ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನ್ನು ಪ್ರೀತಿಸಿದ ಯುವತಿ ನಂತರ ಆತ ಮಂಗಳಮುಖಿ ಎಂದು ತಿಳಿದು ಆಘಾತಕ್ಕೆ ಒಳಗಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಸಮೀಪದ ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಯುವತಿಗೆ 4 ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ಪ್ರದೀಪ್ ಎಂಬಾತನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು. ಆತನ ಮುಖ ನೋಡದೆ ಇದ್ದರೂ, ಆತನ ಪ್ರೀತಿಯ ಮಾತಿಗೆ ಮರುಳಾಗಿ ಯುವತಿ ಪ್ರೇಮಪಾಶಕ್ಕೆ ಸಿಲುಕಿದ್ದಳು. ಆತ ದಿನ ಕರೆ ಮಾಡಿ ಮದುವೆಯಾಗುವುದಾಗಿ ನಂಬಿಸುತ್ತಿದ್ದ.
ಈ ವಿಚಾರವಾಗಿ ಯುವತಿ ಮನೆಮಂದಿಯೊಂದಿಗೆ ಜಗಳವಾಡುತ್ತಿದ್ದಳು. ಈ ಬಗ್ಗೆ ಯುವತಿಯ ತಾಯಿ, ವಕೀಲೆ ಶೈಲಜಾ ರಾಜೇಶ್ ಅವರಲ್ಲಿ ವಿಷಯ ತಿಳಿಸಿದ್ದರು. ಅವರು ಕೌನ್ಸೆಲಿಂಗ್ ಮಾಡಿದಾಗ ಯುವತಿ ಸಂಪೂರ್ಣವಾಗಿ ಪ್ರದೀಪ್ ನ ಮೋಹಕ್ಕೆ ಒಳಗಾಗಿದ್ದಳು. ಮನವರಿಕೆ ಮಾಡಿದರೂ ಮಾತು ಕೇಳದಿದ್ದಾಗ ಶೈಲಜಾ ರಾಜೇಶ್ ಸೂಚನೆಯಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿತ್ತು.
ಸ್ವತಃ ಶೈಲಜಾ ರಾಜೇಶ್ ಅವರು ಪೊಲೀಸರ ಸಹಕಾರದೊಂದಿಗೆ ಯುವತಿಗೆ ಕರೆ ಮಾಡಿದವನ ಮನೆಗೆ ಭೇಟಿ ಮಾಡಿದಾಗ ಅಚ್ಚರಿಯ ಅಂಶ ಬೆಳಕಿಗೆ ಬಂದಿದ್ದು, ಗಂಡಸಿನ ಧ್ವನಿಯಲ್ಲಿ ಮಾತನಾಡುತ್ತಿರುವುದು ಜ್ಯೋತಿ ಎಂಬ ಮಂಗಳಮುಖಿ ಎಂದು ಗೊತ್ತಾಗಿದೆ. ಅಂತೂ ನಾಲ್ಕು ವರ್ಷದಿಂದ ಮನೆಯವರಿಗೆ ತಲೆನೋವಾಗಿದ್ದ ಯುವತಿಯ ಪ್ರೇಮ ಪ್ರಕರಣ ಅಂತ್ಯ ಕಂಡಿದೆ.