ಕ್ರಿಸ್‌ಮಸ್(Christmas) ಹಬ್ಬದ ಸಮಯದಲ್ಲಿ ನಡೆಯುವ ಹಿಂಸಾಚಾರದ ಬಗ್ಗೆ ಪತ್ರಕರ್ತ ರಾ.ಚಿಂತನ್ ಬರೆದ ಮೌಲ್ಯಯುತ ಲೇಖನ ಇಲ್ಲಿದೆ..
2025ರ ಕ್ರಿಸ್‌ಮಸ್ ಹಬ್ಬವು ಭಾರತದಲ್ಲಿ ಅನೇಕ ಕ್ರೈಸ್ತ ಕುಟುಂಬಗಳಿಗೆ ಸಂಭ್ರಮವಲ್ಲ, ಭಯ ಮತ್ತು ಅಶಾಂತಿಯ ಸಂಕೇತವಾಗಿ ಪರಿಣಮಿಸಿದೆ. “ಸರ್ವಧರ್ಮ ಸಮಭಾವ”ವನ್ನು ಘೋಷಿಸುವ ದೇಶದಲ್ಲಿ, ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸೆ ಮತ್ತು ಅಡಚಣೆಗಳು ಸಂವಿಧಾನಾತ್ಮಕ ಮೌಲ್ಯಗಳನ್ನೇ ಪ್ರಶ್ನಿಸುವ ಮಟ್ಟಕ್ಕೆ ತಲುಪಿವೆ.

ವಿವಿಧ ಕ್ರೈಸ್ತ ಸಂಘಟನೆಗಳು, ಮಾನವ ಹಕ್ಕುಗಳ ಗುಂಪುಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, 2025ರಲ್ಲಿ ಸುಮಾರು 700ಕ್ಕೂ ಹೆಚ್ಚು ಹಿಂಸಾಚಾರದ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕ್ರಿಸ್‌ಮಸ್ ಅವಧಿಯಲ್ಲೇ 60ಕ್ಕೂ ಹೆಚ್ಚು ಘಟನೆಗಳು ನಡೆದಿದ್ದು, ಕನಿಷ್ಠ 3 ಮಂದಿ ಸಾವನ್ನಪ್ಪಿದ್ದಾರೆ ಮತ್ತು 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಸಂಖ್ಯೆಗಳು ಕೇವಲ ಅಂಕಿಅಂಶಗಳಲ್ಲ; ಅವುಗಳ ಹಿಂದೆ ಭಗ್ನವಾದ ಮನೆಗಳು, ಬೆಂಕಿಗಾಹುತಿಯಾದ ಚರ್ಚ್‌ಗಳು, ಮತ್ತು ಭಯದಲ್ಲಿ ಬದುಕುತ್ತಿರುವ ನಾಗರಿಕರ ಕಥೆಗಳಿವೆ.
ಈ ಘಟನೆಗಳು ಯಾವುದೇ ಒಂದು ರಾಜ್ಯಕ್ಕೆ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಉತ್ತರ ಪ್ರದೇಶ, ಛತ್ತೀಸ್‌ಗಢ, ಮಧ್ಯಪ್ರದೇಶ, ಅಸ್ಸಾಂ, ರಾಜಸ್ಥಾನ, ಒಡಿಶಾ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕ್ರಿಸ್‌ಮಸ್ ಸಮಯದಲ್ಲಿ ಪ್ರಾರ್ಥನೆಗಳಿಗೆ ಅಡಚಣೆ, ಚರ್ಚ್‌ಗಳ ಮೇಲೆ ದಾಳಿ, ಕ್ರಿಸ್‌ಮಸ್ ಅಲಂಕಾರಗಳ ನಾಶ ಮತ್ತು ಸಾರ್ವಜನಿಕ ಬೆದರಿಕೆಗಳು ವರದಿಯಾಗಿವೆ.

