ಎರಡು ಮೂರು ವರ್ಷಗಳ ಕಾಲ ಅಸ್ಮಿತೆ ರಾಜಕಾರಣದ ದಾಳಿಗೆ ಸಿಲುಕಿ ದುರವಸ್ಥೆಯಲ್ಲಿದ್ದ ರಂಗಾಯಣ ಮತ್ತೊಮ್ಮೆ ಚಿಗುರುವಂತಾಗಿರುವುದು ಮೈಸೂರಿನ ರಂಗಾಸಕ್ತರಲ್ಲಿ ಉತ್ಸಾಹ, ಹುರುಪು ಮೂಡಿಸಿದೆ. ರಂಗಾಯಣದ ನಿರ್ವಹಣೆಯಲ್ಲಿ ಎಂತಹುದೇ ಅಪಸವ್ಯಗಳು ಕಂಡುಬಂದಿದ್ದರೂ, ಇಲ್ಲದ ಸೈದ್ಧಾಂತಿಕ ಅಲೆಗಳು ಮತ್ತು ಸಲ್ಲದ ತಾತ್ವಿಕ ಸೆಲೆಗಳು ಈ ರಂಗಸಂಸ್ಥೆಯನ್ನು ಬಾಧಿಸಿದ್ದರೂ, ಮೈಸೂರಿನ ರಂಗಾಸಕ್ತರಿಗೆ ರಂಗಾಯಣದ ಮೇಲಿನ ಅಭಿಮಾನವಾಗಲೀ, ಭರವಸೆಯಾಗಲೀ ಕುಂದಿರಲಿಲ್ಲ. ರಾಜಕೀಯ ಪ್ರೇರಿತ ಸೈದ್ದಾಂತಿಕ ಪ್ರಚೋದನೆಗಳಿಗೆ ಬಲಿಯಾಗಿದ್ದ ರಂಗಾಯಣ ಕೆಲ ಕಾಲ ವಿವಾದದ ಕೇಂದ್ರವಾಗಿದ್ದು ವಾಸ್ತವ. ಇದು ಸಹಜವೇ ಆಗಿತ್ತು. ಏಕೆಂದರೆ ರಂಗಾಯಣ ಮೈಸೂರಿನ ಕಲಾಸಕ್ತರ ಪಾಲಿಗೆ ಕೇವಲ ಒಂದು ರೆಪರ್ಟರಿ ಆಗಿಲ್ಲ. ಅಲ್ಲಿ ನಾಡಿನ ಸಂಸ್ಕೃತಿಯ ಬಿತ್ತಗಳಿವೆ. ನೀರೆರೆದು ಪೋಷಿಸಿ ಬೆಳೆಸಿದ ರಂಗಭೂಮಿಯ ಸಂತತಿಯ ಛಾಯೆ ಇದೆ. ಈ ಸಂತತಿಯನ್ನು ಪ್ರತಿನಿಧಿಸುವವರು ಭೌತಿಕವಾಗಿ ರಾಜ್ಯಾದ್ಯಂತ ಹಂಚಿಹೋಗಿದ್ದರೂ ಭಾವನಾತ್ಮಕ ನೆಲೆಯಲ್ಲಿ ಇಲ್ಲಿಯೇ ಶಾಶ್ವತವಾಗಿ ನೆಲೆಸಿದ್ದಾರೆ.

