ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರಿಗೆ ಈ ಬಾರಿಯ ಹುಟ್ಟುಹಬ್ಬದಲ್ಲಿ ವಿಶೇಷ ಉಡುಗೊರೆಯೊಂದು ಲಭಿಸಿದೆ. ಭಾರತೀಯ ಕ್ಲಾಸಿಕ್ ಬೈಕ್‌ಗಳ, ವಿಶೇಷವಾಗಿ ಯೆಜ್ಡಿ ಬೈಕ್‌ಗಳ ಅಪಾರ ಅಭಿಮಾನಿಯಾಗಿರುವ ಡಿಸಿಎಂ ಅವರಿಗೆ ‘ಷಾಡೋ ಬ್ಲಾಕ್’ ಬಣ್ಣದ ಹೊಸ ಯೆಜ್ಡಿ ರೋಡ್‌ಸ್ಟರ್ ಬೈಕ್ ಅನ್ನು ಜನ್ಮದಿನದ ಕಾಣಿಕೆಯಾಗಿ ನೀಡಲಾಗಿದೆ.

ಯೆಜ್ಡಿ ಬೈಕ್‌ಗಳ ಮೇಲಿನ ಪ್ರೀತಿಯನ್ನು ಹಲವು ಬಾರಿ ವ್ಯಕ್ತಪಡಿಸಿದ್ದ ಡಿ.ಕೆ. ಶಿವಕುಮಾರ್ ಅವರು, ತಮ್ಮ ನೆಚ್ಚಿನ ಬೈಕ್‌ನ್ನು ಉಡುಗೊರೆಯಾಗಿ ಸ್ವೀಕರಿಸಿ ಯೌವನದ ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು. ಯುವಕನಾಗಿದ್ದ ದಿನಗಳಲ್ಲಿ ಇದೇ ಯೆಜ್ಡಿ ಬೈಕ್‌ನಲ್ಲಿ ಮಾಡಿದ ಲಾಂಗ್ ರೈಡ್‌ಗಳು ಹಾಗೂ ಆ ಕಾಲದ ಅನುಭವಗಳನ್ನು ಅವರು ಸ್ಮರಿಸಿದರು.ಬೆಂಗಳೂರಿನ ಸಫೀನಾ ಮೊಟರ್ಸ್ ಮುಖ್ಯಸ್ಥ ಫಿರೋಜ್ ಸತ್ತಾರ್ ಸೇಠ್ ಅವರು ಡಿಸಿಎಂ ನಿವಾಸದಲ್ಲಿ ಬೈಕ್‌ನ್ನು ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, “ನನ್ನ ವಾಹನಗಳ ಸಂಗ್ರಹಕ್ಕೆ ಹೊಸ ಯೆಜ್ಡಿ ರೋಡ್‌ಸ್ಟರ್ ಸೇರ್ಪಡೆಯಾಗಿರುವುದು ಅಪಾರ ಸಂತಸ ತಂದಿದೆ. ಶೀಘ್ರದಲ್ಲೇ ಈ ಬೈಕ್‌ನಲ್ಲಿ ರೈಡ್ ಹೋಗುವ ನಿರೀಕ್ಷೆಯಲ್ಲಿದ್ದೇನೆ. ಪ್ರತಿಯೊಬ್ಬ ನಿಜವಾದ ಬೈಕ್ ಪ್ರಿಯರ ಕನಸು ಹಾಗೂ ಭಾವನೆಗಳನ್ನು ಪ್ರತಿಬಿಂಬಿಸುವ ಬ್ರ್ಯಾಂಡ್ ಇದು,” ಎಂದು ಸಂತಸ ವ್ಯಕ್ತಪಡಿಸಿದರು.






