
ನವ ಉದಾರವಾದದ ಆಕ್ರಮಣಕ್ಕೆ ಜಗತ್ತಿನ ಯುವ ತಲೆಮಾರು ತಲ್ಲಣಿಸುತ್ತಿರುವುದು ವಾಸ್ತವ
ನಾದಿವಾಕರ
ಭಾರತದ ನೆರೆ ರಾಷ್ಟ್ರ ನೇಪಾಳದಲ್ಲಿ ಇತ್ತೀಚೆಗೆ ನಡೆದ ವಿಪ್ಲವಕಾರಿ ಪಲ್ಲಟಗಳು ಜಗತ್ತಿನ ಬಹುಪಾಲು ದೇಶಗಳ ಆಳ್ವಿಕೆಗಳನ್ನು ತಲ್ಲಣಗೊಳಿಸಿವೆ. ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಇದೇ ಮಾದರಿಯ ಬಂಡಾಯ, ದಂಗೆ ಮತ್ತು ಹಿಂಸಾತ್ಮಕ ಗಲಭೆಗಳು ಶ್ರೀಲಂಕಾ, ಬಾಂಗ್ಲಾದೇಶದಲ್ಲೂ ಸಂಭವಿಸಿರುವುದು, ನೇಪಾಳದ ವಿದ್ಯಮಾನಗಳನ್ನು ಪ್ರತ್ಯೇಕಿಸಬಹುದಾದ ಕ್ಷೋಭೆ ಅಥವಾ ಆಂತರಿಕ ಪಿತೂರಿ ಎಂದು ಪರಿಗಣಿಸಲಾಗದಂತೆ ಮಾಡಿದೆ. ಒಂದು ಹಂತದವರೆಗೆ ಈ ಮೂರೂ ದೇಶಗಳಲ್ಲಿ ನಡೆದ ಘಟನೆಗಳಲ್ಲಿ ಒಂದು ಮಾದರಿಯನ್ನು ಕಾಣಬಹುದು. ಇದೇನೂ ಸಿದ್ಧಮಾದರಿಯಲ್ಲ ಆದರೆ, ಹಲವು ಸಮಾನ ಲಕ್ಷಣಗಳನ್ನು ಬಿಂಬಿಸುವ ಈ ಬಂಡಾಯಗಳು, ಮೂಲ ಸಮಸ್ಯೆಯ ಸ್ವರೂಪ ಒಂದೇ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಮೂರೂ ದೇಶಗಳಲ್ಲಿ ನಡೆದದ್ದು ಸೇನಾ ಕ್ಷಿಪ್ರ ಕ್ರಾಂತಿ ಅಲ್ಲ. ಅಥವಾ ಸೈದ್ಧಾಂತಿಕ ಚೌಕಟ್ಟಿನ ರಾಜಕೀಯ ವಿಪ್ಲವಗಳಲ್ಲ. ಚಾರಿತ್ರಿಕ ಹಿನ್ನೆಲೆಯ ವಿಭಿನ್ನ ಸಿದ್ಧಾಂತಗಳ ರೂಪಾಂತರಗಳೂ ಅಲ್ಲ. ಬದಲಾಗಿ, ಮೂರೂ ದೇಶಗಳಲ್ಲಿ ಬಂಡಾಯ ಹೂಡಿದ್ದು ಆಯಾ ದೇಶಗಳ ಯುವ ಸಮೂಹ, ನಗರವಾಸಿ ಮಿಲೆನಿಯಂ ಜಗತ್ತು ಹಾಗೂ ಇದಕ್ಕೆ ಸ್ಪಂದಿಸಿದ ಅವಕಾಶವಂಚಿತ ಸಮುದಾಯಗಳು. ಈ ಯುವ ಸಮೂಹದ ಆಕ್ರೋಶ ವ್ಯಕ್ತವಾಗಿದ್ದು ಆಳ್ವಿಕೆಗಳ ಆಡಳಿತ-ಆರ್ಥಿಕ ನೀತಿಗಳ ವಿರುದ್ಧ. ಈ ಯುವ ಜಗತ್ತಿನ ಬದುಕನ್ನು ಅನಿಶ್ಚಿತಗೊಳಿಸಿದ್ದ, ಭವಿಷ್ಯದ ಹಾದಿಯನ್ನು ಮಸುಕಾಗಿಸಿದ್ದ, ಜೀವನ ನಿರ್ವಹಣೆಯನ್ನು ದುಸ್ತರಗೊಳಿಸುವ ನವ ಉದಾರವಾದಿ-ಬಂಡವಾಳಶಾಹಿ ಕಾರ್ಪೋರೇಟ್ ಮಾರುಕಟ್ಟೆ ನಿರ್ದೇಶಿತ ಆರ್ಥಿಕ ನೀತಿಗಳು ಜನಾಕ್ರೋಶಕ್ಕೆ ಮೂಲ ಕಾರಣವಾಗಿದ್ದುದನ್ನು ಮೂರೂ ದೇಶಗಳಲ್ಲಿ ಗಮನಿಸಬಹುದು.