ಉತ್ತರ ಪ್ರದೇಶದ ಬರೇಲಿ ಮತ್ತು ಲಕ್ನೌಗಳಲ್ಲಿ ಚರ್ಚ್‌ಗಳ ಹೊರಗೆ ಪ್ರತಿಭಟನೆಗಳು ನಡೆದರೆ, ಮಧ್ಯಪ್ರದೇಶದ ಜಬಲ್ಪುರ ಮತ್ತು ಜಬುವಾಗಳಲ್ಲಿ ಪ್ರಾರ್ಥನಾ ಸಭೆಗಳಿಗೆ ಅಡಚಣೆ ಉಂಟಾಯಿತು. ಜಬುವಾದಲ್ಲಿ ಅಂಧ ಮಹಿಳೆಯ ಮೇಲೆ ಹಲ್ಲೆ ನಡೆದಿರುವುದು ಮಾನವೀಯತೆಯ ತಳಮಟ್ಟವನ್ನು ತೋರಿಸುತ್ತದೆ. ಅಸ್ಸಾಂನ ನಲ್ಬಾರಿಯಲ್ಲಿ ಶಾಲೆಯಲ್ಲಿದ್ದ ಕ್ರಿಸ್‌ಮಸ್ ಅಲಂಕಾರಗಳನ್ನು ಸುಟ್ಟುಹಾಕಲಾಗಿದೆ. ಕೇರಳದ ಪಲಕ್ಕಾಡ್ನಲ್ಲಿ ಕ್ಯಾರೋಲ್ ಹಾಡುತ್ತಿದ್ದ ಗುಂಪಿನ ಮೇಲೆ ದಾಳಿ ನಡೆದಿದೆ.
ಛತ್ತೀಸ್‌ಗಢದ ಕಾಂಕರ್ ಜಿಲ್ಲೆಯ ಬಡೆತೆವಡಾ ಗ್ರಾಮದಲ್ಲಿ ಡಿಸೆಂಬರ್ 16–18ರ ನಡುವೆ ಆರಂಭವಾದ ಹಿಂಸೆ, ಒಂದು ದಫನ ವಿವಾದದಿಂದ ಹೊತ್ತಿಕೊಂಡಿತು. ಗ್ರಾಮದ ಸರ್ಪಂಚ್ ತಮ್ಮ ಪಿತೃವನ್ನು ಕ್ರೈಸ್ತ ಪದ್ಧತಿಯಲ್ಲಿ ದಫನ ಮಾಡಿದ ಕಾರಣಕ್ಕೆ ಕ್ರೈಸ್ತ ಆದಿವಾಸಿ ಮನೆಯನ್ನು ಸುಟ್ಟುಹಾಕಲಾಯಿತು. 3 ಚರ್ಚ್‌ಗಳಿಗೆ ಬೆಂಕಿ ಹಚ್ಚಲಾಯಿತು. ಹಿಂಸೆಯನ್ನು ನಿಯಂತ್ರಿಸಲು ಬಂದ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡರು.

ಡಿಸೆಂಬರ್ 24ರಂದು ಸರ್ವ ಹಿಂದೂ ಸಮಾಜ್ ಮತ್ತು ಇತರ ಸಂಘಟನೆಗಳು ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿದವು. ಅದೇ ದಿನ ರಾಯಪುರದ ಮ್ಯಾಗ್ನೆಟೋ ಮಾಲ್‌ನಲ್ಲಿ ಭೀಕರ ಗಲಭೆ ನಡೆಯಿತು. ಲಾಠಿ ಮತ್ತು ಹಾಕಿ ಸ್ಟಿಕ್‌ಗಳೊಂದಿಗೆ ಗುಂಪು ಮಾಲ್‌ಗೆ ನುಗ್ಗಿ ಕ್ರಿಸ್‌ಮಸ್ ಟ್ರೀ, ಲೈಟ್‌ಗಳು, ಸಾಂಟಾ ಕ್ಲಾಸ್ ಮೂರ್ತಿಗಳನ್ನು ಧ್ವಂಸಗೊಳಿಸಿತು. ಮಾಲ್ ಸಿಬ್ಬಂದಿಗೆ ಬೆದರಿಕೆ ಹಾಕಲಾಯಿತು ಮತ್ತು ಲಕ್ಷಾಂತರ ರೂಪಾಯಿ ನಷ್ಟ ಉಂಟಾಯಿತು. ಕೆಲವು ಮಂದಿಯನ್ನು ಬಂಧಿಸಲಾಗಿದೆ ಎನ್ನಲಾಗಿದರೂ, ದಾಳಿಕೋರರು ಸಂಘಟಿತವಾಗಿ, ಮುಖ ಮುಚ್ಚಿಕೊಂಡು ಬಂದಿದ್ದದ್ದು ಆತಂಕಕಾರಿ ಸಂಗತಿ.
ಒಡಿಶಾದಲ್ ಪುರಿ ಮತ್ತು ಭುವನೇಶ್ವರದಲ್ಲಿ ಸಾಂಟಾ ಕ್ಯಾಪ್ ಮತ್ತು ಕ್ರಿಸ್‌ಮಸ್ ವಸ್ತುಗಳನ್ನು ಮಾರುತ್ತಿದ್ದ ವ್ಯಾಪಾರಿಗಳಿಗೆ “ಇದು ಹಿಂದೂ ರಾಷ್ಟ್ರ” ಎಂದು ಬೆದರಿಸಿ ಅಂಗಡಿಗಳನ್ನು ಮುಚ್ಚಿಸುವ ಘಟನೆಗಳು ನಡೆದಿದೆ. ಇವುಗಳು ಸಾಂಕೇತಿಕವಾಗಿದ್ದರೂ, ಸಾರ್ವಜನಿಕ ಸ್ಥಳಗಳಲ್ಲಿ ಒಂದು ಧರ್ಮದ ಅಸ್ತಿತ್ವವನ್ನೇ ಪ್ರಶ್ನಿಸುವ ಭಯ ಹುಟ್ಟಿಸುವ ಸಂದೇಶವನ್ನು ನೀಡುತ್ತವೆ.

