
ನೆಲಮಂಗಲ: ಧರ್ಮಾದಾರಿತ ರಾಜಕಾರಣದಲ್ಲಿ ಬೆಳೆದು ಬಂದಿದ್ದು, ನಾಡಿನ ಮಠಾಧೀಶರ ಚಿಂತನೆಗಳನ್ನು, ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗಾ ಕ್ಷೇತ್ರದ ಶ್ರೀ ಸದ್ಧರ್ಮ ಸಿಂಹಾಸನ ಸಂಸ್ಥಾನ ಹೊನ್ನಮ್ಮದೇವಿ ಗವಿಮಠದಲ್ಲಿ ಮಂಗಳವಾರ ನಡೆದ ಹೊನ್ನಮ್ಮದೇವಿ ದೇವಾಲಯದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಧರ್ಮ, ಸಂಸ್ಕೃತಿ, ಮಠ ಮಾನ್ಯಗಳ ಚಿಂತನೆಗಳಿಗೆ ಒಳಗಾಗಿದ್ದೇನೆ ಎಂದರು.

ಸರ್ಕಾರಕ್ಕೆ ದಿಕ್ಸೂಚಿ ಕೊಟ್ಟಿದ್ದು ನಾಡಿನ ಮಠ ಮಾನ್ಯಗಳು, ಸರ್ಕಾರಕ್ಕೆ ಅಕ್ಷರ ದಾಸೋಹ, ಅನ್ನದಾಸೋಹ ಪರಿಕಲ್ಪನೆ ನೀಡಿದ್ದು ನಾಡಿನ ಮಠಗಳು. ಈ ಕಾರ್ಯಗಳಿಂದ ಸರ್ಕಾರ ಪ್ರೇರಣೆಗೊಂಡು ತ್ರಿವಿಧ ದಾಸೋಹವನ್ನು ನಡೆಸಿಕೊಂಡು ಬರುತ್ತಿದೆ ಎಂದು ಸಚಿವರು ಹೇಳಿದರು.

ನಮಗೆ ಜಾತಿ ಧರ್ಮ ಗೊತ್ತಿಲ್ಲ. ನಮಗೆ ಗೊತ್ತಿರುವುದು ಎರಡೇ ಜಾತಿ, ಒಂದು ಹೆಣ್ಣು ಮತ್ತೊಂದು ಗಂಡು ಜಾತಿ. 12ನೇ ಶತಮಾನದಲ್ಲೆ ಬಸವಣ್ಣನವರು ಮಹಿಳಾ ಸ್ವಾತಂತ್ರ್ಯದ ಬಗ್ಗೆ ಪ್ರತಿಪಾದಿಸಿದ್ದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

- ಸ್ವಾಮೀಜಿಗಳ ಆಶೀರ್ವಾದ ಅವಿಸ್ಮರಣೀಯ
ನಾನು ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಾಡಿನ ಮೂಲೆ ಮೂಲೆಗಳಿಂದ ಮಠಾಧೀಶರು ಆಸ್ಪತ್ರೆಗೆ ಬಂದು ಆಶೀರ್ವದಿಸಿದರು. ಇದನ್ನು ನಾನೆಂದು ಮರೆಯುವುದಿಲ್ಲ. ನಾನೇನು ಅಂಥಹ ಸಾಧನೆ ಮಾಡಿದವಳಲ್ಲ, ಸಂಘರ್ಷದ ಹಾದಿಯಲ್ಲಿ ಬೆಳೆದು ಬಂದವಳು ನಾನು, ನನಗೆ ಮಠಾಧೀಶರು ನೀಡಿದ ಆತ್ಮ ಸ್ಥೈರ್ಯ ಮರೆಯುವಂತಿಲ್ಲ ಎಂದು ಸಚಿವರು ಸ್ಮರಿಸಿದರು.

7 ಕೋಟಿ ಜನಸಂಖ್ಯೆಯ ಕರ್ನಾಟಕದ ಸರ್ಕಾರದಲ್ಲಿ ಏಕೈಕ ಮಹಿಳಾ ಸಚಿವೆಯಾಗಿರುವೆ. 35 ಲಕ್ಷ ಮಕ್ಕಳು, ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರು, ವಿಕಲ ಚೇತನರು, ಹಿರಿಯ ನಾಗರಿಕರು, ನನ್ನ ಇಲಾಖೆ ವ್ಯಾಪ್ತಿಯಲ್ಲಿದ್ದಾರೆ. ಅವರ ಮೊಗದಲ್ಲಿ ನಗು ತರುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಅದರಲ್ಲೂ 1.23 ಕೋಟಿ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ ಸಂಪರ್ಕವಾಗಿ ತಲುಪಿಸಲಾಗುತ್ತಿದೆ ಎಂದರು.

ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದರೆ, ಹೊನ್ನಮ್ಮ ದೇವಿ ಗವಿಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ನೇತೃತ್ವದ ವಹಿಸಿದ್ದರು. ನೆಲಮಂಗಲ ಕ್ಷೇತ್ರದ ಶಾಸಕರಾದ ಎನ್.ಶ್ರೀನಿವಾಸಯ್ಯ ಸೇರಿದಂತೆ
ವಿವಿಧ ಮಠಾಧೀಶರು ಉಪಸ್ಥಿತರಿದ್ದರು.