
ತ್ರಿಭಾಷಾ ನೀತಿಯೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಸದ್ಯದ ದುಃಖಕ್ಕೆ ಕಾರಣ.
ಬಿಜೆಪಿ ನೇತೃತ್ವದ ಕೆಂದ್ರ ಸರ್ಕಾರ ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ತ್ರಿಭಾಷಾ ನೀತಿ, ಬಿಜೆಪಿಗೆ ಮುಳುವಾಗುವ ಎಲ್ಲ ಸಾಧ್ಯತೆಗಳಿವೆ. ಕರ್ನಾಟಕ, ತಮಿಳು ನಾಡು, ಮಹಾರಾಷ್ಟ್ರ ಕೇಂದ್ರದ ಈ ವಿಷಯಸೂಚಿಯಂಥ ಹಿಂದಿ ಹೇರಿಕೆಯನ್ನು ನಖ-ಶಿಖಾಂತ ಪ್ರತಿಭಟಿಸುತ್ತಿವೆ. ಒಟ್ಟು ಪ್ರಕ್ರಿಯೆನ್ನು; ಹಿಂದು, ಹಿಂದಿ, ಹಿಂದೂಸ್ತಾನ್ ಎನ್ನುವ ಆರ್ ಎಸ್ ಎಸ್ ವಿಷಯ ಸೂಚಿ ಎಂದು ಕಟುವಾಗಿ ಟೀಕಿಸುತ್ತಿವೆ.
Muralidhara Khajane
“ಆಸೆಯೇ ದುಃಖಕ್ಕೆ ಮೂಲ” ಎಂಬುದು ಒಣದು ಪ್ರಮುಖ ಬೌದ್ಧ ತತ್ವ. ಇದರರ್ಥ ಆಸೆಗಳು ಅಥವಾ ಬಯಕೆಗಳು ದುಃಖಕ್ಕೆ ಕಾರಣವಾಗುತ್ತದೆ. ಈ ಬೌದ್ಧ ತತ್ವವನ್ನು ಈಗ ಇನ್ನೊಂದು ರೀತಿಯಲ್ಲಿ ನೋಡಬಹುದು. ಭಾಷೆಯ ಹೇರಿಕೆಯೇ ದುಃಖಕ್ಕೆ ಕಾರಣ. ಹಾಗಾಗಿ ಹೇರಿಕೆಯ ಬಯಕೆಯನ್ನು ಬಿಡಬೇಕು . ಹೀಗೆ ಹೇಳಲು ಕಾರಣ, ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ತನ್ನ “ಒಂದು ರಾಷ್ಟ್ರ, ಒಂದು ಚುನಾವಣೆ, ಒಂದು ಸಂಸ್ಕೃತಿ, ಒಂದು ಭಾಷೆ” ವಿಷಯಸೂಚಿಯ ಹಿನ್ನೆಲೆಯಲ್ಲಿ ದೇಶದ ಬಹುತ್ವ, ವೈವಿಧ್ಯಮಯ ಸಂಸ್ಕೃತಿಯನ್ನು, ಭಾಷೆಯನ್ನು ಏಕರೂಪ ಸಂಸ್ಕೃತಿಗೆ ಹೊಂದಿಸಲು, ಪ್ರಮುಖವಾಗಿ ವೈದೀಕ ಧರ್ಮಾಧಾರಿತ ಹಿಂದೂ ಸಂಸ್ಕೃತಿಯಡಿಯಲ್ಲಿ ತರಲು ಯೋಚಿಸುತ್ತಿರುವ ಅಸೆಯೇ ಮೋದಿ-ಷಾ ನೇತೃತ್ವದ ದುಃಖಕ್ಕೆ ಕಾರಣವಾಗಿದೆ.
