ಇತ್ತೀಚೆಗೆ ಹಳ್ಳಿಗಳಲ್ಲಿಯೂ ಸೋಂಕು ಹೆಚ್ಚಾದ ಕಾರಣ ಮಾಜಿ ಸಿಎಂ ಕುಮಾರಸ್ವಾಮಿ ಯಡಿಯೂರಪ್ಪ ಸರ್ಕಾರಕ್ಕೆ ಸಲಹೆಯೊಂದನ್ನು ಕೊಟ್ಟಿದ್ದಾರೆ. ಕೋವಿಡ್ 19 ಈಗ ಹಳ್ಳಿ ಹಳ್ಳಿಗಳನ್ನು ವೇಗವಾಗಿ ವ್ಯಾಪಿಸುತ್ತಿದೆ. ಸೋಂಕಿತರು ಹಾಲನ್ನು ಡೈರಿಗಳಿಗೆ ತಂದು ಹಾಕುತ್ತಿರುವುದರಿಂದ ರೋಗ ಇನ್ನಷ್ಟು ಹಬ್ಬುತ್ತಿದೆ. ಗ್ರಾಮೀಣ ಭಾಗದ ಈ ಹೊಸ ಸಮಸ್ಯೆಯನ್ನು ಸರ್ಕಾರ, ಕೆಎಂಎಫ್ ಮತ್ತು ಹಾಲು ಒಕ್ಕೂಟಗಳು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಡೈರಿಗೆ ಹಾಲು ಹಾಕಲು ಬಂದವರು ಕಡ್ಡಾಯವಾಗಿ ಶುಚಿತ್ವ, ಮಾಸ್ಕ್, ಸ್ಯಾನಿಟೈಸರ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕಡ್ಡಾಯವಾಗಿ ಡೈರಿಗಳಲ್ಲಿ ಶುಚಿತ್ವ ಕಾಪಾಡುವುದರ ಜತೆಗೆ ಪರಸ್ಪರ ಅಂತರವನ್ನು ಕಾಯ್ದುಕೊಳ್ಳಬೇಕು ಎಂದಿದ್ದಾರೆ.
ಹಾಲು ಉತ್ಪಾದಕ ಸಂಘಗಳಲ್ಲಿ ಕಾರ್ಯನಿರ್ವಹಿಸುವ ನೌಕರರನ್ನು ಕೋವಿಡ್ ವಾರಿಯರ್ಸ್ ಎಂದು ಘೋಷಿಸಬೇಕು. ಪಶುವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ಕೊಟ್ಟಿದ್ದಾರೆ.