ಕಲೆ ಮತ್ತು ಕಲಾಭಿವ್ಯಕ್ತಿ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡು ಯಾವುದೋ ನಿರ್ದಿಷ್ಟ ತಾತ್ವಿಕ ನೆಲೆಗಳ ದಾಸ್ಯಕ್ಕೊಳಗಾದಾಗ ಸಾಂಸ್ಕೃತಿಕ ಭೂಮಿಕೆಗಳು ಸಹಜವಾಗಿಯೇ ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುತ್ತವೆ. ಈ ವಿಕೃತ ಪ್ರಕ್ರಿಯೆಗೆ ರಂಗಾಯಣ ತುತ್ತಾಗಿದ್ದು ದುರಾದೃಷ್ಟಕರ. ಇತ್ತೀಚಿನ ದಿನಗಳಲ್ಲಿ ಚಾಲ್ತಿಗೆ ಬಂದಿರುವ ಎಡ-ಬಲ ಪಂಥೀಯ ಚಿಂತನಾವಾಹಿನಿಗಳ ಸುತ್ತಲಿನ ನಿರೂಪಣೆಗಳು ಸೃಜಿಸಿದ್ದು ರಂಗಾಯಣದ ಆವರಣದಲ್ಲಿ ಅಲ್ಲ ಎಂಬ ವಾಸ್ತವ ಎಲ್ಲ ಸೃಜನಶೀಲ ಮನಸುಗಳಿಗೂ ತಿಳಿದೇ ಇರುತ್ತದೆ. ರಂಗಭೂಮಿ ಮತ್ತು ರಂಗಕಲೆಯಲ್ಲಿ ಪಂಥೀಯ ಭಾವನೆಗಳಿಗಾಗಲೀ, ಧೋರಣೆಗಾಗಲೀ ಪ್ರಾತಿನಿಧ್ಯ ಇರುವುದಿಲ್ಲ ಎಂಬ ಸರಳ ಸತ್ಯವನ್ನು ಅರಿಯಲು ಆಳವಾದ ಸಂಶೋಧನೆಯೇನೂ ಬೇಕಿಲ್ಲ. ಕರ್ನಾಟಕದ ರಂಗಭೂಮಿಯ ಹಾಗೂ ರಂಗಾಯಣದ ಮೂರು ದಶಕಗಳ ನಡಿಗೆಯನ್ನು ಗಮನಿಸಿದರೆ ತಿಳಿಯುತ್ತದೆ.

ಆದರೂ ಈ ನಿರೂಪಣೆಗಳು ಉಂಟುಮಾಡಿದ ಕ್ಷೋಭೆ ಖಂಡಿತವಾಗಿಯೂ ರಂಗಾಸಕ್ತರಲ್ಲಿ ಆತಂಕ ಮೂಡಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾದ ನಂತರದಲ್ಲಿ ರಂಗಾಯಣವನ್ನೂ ಸೇರಿದಂತೆ ಎಲ್ಲ ಸಾಂಸ್ಕೃತಿಕ ಸಂಸ್ಥೆಗಳಿಗೆ ಹೊಸ ಸ್ವರೂಪ ನೀಡುವುದು ಸಿದ್ಧರಾಮಯ್ಯ ಸರ್ಕಾರದ ಪ್ರಥಮ ಆದ್ಯತೆಯಾಗಬೇಕಿತ್ತು. ಈ ನಿಟ್ಟಿನಲ್ಲಿ ವಿಳಂಬವಾಗಿರುವುದು ಅಕ್ಷಮ್ಯ ಆದರೆ ಈ ವಿಳಂಬದ ಹಿಂದೆ ಸಾಂಸ್ಕೃತಿಕ-ರಾಜಕೀಯ ಕಾರಣಗಳು ಇದ್ದರೂ ಅಚ್ಚರಿಪಡಬೇಕಿಲ್ಲ. ಪೊಲೀಸ್ ಬಂದೋಬಸ್ತಿನಲ್ಲಿ ನಾಟಕಗಳನ್ನು ನಡೆಸಬೇಕಾದ ದುರಂತ ಸನ್ನಿವೇಶವನ್ನು ಸೃಷ್ಟಿಸಿದ ಸಾಂಸ್ಕೃತಿಕ ಶಕ್ತಿಗಳು ರಂಗಾಯಣದ ಮೂಲ ಅಂತಃಸತ್ವವನ್ನು ಕಸಿದುಕೊಳ್ಳಲಾಗುವುದಿಲ್ಲ ಎಂಬ ವಾಸ್ತವವನ್ನು ಇನ್ನಾದರೂ ಅರ್ಥಮಾಡಿಕೊಳ್ಳಬೇಕಿದೆ.