ಯುವ ಜಗತ್ತಿನ ಹತಾಶೆಯ ದ್ಯೋತಕ
ಈ ಬಂಡಾಯಗಳಲ್ಲಿ ಯುವ ಸಮೂಹದ ಕ್ರಿಯಾಶೀಲ ಭಾಗವಹಿಸುವಿಕೆಯೊಂದೇ ಅಲ್ಲದೆ ಪ್ರಮುಖವಾಗಿ ಕಾಣುವುದು ಸಾಮಾಜಿಕ ಮಾಧ್ಯಮಗಳ (Social Media) ಬಳಕೆ ಮತ್ತು ವ್ಯಾಪಕ ಪ್ರಭಾವ. ತಂತ್ರಜ್ಞಾನ ಮತ್ತು ಆಧುನಿಕ ಸಂವಹನ ಮಾಧ್ಯಮಗಳು ಸಮಾಜದ ಮೇಲೆ ಮೌಲಿಕವಾಗಿ ಎಷ್ಟೇ ವ್ಯತಿರಿಕ್ತ-ಅನಪೇಕ್ಷಿತ ಪರಿಣಾಮ ಬೀರುತಿದ್ದರೂ, ಒಂದು ಹಂತದಲ್ಲಿ ಇದು ಯುವ ತಲೆಮಾರಿನ ನಡುವೆ ಅಭಿಪ್ರಾಯ ಹಂಚಿಕೆಯಾಗಲು ಹಾಗೂ ತಮ್ಮ ಸಂಕಟಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಉಪಯುಕ್ತವಾಗಿರುವುದು ವಾಸ್ತವ. ನೇಪಾಳದ ಬಂಡಾಯಕ್ಕೆ ಯುವ ಸಮೂಹದ ನಿತ್ಯ ಬದುಕಿನ ಸಮಸ್ಯೆಗಳೇ ಮೂಲ ಕಾರಣವಾಗಿದ್ದರೂ, ದಂಗೆಯ ಕಿಡಿ ಹೊತ್ತಿಸಿದ್ದು (Triggering point) ಸಾಮಾಜಿಕ ಮಾಧ್ಯಮಗಳ ಮೇಲೆ ಹೇರಲಾದ ನಿಷೇಧ. ಕ್ಷೋಭೆಯ ಸಮಯದಲ್ಲಿ ಅಂತರ್ಜಾಲವನ್ನು ಕಡಿತಗೊಳಿಸುವ, ನಿರ್ಬಂಧಿಸುವ ಅಥವಾ ನಿಷ್ಕ್ರಿಯಗೊಳಿಸುವ ಸರ್ಕಾರಗಳಿಗೆ ಇದು ಒಂದು ಪಾಠವಾದರೂ ಹೆಚ್ಚೇನಿಲ್ಲ.
ಆದರೆ ಈ ಬಂಡಾಯಗಳ ಮೂಲ ಇರುವುದು ನವ ಉದಾರವಾದಿ ಆರ್ಥಿಕತೆ ಮತ್ತು ಬಹುತೇಕ ಎಲ್ಲ ದೇಶಗಳೂ ಅನುಸರಿಸುತ್ತಿರುವ ಕಾರ್ಪೋರೇಟ್ ಮಾರುಕಟ್ಟೆ-ಖಾಸಗೀಕರಣದ ಆರ್ಥಿಕ ನೀತಿಗಳಲ್ಲಿ. ಪ್ರತಿಭಟನೆ ಎಷ್ಟೇ ಉಗ್ರ ರೂಪ ಪಡೆದರೂ ಅದು ಬಂಡಾಯ ಅಥವಾ ದಂಗೆ ಎನಿಸಿಕೊಳ್ಳುವುದಿಲ್ಲ. ಆದರೆ ಆಳ್ವಿಕೆಯಲ್ಲಿರುವ ಸರ್ಕಾರಗಳನ್ನೇ ಪದಚ್ಯುತಗೊಳಿಸಿ, ಆಡಳಿತಾರೂಢ ಪಕ್ಷಗಳನ್ನು, ನಾಯಕರನ್ನು ಪಲಾಯನಗೈಯ್ಯುವಂತೆ ಮಾಡುವ ಒಂದು ಕ್ಷಿಪ್ರ ಬೆಳವಣಿಗೆ ಈ ಪ್ರತಿರೋಧಗಳಿಗೆ ದಂಗೆಯ ಸ್ವರೂಪ ತಂದುಕೊಡುತ್ತವೆ. ಬಹುಮಟ್ಟಿಗೆ ಈ ದೇಶಗಳ ರಾಜಧಾನಿಗಳಲ್ಲೇ ಯುವ ಜನರ ಬಂಡಾಯ ಕಂಡುಬಂದಿರುವುದನ್ನೂ ( ಢಾಕಾ, ಕೊಲಂಬೋ, ಕಠ್ಮಂಡು ) ಸೂಕ್ಷ್ಮವಾಗಿ ಗಮನಿಸಬೇಕಿದೆ. ಅಂದರೆ ತಮ್ಮ ಜೀವನೋಪಾಯಕ್ಕಾಗಿ ದೇಶದ ವಿವಿಧೆಡೆಗಳಿಂದ, ಗ್ರಾಮೀಣ ಪ್ರದೇಶಗಳಿಂದ ಮುಖ್ಯ ನಗರಗಳಿಗೆ ವಲಸೆ ಬರುವ ಉದ್ಯೋಗಾಕಾಂಕ್ಷಿ ಯುವ ಸಮೂಹವು, ನಗರದಲ್ಲೇ ಬದುಕು ಕಟ್ಟಿಕೊಂಡಿರುವ, ಭವಿಷ್ಯದ ಕನಸು ಹೊತ್ತ ಯುವ ಸಮೂಹವೂ ಸೇರಿಕೊಳ್ಳುತ್ತದೆ.

