ನಮಗೆ ತಿಳಿದಿರುವಂತೆ, ಜಮ್ಮು ಕಾಶ್ಮೀರದ ಜನರು ಬಲಪಂಥೀಯ ಆಡಳಿತಗಾರರಿಗೆ ಬಹಳ ಪ್ರಿಯರು.
ಹಾಗಾಗಿಯೇ, ಹಿಂದಿನ ಸರಕಾರಗಳ ನಿಷ್ಕರುಣೆಯ ನೀತಿಗಳಿಗೆ ವಿರುದ್ಧವಾಗಿ ನರೇಂದ್ರ ಮೋದಿಯವರು ಕಾಶ್ಮೀರಿಗಳು ಬಲವಾಗಿ ಬಯಸಿದ್ದದ್ದನ್ನು ಜಾರಿಗೆ ತಂದರು. ಕಾಶ್ಮೀರಿಗಳು ಮುಖ್ಯವಾಹಿನಿಗೆ ಬರುವುದನ್ನು ತಡೆಯುತ್ತಿದ್ದ ಕಾಶ್ಮೀರದ ‘ವಿಶೇಷ ಮಾನ್ಯತೆ’ಯನ್ನು ರದ್ದುಗೊಳಿಸಿದರು. ಹಾಗೆ ಮಾಡುವುದರ ಮೂಲಕ ಸ್ಥಳೀಯ ಬೇಜವಾಬ್ದಾರಿ ರಾಜಕಾರಣಿಗಳಿಂದ ತುಂಬಿ ಹೋಗಿದ್ದ ಅಲ್ಲಿಯ ಸ್ಥಳೀಯ ಅಸೆಂಬ್ಲಿಗಳ ದಬ್ಬಾಳಿಕೆಯಿಂದ ಕಾಶ್ಮೀರದ ನಿವಾಸಿಗಳನ್ನು ಕಾಪಾಡಿದ್ದಾರೆ.
ಅಂತಹ ದೊಡ್ಡ ರಾಜ್ಯವನ್ನು ಭಾಗಗಳಾಗಿ ವಿಂಗಡಿಸಿ ಅವುಗಳ ಆಡಳಿತವನ್ನು ರಾಜಕೀಯವಾಗಿ ನಿರ್ಬಂಧವಿಲ್ಲದ ಪ್ರಮುಖರೊಬ್ಬರಿಗೆ ನೀಡಲಾಯಿತು. ಹೀಗೆ ಕಾಶ್ಮೀರದ ನಿವಾಸಿಗಳಿಗೆ ಮುಖ್ಯವಾಹಿನಿಯ ಕೊಡುಗೆಗಳನ್ನು ಸುಲಭವಾಗಿ ನೀಡಲು ಸಾಧ್ಯವಾಗುವಂತೆ ಮಾಡಿದರು.
ಆಸ್ತಿ ಮಾಲೀಕತ್ವದ ಮೇಲಿನ ನಿರ್ಬಂಧಗಳನ್ನು ಕಿತ್ತುಹಾಕುವುದರ ಮೂಲಕ ಹಾಗೂ ಒಕ್ಕೂಟ ಸರಕಾರದ ಮೇಲ್ದರ್ಜೆಯ ಅಧಿಕಾರಿಗಳನ್ನು ಕಾಶ್ಮೀರಕ್ಕೆ ಕಳಿಸುವುದರ ಮೂಲಕ ಕೇಂದ್ರದ ಅವಕಾಶಗಳನ್ನು ಮತ್ತು ಅನುಕೂಲಗಳನ್ನು ಕಾಶ್ಮೀರಕ್ಕೆ ಸುಲಭವಾಗಿ ತಲುಪಿಸುವುದಕ್ಕೆ ಮೋದಿ ಸರಕಾರ ವೇದಿಕೆ ಸೃಷ್ಟಿಸಿತು.
ಪ್ರಮುಖ ಉದ್ಯಮಗಳಿಗೆ ಹೆಚ್ಚೆಚ್ಚು ರಿಯಾಯಿತಿಗಳನ್ನು ನೀಡುವುದರ ಮೂಲಕ ಕಾಶ್ಮೀರದ ಜನತೆಗೆ ಬಹುಕಾಲದಿಂದ ನಿರಾಕರಿಸಲಾಗಿದ್ದ ‘ಅಭಿವೃದ್ಧಿ’ಯನ್ನು ತರಲು ಮುಂದಾಯಿತು. ಭರ್ಜರಿ ಆರ್ಥಿಕ ಪ್ಯಾಕೇಜ್ ಗಳು, ಹೂಡಿಕೆದಾರರಿಗೆ ಜಿ.ಎಸ್.ಟಿ. ಯ ರಿಯಾಯಿತಿ, ಇತ್ಯಾದಿ ಹಣಕಾಸಿನ ಅನುಕೂಲಗಳನ್ನು ಹೂಡಿಕೆದಾರರಿಗೆ ಘೋಷಿಸಿತು.
