿಕೇತ-ನಂದಿನಿ ದಂಪತಿಯ ವಂಚಕ ಯೋಜನೆಯನ್ನು ಬಯಲಿಗೆಳೆಯಲು ಪ್ರವೇಶಿಸುವ ಸತ್ಯಶೀಲ್ ಸ್ವತಃ ವಂಚನೆಯ ಹಾದಿಯಲ್ಲಿರುವುದು ನಾಟಕದ ಕೊನೆಯಲ್ಲಿ ಬಿಚ್ಚಿಕೊಳ್ಳುತ್ತದೆ.
ನಚಿಕೇತ-ನಂದಿನಿ ದಂಪತಿಗಳ ದೂರಾಲೋಚನೆ ಮತ್ತು ಸತ್ಯಶೀಲ ಸತ್ಯನ ದುರಾಲೋಚನೆ ಎರಡರಲ್ಲಿ ಸತ್ಯ ಗೆಲ್ಲುವುದು ಎಲ್ಲಿ ಎನ್ನುವುದು ನಾಟಕದ ಅಂತ್ಯದಲ್ಲಿ ತೆರೆದುಕೊಳ್ಳುತ್ತದೆ. ಕಾನೂನು ನಿಯಮಗಳನ್ನು ಉಲ್ಲಂಘಿಸಿ ತಮ್ಮ ಕಾರ್ಯಸಾಧನೆ ಮಾಡುವ ಲೋಭಿಗಳನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ತನ್ನ ಜಾಣ್ಮೆಯನ್ನು ಹೇಗೆ ಬಳಸಿಕೊಳ್ಳುತ್ತದೆ , ಮತ್ತೊಂದು ಬದಿಯಲ್ಲಿ ಪೊಲೀಸ್ ಇಲಾಖೆಯಲ್ಲೇ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅಪರಾಧಿಕ ಜಗತ್ತನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ನಾಟಕದಲ್ಲಿ ಪತ್ತೇದಾರಿ ಶೈಲಿಯಲ್ಲಿ ಬಿಂಬಿಸಲಾಗಿದೆ. ಅಂತಿಮವಾಗಿ ಕಾನೂನುಭಂಜಕ ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆಯ ಹದ್ದಿನ ಕಣ್ಣು ಸದಾ ಜಾಗೃತವಾಗಿರುತ್ತದೆ ಎಂಬ ಒಂದು ಸಕಾರಾತ್ಮಕ ಸಂದೇಶವನ್ನು ಚೆಕ್ ಮೇಟ್ ನೀಡುತ್ತದೆ. ಅಂತ್ಯ ಹೇಗಾಗುತ್ತದೆ ಎಂದು ನಾಟಕ ನೋಡಿಯೇ ತಿಳಿಯಬೇಕು.
ರಂಗ ರೂಪದ ಚೆಲುವು
ʼಚೆಕ್ಮೇಟ್ʼ ನಾಟಕದ ಮೂಲ ಸತ್ವ ಇರುವುದು ಈ ರಹಸ್ಯವನ್ನು ಕೊನೆಯವರೆಗೂ ಕಾಪಾಡಿಕೊಂಡು ಬರುವಲ್ಲಿ. ಅಪರಾಧ ಯಾವ ರೀತಿಯಲ್ಲಿ, ಎಲ್ಲಿ, ಹೇಗೆ, ಏಕೆ ನಡೆದಿದೆ ಎಂಬುದನ್ನು ಕೊನೆಯವರೆಗೂ ಪ್ರೇಕ್ಷಕರಿಗೆ ತಿಳಿಯದಂತೆ ಬಿಗಿ ಹಿಡಿತ ಸಾಧಿಸುವುದೇ ಪತ್ತೇದಾರಿ ಕಥಾ ಹಂದರಗಳ ವೈಶಿಷ್ಟ್ಯ. ಈ ನಿಟ್ಟಿನಲ್ಲಿ ಚೆಕ್ಮೇಟ್ ನೂರಕ್ಕೆ ನೂರು