ಏಕರೂಪದ ನೀತಿ ಮತ್ತು ಪ್ರತಿರೋಧ
ಡಿಜಿಟಲ್ ಬಂಡವಾಳಶಾಹಿ ಆರ್ಥಿಕತೆ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕ ನೀತಿಗಳು ಸೃಷ್ಟಿಸುವ ಆತಂಕ, ಹತಾಶೆ ಮತ್ತು ಅಪಾಯಗಳು ಇಲ್ಲ ದೇಶಗಳಲ್ಲೂ ಒಂದೇ ರೀತಿ ಇರುವುದನ್ನು ವಿಶ್ವದ ಇತರ ಸಮಾಜಗಳಲ್ಲೂ ಕಾಣಬಹುದು. ಯಾವುದೇ ಸೈದ್ಧಾಂತಿಕ ಚಳುವಳಿಯ ತಳಹದಿ ಇಲ್ಲದಿದ್ದರೂ, ತಮ್ಮ ಆಕ್ರೋಶವನ್ನು ಹೊರಹಾಕಲು ಯುವ ಜನತೆ ನಿರ್ಧರಿಸಿದಾಗ ಈ ರೀತಿಯ ಬಂಡಾಯಗಳು ತೀವ್ರತೆ ಪಡೆಯುವುದನ್ನು ಚರಿತ್ರೆಯ ಪುಟಗಳಲ್ಲೂ ಕಾಣಬಹುದು. ಸೋವಿಯತ್ ಪತನ, ಪೂರ್ವಜರ್ಮನಿ ಮತ್ತಿತರ ಕಮ್ಯುನಿಸ್ಟ್ ದೇಶಗಳು, ಚೀನಾದ ಟಿಯಾನಮನ್ ಸ್ಕ್ವೇರ್ ಮೊದಲಾದ ಘಟನೆಗಳು ಈ ನಿಟ್ಟಿನಲ್ಲಿ ಚಾರಿತ್ರಿಕ ನಿದರ್ಶನಗಳಾಗಿ ಕಾಣುತ್ತವೆ.
ಕಳೆದ ಎರಡು ವರ್ಷಗಳಲ್ಲಿ ವಿಶ್ವದ ವಿವಿಧ ದೇಶಗಳ ಲಕ್ಷಾಂತರ ಯುವಜನತೆ ಚುನಾಯಿತ, ಜನಪ್ರಿಯ ಸರ್ಕಾರಗಳ ವಿರುದ್ಧವೇ ಸಂಘರ್ಷಕ್ಕಿಳಿದಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ತಮ್ಮ ಜೀವನೋಪಾಯ ಸಮಸ್ಯೆಗಳಿಂದಾಚೆಗೂ ಯುವ ಜನತೆ ಸರ್ಕಾರಗಳ ವಿರುದ್ಧ ಪ್ರತಿಭಟಿಸಿರುವುದನ್ನು ಗಾಝಾದಲ್ಲಿ ನಡೆಯುತ್ತಿರುವ ನರಮೇಧವನ್ನು ಬೆಂಬಲಿಸುತ್ತಿರುವ ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಗಮನಿಸಬಹುದು. ಇಲ್ಲಿ ಕಾಲೇಜು, ವಿಶ್ವವಿದ್ಯಾಲಯದ ಶಿಕ್ಷಣಾರ್ಥಿಗಳು ಕ್ಯಾಂಪಸ್ ಒಳಗೇ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇಂಡೋನೇಷಿಯಾ, ಕೆನ್ಯಾ ಮತ್ತು ಟರ್ಕಿ ದೇಶಗಳಲ್ಲೂ ಸಹ ಯುವಜನತೆ ಅಳ್ವಿಕೆಯ ವಿರುದ್ದ ಹೋರಾಡುತ್ತಲೇ ಇದ್ದಾರೆ. ಈ ಆಕ್ರೋಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ವಿರೋಧಿಸುವ ದನಿಗಳೂ ಕೇಳಿಬರುತ್ತಿದ್ದು, ಇದರ ಹಿಂದಿನ ಕಾರಣಗಳನ್ನು ಗ್ರಹಿಸುವುದು, ಪ್ರಜಾತಂತ್ರವಾದಿಗಳ ಆದ್ಯತೆಯಾಗಬೇಕಿದೆ.

