2004ರ ನಂತರ ಭಾರತದ ಚುನಾವಾಣಾ ಪರಿಕಲ್ಪನೆಯು ಒಂದು ಹೊಸ ಮಜಲಿನತ್ತ ಹೊರಳಿತ್ತು. ಜಾತಿ ರಾಜಕಾರಣದ ಅಗಾಧ ಬೆಂಬಲವಿದ್ದೂ 2005ರಲ್ಲಿ ಬಿಹಾರದಲ್ಲಿ ಲಾಲೂ ಪ್ರಸಾದ್ ಸೋತು ನಿತೀಶ್ ಕುಮಾರ್ ಅಧಿಕಾರಕ್ಕೇರಿದ್ದರು. ಚುನಾವಣಾ ಪ್ರಚಾರದಲ್ಲಿ ನಿತೀಶ್, ಲಾಠಿಗಳಿಗಿಂತ ದೊಡ್ಡ ಆಯುಧ ಪೆನ್. ಸ್ಪಷ್ಟ ಇಂಗ್ಲಿಷ್, ಉನ್ನತ ಶಿಕ್ಷಣ ನಿಮ್ಮ ಬದುಕನ್ನು ಉತ್ತಮಗೊಳಿಸಬಹುದು, ಹೊಡೆದಾಟವಲ್ಲ ಎಂದಾಗ ರಾಜಕೀಯ ಪಂಡಿತರು ಬಿಹಾರದಂತಹ ಹಿಂದುಳಿದ, ಒರಟರ ರಾಜ್ಯದಲ್ಲಿ ನಿತೀಶ್ ಈ ರೀತಿ ಮಾತಾಡಿ ಈಗಿರುವ ಓಟನ್ನು ಕಳೆದುಕೊಳ್ಳುತ್ತಾರೆ ಎಂದು ನಗೆಯಾಡಿದ್ದರು. ಆದರೆ ಅನಕ್ಷರಸ್ಥ, ಜಾತಿವಾದಿ ಎಂದು ಪ್ರಜ್ಞಾವಂತರಿಂದ ಕರೆಸಿಕೊಳ್ಳುವ ಬಿಹಾರಿಗಳು ನಿತೀಶ್ ಕುಮಾರ್ ಅವರನ್ನು ಗೆಲ್ಲಿಸಿದ್ದರು. ಆ ಚುನಾವಣೆಯಲ್ಲಿ ಪೆನ್ ಲಾಠಿಯ ಮೇಲೆ ಮೇಲುಗೈ ಸಾಧಿಸಿತ್ತು. ಭಾರತ ಅಭಿವೃದ್ಧಿಯ ಹೊಸ ರಾಜಕೀಯ ಶಕೆಯೊಂದಕ್ಕೆ ಕಾಲಿಡುತ್ತಿದೆಯೇನೋ ಎನ್ನುವ ಭಾವ ಮೂಡಿತ್ತು. ಅದಾದ ನಂತರ 2009ರಲ್ಲಿ ಯುಪಿಎ 2004 ಕ್ಕಿಂತ ಹೆಚ್ಚಿನ ಸೀಟ್ನೊಂದಿಗೆ ಅಧಿಕಾರಕ್ಕೆ ಬಂತು. ಮಹತ್ವಾಕಾಂಕ್ಷೆಯ ಭಾರತದ ಉದಯದ ಆಸೆ ಮತ್ತೊಮ್ಮೆ ಗರಿಗೆದರಿತು.