ಯಶಸ್ವಿಯಾಗುತ್ತದೆ. Captivating ಎನ್ನಬಹುದಾದ ರೀತಿಯಲ್ಲಿ ನಾಟಕದ ಪ್ರೇಕ್ಷಕರನ್ನು ಕೊನೆಯ ದೃಶ್ಯದವರೆಗೂ ಕುತೂಹಲದಲ್ಲೇ ಇರಿಸುವುದು ಚೆಕ್ಮೇಟ್ ನಾಟಕದ ಹಿರಿಮೆ. ಇದು ಸಾಧ್ಯವಾಗುವುದು ಹಾಸ್ಯ ಮಿಶ್ರಿತ ಸಂಭಾಷಣೆ, ಭಾವನಾತ್ಮಕ ಸಹಜಾಭಿನಯ ಮತ್ತು ರಂಗದ ಮೇಲೆ ಬಿಚ್ಚಿಕೊಳ್ಳುವ ಕತೆಯ ಮೂಲಕ. ನಿರ್ದೇಶಕರಾದ ಅನೂಪ್ ಜೋಷಿ (ಬಂಟಿ) ಅವರ ಹಿರಿಮೆಗೆ ಹ್ಯಾಟ್ಸ್ಆಫ್ ಎನ್ನಬಹುದು. ಚೂರೂ ಸುಳಿವು ಸಿಗದ ಹಾಗೆ ಸಸ್ಪೆನ್ಸ್ ಕಾಪಾಡಿಕೊಂಡು ಬರಲು ಪೂರಕವಾಗಿರುವ ಸಂಭಾಷಣೆಗಳೂ ಸಹ ಅಷ್ಟೇ ಪರಿಣಾಮಕಾರಿಯಾಗಿವುದು ನಾಟಕದ ಹೈಲೈಟ್ಸ್.
ಇದನ್ನೂ ಮೀರಿದ ಹೈ ಲೈಟ್ ಎಂದರೆ ನಚಿಕೇತ ಪಾತ್ರದಲ್ಲಿ ಹುಲಗಪ್ಪ ಕಟ್ಟಿಮನಿ, ನಂದಿನಿ ಪಾತ್ರದಲ್ಲಿ ಗೀತಾ ಮೊಂಟಡ್ಕ ಮತ್ತು ಸತ್ಯಶೀಲ ಸತ್ಯ ಪಾತ್ರದಲ್ಲಿ ಪ್ರಶಾಂತ್ ಹಿರೇಮಠ್ ಅವರುಗಳ ಅದ್ಭುತ ನಟನೆ ಮತ್ತು ಸಂಭಾಷಣೆ. ಚೆಕ್ಮೇಟ್ ಒಂದು ಪತ್ತೇದಾರಿ ನಾಟಕವೇ ಆದರೂ ನಡುನಡುವೆ ಹಾಸ್ಯದ ಹೊನಲು ಹರಿಸಲು ಅನುಸರಿಸಿರುವ ವಿಧಾನ ಮೆಚ್ಚುಗೆ ಪಡೆಯುತ್ತದೆ. ಹಾವಭಾವಗಳಿಗೆ ಮೊರೆ ಹೋಗದೆ, ಅಂಗಚೇಷ್ಟೆಗಳಿಲ್ಲದೆ ಹಾಸ್ಯ ಸಾಧ್ಯವೇ ಇಲ್ಲ ಎನ್ನುವಂತೆ ಸಿನಿಮಾ ಮತ್ತು ಟಿವಿ ಧಾರಾವಾಹಿಗಳಲ್ಲಿ ಬಿಂಬಿಸುತ್ತಿರುವ ಹೊತ್ತಿನಲ್ಲಿ, ಈ ರಂಗಾಯಣದ ಕಲಾವಿದರು ಸಂಭಾಷಣೆಯ ಮೂಲಕವೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದು ಅಪೂರ್ವ. ದೃಶ್ಯದಿಂದ ದೃಶ್ಯಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಮೂಲಕ ಹಿಡಿದಿಟ್ಟುಕೊಳ್ಳುವ ಚೆಕ್ಮೇಟ್ ಹಾಸ್ಯ ಸಂಭಾಷಣೆಗಳ ಮೂಲಕ ನಗೆಯ ಹೊನಲನ್ನೂ ಹರಿಸುವುದು ಇಡೀ ನಾಟಕದ ಹೈಲೈಟ್ ಎನ್ನಬಹುದು.