ಏಕೆಂದರೆ ರಂಗಭೂಮಿ ಮತ್ತು ರಂಗಾಯಣ ಜಂಗಮ ಸ್ವರೂಪದ ಕಲಾಭಿವ್ಯಕ್ತಿಯ ಸೇತುವೆಗಳು. ಈ ಸಂಸ್ಕೃತಿಯ ನೆಲೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳು ಸಹಜವಾಗಿಯೇ ವಿಫಲವಾಗುತ್ತವೆ. ಕಲೆ ನಿಂತ ನೀರಾಗುವುದಿಲ್ಲ ಹಾಗೆಯೇ ರಂಗಕಲೆಯ ಅಂತಃಶಕ್ತಿಯೂ ಶಿಥಿಲವಾಗುವುದಿಲ್ಲ. 29 ಕಲಾವಿದರಿಂದ ಆರಂಭವಾದ ರಂಗಾಯಣ ಇಂದು ಏಳು ಕಲಾವಿದರಿಂದ ನಾವೆಯನ್ನು ನಡೆಸಬೇಕಿದೆ ಎಂಬ ವಿಷಾದವಿದೆ. ಈ ನಾವೆಯನ್ನು ಮುನ್ನಡೆಸುವ ನಾವಿಕರಿಗೆ ರಂಗಾಯಣ ತಮ್ಮ ಸ್ವಹಿತಾಸಕ್ತಿಯ ಭೂಮಿಕೆಯಾಗಕೂಡದು. ಬದಲಾಗಿ ಇಲ್ಲಿ ಸೃಜಿಸಿ ಪೋಷಿಸಲ್ಪಟ್ಟ ಕಲಾಭಿವ್ಯಕ್ತಿಯ ವೃಕ್ಷಗಳನ್ನು ಕಾಪಾಡುವ ಒಂದು ಸುಂದರ ವನಸಿರಿಯಾಗಬೇಕು. ಈ ಸಂಸ್ಥೆಗೆ ದುಡಿದ ಯಾರಿಗೇ ಆದರೂ, ಸಂಸ್ಥೆಯ ಮೂಲ ಆಶಯಗಳ ಅರಿವು ಇದ್ದುದೇ ಆದಲ್ಲಿ, ಅದನ್ನು ಅಸ್ಥಿರಗೊಳಿಸಲು ಮನಸ್ಸಾಗಕೂಡದು. ರಂಗಾಯಣದ ಕಲಾವಿದರನ್ನು ಅಪಮಾನಿಸುವ ಅಥವಾ ಅವರಲ್ಲಿನ ಸೂಕ್ಷ್ಮ ಸಂವೇದನೆಗಳನ್ನು ಭಂಗಗೊಳಿಸುವ ಪ್ರಯತ್ನಗಳು ಅಸಾಂಸ್ಕೃತಿಕ ನಡೆ ಎನಿಸಿಕೊಳ್ಳುತ್ತದೆ.
ಆದಾಗ್ಯೂ ಕಳೆದ ಕೆಲ ವರ್ಷಗಳಲ್ಲಿ ರಂಗಾಯಣ ಈ ಎಲ್ಲ ಅನಪೇಕ್ಷಿತ ಬೆಳವಣಿಗೆಗಳಿಗೂ ಕೇಂದ್ರಬಿಂದುವಾಗಿದೆ. ಈಗ ರಂಗಸಮಾಜ ಮತ್ತು ರಂಗಾಯಣ ನಿರ್ದೇಶಕರ ನೇಮಕ ವಿಳಂಬವಾಗುತ್ತಿರುವ ಸಂದರ್ಭದಲ್ಲಿ ಸಂಸ್ಥೆಯ ಅಧಿಕಾರಿಗಳೇ ನಾವೆಯನ್ನು ನಡೆಸುವಂತಾಗಿದೆ. ಇದು ಶೀಘ್ರ ಇತ್ಯರ್ಥವಾಗಬೇಕಾದ ವಿಚಾರ. ಆದರೆ ಈ ನಿರ್ವಾತವನ್ನು