ಆದರೆ ಈಗ ನಾವು ವರ್ಷದಿಂದ ವರ್ಷಕ್ಕೆ ಹಿಂದಕ್ಕೆ ಚಲಿಸುತ್ತಿದ್ದೇವೆ. ಚುನಾವಣಾ ರಾಜಕಾರಣದಲ್ಲಿ ದೊಡ್ಡ ವಿಚಾರ ಆಗಬಾರದಿದ್ದ ವಿಚಾರಗಳು ಮಹತ್ವ ಪಡೆದುಕೊಳ್ಳುತ್ತಿವೆ. ಶಿಕ್ಷಣ, ನಿರುದ್ಯೋಗ, ಬೆಲೆ ಏರಿಕೆ, ಹಣ ದುಬ್ಬರ, ಆರ್ಥಿಕ ಸಂಕಷ್ಟ ಮುಂತಾದ ವಿಚಾರಗಳು ಹಿನ್ನೆಲೆಗೆ ಸರಿದು ಧರ್ಮ, ಮಂದಿರ, ಮಸೀದಿಗಳು ಅಧಿಕಾರ ಯಾರು ಹಿಡಿಯಬೇಕು ಎಂಬುವುದನ್ನು ನಿರ್ಧರಿಸುವ ಅಂಶಗಳಾಗಿವೆ.
ಇತ್ತೀಚೆಗಷ್ಟೇ ಬಿಹಾರ ಮತ್ತು ಉತ್ತರ ಪ್ರದೇಶದ ಉದ್ಯೋಗಾಕಾಂಕ್ಷಿ ಯುವಕರು ಸರ್ಕಾರಿ ಆಸ್ತಿಗಳನ್ನು ಸುಟ್ಟು ಹಾಕಿದ್ದರು. ರೈಲ್ವೆ ನೇಮಕಾತಿ ಮಂಡಳಿಯು ಟ್ರಾಫಿಕ್ ಅಸಿಸ್ಟೆಂಟ್, ಗೂಡ್ಸ್ ಗಾರ್ಡ್ ಗಳಂತಹ ನಾನ್ ಟೆಕ್ನಿಕಲ್ ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತು. ಕೇವಲ 35,000 ಹುದ್ದೆಗಳಿಗೆ ಸುಮಾರು 1.25 ಕೋಟಿ ಮಂದಿ ಅರ್ಜಿ ಸಲ್ಲಿಸಿದ್ದರು ಮತ್ತು 60 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರರ್ಥ ಪ್ರತಿ ಒಂದು ಹುದ್ದೆಗೆ 354 ಮಂದಿ ಅರ್ಜಿ ಸಲ್ಲಿಸಿದಂತೆ ಮತ್ತು ಒಬ್ಬ ಅಭ್ಯರ್ಥಿ ಆಯ್ಕೆಯಾಗುವುದೆಂದರೆ ಉಳಿದ 353 ಮಂದಿಗೆ ಕೆಲಸ ಇಲ್ಲ ಎಂದು. 2004ರಲ್ಲಿ ಬಿಹಾರದಲ್ಲಿದ್ದ ಟ್ರೆಂಡ್ ಮುಂದುವರಿದಿದ್ದರೆ, ನಿರುದ್ಯೋಗ ಮತ್ತು ಉದ್ಯೋಗದ ಅಭದ್ರತೆ ಇಷ್ಟು ಭೀಕರವಾಗಿರುವ ದೇಶವೊಂದರಲ್ಲಿ ಇದೇ ಮುಖ್ಯ ಚುನಾವಣಾ ವಿಚಾರವಾಗಬೇಕಿತ್ತು. ಸುಶಿಕ್ಷಿತ ಯುವ ಸಮುದಾಯಕ್ಕೆ ಉದ್ಯೋಗ ಒದಗಿಸುವುದರ ಬಗ್ಗೆ ಈ ದೇಶದ ರಾಜಕಾರಣಿಗಳು ಮಾತಾಡಬೇಕಿತ್ತು.