ಅಲ್ಲಿನ ಸ್ಥಳೀಯ ರಾಜಕೀಯ ಪಕ್ಷಗಳ ‘ವಸ್ತುಸ್ಥಿತಿ ಆಧಾರಿತ’ ವರದಿಗಳ ಪ್ರಕಾರ ಜಮ್ಮು ಕಾಶ್ಮೀರದ ಅಭಿವೃದ್ಧಿ ಸೂಚ್ಯಂಕಗಳು ಮುಂಚೆ ಹೆಚ್ಚಿದ್ದೂ ಇದೀಗ ಹೀನಾಯ ಪರಿಸ್ಥಿತಿಯಲ್ಲಿವೆ. ಒಕ್ಕೂಟ ಸರಕಾರವು ರಾಷ್ಟ್ರವಾದಿ ಮಾಧ್ಯಮಗಳ ಸಹಾಯದೊಂದಿಗೆ ಇಂತಹ ಕುಖ್ಯಾತ ಪಕ್ಷಗಳು ನೀಡಿರುವ ಅಂಕಿಅಂಶಾಧರಿತ ವರದಿಗಳು ಕೇವಲ ಕಲ್ಪಿತವಾದವು ಎಂದು ನಿದರ್ಶಿಸಿದೆ.
ಮತ್ತು ಅಂತಹ ಸೂಚ್ಯಂಕ ವರದಿಗಳನ್ನು ತಯಾರಿಸಿದ ಸಂಸ್ಥೆಗಳು ಹೇಗೆ ಭಾರತ-ವಿರೋಧಿ ಸಂಸ್ಥೆಗಳು ಎಂಬುದನ್ನೂ, ಹೇಗೆ ಅವು ಕಾಶ್ಮೀರವನ್ನು ಹೀನಾಯ ಪರಿಸ್ಥಿತಿಯಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿವೆ ಎಂಬುದನ್ನು ಸರಕಾರವು ಕಾಶ್ಮೀರ-ಪ್ರಿಯರಿಗೆ ಮನದಟ್ಟುಮಾಡಿದೆ.
ಇಂತಹ ಎಲ್ಲಾ ಪ್ರಯತ್ನಗಳ ನಡುವೆ, ಕಾಶ್ಮೀರಿಗಳ ಪರವಾಗಿ ಪ್ರಧಾನ ಮಂತ್ರಿಯವರು ಸಂಸತ್ತಿನ ಸದನದಲ್ಲಿ ಉದ್ಯೋಗ ಮತ್ತು ಅಭಿವೃದ್ಧಿ ಕಾಶ್ಮೀರಿಗಳನ್ನು ತಲುಪಲು ಹೇಗೆ ತುದಿಗಾಲಲ್ಲಿ ನಿಂತಿವೆ ಎಂದು ಹೇಳಿಕೆ ನೀಡಿದರು.
ಆದರೆ, ಇದನ್ನು ಊಹಿಸಲೂ ನಿಮಗೆ ಸಾಧ್ಯವಿಲ್ಲ. ಜಮ್ಮು ಕಾಶ್ಮೀರದಲ್ಲಿ ನವ್ಯ ಯುಗವೊಂದನ್ನು ಸ್ಥಾಪಿಸಲು ಸಹಕರಿಸಬೇಕಾಗಿದ್ದ ಭಾರತದ ಉದ್ಯಮಿ ಮಹಾಶಯರು ಇಂತಹ ರಾಷ್ಟ್ರವಾದಿ ಪ್ರಯತ್ನದಿಂದ ದೂರವೇ ಉಳಿದಿದ್ದಾರೆ.
ಖಾಸಗಿ ಉದ್ಯಮಗಳ ಈ ಅಸಹಕಾರಿ ವರ್ತನೆಯಿಂದಾಗಿ ಭಾರತದ ಗೃಹ ಮಂತ್ರಿಗಳೇ ಉದ್ಯಮಿಗಳಿಂದ ಸಹಕಾರ ಬೇಡಲು ಮುಂದಾಗಿದ್ದಾರೆ ಎಂದು ಭಾವಿಸಿ. ಯಾಕೆಂದರೆ ಸನ್ಮಾನ್ಯ ಕೈಗಾರಿಕಾ ಮಂತ್ರಿಗಳು ಈ ಕಾರ್ಯ ನಿರ್ವಹಿಸಲು ಅಸಮರ್ಥರಾಗಿದ್ದಾರೆ (ಕೈಗಾರಿಕಾ ಮಂತ್ರಿಗಳು ಇದ್ದಾರೆಯೇ ಎಂಬುದೇ ಗೊಂದಲವಾಗಿದೆ!).