ಜಗತ್ತಿನ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ ವಿದ್ಯಾರ್ಥಿ ಯುವ ಸಮೂಹವೇ ಇಂತಹ ಬಂಡಾಯ, ದಂಗೆ ಅಥವಾ ಕ್ರಾಂತಿಯ ಮೂಲ ಶಕ್ತಿಯಾಗಿರುವುದನ್ನು ಗಮನಿಸಬಹುದು. ಇದು ಹಲವು ಸಂದರ್ಭಗಳಲ್ಲಿ ಪ್ರತಿಕ್ರಾಂತಿಯಾಗಿ ಸಹ ಸಂಭವಿಸಿವೆ. ಆದರೆ ಪ್ರಜಾಸತ್ತಾತ್ಮಕ ಕ್ರಾಂತಿ ಅಥವಾ ಪರಿವರ್ತನೆಯ ಹಾದಿಯನ್ನು ಗಮನಿಸಿದಾಗ ನಮಗೆ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ದ ಹೋರೋಡಿದ ನೆಲ್ಸನ್ ಮಂಡೇಲಾ ಸಹಜವಾಗಿ ನೆನಪಾಗುತ್ತಾರೆ. ಮ್ಯಾನ್ಮಾರ್‌ನ ಆಂಗ್ ಸನ್ ಸು ಕಿ ಅವರೂ ಸಹ ವಿದ್ಯಾರ್ಥಿ ದೆಸೆಯಿಂದಲೇ ಉಗಮಿಸಿದ ನಾಯಕಿಯಾಗಿದ್ದರು. ಇತಿಹಾಸದ ಹಲವು ನಿರ್ಣಾಯಕ ಗಳಿಗೆಗಳನ್ನು ಸೃಷ್ಟಿಸುವಲ್ಲಿ ಯುವ ಸಮೂಹದ ಪಾತ್ರವನ್ನು ಗುರುತಿಸುವಾಗ ಚೀನಾದ ಟಿಯಾನಮನ್ ಸ್ಕ್ವೇರ್ ನೆನಪಾಗುವುದು ಸಹಜ. ಈ ಪ್ರತಿರೋಧವನ್ನು ಪ್ರತಿಕ್ರಾಂತಿಯಾಗಿ ಪರಿಗಣಿಸಿ ಕ್ರೂರವಾಗಿ ಹತ್ತಿಕ್ಕಲಾದರೂ, ತದನಂತರದ ಆರ್ಥಿಕ ನೀತಿಗಳ ಬದಲಾವಣೆಯಲ್ಲಿ ಈ ಬಂಡಾಯಗಳು ನಿರ್ಣಾಯಕ ಪಾತ್ರ ವಹಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ.
ಪ್ರಜಾಪ್ರಭುತ್ವ ಮತ್ತು ಬಂಡವಾಳಶಾಹಿ
ಇತ್ತೀಚಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಯುವ ಜನತೆ ಪ್ರಜಾಪ್ರಭುತ್ವವನ್ನೇ ನಿರಾಕರಿಸುತ್ತಿದೆ ಎಂಬ ಭಾವನೆ ಮೂಡುತ್ತದೆ. ಆದರೆ ಕಳೆದ ವರ್ಷದ UNICEF ವರದಿಯಲ್ಲಿ ಹೇಳುವಂತೆ, 30 ದೇಶಗಳಲ್ಲಿ 18-25 ವಯೋಮಾನದ ಜನತೆಯ ಶೇಕಡಾ 57ರಷ್ಟು ಯುವ ಜನತೆ ಪ್ರಜಾಪ್ರಭುತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರೆ, ಶೇಕಡಾ 71ರಷ್ಟು 56 ವರ್ಷ ಮೀರಿದ ಜನತೆ ಪ್ರಜಾತಂತ್ರವನ್ನು ಬೆಂಬಲಿಸುತ್ತಾರೆ. ಇದೇ ವರದಿಯ ಅನುಸಾರ ಕಳೆದ ಎರಡು ದಶಕಗಳಲ್ಲಿ ವಿದ್ಯಾರ್ಥಿ ಯುವ ಜನತೆಯ ನಾಯಕತ್ವದಲ್ಲಿ ಬಂಡಾಯ-ದಂಗೆ ಹೆಚ್ಚಾಗಿದ್ದು ಭಾಗವಹಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರ ಒಂದು ನೋಟವನ್ನು ಇತ್ತೀಚಿನ ನೇಪಾಳ ದಂಗೆಗಳಲ್ಲಿ ಸ್ಪಷ್ಟವಾಗಿ ಕಾಣಬಹುದಿತ್ತು. ಹೊರ ದೇಶಗಳಲ್ಲಿ, ಶ್ರೀಮಂತ ರಾಷ್ಟ್ರಗಳಲ್ಲಿ ಯುವ ಜನತೆಗೆ ಲಭಿಸುತ್ತಿರುವ ಅನುಕೂಲಗಳು ಅಥವಾ ಸವಲತ್ತುಗಳು ತಮಗೇಕೆ ದೊರೆಯುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿ ಈ ಯುವ ಪೀಳಿಗೆಯನ್ನು ಬಾಧಿಸುತ್ತದೆ.

ಇದರ ಮತ್ತೊಂದು ಆಯಾಮವನ್ನು ಆಡಳಿತ ನಡೆಸುವ ರಾಜಕೀಯ ಪಕ್ಷಗಳು ಮತ್ತು ಆಳ್ವಿಕೆಯ ಮಾದರಿಗಳಲ್ಲೂ ಗುರುತಿಸಬಹುದು. ನೇಪಾಳದ ಯುವಕರಿಗೆ ಕಳೆದ ಮೂವತ್ತು ವರ್ಷಗಳಿಂದ ಒಂದೇ ಗುಂಪಿನ ನಾಯಕರು ದೇಶದ ಮುಂದಾಳತ್ವ ವಹಿಸಿದ್ದರೂ ಸಹ ಏನೂ ಬದಲಾವಣೆ, ಸುಧಾರಣೆ ಕಾಣದಿರುವುದು ಪ್ರಧಾನ ಪ್ರಶ್ನೆಯಾಗಿ ಕಾಡಿದೆ. ಇದು ಅನ್ಯ ದೇಶಗಳಲ್ಲೂ ಗುರುತಿಸಬಹುದಾದ ವಿದ್ಯಮಾನ. ಶ್ರೀಲಂಕಾದ ರಾಜಪಕ್ಸೆ ಕುಟುಂಬ, ಬಾಂಗ್ಲಾದೇಶದ ಆವಾಮಿ ಲೀಗ್ ಮತ್ತು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷಗಳ ಆಳ್ವಿಕೆಯ ವಿರುದ್ಧವೂ ಇದೇ ರೀತಿಯ ನಿರಾಸೆ ಯುವ ಸಮೂಹದಲ್ಲಿ ಮೂಡಿತ್ತು. ಶೇಖ್ ಹಸೀನಾ ಸರ್ಕಾರದ ನಿರಂಕುಶಾಧಿಕಾರದ ದಮನಕಾರಿ ಆಡಳಿತ ನೀತಿಗಳು ಯುವ ಸಮೂಹವನ್ನು ಕೆರಳಿಸಿದ್ದವು. ಮೂರೂ ದೇಶಗಳ ಪರಿಣಾಮ ಒಂದೇ ಆಗಿರುವುದು ಗಮನಾರ್ಹ. ಇದೇ ವರ್ಷದ ಜೂನ್ ತಿಂಗಳಲ್ಲಿ ಕೆನ್ಯಾದಲ್ಲಿ ನಡೆದ ವಿದ್ಯಾರ್ಥಿ ಯುವಜನತೆಯ ಹೋರಾಟದಲ್ಲಿ ಪೊಲೀಸ್ ದಬ್ಬಾಳಿಕೆ ಮತ್ತು ಕ್ರೌರ್ಯ ಹಲವರನ್ನು ಬಲಿತೆಗೆದುಕೊಂಡಿತ್ತು.