ತ್ರಿಭಾಷಾ ಸೂತ್ರದ ಹುನ್ನಾರ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈ ತ್ರಿಭಾಷಾ ಸೂತ್ರವೆಂದರೆ, ಭಾರತದಲ್ಲಿ ಶಾಲಾ ಮಕ್ಕಳಿಗೆ ಮೂರು ಭಾಷೆಗಳನ್ನು ಕಲಿಸುವ ಶಿಕ್ಷಣ ನೀತಿಯಾಗಿದೆ. ಈ ನೀತಿಯ ಪ್ರಕಾರ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಹಿಂದಿ, ಇಂಗ್ಲಿಷ್, ಮತ್ತು ಒಂದು ಆಧುನಿಕ ಭಾರತೀಯ ಭಾಷೆಯನ್ನು ಕಲಿಯಬೇಕು. ಹಿಂದಿ ಮಾತನಾಡದ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಆಯಾ ಪ್ರಾದೇಶಿಕ ಭಾಷೆ, ಇಂಗ್ಲಿಷ್ ಮತ್ತು ಹಿಂದಿಯನ್ನು ಕಲಿಯಬೇಕೆಂಬುದು.
ದಕ್ಷಿಣ ಭಾರತದ ರಾಜ್ಯಗಳು ಹಾಗೂ, ಮಹಾರಾಷ್ಟ್ರ ಈ ತ್ರಿಭಾಷಾ ಸೂತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಮುಖ್ಯವಾಗಿ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನವೆಂದು ಅವು ಆರೋಪಿಸತ್ತಿವೆ. ಇದರಿಂದ ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ಉಂಟಾಗುತ್ತದೆ ಎಂಬ ಆತಂಕ ದಕ್ಷಿಣ ರಾಜ್ಯಗಳದ್ಧಾಗಿದೆ. ತ್ರಿಭಾಷಾ ಸೂತ್ರವೆಂದರೆ ಶಾಲಾ ಹಂತದಲ್ಲಿ ಪ್ರಾದೇಶಿಕ ಭಾಷೆ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಕಲಿಯುವುದು. ಆದರೆ ದಕ್ಷಿಣ ಭಾರತದ ರಾಜ್ಯಗಳು ಹಿಂದಿಯನ್ನು ಕಡ್ಡಾಯವಾಗಿ ಹೇರುವ ಪ್ರಯತ್ನವನ್ನು ವಿರೋಧಿಸುತ್ತಿವೆ. ನೆರೆಯ ತಮಿಳುನಾಡು ಈ ತ್ರಿಭಾಷಾ ಸೂತ್ರವನ್ನು ಬಲವಾಗಿ ವಿರೋಧಿಸುತ್ತಿದೆ ಮತ್ತು ದ್ವಿಭಾಷಾ ನೀತಿಯನ್ನು ಅನುಸರಿಸಿಕೊಂಡೇ ಬಂದಿದೆ.

ಮತದ ಮೇಲೆ ಕಣ್ಣೀಟ್ಟ ಕೇಂದ್ರಕ್ಕೆ ಭಾಷಾ ಏಟು
ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಇದುವರೆಗೆ ಜೈಸಲಾಗದ ಉಳಿದಿರುವ ಒಂದು ವಿಷಯ ಸೂಚಿ ಎಂದರೆ ಇಡೀ ದೇಶಕ್ಕೆ ಒಂದೇ ಭಾಷೆಯೆಂದು ಮಾಡುವುದು. ಈ ತ್ರಿಭಾಷಾ ಸೂತ್ರ ಕೇಂದ್ರ ಸರ್ಕಾರಕ್ಕೆ “ನೀರಿಳಿಯದ ಗಂಟಲೋಳ್ ಕಡಬು ತುರುಕಿದಂತಾಯಿತು…” (ಮುದ್ದಣ-ಮನೋರಮೆಯ ಸಲ್ಲಾಪದಿಂದ) ಎನ್ನುವಂತಾಗಿದೆ. ತಮಿಳು ನಾಡು ಈ ತ್ರಿಭಾಷಾ ಸೂತ್ರದ ವಿರುದ್ಧ ಹಣಾಹಣಿ ಹೋರಾಟ ಮಾಡುತ್ತಿದೆ. ಹಾಗಾಗಿ ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ತಮಿಳು ನಾಡಿನಲ್ಲಿ ಯಾವ ಒತ್ತಡದ ಮೂಲಕವೂ, ಈ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸುವ ಸಾಧ್ಯತೆ ಇಲ್ಲ. ಹಾಗೇನಾದರೂ, ಬಲವಂತ ಮಾಡಿದರೆ, ಅಳಿದುಳಿದ ಮತಗಳೂ ಬಿಜೆಪಿಗೆ ಬರಲಿಕ್ಕಿಲ್ಲ. ಇದು ನಿಧಾನವಾಗಿಯಾದರೂ, ಮಹಾರಾಷ್ಟ್ರ ಸರ್ಕಾರಕ್ಕೆ ಅರ್ಥವಾಗಿದೆ. ಹಾಗೇನಾದರೂ, ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸಿದರೆ, ತಾವು ನಿಂತಿರುವ ನೆಲವೇ ಕುಸಿಯುತ್ತದೆ ಎಂದು ದೇವೇಂದ್ರ ಫಡ್ನವೀಸ್‌ಗೆ ಅರ್ಥವಾಗಿ ಈಗ ಮಲೆತು ನಿಂತಿದ್ದಾರೆ. ಶಿವಸೇನೆಯ ಉದ್ಧವ್ ಮತ್ತು ರಾಜ್ ಥಾಕರೆ, ಈ ವಿಷಯದಲ್ಲಿ ಒಂದಾಗಿ ಬೀದಿಗಿಳಿದ್ದಾರೆ. ಕೇರಳದಲ್ಲಿ ಪಿನರಾಯಿ ವಿಜಯನ್ ಸರ್ಕಾರ, ಬಿಜೆಪಿ ಸರ್ಕಾರದ ಈ ಪ್ರಯತ್ನವನ್ನು Linguistic imperialism” ಎಂದು ಕಟುವಾಗಿ ಟೀಕಿಸಿ ಪ್ರತಿಭಟಿಸಿದೆ. ತಮಿಳುನಾಡಿನ ಮಾದರಿಯನ್ನೇ ಅಳವಡಿಸಿಕೊಳ್ಳಲು ಈಗ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಂದಡಿ ಇಟ್ಟಿವೆ ಈ ಮೂಲಕವೇ ಕೇಂದ್ರ ಸರ್ಕಾರದ ಬಲವಂತದ ಹಿಂದಿ ಹೇರಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಪರಿಷತ್ ತೀವ್ರ ವಿರೋಧ
ಶಿಕ್ಷಣದಲ್ಲಿ ಕನ್ನಡ ಉಳಿಸಲು ದ್ವಿಭಾಷಾ ನೀತಿಯೊಂದೇ ದಾರಿ. ರಾಜ್ಯ ಸರ್ಕಾರ ಕೂಡಲೇ ಈ ದ್ವಿಭಾಷಾ ನೀತಿಯನ್ನು ಜಾರಿಗೊಳಸಬೇಕು, ಕನ್ನಡದ ಪ್ರಾತಿನಿಧಿಕ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದೆ. “1968ರಲ್ಲಿ ಜಾರಿಗೆ ಬಂದ ಈ ತ್ರಿಭಾಷಾ ನೀತಿ ಪ್ರಕಾರ ದಕ್ಷಿಣ ಭಾರತದ ಮಕ್ಕಳು ಹಿಂದಿ ಕಲಿತರೆ, ಉತ್ತರ ಭಾರತದ ಮಕ್ಕಳು ಉತ್ತರ ಭಾರತದ ಯಾವುದಾದರೊಂದು ಭಾಷೆಯನ್ನು ಕಲಿಯಬೇಕಿತ್ತು. ತಮಿಳು ನಾಡನ್ನು ಹೊರತುಪಡಿಸಿ, ದಕ್ಷಿಣ ಭಾರತದ ರಾಜ್ಯಗಳು ತ್ರಿಭಾಷಾ ನೀತಿಯನ್ನು ಜಾರಿಗೆ ತಂದಿವೆ. ಆದರೆ ಉತ್ತರ ಭಾರತದ ಯಾವ ರಾಜ್ಯದಲ್ಲಿಯೂ ದಕ್ಷಿಣ ಭಾರತದ ಭಾಷಾ ಕಲಿಕೆ ನಡೆಯಲೇ ಇಲ್ಲ” ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿ ಕಟುವಾಗಿ ಟೀಕಿಸಿದ್ದಾರೆ.