ಒಬ್ಬ ಸರಕಾರಿ ನೌಕರ ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡಲು ನಿರಾಕರಿಸಿದರೆ, ಕೂಡಲೆ ಶಿಕ್ಷೆಗೆ ಒಳಗಾಗುತ್ತಾರೆ. ಆದರೆ ಜಮ್ಮು ಕಾಶ್ಮೀರದ ‘ರಾಷ್ಟ್ರವಾದಿ’ ಅವಶ್ಯಕತೆಗೆ ಅಂಬಾನಿ ಅಥವಾ ಅದಾನಿ ಮತ್ತು ಇತರರನ್ನು ಹೇಗೆ ಬದ್ಧರನ್ನಾಗಿ ಮಾಡುವುದು?
ಹೀಗಿದ್ದಾಗ್ಯೂ, ಸರಕಾರದ ಹೊಸ ಆರ್ಥಿಕ ನೀತಿಯು ಇಡೀ ದೇಶವನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವುದಾಗಿ ಎದೆ ತಟ್ಟಿ ಘೋಷಿಸಿದೆ.
ಜಮ್ಮು ಕಾಶ್ಮೀರದ ಅಭಿವೃದ್ಧಿ ಯೋಜನೆಗಳಿಗೆ ಈ ಲಾಭಕೋರ ಮಾರಾಟಗಾರರು ಕಿಂಚಿತ್ತಾದರೂ ಕರುಣೆ ತೋರಿಸುವುದಿಲ್ಲ ಎಂದೇ ಭಾವಿಸಬಹುದು.
ಹೀಗಿದ್ದಾಗ ಕಾಶ್ಮೀರದ ಜನತೆಯನ್ನು ರಾಷ್ಟ್ರದ್ರೋಹಿಗಳೆಂದು ಬಿಂಬಿಸುವುದು ಸಾಧ್ಯವೆ?
ಮಡಿಕೆಯೊಂದು ಕುದಿಕಲವೊಂದನ್ನು ಕರಿಯನೆಂದು ಕರೆಯುವುದಕ್ಕೆ ಅನುಮತಿ ನೀಡಬಹುದೇ?
ಜೊತೆಗೆ, ದಾರಿ ತಪ್ಪಿದ ಯುವಕರ ಪೋಷಕರು – ಇವರು ಸಶಕ್ತರಾಗಿಯೂ ಕಾಣುವುದಿಲ್ಲ, ಹಾಗೆಯೇ ಉಗ್ರವಾದವನ್ನು ತಡೆಗಟ್ಟುವುದಕ್ಕೆ ಅವರು ಆಡಳಿತಗಾರರೊಂದಿಗೆ ಕೈ ಜೋಡಿಸುವಷ್ಟೂ ಉತ್ಸಾಹಿಗಳಾಗಿ ಕಾಣುವುದಿಲ್ಲ.
ಈ ತರಹದ ಅಸಹಕಾರಿ ಉದ್ಯಮಿಗಳಿರುವಾಗ ಮತ್ತು ನಿರಾಸಕ್ತ ಯುವಕರಿರುವಾಗ, ಪ್ರಧಾನ ಮಂತ್ರಿಗಳ ಸದನದ ಭಾಷಣ ಮತ್ತೊಂದು ಸಾಂಪ್ರದಾಯಿಕ ಭರವಸೆಯಾಗಿ ಮಾತ್ರ ಉಳಿಯುವ ಅಪಾಯ ಹೆಚ್ಚಿದೆ.
ಇದೊಂದು ವಾಡಿಕೆಯ ಸನ್ನಿವೇಶವಾಗಿ ಹೋದರೆ ಖಂಡಿತವಾಗಿಯೂ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳಿಗೆ ಲೇವಡಿಯ ವಸ್ತುವಾಗುವ ಸಾಧ್ಯತೆಯಿದೆ.
ಕೇಂದ್ರದ ಯಾವುದೇ ನಡೆಗೆ ಈ ಹಠಮಾರಿಗಳು ಸಂತುಷ್ಟರಾಗುವುದಿಲ್ಲ. ಅವರ ರಾಜಕೀಯ ನ್ಯಾಯದ ಬೇಡಿಕೆಯೇ ಅವರ ಪ್ರತೀಕ್ಷೆಗಳಿಗೆ ಅಡ್ಡಗಲ್ಲಾಗಿದೆ.
ಸಾಂವಿಧಾನಿಕ – ರಾಜಕೀಯ ಆಕಾಂಕ್ಷೆಗಳಿಗೆ ಪ್ರಜಾಪ್ರಭುತ್ವದಲ್ಲಿ ಮಹತ್ವ ಕೊಟ್ಟಂತೆಯೇ.
ಮೂಲ: ಬದ್ರಿ ರೈನಾ (ಡೆಲ್ಲಿ ಯುನಿವರ್ಸಿಟಿ ಪ್ರಾಧ್ಯಾಪಕರು)
ಅನುವಾದ: ಸೂರ್ಯ ಸಾಥಿ