ಬೆಂಗಳೂರಿನ ತಿರುವಳ್ಳವರ್ ಪ್ರತಿಮೆ ಮತ್ತು ಚೆನ್ನೈಯ ಸರ್ವಜ್ಞನ ಪ್ರತಿಮೆಗಳು ಕನ್ನಡಿಗರು ಮತ್ತು ತಮಿಳರ ನಡುವಿನ ಸಹೋದರತ್ವದ ಸಂಕೇತದಂತಿವೆ. ಇದನ್ನು ಯಡಿಯೂರಪ್ಪ ಅವರು ಸಾಧ್ಯವಾಗಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಅಭಿಪ್ರಾಯಪಟ್ಟರು.
ಹಲಸೂರು ಬಳಿ ಇರುವ ವಿಶ್ವಕವಿ ತಿರುವಳ್ಳುವರ್ ಪ್ರತಿಮೆಗೆ ಇಂದು ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ತಿರುವಳ್ಳವರ್ ಪ್ರತಿಮೆ ಅನಾವರಣ ಮತ್ತು ಚೆನ್ನೈಯಲ್ಲಿ ಸರ್ವಜ್ಞ ಅವರ ಪ್ರತಿಮೆ ಅನಾವರಣಗೊಳ್ಳಬೇಕೆಂದು ಹಲವು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿತ್ತು. 2009ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಮತ್ತು ತಮಿಳುನಾಡಿನ ಸಹೋದರ ಭಾವ ವೃದ್ಧಿಗಾಗಿ ಇದನ್ನು ಅನುಷ್ಠಾನಕ್ಕೆ ತಂದರು ಎಂದರು. ಬೆಂಗಳೂರಿನಲ್ಲಿ ತಿರುವಳ್ಳವರ್ ಪ್ರತಿಮೆ 18 ವರ್ಷ ಮುಚ್ಚಿಟ್ಟಿದ್ದರು. ಅದರ ಅನಾವರಣ ಆಗಿರಲಿಲ್ಲ. ಯಡಿಯೂರಪ್ಪ ಅವರ ಪ್ರಯತ್ನದ ಫಲವಾಗಿ ಇಲ್ಲಿ ತಿರುವಳ್ಳವರ್ ಪ್ರತಿಮೆ ಲೋಕಾರ್ಪಣೆ ಆಯಿತು. ಇನ್ನೊಂದೆಡೆ ಚೆನ್ನೈನಲ್ಲಿ ಸರ್ವಜ್ಞನ ಪ್ರತಿಮೆಯೂ ಅನಾವರಣಗೊಂಡಿತು ಎಂದು ವಿವರಿಸಿದರು.
ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಕೆ.ಸಿ.ರಾಮಮೂರ್ತಿ ಅವರು ಭಾಗವಹಿಸಿದ್ದರು.