1990ರ ನಂತರದಲ್ಲಿ ಬದಲಾದ ಆರ್ಥಿಕ ವ್ಯವಸ್ಥೆಗಳನ್ನು ಜನವಿರೋಧಿಯಾಗಿ ಬದಲಿಸಿದ್ದು, ಕೋವಿದ್ 19 ಸಂದರ್ಭದ ಮಾರುಕಟ್ಟೆ ಬಿಕ್ಕಟ್ಟುಗಳು ಮತ್ತು ಬಂಡವಾಳಶಾಹಿಯ ವೈರುಧ್ಯಗಳು. ಕೋವಿದ್ ದಾಟಿದ ನಂತರದಲ್ಲಿ ಶ್ರಮಮ ಮಾರುಕಟ್ಟೆಯಲ್ಲಿ, ಉದ್ಯೋಗ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದರೂ, ಅಂತಾರಾಷ್ಟ್ರೀಯ ಶ್ರಮಿಕರ ಸಂಸ್ಥೆ (ILO) ವರದಿಯ ಅನುಸಾರ ಶೇಕಡಾ 50ಕ್ಕಿಂತಲೂ ಹೆಚ್ಚು ಉದ್ಯೋಗಗಳು ಕೇವಲ ಅನೌಪಚಾರಿಕ ಕ್ಷೇತ್ರದಲ್ಲಿ ಲಭ್ಯವಾಗುತ್ತಿದೆ. ಇಲ್ಲಿ ಯಾವುದೇ ಭದ್ರತೆ ಅಥವಾ ನಿಶ್ಚಿತ ಉದ್ಯೋಗದ ಭರವಸೆ ಇಲ್ಲದಿರುವುದೇ ಯುವ ಸಮೂಹ ಭ್ರಮನಿರಸನಗೊಳ್ಳಲು ಮೂಲ ಕಾರಣವಾಗುತ್ತದೆ. ಆಧುನಿಕ ಸಂವಹನ ಸಾಧನಗಳಲ್ಲಿ ಇತರ ದೇಶಗಳ ಯುವ ಸಮೂಹ ಕಾಣುತ್ತಿರುವ ಹಿತಕರ ಜೀವನ ಮತ್ತು ಆಧುನಿಕ ಸವಲತ್ತುಗಳು, ಸಮಾನ ಅವಕಾಶಗಳನ್ನು ದಿನನಿತ್ಯ ನೋಡುತ್ತಲೇ ಇರುವ, ಹಿಂದುಳಿದ ಅಥವಾ ಮುಂದುವರೆಯುತ್ತಿರುವ ದೇಶಗಳ, ಯುವ ಜನತೆಗೆ ಸಹಜವಾಗಿಯೇ ನಮ್ಮಲ್ಲಿ ಏಕೆ ಇದು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತದೆ.

ಭಾರತದಲ್ಲೂ ಸಹ ಪರಿಸ್ಥಿತಿ ಭಿನ್ನವಾಗಿ ಕಾಣುವುದಿಲ್ಲ. ಭಾರತೀಯ ಆರ್ಥಿಕತೆಯ ಬಗ್ಗೆ ಕೂಲಂಕುಷ ಪರಿಶೋಧನೆ ನಡೆಸುತ್ತಲೇ ಬಂದಿರುವ ಸಿಎಂಐಇ (Center for monitoring Indian Economy ) ಸಂಸ್ಥೆಯ ವರದಿಯೊಂದರ ಅನುಸಾರ ಭಾರತದಲ್ಲಿ ಉದ್ಯೋಗರಹಿತ ಜನಸಂಖ್ಯೆಯಲ್ಲಿ ಶೇಕಡಾ 83ರಷ್ಟು ಯುವಜನತೆಯೇ ಕಾಣುತ್ತದೆ. ಹೈಸ್ಕೂಲು ವಿದ್ಯಾಭ್ಯಾಸ ಮತ್ತು ಪದವಿ ಪೂರೈಸಿದ ಯುವ ಜನತೆಯೂ ಸಹ ಜೀವನ ನಿರ್ವಹಣೆಗೆ ಸಮರ್ಪಕವಾದ ಉದ್ಯೋಗ ಪಡೆಯುವುದಕ್ಕಾಗಿ ಸೆಣಸಾಡಬೇಕಾಗಿದೆ. ಹಾಗಾಗಿಯೇ ಪರೀಕ್ಷೆಗಳ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲೀ, ಕಾಲೇಜು ಕ್ಯಾಂಪಸ್‌ಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವಾಗಲೀ, ಯುವ ಜನತೆಯ ಆಕ್ರೋಶವನ್ನು ಎದುರಿಸಬೇಕಾಗಿದೆ. 2019ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ವಿರುದ್ಧ ನಡೆದ ಹೋರಾಟಗಳಲ್ಲೂ ಯುವ ಜನತೆಯೇ ಪ್ರಧಾನವಾಗಿದ್ದುದನ್ನು ಗಮನಿಸಬೇಕು.