ʻಪ್ರತಿಧ್ವನಿʼಯೊಂದಿಗೆ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು; “ತ್ರಿಭಾಷಾ ಸೂತ್ರದ ಮೂಲಕ ಹಿಂದಿಯೇತರ ಭಾಷಿಕರ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನ ಸತತವಾಗಿ ನಡೆಯುತ್ತಿದೆ. ಆದರೆ ಕನ್ನಡ ಭಾಷೆಯ ಅಭಿವೃದ್ಧಿಗೆ ಹಾಗೂ ಕನ್ನಡಿಗರಿಗೆ ಉದ್ಯೋಗಾವಕಾಶ ಹೆಚ್ಚಿಸಲು ದ್ವಿಭಾಷಾ ಸೂತ್ರದಿಂದ ಮಾತ್ರ ಸಾಧ್ಯ . ದ್ವಿಭಾಷಾ ಸೂತ್ರದಿಂದ ರಾಷ್ಟ್ರದ ಏಕತೆ ಮತ್ತು ಬಹುಭಾಷಿಕ ಗುರುತುಗಳ ಸಮತೋಲನ ಸಾಧ್ಯ” ಎಂದು ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಹಿಂದಿ ಎಲ್ಲ ಭಾಷೆಗಳ ಗೆಳೆಯ
ಬಿಳಿಮಲೆ ಅವರ ತ್ರಿಭಾಷಾ V/S ದ್ವಿಭಾಷಾ ತಿಳುವಳಿಕೆ ಈ ರೀತಿ ಇದೆ. 1948-49ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗವು, ಬೆಲ್ಜಿಯಂ, ಸ್ವಿಜರ್ಲ್ಯಾಂಡ್‌ನಂಥ ಬಹು ಭಾಷೀಯ ರಾಷ್ಟ್ರಗಳಿಂದ ಪ್ರೇರಣೆ ಪಡೆದು ಭಾರತದಲ್ಲಿ ತ್ರಿಭಾಷಾ ಕಲಿಕೆಯ ಅಗತ್ಯವನ್ನು ಪ್ರತಿಪಾದಿಸಿತು. ಆಗ ಹಿಂದಿ ಭಾರತದ ಇತರ ಭಾಷೆಗಳಿಗಿಂತ ಶ್ರೇಷ್ಠ ಎಂಬ ಕಲ್ಪನೆ ಯಾರ ಮನಸ್ಸಿನಲ್ಲಿಯೂ ಇರಲಿಲ್ಲ. ಆದರೆ ವಿಶ್ವವಿದ್ಯಾಲಯ ಶಿಕ್ಷಣ ಆಯೋಗಕ್ಕೆ ಮುಂದೊಂದು ದಿನ ಹಿಂದಿಯನ್ನು ಮುಂದೊಡ್ಡುವ ಆಕಾಂಕ್ಷೆ ಇತ್ತು ಎನ್ನಬಹುದು. ದೇಶದ ಬಹುಭಾಷೀಯ ಸಂಸ್ಕೃತಿಯ ಬಗ್ಗೆ ಆಳವಾದ ತಿಳುವಳಿಕೆ ಇದ್ದ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ, ಹಿಂದಿ ಹೇರಿಕೆ ಯಾವ ರೀತಿಯಲ್ಲಿಯೂ ದೇಶದ ಐಕ್ಯತೆ, ವೈವಿಧ್ಯಮಯ ಸಂಸ್ಕೃತಿಗೆ ಆಗ ಕೂಡದೆಂದು ತಿಳಿದಿದ್ದ ಕಾರಣ ಅವರು, ದಕ್ಷಿಣ ರಾಜ್ಯಗಳು ಹಿಂದಿ ಕಲಿಕೆಗೆ ಒತ್ತಾಯಿಸಲೇ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ. “ ಇಂಗ್ಲಿಷ್ ಭಾಷೆ ಮಾತನಾಡುವವರು ಭವಿಷ್ಯದಲ್ಲಿ ನಾಚಿಕೆ ಪಡುವಂತಾಗುತ್ತದೆ. ಹಿಂದಿ ಭಾಷೆ ಭಾರತದ ಎಲ್ಲ ಭಾಷೆಗಳ ಗೆಳೆಯ” ಎನ್ನುವುದರ ಮೂಲಕ, ಗೃಹ ಸಚಿವ ಅಮಿತ್ ಶಾ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸಿ, ಉಳಿದ ರಾಜ್ಯಗಳ ಮೇಲೆ ಅದನ್ನು ಅನಾಮತ್ತಾಗಿ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ.