ಒಡಿಶಾ ಹಿಂದಿನ ಅನುಭವಗಳನ್ನು ನೋಡಿದರೆ, 2007–08ರ ಕಂದಮಾಲ್ ಹಿಂಸೆ ಇನ್ನೂ ಜನಮನದಲ್ಲಿ ಹಸಿಯಾಗಿ ಉಳಿದಿದೆ. 2025ರಲ್ಲಿ ಮತ್ತೆ ದಫನ ಸ್ಥಳಗಳ ನಿರಾಕರಣೆ, ಶವಗಳನ್ನು ಹೊರತೆಗೆದು ಸುಡುವಂತಹ ಘಟನೆಗಳು ವರದಿಯಾಗಿರುವುದು, ಇತಿಹಾಸ ಮರುಕಳಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ.
ಕ್ಯಾಥೋಲಿಕ್ ಬಿಷಪ್‌ಗಳ ಸಭೆ ಸೇರಿದಂತೆ ಹಲವು ಕ್ರೈಸ್ತ ಸಂಘಟನೆಗಳು, ಈ ದಾಳಿಗಳು ಭಾರತೀಯ ಸಂವಿಧಾನದ ಧರ್ಮ ಸ್ವಾತಂತ್ರ್ಯದ ಹಕ್ಕಿನ ನೇರ ಉಲ್ಲಂಘನೆ ಎಂದು ಖಂಡಿಸಿವೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಈ ಹಿಂಸೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಕೆಲವು ವರದಿಗಳು, ಈ ಘಟನೆಗಳ ಬಹುಪಾಲು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಡೆದಿವೆ ಎಂದು ಸೂಚಿಸುತ್ತವೆ — ಇದು ರಾಜಕೀಯ ಹೊಣೆಗಾರಿಕೆ ಕುರಿತು ಚರ್ಚೆಗೆ ದಾರಿ ಮಾಡಿಕೊಡುತ್ತದೆ.
ಉಳಿದುಕೊಳ್ಳುವ ಪ್ರಶ್ನೆಗಳು; ಧರ್ಮದ ಹೆಸರಿನಲ್ಲಿ ಹಿಂಸೆಗೆ ಮೌನ ಸಹಮತಿ ನೀಡಲಾಗುತ್ತಿದೆಯೇ? ಕಾನೂನು ಎಲ್ಲರಿಗೂ ಸಮಾನವೇ, ಅಥವಾ ಕೆಲವರಿಗೆ ಮಾತ್ರವೇ?ಹಬ್ಬದ ಸಂಭ್ರಮವನ್ನು ಭಯವಾಗಿ ಮಾರ್ಪಡಿಸುವ ಶಕ್ತಿಗಳಿಗೆ ರಾಜ್ಯಗಳು ತಕ್ಕ ಪ್ರತಿಕ್ರಿಯೆ ನೀಡುತ್ತಿವೆಯೇ?

ಕ್ರಿಸ್‌ಮಸ್, ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯ ಸಂಕೇತ. 2025ರಲ್ಲಿ ಅದು ಭಾರತದಲ್ಲಿ ಧರ್ಮ ಸ್ವಾತಂತ್ರ್ಯದ ಅಪಾಯಕಾರಿ ಸ್ಥಿತಿಯನ್ನು ಹೇಳುತ್ತದೆ. ಶಾಂತಿ ಮತ್ತು ಸಹಬಾಳ್ವೆ ಉಳಿಯಬೇಕಾದರೆ, ಹಬ್ಬಗಳ ವೇಳೆಯಲ್ಲೇ ಅಲ್ಲ, ಪ್ರತಿದಿನವೂ ಧರ್ಮ ಸ್ವಾತಂತ್ರ್ಯವನ್ನು ರಕ್ಷಿಸುವ ದೃಢ ನಿಲುವು ಅಗತ್ಯ. ಇಲ್ಲದಿದ್ದರೆ, ಕ್ರಿಸ್‌ಮಸ್ ಮಾತ್ರವಲ್ಲ, ಮಾನವೀಯತೆಯೇ ಬೆಂಕಿಗಾಹುತಿಯಾಗುವ ಅಪಾಯವಿದೆ.
ಈ ಹಂತದಲ್ಲಿ ಸ್ವಾಮಿ ವಿವೇಕಾನಂದ ಅವರು ಹೇಳಿದ ಒಂದು ಮಾತು ನೆನಪಾಗುತ್ತದೆ. ʼಜೀಸಸ್ ಬದುಕಿದ್ದ ದಿನಗಳಲ್ಲಿ ನಾನೇನಾದರೂ ಫೆಲೆಸ್ತೀನ್ ನಲ್ಲಿದ್ದಿದ್ದರೆ ಕಣ್ಣೀರಿನಿಂದಲ್ಲ, ನನ್ನ ಹೃದಯದಿಂದ ರಕ್ತಬಸಿದು ಪಾದ ತೊಳೆಯುತ್ತಿದ್ದೆʼ. ಕಾಲ ನೋಡಿ, ಹೇಗೆ ಮತ್ತು ಯಾವ ರೀತಿಯಲ್ಲಿ ಬದಲಾಗಿಹೋಯಿತು.
ವಿಶೇಷ ವರದಿ: ರಾ.ಚಿಂತನ್