ಆದರೆ ಎಲ್ಲಾ ಬಿಟ್ಟು ಯ.ಪಿ ಮುಖ್ಯಮಂತ್ರಿ ಶುಕ್ರವಾರ “ಅವರು ಜಿನ್ನಾ ಅವರ ಆರಾಧಕರು, ನಾವು ಸರ್ದಾರ್ ಪಟೇಲ್ ಅವರನ್ನು ಪ್ರಾರ್ಥಿಸುತ್ತೇವೆ. ಅವರು ಪಾಕಿಸ್ತಾನವನ್ನು ಆರಾಧಿಸುತ್ತಾರೆ, ನಾವು ಭಾರತ ಮಾತೆಯನ್ನು ಪ್ರೀತಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಂದೆಡೆ ಚುನಾವಣಾ ಪ್ರಚಾರ ಸಭೆಯಲ್ಲಿ ಗೃಹ ಮಂತ್ರಿ ಅಮಿತ್ ಶಾ “ನೀವು ಎಸ್ಪಿಯ ಜಯಂತ್ ಅವರಿಗೆ ಓಟು ಹಾಕಿದರೆ ಗೆದ್ದ ನಂತರ ಆಜಂ ಖಾನ್ ನಿಮ್ಮ ಶಾಸಕರಾಗುತ್ತಾರೆ” ಎಂದು ನೇರವಾಗಿ ಕೋಮು ಧ್ರುವೀಕರಣದ ಮಾತನಾಡುತ್ತಾರೆ.
ಉದ್ಯೋಗ, ಭದ್ರತೆಯನ್ನು ಕೇಳುವವರ ಮುಂದೆ ಈ ದೇಶದ 95% ಮತದಾರರು ಹುಟ್ಟುವ ಮೊದಲೇ ಮರಣ ಹೊಂದಿದ ಜಿನ್ನಾ ಮತ್ತು ಪಟೇಲರ ನಡುವೆ ಒಬ್ಬರನ್ನು ಆಯ್ದುಕೊಳ್ಳಬೇಕಾದ ಅವಕಾಶ ಇಡಲಾಗುತ್ತಿದೆ. ‘ನೀವು ನಿರುದ್ಯೋಗಿಗಳು ಎನ್ನುವುದು ನಮಗೊತ್ತು, ನೀವು ಹತಾಶರಾಗಿದ್ದೀರಿ ಎನ್ನುವುದೂ ಗೊತ್ತು, ನಿಮಗೆ ನಮ್ಮ ಮೇಲೆ ಆಕ್ರೋಶವಿದೆ ಎನ್ನುವುದೂ ನಮಗೆ ಗೊತ್ತು. ನಿಮ್ಮ ಹಿರಿಯರು ಕಳೆದ ಎಪ್ಪತ್ತು ವರ್ಷಗಳಲ್ಲಿ ಮಾಡಿದ ತಪ್ಪಿನ ಫಲವನ್ನು ನಿಮ್ಮ ಮೇಲೆ ಹೊರಿಸುತ್ತಿದ್ದೇವೆ. ನಿಮಗೆ ಉದ್ಯೋಗ ಒದಗಿಸಿಕೊಡಲು ನಮ್ಮಿಂದ ಸಾಧ್ಯವಿಲ್ಲ. ಆದರೆ ದೇಶಕ್ಕಾಗಿ, ಧರ್ಮಕ್ಕಾಗಿ ನಮ್ಮನ್ನು ಸಹಿಸಿಕೊಳ್ಳಲಾರಿರಾ?’ ಎಂದು ಮತದಾರರನ್ನು ಕೇಳುವಂತಿದೆ ರಾಜಕಾರಣಿಗಳ ವರಸೆ.
