ಭಾರತೀಯ ಉಪಖಂಡದ ದೇಶಗಳಲ್ಲಿ ಪ್ರಜಾತಂತ್ರದ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ
ಭಾಗ 1
ಪ್ರಜಾಪ್ರಭುತ್ವದ ಕಲ್ಪನೆ ಮೇಲ್ನೋಟಕ್ಕೆ ಎಷ್ಟೇ ಸುಂದರವಾಗಿ ಕಂಡರೂ ಆಂತರಿಕವಾಗಿ ಈ ವ್ಯವಸ್ಥೆಯನ್ನು ಒಪ್ಪಿಕೊಂಡು ಮುನ್ನಡೆಯುವ ಸಮಾಜದಲ್ಲಿ ಒಳಗೊಳ್ಳುವಿಕೆಯ-ಹಂಚಿಕೊಳ್ಳುವ ಸಮತೋಲನದ ಮನಸ್ಥಿತಿಯನ್ನು ರೂಢಿಸದೆ ಹೋದರೆ, ಅಂತಹ ಸಮಾಜಗಳಲ್ಲಿ ವರ್ಗ ಹಿತಾಸಕ್ತಿಗಳೇ ಮೇಲುಗೈ ಸಾಧಿಸಿ ಒಂದು ಬಲಿಷ್ಠ ವರ್ಗದ ಪರಮಾಧಿಪತ್ಯ ರಾರಾಜಿಸುತ್ತದೆ. ಇದನ್ನೇ ಡಾ. ಬಿ. ಆರ್. ಅಂಬೇಡ್ಕರ್ ಮತ್ತೊಂದು ರೀತಿಯಲ್ಲಿ ವ್ಯಾಖ್ಯಾನಿಸುತ್ತಾ “ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವಿಲ್ಲದೆ ರಾಜಕೀಯ ಪ್ರಭುತ್ವಕ್ಕೆ ಅರ್ಥವಿಲ್ಲ ಎಂಬುದನ್ನು ಸಂಸದೀಯ ಪ್ರಜಾಪ್ರಭುತ್ವವು ಅರ್ಥಮಾಡಿಕೊಳ್ಳಲಿಲ್ಲ,,,,, ಕೆಟ್ಟ ಪರಿಕಲ್ಪನೆಗಳಿಗಿಂತಲೂ ಕೆಟ್ಟ ಸಂಘಟನೆಯೇ ಪ್ರಜಾಪ್ರಭುತ್ವದ ಸೋಲಿಗೆ ಕಾರಣ,,,,, ” ಎಂದು ಹೇಳುತ್ತಾರೆ. ಮತ್ತೊಂದು ಸಂದರ್ಭದಲ್ಲಿ ಅಂಬೇಡ್ಕರ್ ಅವರು “ ಸರ್ಕಾರದ ಸಾಧನಗಳನ್ನು ಆಯ್ದುಕೊಳ್ಳುವಾಗ ಆ ಸಾಧನಗಳಲ್ಲಿ ವರ್ಗ ಹಿತದೃಷ್ಟಿಯ ಧೋರಣೆಗಳಿರುತ್ತವೆ ಎಂಬುದನ್ನು ಮರೆಯಬಾರದು ,,,,,” ಎಂದೂ ಹೇಳುತ್ತಾರೆ. (ಸಮಗ್ರ ಬರಹಗಳು ಸಂಪುಟ 7-ಅನುಬಂಧ)
ಭಾರತೀಯ ಉಪಖಂಡದ ಎಲ್ಲ ದೇಶಗಳನ್ನೂ ಈ ದೃಷ್ಟಿಕೋನದಿಂದ ಗಮನಿಸಿದಾಗ, ಆಳುವ ವರ್ಗಗಳು ತಮ್ಮ ಪರಮಾಧಿಕಾರವನ್ನು ಸ್ಥಾಪಿಸುವ ಸಲುವಾಗಿ ಇತರ ಎಲ್ಲ ವರ್ಗಗಳನ್ನೂ ನಿಕೃಷ್ಟವಾಗಿ ನೋಡುವ, ನಿರ್ಲಕ್ಷಿಸುವ, ಅಂಚಿಗೆ ತಳ್ಳುವ ಧೋರಣೆ ಹೊಂದಿರುವುದನ್ನು ಕಾಣಬಹುದು. ಭಾರತದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಬೆಳೆದುಬಂದಿರುವ ಒಂದು ಸುಶಿಕ್ಷಿತ ನಾಗರಿಕ ಸಮಾಜ ಮತ್ತು ಅದನ್ನು ಪ್ರತಿನಿಧಿಸುವ ಸಾಂಸ್ಥಿಕ-ಸಾಂಘಿಕ ನೆಲೆಗಳು ಈ ಎಚ್ಚರಿಕೆಯೊಂದಿಗೇ ಸರ್ಕಾರಗಳನ್ನು ಎಚ್ಚರಿಸುತ್ತಾ ಬಂದಿವೆ. 1975ರ ತುರ್ತುಪರಿಸ್ಥಿತಿಯ ನಂತರದಲ್ಲಿ ಅಥವಾ 2024ರ ಮಹಾ ಚುನಾವಣೆಗಳಲ್ಲಿ ಭಾರತದ ಪ್ರಜ್ಞಾವಂತ ಮತದಾರರು ಅಪ್ರಜಾಸತ್ತಾತ್ಮಕ ಧೋರಣೆಯ ವಿರುದ್ಧ ದನಿಎತ್ತಿರುವುದನ್ನು ಗಮನಿಸಬಹುದು. 2023ರ ಕರ್ನಾಟಕದ ವಿಧಾನಸಭಾ ಚುನಾವಣೆಗಳಲ್ಲೂ ಇದರ ಒಂದು ಆಯಾಮವನ್ನು ಕಂಡಿದ್ದೇವೆ. ಇದಕ್ಕೆ ಕಾರಣ ನಮ್ಮ ದೇಶದಲ್ಲಿ ನಿರಂತರವಾಗಿ ಜಾಗೃತಾವಸ್ಥೆಯಲ್ಲಿರುವ ಒಂದು ನಾಗರಿಕ ಸಮಾಜ ಅಸ್ತಿತ್ವದಲ್ಲಿದೆ. ಈ ಎಚ್ಚೆತ್ತ ನಾಗರಿಕ ಸಮಾಜವೇ ಸಾಂಘಿಕ ನೆಲೆಯಲ್ಲಿ ಆಳುವ ವರ್ಗಗಳ ಪರಮಾಧಿಕಾರ ಮತ್ತು ಆಧಿಪತ್ಯಕ್ಕೆ ಅಂಕುಶ ಹಾಕುತ್ತಿರುತ್ತದೆ.