ಶೂನ್ಯಾವಸ್ಥೆ ಎಂದು ಭಾವಿಸಬೇಕಿಲ್ಲ. ಅಥವಾ ಗ್ರಹಣಗ್ರಸ್ತ ಎಂದೂ ಚಿಂತಿಸಬೇಕಿಲ್ಲ. ತಮ್ಮ ಇತಿಮಿತಿಗಳನ್ನು ಅರಿತೇ ರಂಗಾಯಣದ ಸಿಬ್ಬಂದಿ ಈ ಕಲಾಲೋಕಕ್ಕೆ ಹೊಸ ಸ್ಪರ್ಶ ನೀಡಲು ಯತ್ನಿಸಿ, ಸಫಲರಾಗಿದ್ದಾರೆ. ಇತ್ತೀಚೆಗೆ ಪ್ರದರ್ಶನಗೊಂಡ ಪಿ. ಲಂಕೇಶ್ ಅವರ ಕಥೆಯನ್ನು ಆಧರಿಸಿದ ʼ ಮುಟ್ಟಿಸಿಕೊಂಡವʼ ನು ( ನಿರ್ದೇಶನ ನಂದಿನಿ. ಕೆ.ಆರ್.) ಈ ನಿರ್ವಾತವನ್ನು ಹೋಗಲಾಡಿಸಿದೆ. ರಂಗಾಯಣದ ರಂಗ ಚಟುವಟಿಕೆಗಳು ಮರಳಿ ಚಿಗುರುವ ಭರವಸೆಯನ್ನು ಸಾಕಾರಗೊಳಿಸಿದೆ.

ಒಬ್ಬ ಕಲಾವಿದನ ಕಲಾಭಿವ್ಯಕ್ತಿಗೆ ಸಂಕೋಲೆಗಳನ್ನು ತೊಡಿಸಿ ಬಂಧಿಸುವುದರಿಂದ ಉಂಟಾಗಬಹುದಾದ ಮಾನಸಿಕ ಕ್ಷೋಭೆ, ಯಾತನೆ, ನೋವು ಮತ್ತು ಸಾಂಸ್ಕೃತಿಕ ತಲ್ಲಣಗಳನ್ನು ಅರ್ಥಮಾಡಿಕೊಳ್ಳಲು, ಯಾವುದೇ ಸೂಕ್ಷ್ಮ ಸಂವೇದನೆಯುಳ್ಳ ಮನಸಿಗೆ ಇದೇ ನಾಟಕದ ಅಂತಿಮ ದೃಶ್ಯ̈ (ಕಾಕತಾಳೀಯ ಎನಿಸಿದರೂ) ನೆರವಾಗಲೂಬಹುದು. ಮೇಲಾಗಿ ರಂಗಾಯಣದ ನಾವೆಯ ಮುಂಚಲನೆಗೆ ಬೇಕಿರುವುದು ಕೋಟಿಗಳ ಭಂಡಾರವಲ್ಲ. ರಂಗಭೂಮಿಯನ್ನು ಪೋಷಿಸಬೇಕಾದ ಸೂಕ್ಷ್ಮ ಸಂವೇದನೆ ಮತ್ತು ಸಾಂಸ್ಕೃತಿಕ ಬಹುತ್ವದ ಆಶಯಗಳು. ಈ ನಿಟ್ಟಿನಲ್ಲಿ ರಂಗಾಯಣದ ಬಾಗಿಲು ತೆರೆದಿದೆ. ಕಾರಂತರ ನಾಟಕ-ಕರ್ನಾಟಕದ ಕನಸು ಕಮರಿಹೋಗುವುದಿಲ್ಲ ಎನ್ನುವುದನ್ನು ಇಲ್ಲಿನ ಕಲಾವಿದರು ಮತ್ತು ಮೈಸೂರಿನ ರಂಗಾಸಕ್ತರು, ರಂಗ ಕಲಿಗಳು ನಿರೂಪಿಸಲಿದ್ದಾರೆ. ಮೈಸೂರು ಸಾಂಸ್ಕೃತಿಕವಾಗಿ ಬರಡಾಗುವುದಿಲ್ಲ. ರಂಗಾಯಣಕ್ಕೆ ಗ್ರಹಣವೂ ಆವರಿಸುವುದಿಲ್ಲ.