ರಾಷ್ಟ್ರವೊಂದರ ಅಥವಾ ನಾಗರಿಕತೆಯೊಂದರ ಭವಿಷ್ಯವು ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಮೂಲಕ ನಿರ್ಧರಿಸಲ್ಪಡುವುದಿಲ್ಲ. ಪ್ರಜೆಗಳು, ವಿಶೇಷವಾಗಿ ಅದರ ಯುವಜನರು ಏನು ಯೋಚಿಸುತ್ತಿದ್ದಾರೆ ಎಂಬುದರ ಮೂಲಕ ಇದನ್ನು ವ್ಯಾಖ್ಯಾನಿಸಲಾಗುತ್ತದೆ. ಭವಿಷ್ಯದ ಆಕಾಂಕ್ಷೆಗಳ ಬಗ್ಗೆ ಯೋಚಿಸಬೇಕೇ ಅಥವಾ ಭೂತಕಾಲದ ಬಗ್ಗೆ ಕೊರಗಬೇಕೇ ಎನ್ನುವುದನ್ನು ಯುವ ಸಮೂಹವೇ ಯೋಚಿಸಬೇಕು. ಈಗೀಗ ದೇಶದ ಹಳ್ಳಿಹಳ್ಳಿಗಳಲ್ಲೂ ಮೊಬೈಲ್ನತ್ತ ಕಣ್ಣು ನೆಟ್ಟು ಕೂತ ಯುವ ಸಮುದಾಯವನ್ನು ಕಾಣಬಹುದು. ಅರಿವಿನ, ಮಾಹಿತಿಯ ಆಗರವಾಗಬೇಕಿದ್ದ ಇಂಟರ್ನೆಟ್ ಸುಳ್ಳು ಸುದ್ದಿ ಹಬ್ಬಲು, ದ್ವೇಷವನ್ನು ಮತ್ತಷ್ಟು ತೀವ್ರವಾಗಿ ಪ್ರಚುರಪಡಿಸಲು ಬಳಕೆಯಾಗುತ್ತದೆ. ಅಮಾಯಕರು ‘ಧರ್ಮ ಮತ್ತು ದೇಶದ ಒಳಿತಿ’ಗಾಗಿ ಎನ್ನುವ ಭ್ರಮೆಯಲ್ಲಿ ಜ್ವಲಂತ ಸಮಸ್ಯೆಗಳಿಗೆ ಗಮನ ಕೊಡದೆ ಭವಿಷ್ಯದಲ್ಲಿ ಧರ್ಮದ ಮೇಲೆ ಆಗಬಹುದಾದ ದಾಳಿಯ ಬಗ್ಗೆ ತಲೆಕೆಡಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಕೋಮುಧ್ರುವೀಕರಣವು ತಾತ್ಕಾಲಿಕವಾಗಿ ಪಕ್ಷಗಳಿಗೆ ಓಟು ತಂದುಕೊಡಲಿವೆಯಾದರೂ ನಿರುದ್ಯೋಗದ ಪ್ರಮಾಣ ಇದೇ ರೀತಿ ಉಳಿಯುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಸಾಮೂಹಿಕ ಹತಾಶೆಯು ಧರ್ಮ ತೊಂದರೆಯಲ್ಲಿರುವ ಕಾಲ್ಪನಿಕ ಭಯದ ಅಣೆಕಟ್ಟನ್ನು ಒಂದು ದಿನ ಖಂಡಿತ ಒಡೆಯಲಿದೆ, ಆಗ ಧರ್ಮ ರಾಜಕಾರಣಕ್ಕೆ ಬೆಂಬಲವಾಗಿ ನಿಂತವರೆಲ್ಲಾ ತಕ್ಕ ಬೆಲೆ ತೆರೆ ತೆರಲೇಬೇಕಾಗುತ್ತದೆ. ಇತಿಹಾಸಕ್ಕೆ ಯಾರು ಯಾವ ಚುನಾವಣೆಯಲ್ಲಿ ಗೆದ್ದರು ಎಂಬುವುದು ಮುಖ್ಯವಾಗುವುದಿಲ್ಲ, ಬದಲಾಗಿ ಸೌಹಾರ್ದದಂತಹ ಈ ಮಣ್ಣಿನ ಸಹಜ ಗುಣವನ್ನು ಉಳಿಸುವಲ್ಲಿ ಯಾರು ಎಷ್ಟು ಮುತುವರ್ಜಿ ವಹಿಸಿದರು ಎನ್ನುವುದು ಮಾತ್ರ ಮುಖ್ಯವಾಗುತ್ತದೆ.