ಬೆಂಗಳೂರು : ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಪಿ.ಎನ್ ಶ್ರೀನಿವಾಸಾಚಾರಿ ಸಮಿತಿ ನೀಡಿರುವ ಶಿಫಾರಸ್ಸಿನನ್ವಯ ಗುತ್ತಿಗೆ ನೌಕರರ ವೇತನವನ್ನು ಶೇಕಡಾ 15ರಷ್ಟು ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ನೂತನ ಆದೇಶ ಏಪ್ರಿಲ್ 1ರಿಂದ ಅನ್ವಯಗೊಳ್ಳಲಿದೆ.
ರಾಜ್ಯ ಸರ್ಕಾರದ ಈ ಆದೇಶದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕೆಲಸ ಮಾಡುತ್ತಿರುವ 25 ಸಾವಿರಕ್ಕೂ ಅಧಿಕ ಗುತ್ತಿಗೆ ಆಧಾರಿತ ನೌಕರರಿಗೆ ಅನುಕೂಲವಾದಂತಾಗಿದೆ. ಗುತ್ತಿಗೆ ಆಧಾರಿತ ನೌಕರರಿಗೆ ವೇತನ ಏರಿಕೆ ಮಾಡುವಂತೆ ಪಿ.ಎನ್ ಶ್ರೀನಿವಾಸಾಚಾರಿ ನೇತೃತ್ವದ ಸಮಿತಿಯು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು.
ಗುತ್ತಿಗೆ ನೌಕರರ ಕೆಲಸ ಖಾಯಂ ವಿಚಾರವಾಗಿ ಕೆಲವು ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಈ ನೌಕರರ ಕೆಲಸ ಖಾಯಂ ಮಾಡಲು ಸಾಧ್ಯವಿಲ್ಲ. ಆದರೆ ಕನಿಷ್ಟ ವೇತನ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಯೋಜನೆಗಳು ರಾಜ್ಯ ಸರ್ಕಾರ ಮತ್ತು ಎಚ್ಎಚ್ಎಂ ಯೋಜನೆ ಕೇಂದ್ರದ ನಡುವೆ ಶೇಕಡಾ 50 ಅನುಪಾತದಲ್ಲಿ ನಡೆಸಲಾಗುತ್ತಿದೆ . ಅವಶ್ಯಕತೆ ಇರುವವರೆಗೆ ಮಾತ್ರ ಈ ಯೋಜನೆಗಳು ಇರುತ್ತವೆ ಎಂದು ಹೇಳಿದ್ದರು.