ಸಾಮಾಜಿಕ ನೆಲೆಯಲ್ಲಿ ಬಂಡಾಯಗಳು
ಖ್ಯಾತ ವಿಮರ್ಶಕ, ವಿಶ್ಲೇಷಕ ಹರ್ಷ ಮಂದೇರ್ ಇದನ್ನು ಆಳವಾದ ನಾಗರಿಕತೆಯ ಬಿಕ್ಕಟ್ಟಿನ ಫಲ ಎಂದೇ ವ್ಯಾಖ್ಯಾನಿಸುತ್ತಾರೆ. ನವ ಉದಾರವಾದಿ, ಮಾರುಕಟ್ಟೆ ಆರ್ಥಿಕತೆಯ ಮಾದರಿಗಳು ನಮ್ಮ ಭವಿಷ್ಯವನ್ನು ಕಸಿದುಕೊಳ್ಳುತ್ತಿವೆ ಎಂಬ ಭಾವನೆ ಯುವ ತಲೆಮಾರಿನಲ್ಲಿ ಗಾಢವಾಗಿ ಬೇರೂರಿದೆ ಎನ್ನುತ್ತಾರೆ ಹರ್ಷ ಮಂದೇರ್. ಒಂದೆಡೆ ಉದ್ಯೋಗವನ್ನೂ ಒದಗಿಸದೆ ಮತ್ತೊಂದೆಡೆ ಆರ್ಥಿಕ ಅಸಮಾನತೆಗಳೂ ಹೆಚ್ಚಾಗುತ್ತಿರುವುದು, ಮತ್ತೊಂದೆಡೆ ಅಲ್ಪ ಪ್ರಮಾಣದ ಶ್ರೀಮಂತ ಉದ್ಯಮಿಗಳು ಐಷಾರಾಮಿ ಜೀವನ ನಡೆಸುತ್ತಿರುವುದು ಯುವ ಸಮೂಹದ ಆಕ್ರೋಶಕ್ಕೆ ಎಡೆ ಮಾಡಿಕೊಡುತ್ತದೆ. ಉತ್ತಮ ಉನ್ನತ ಶಿಕ್ಷಣವೂ ತಮಗೆ ಉತ್ತಮ ಉದ್ಯೋಗಾವಕಾಶ ಸೃಷ್ಟಿಸದೆ ಇರುವುದನ್ನು ಗಮನಿಸುವ ಯುವ ಸಮೂಹ ಸಹಜವಾಗಿಯೇ ತಮ್ಮ ಹತಾಶೆ, ಆಕ್ರೋಶವನ್ನು ಹೊರಗೆಡಹಲು ಅವಕಾಶಗಳನ್ನು ನಿರೀಕ್ಷಿಸುತ್ತಿರುತ್ತದೆ.
ಭಾರತದಲ್ಲಿ ಅಸಮಾನತೆ ಹೆಚ್ಚಾಗುತ್ತಿದ್ದರೂ, ರಾಚನಿಕ ನೆಲೆಯಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿರುವುದರಿಂದ, ಜನರಿಗೆ ಇನ್ನೂ ಸಹ ಈ ಪ್ರಜಾಸತ್ತಾತ್ಮಕ ಅವಕಾಶಗಳು ಲಭ್ಯವಾಗುತ್ತಿರುವುದರಿಂದ, ನೆರೆ ರಾಷ್ಟ್ರಗಳಲ್ಲಾದಂತಹ ಬಂಡಾಯ, ದಂಗೆಗಳು ಸೃಷ್ಟಿಯಾಗುವುದು ಕಷ್ಟ ಎಂದು ಜೆಎನ್‌ಯು ಸಂಸ್ಥೆಯಲ್ಲಿ ವಿದ್ಯಾರ್ಥಿ ನಾಯಕಿಯಾಗಿದ್ದ ದೀಪ್ಸಿತಾ ಧರ್ ಹೇಳುತ್ತಾರೆ. ಇವರ Education or Exclusion ; Plight of Indian Students ಎಂಬ ಕೃತಿ ಈ ನಿಟ್ಟಿನಲ್ಲಿ ಉತ್ತಮ ಸಂಶೋಧನಾತ್ಮಕ ಗ್ರಂಥವಾಗಿದೆ. ಹಿರಿಯ ತಲೆಮಾರಿನ ಜನರು ಸಾಮಾಜಿಕವಾಗಿ ಕ್ರೋಢೀಕರಣ ಸಾಧಿಸಲು ಸಮಾನ ಗುರಿಯನ್ನು ಹೊಂದಿರುತ್ತಿದ್ದರು, ಆದರೆ ಈಗ ಬಂಡವಾಳಶಾಹಿಯು ಜನರನ್ನು ವ್ಯಕ್ತಿಗತ ಚೌಕಟ್ಟಿಗೆ ನಿರ್ಬಂಧಿಸಿದೆ ಎಂದೂ ದೀಪ್ಸಿತಾ ಧರ್ ಹೇಳುತ್ತಾರೆ. (ದ ಹಿಂದೂ 21 ಸೆಪ್ಟಂಬರ್ 2025 – Why Gen Z is taking to the streets )