ಪ್ರಶಾಂತ್ ಹಿರೇಮಠ್, ಗೀತಾ ಮೊಂಟಡ್ಕ ಮತ್ತು ಹುಲಗಪ್ಪ ಕಟ್ಟಿಮನಿ ಮೂವರೂ ನುರಿತ ಕಲಾವಿದರ ಅದ್ಭುತ ಆಂಗಿಕ ಅಭಿನಯ, ಸಂಭಾಷಣೆ, ಭಾವನೆಗಳ ಸಹಜಾಭಿವ್ಯಕ್ತಿ ಎಲ್ಲವೂ ಸಹ ಚೆಕ್ ಮೇಟ್ ನಾಟಕವನ್ನು ಹೃದಯಕ್ಕೆ ಹತ್ತಿರವಾಗಿಸುತ್ತದೆ. ಮನರಂಜನೆ ಕೇಂದ್ರಿತ ಕಥಾವಸ್ತುವನ್ನು ಪ್ರೇಕ್ಷಕರಿಗೆ ಅಪ್ಯಾಯಮಾನವಾಗಿಸುವಂತಹ ಸಹಜಾಭಿನಯ ಮತ್ತು ಅದ್ಭುತವಾದ ಹಿನ್ನೆಲೆ ಸಂಗೀತ, ರಂಗ ವಿನ್ಯಾಸ ಚೆಕ್ ಮೇಟ್ ನಾಟಕವನ್ನು ಮತ್ತೆ ಮತ್ತೆ ನೋಡುವಂತೆ ಪ್ರಚೋದಿಸುತ್ತದೆ. ಪತ್ತೇದಾರಿ ಕಥಾವಸ್ತು ಇರುವ ನಾಟಕ ಈ ರೀತಿಯ ಉತ್ಸಾಹ ಮೂಡಿಸುವುದು ನಾಟಕ ನಿರ್ದೇಶಕರ ಮತ್ತು ನಟರ ಮತ್ತು ಇತರ ಕಲಾವಿದರ ಹಿರಿಮೆ ಎಂದೇ ಹೇಳಬಹುದು. ಇದಕ್ಕೆ ಪೂರಕವಾದ ಮಹೇಶ್ ಕಲ್ಲತ್ತಿ ಅವರ ಬೆಳಕುವಿನ್ಯಾಸ, ಜನಾರ್ಧನ್ ಅವರ ರಂಗ ಸಜ್ಜಿಕೆ ಮತ್ತು ಅಂಜುಸಿಂಗ್-ಧನಂಜಯ್ ಆರ್ ಪಿ ಅವರ ಸಂಗೀತ ನಿರ್ವಹಣೆ ಚೆಕ್ ಮೇಟ್ ನಾಟಕವನ್ನು ಆಕರ್ಷಣೀಯವಾಗಿಸುತ್ತದೆ.
ಈ ಹಿರಿಮೆಗಳೇ ಚೆಕ್ ಮೇಟ್ ನಾಟಕವನ್ನು ನೂರು ಪ್ರದರ್ಶನಗಳ ಗಡಿಯನ್ನು ದಾಟಿಸುವಲ್ಲಿ ಯಶಸ್ವಿಯಾಗಿದೆ. ನೂರನೇ ಪ್ರದರ್ಶನ ಮೈಸೂರು ರಂಗಾಯಣದಲ್ಲೇ, ನಿರ್ದೇಶಕ ಅನೂಪ್ ಜೋಷಿ ಅವರ ಉಪಸ್ಥಿತಿಯಲ್ಲೇ ಪ್ರದರ್ಶನಗೊಂಡಿರುವುದು, ಚೆಕ್ಮೇಟ್ ತಂಡಕ್ಕೇ ಅಲ್ಲ, ರಂಗಾಸಕ್ತರಲ್ಲೂ ಸಾರ್ಥಕ ಭಾವ ಮೂಡಿಸುತ್ತದೆ. ಚೆಕ್ಮೇಟ್ ಎಲ್ಲರೂ ನೋಡಲೇಬೇಕಾದ ಒಂದು ವಿಭಿನ್ನ ರಂಗ ಪ್ರಯೋಗ.
-೦-೦-೦-