ನ್ಯೂಯಾರ್ಕ್: ಒಂದು ಶತಮಾನಕ್ಕೂ ಹಿಂದೆ ದುರಂತಕ್ಕೀಡಾದ ಟೈಟಾನಿಕ್ ಹಡಗಿನ ಅವಶೇಷ ವೀಕ್ಷಣೆಗೆ ತೆರಳಿ ನಾಪತ್ತೆಯಾಗಿದ್ದ ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ದುರಂತ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.


ಟೈಟಾನ್ ಹೆಸರಿನ ನೌಕೆಯು ನೀರಿನ ಸೆಳೆತಕ್ಕೆ ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸಮುದ್ರದ ಆಳವಾಗಿ ಹೋದಂತೆ, ನೀರಿನ ಒತ್ತಡವು ಹೆಚ್ಚಾಗುತ್ತದೆ ಮತ್ತು ಕೆಳಕ್ಕೆ ತಳ್ಳುತ್ತದೆ. ಇದರಿಂದ ಜಲಾಂತರ್ಗಾಮಿ ನೌಕೆ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ. ಗುರುವಾರ ರಿಮೋಟ್ ಕಂಟ್ರೋಲ್ ವಾಹನದಲ್ಲಿ ನೀರಿನ ಅಡಿಯಲ್ಲಿ ಪತ್ತೆಯಾದ ಅವಶೇಷಗಳನ್ನು ಪರೀಕ್ಷಿಸಿದ ಬಳಿಕ ಯುಎಸ್ ಕರಾವಳಿ ಪಡೆ ಈ ನಿರ್ಣಯಕ್ಕೆ ಬಂದಿದೆ. ಸಾಗರದ ಸುಮಾರು 1600 ಅಡಿ (488 ಮೀಟರ್) ಆಳದಲ್ಲಿ ನಾಪತ್ತೆಯಾದ ಜಲಾಂತರ್ಗಾಮಿ ನೌಕೆಯ ಅವಶೇಷಗಳು ಪತ್ತೆಯಾಗಿವೆ.
ನೌಕೆಯಲ್ಲಿದ್ದ ಐವರು ಯಾರು?

ನಾಪತ್ತೆಯಾದ ಟೈಟಾನ್ ನೌಕೆಯಲ್ಲಿ ಯುನೈಟೆಡ್ ಕಿಂಗ್ಡಮ್ನ ಆಕ್ಷನ್ ಗ್ರೂಪ್ ಹೂಡಿಕೆ ಸಂಸ್ಥೆಯ ಸಂಸ್ಥಾಪಕ ಮತ್ತು ಸಾಹಸಪ್ರಿಯ ಹಮೀಶ್ ಹರ್ಡಿಂಗ್ (58), ಫ್ರೆಂಚ್ ಕಡಲ ತಜ್ಞ ಪೌಲ್ ಹೆನ್ರಿ ನರ್ಜೋಲೆಟ್ (77), ವಾಷಿಂಗ್ಟನ್ ಮೂಲದ ಓಷನ್‌ಗೇಟ್ ಕಂಪನಿ ಎವೆರೆಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟಾಕ್ಟನ್ ರಶ್ (61), ಪಾಕಿಸ್ತಾನದ ಖ್ಯಾತ ಉದ್ಯಮಿ ಶಹಜಾದ ದಾವೂದ್ (48) ಮತ್ತು ಆತನ ಪುತ್ರ ಸುಲೇಮಾನ್ ದಾವೂದ್ (19) ಇದ್ದರು.