ಒಮ್ಮೆ ಮಹಾರಾಷ್ಟ್ರ ದ ಪರಿಸ್ಥಿತಿಯತ್ತ ಗಮನ ಹರಿಸೋಣ. ಏಪ್ರಿಲ್ 16ರಂದು ಮಹಾರಾಷ್ಟ್ರ ಸರ್ಕಾರ ಹಿಂದಿಯನ್ನು ಮೂರನೇ ಕಡ್ಡಾಯ ಕಲಿಕೆಯ ಭಾಷೆಯಾಗಿಸಿ ಅಧಿಕೃತ ಆದೇಶ ಹೊರಡಿಸಿತು. ಜೊತೆಯಲ್ಲಿ ತ್ರಿಭಾಷಾ ಸೂತ್ರದ ಪರಿಣಾಮವನ್ನು ಅಧ್ಯಯನ ಮಾಡಲು ಖ್ಯಾತ ಅರ್ಥಶಾಸ್ತ್ರಜ್ಞ ನರೇಂದ್ರ ಜಾಧವ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿತು. ಈ ಆದೇಶ ಹೊರಬೀಳುತ್ತಿದ್ದಂತೆ, ಮಹಾರಾಷ್ಟ್ರದಲ್ಲಿ ಭಾಷಾ ಪ್ರತಿಭಟನೆಯೊಂದು ಆರಂಭವಾಯಿತು. ಪ್ರತಿಭಟನೆಗೆ ಹೆದರಿದ, ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಸಚಿವ ದಾದಾ ಭೂಸೆ, “ಹಿಂದಿ ಕಲಿಕೆ ಕಡ್ಡಾಯವಲ್ಲ” ಎಂದು ಜೂನ್ 17ರಂದು ಹೇಳಿಕೆ ನೀಡುವವರೆಗೆ ಪ್ರತಿಭಟನೆ ತಣ್ಣಗಾಗಲಿಲ್ಲ.
ಏಕರೂಪದಲ್ಲಿ ಅನುಷ್ಠಾನವಾಗದ ಶಿಫಾರಸು
1964-65ರಲ್ಲಿ ಕೊಠಾರಿ ಆಯೋಗವು ಶ್ರೇಣೀಕೃತ ತ್ರಿಭಾಷಾ ಸೂತ್ರವನ್ನು ಶಿಫಾರಸು ಮಾಡಿತು. 1968ರಲ್ಲಿ ಅದನ್ನು ಕೇಂದ್ರ ಸರ್ಕಾರ ಅನುಮೋದಿಸಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹೇಳಿರುವಂತೆ, ಭಾರತದ ಬೇರೆ ಬೇರೆ ರಾಜ್ಯಗಳು ಒಂದೇ ರೀತಿಯಲ್ಲಿ ಅನುಷ್ಠಾನಕ್ಕೆ ತರಲೇ ಇಲ್ಲ. ದೆಹಲಿ ವಿಶ್ವವಿದ್ಯಾಲಯದಲ್ಲಿ ಹಿಂದಿ ಅಧ್ಯಾಪಕರೊಬ್ಬರು ʼಕನ್ನಡ ಯಾವ ರಾಜ್ಯದ ಭಾಷೆʼ ಎಂದು ಕೇಳಿದಾಗ ಬಿಳಿಮಲೆ ಅದು ಕೆನಡಾದ ಭಾಷೆಯೆಂದು ಸಿಟ್ಟಿನಿಂದ ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾರೆ,
ಉತ್ತರ ನೀಡದ ಕೇಂದ್ರ ಸರ್ಕಾರ
ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ, ೨೦೨೦ರಲ್ಲಿ ತನ್ನ ಹೊಸ ಶಿಕ್ಷಣ ನೀತಿಯನ್ನು ಬಿಡುಗಡೆ ಮಾಡಿದಾಗ ಈ ತ್ರಿಭಾಷಾ ನೀತಿಯ ಬಗ್ಗೆ ವಿವರವಾದ ಚರ್ಚೆಯನ್ನೇ ನಡೆಸಲಿಲ್ಲ. ತುರ್ತಿನಲ್ಲಿ ಅನುಮೋದನೆ ನೀಡಿತು. ಆದರೆ ಒಂದು ನೆಮ್ಮದಿಯ ಸಂಗತಿಯೆಂದರೆ, ಯಾವುದೇ ಭಾಷೆಯನ್ನು ಈ ಶಿಕ್ಷಣ ನೀತಿ ಕಡ್ಡಾಯಗೊಳಿಸಿಲ್ಲ. ಆದರೆ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿರುವ ತ್ರಿಭಾಷಾ ನೀತಿಯ ಬಗ್ಗೆ ಸ್ಪಷ್ಟವಾದ ನಿಲುವಿರಲಿಲ್ಲ. ಇದರಿಂದ ಉತ್ತರ ಭಾರತಕ್ಕೆ ಆದ ಲಾಭವೇನು, ದಕ್ಷಿಣ ಭಾರತಕ್ಕೆ ಆದ ನಷ್ಟವೇನು ಎಂದು ಕೇಳಿದ ಯಾವ ಪ್ರಶ್ನೆಗೂ ಕೇಂದ್ರ ಸರ್ಕಾರ ಇದುವರೆಗೆ ಉತ್ತರ ನೀಡಿಲ್ಲ. ದೊಡ್ಡಣ್ಣ ನೀತಿಯನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರ ಶೇ. 70 ಮಂದಿ ಮಾತನಾಡುವ ಒಟ್ಟಾರೆಯಾಗಿ ಏಕೆತೆಯೇ ಇಲ್ಲದ ಹಿಂದಿ ಭಾಷೆಯನ್ನು ಎಲ್ಲರ ಮೇಲೆ ಹೇರಲು ನಿರಂತರ ಪ್ರಯತ್ನ ನಡೆಸುತ್ತಿರುವುದಂತೂ ಖಚಿತ. ಏಕೆಂದರೆ ಹಿಂದಿ ಭಾಷೆ ಹೇರಿಕೆಯನ್ನು ಈಗಾಗಲೇ ದುರ್ಬಲಗೊಂಡಿರುವ ಉತ್ತರ ಭಾರತದ, ಬ್ರಜ್, (ವ್ರಜ), ಅವಧಿ, ರಾಜಾಸ್ಥಾನಿ, ಬಘೇಲಿ, ಭೊಜಪುರಿ, ಬುಂದೇಲಿ, ಮೈಥಿಲಿ, ಕನೌಜ್, ಚತ್ತೀಸ್ಘರಿ, ಗರ್ವಾಲಿ, ಹರಿಯಾನ್ವಿ, ಕುಮಾಯೂನಿ, ಮಗಧಿ, ಮಾರ್ವಾರಿ ಮೊದಲಾದ 122 ಭಾಷೆಗಳು ಹಿಂದಿ ಭಾಷಾ ಹೇರಿಕೆಯನ್ನು ಒಪ್ಪಲು ತಯಾರಿಲ್ಲ. ಹಾಗಾಗಿ ಹಿಂದಿಯನ್ನು ರಾಷ್ಟ್ರಭಾಷೆಯಾಗಿಸುವ ಕೇಂದ್ರದ ಯತ್ನ ಸುಲಭದ ತುತ್ತಲ್ಲ ಈ ಹಿಂದಿ, ಹಿಂದೂ, ಹಿಂದೂಸ್ತಾನ್ ಎಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಷಯ ಸೂಚಿಯನ್ನು ಜಾರಿಗೆ ತರಲು ಎಲ್ಲ ರಾಜ್ಯಗಳಲ್ಲಿಯೂ ಇರುವ ಒಂದೇ ಅಸ್ತ್ರವೆಂದರೆ ದ್ವಿಭಾಷಾ ನೀತಿ. “ಇದು ದ್ವಿಭಾಷಾ ಸೂತ್ರದ ಸಮಯ” ಎಂದು ಸ್ಪಷ್ಟವಾಗಿ ಬಿಳಿಮಲೇ ಹೇಳುವುದರಲ್ಲಿ ಬಹುಅರ್ಥ, ಬಹುತ್ವದ ಅಳಿವು-ಉಳಿವಿನ ಪ್ರಶ್ನೆ ಅಡಗಿದೆ.














