ಯುವತಿಯೊಂದಿಗೆ ಮಗ ಓಡಿಹೋಗಿದ್ದಕ್ಕೆ, ಆತನ ತಂದೆ-ತಾಯಿ ಮೇಲೆ ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ನೆರೆಹೊರೆಯವರು ಹಲ್ಲೆ ನಡೆಸಿ ಕೊಂದಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಭಾನುವಾರ (ಆಗಸ್ಟ್ 20) ವರದಿ ಮಾಡಿವೆ.
ಹರ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೇಪುರ ಗ್ರಾಮದಲ್ಲಿ ಅಬ್ಬಾಸ್ ಮತ್ತು ಅವರ ಪತ್ನಿ ಕಮರುಲ್ ನಿಶಾ ಅವರನ್ನು ನೆರೆಹೊರೆಯವರು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ಉತ್ತರ ಪ್ರದೇಶ ಅಬ್ಬಾಸ್ರವರ ಮಗ ಪಕ್ಕದ ಮನೆಯ ಯುವತಿಯೊಂದಿಗೆ ಓಡಿ ಹೋಗಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಅಬ್ಬಾಸ್ ಪುತ್ರನನ್ನು ಜೈಲಿಗೆ ಕಳುಹಿಸಲಾಗಿತ್ತು. ಕೆಲವು ದಿನಗಳ ಹಿಂದೆ ಅಬ್ಬಾಸ್ ಅವರ ಮಗ ಜೈಲಿನಿಂದ ಹೊರಬಂದಿದ್ದ. ಇದರ ಬೆನ್ನಲ್ಲೆ ಯುವತಿಯ ಕುಟುಂಬಸ್ಥರು ಅಬ್ಬಾಸ್ ಮತ್ತು ನಿಶಾ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಿಶ್ರಾ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಂದ್ರಯಾನ 3 | ಕೊನೆಯ ಹಂತದ ಡಿ-ಬೂಸ್ಟಿಂಗ್ ಯಶಸ್ವಿ ; ಚಂದ್ರನತ್ತ ಹೆಜ್ಜೆ
ಅಕ್ಕಪಕ್ಕದ ಮನೆಯ ಕೆಲ ಸದಸ್ಯರು ಈ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಅಬ್ಬಾಸ್ ಮತ್ತು ನಿಶಾ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.