ಈ ಬಂಡಾಯ, ದಂಗೆ ಮತ್ತು ಪ್ರತಿರೋಧದ ಹೋರಾಟಗಳು ಶಾಶ್ವತವಾದ ಪರಿವರ್ತನೆಗೆ ಎಡೆ ಮಾಡಿಕೊಡುತ್ತವೆಯೇ ಎಂಬ ಜಟಿಲ ಪ್ರಶ್ನೆ ಜಾಗತಿಕ ಸಮುದಾಯವನ್ನು ಕಾಡುತ್ತಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಇತ್ತೀಚಿನ ನೇಪಾಳದ ಘಟನೆಗಳನ್ನೇ ಗಮನಿಸಿದರೆ, ಕ್ರಮೇಣ ಅಲ್ಲಿನ ಪರಿಸ್ಥಿತಿ ಯಥಾಸ್ಥಿತಿಗೆ ಮರಳುತ್ತಿದ್ದು, ಕೇವಲ ಆಡಳಿತ ನಿರ್ವಹಣೆಯಲ್ಲಿ ವ್ಯಕ್ತಿ ಅಥವಾ ಪಕ್ಷಗಳ ಬದಲಾವಣೆ ಮಾತ್ರ ಕಾಣುತ್ತಿದೆ. ತಳಮಟ್ಟದ ವಾಸ್ತವಗಳು (Ground realities) ಯಾವುದೇ ರೀತಿಯ ಬದಲಾವಣೆಗಳನ್ನು ಕಾಣುತ್ತಿಲ್ಲ. ಅಥವಾ ಬಾಂಗ್ಲಾದೇಶದಲ್ಲಿ ಆದಂತೆ ಪ್ರತಿಗಾಮಿ ರಾಜಕೀಯ ಶಕ್ತಿಗಳು ನಿರ್ವಾತವನ್ನು ಆಕ್ರಮಿಸುತ್ತಿವೆ. ಬಾಂಗ್ಲಾದೇಶದಲ್ಲಿ ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆಗಳು, ಜಮಾತ್ ಇ ಇಸ್ಲಾಮಿ ಯಂತಹ ಪ್ರತಿಗಾಮಿ ಸಂಘಟನೆಗಳು, ಯುವ ಸಮೂಹದ ಹೋರಾಟಗಳ ಪ್ರಧಾನ ಫಲಾನುಭವಿಗಳಾಗಿವೆ. ಈ ದೇಶಗಳಲ್ಲಿ ಯುವ ಹೋರಾಟಗಾರರು ತಮ್ಮ ಭವಿಷ್ಯದ ಕಾಳಜಿ ಇರುವ, ಉತ್ತಮ ಆರೋಗ್ಯ ಸೇವೆ ಮತ್ತು ಶಿಕ್ಷಣ, ಉದ್ಯೋಗ ಒದಗಿಸುವ ಹೊಸ ವ್ಯವಸ್ಥೆಯನ್ನು ಅಪೇಕ್ಷಿಸಿದ್ದರೂ, ಅಂತಿಮವಾಗಿ ಪರಿಸ್ಥಿತಿ ಹಿಂದಿಗಿಂತಲೂ ದುಸ್ತರವಾಗುತ್ತಿರುವುದು ವಿಪರ್ಯಾಸ ಎಂದು ಹರ್ಷ ಮಂದೇರ್ ಆತಂಕ ವ್ಯಕ್ತಪಡಿಸುತ್ತಾರೆ.

ಈ ಹತಾಶೆ, ಆತಂಕ, ಪ್ರತಿರೋಧ, ಬಂಡಾಯ, ದಂಗೆ ಮತ್ತು ಯುವ ಜಗತ್ತಿನ ಹೋರಾಟಗಳ ನಡುವೆಯೇ ನವ ಉದಾರವಾದ ಸೃಷ್ಟಿಸುತ್ತಿರುವ ಸಾಮಾಜಿಕ-ಆರ್ಥಿಕ ಅಸಮಾನತೆಗಳು ಹೆಚ್ಚಾಗುತ್ತಲೇ ಇರುವುದು ಗಂಭೀರ ಪರಾಮರ್ಶೆಗೊಳಗಾಗಬೇಕಿದೆ. ಸಾಮಾಜಿಕ ಚಳುವಳಿಗಳು ಮತ್ತು ಪುರೊಗಾಮಿ ಚಿಂತನೆಯ ಮನಸ್ಸುಗಳು ಈ ನಿಟ್ಟಿನಲ್ಲಿ ಗಂಭೀರ ಚಿಂತನ-ಮಂಥನ ನಡೆಸಬೇಕಿದೆ. ಇದು ವರ್ತಮಾನದ ತುರ್ತು, ಭವಿಷ್ಯದ ಅಗತ್ಯತೆ.
(ಕುನಾಲ್ ಪುರೋಹಿತ್ ಅವರ – Why Gen Z is taking to the streets ಹಿಂದೂ 21 ಸೆಪ್ಟಂಬರ್ 2025 ಈ ಲೇಖನದ ಸಾರ ಸಂಗ್ರಹ )
-೦-೦-೦-೦-