ನಾಗರಿಕ ಸಮಾಜದ ಕೊರತೆ
ಇಂತಹ ಒಂದು ಸಾಮಾಜಿಕ ಚೌಕಟ್ಟಿನಿಂದ ವಂಚಿತವಾಗಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿಮೋಚನೆಯ ದಿನದಿಂದಲೂ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವುದು ಅಲ್ಲಿನ ಸಮಾಜದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಶಿಥಿಲವಾಗಿರುವುದರ ದ್ಯೋತಕವಾಗಿಯೇ ಕಾಣುತ್ತದೆ. ಆರ್ಥಿಕ ಪ್ರಗತಿಯ ಸೂಚ್ಯಂಕಗಳಲ್ಲಿ ಭಾರತವನ್ನೂ ಹಿಂದಿಕ್ಕಿದ್ದ ಬಾಂಗ್ಲಾದೇಶ ಇಂದು ನಾವಿಕನಿಲ್ಲದ ನಾವೆಯಂತೆ ದಿಕ್ಕೆಟ್ಟು ನಿಂತಿರುವುದು ಅಲ್ಲಿನ ಆಳ್ವಿಕೆಯ ಕೇಂದ್ರಗಳ ಸರ್ವಾಧಿಕಾರ-ನಿರಂಕುಶಾಧಿಕಾರದ ಪರಿಣಾಮ ಎಂದು ನಿಸ್ಸಂಶಯವಾಗಿ ಹೇಳಬಹುದು. ಒಂದು ಪ್ರಬಲ ವಿದ್ಯಾರ್ಥಿ ಚಳುವಳಿಯು ಬಾಂಗ್ಲಾದೇಶದ ʼಐರನ್ ಲೇಡಿʼ ಎಂದೇ ಹೆಸರಾಗಿದ್ದ ಶೇಕ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ್ದು, ದೇಶಾಂತರ ಹೋಗುವಂತೆ ಮಾಡಿದೆ. 2009ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಆಂತರಿಕ ಭಯೋತ್ಪಾದನೆಯ ವಿರುದ್ಧ ಸಮರ ಸಾರುವುದರ ಮೂಲಕ ಧಾರ್ಮಿಕ ತೀವ್ರಗಾಮಿಗಳ ಉಪಟಳವನ್ನು ನಿಯಂತ್ರಿಸಲಾರಂಭಿಸಿದ್ದ ಶೇಕ್ ಹಸೀನಾ ಭಾರತದೊಳಗೆ ನುಸುಳುತ್ತಿದ್ದ ಉಗ್ರಗಾಮಿಗಳನ್ನು ತಡೆಗಟ್ಟುವ ಮೂಲಕ ಭಾರತದೊಡನೆ ಉತ್ತಮ ಬಾಂಧವ್ಯವನ್ನೂ ಸಾಧಿಸಿದ್ದುದು ವಾಸ್ತವ.
ಆದರೆ ಹಠಾತ್ ಬೆಳವಣಿಗೆಗಳಲ್ಲಿ ಬಾಂಗ್ಲಾದೇಶ ಮತ್ತೊಮ್ಮೆ ಅರಾಜಕತೆಯತ್ತ ಸಾಗಿದೆ. ತಾತ್ಕಾಲಿಕವಾಗಿ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನುಸ್ ಅವರ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡಿದ್ದರೂ, ವಿದ್ಯಾರ್ಥಿ ಯುವ ಸಮುದಾಯಗಳು ತಮ್ಮ ಜೀವನ-ಜೀವನೋಪಾಯದ ಪ್ರಶ್ನೆಗಳನ್ನಿಟ್ಟುಕೊಂಡು ಆರಂಭಿಸಿದ ಜನಾಂದೋಲನ ಅಂತಿಮವಾಗಿ ಸೇನೆ ಮತ್ತು ಧಾರ್ಮಿಕ ಮೂಲಭೂತವಾದಿಗಳ ಹಿಡಿತಕ್ಕೆ ಸಿಲುಕಿರುವುದು ಅಲ್ಲಿ ನಾಗರಿಕ ಸಮಾಜದ ಕೊರತೆ ಇರುವುದನ್ನು ಎತ್ತಿ ತೋರಿಸುತ್ತದೆ. ಧಾರ್ಮಿಕ ಅಲ್ಪಸಂಖ್ಯಾತರು, ಶೇಕ್ ಹಸೀನಾ ಅವರ ಪಕ್ಷದ ಕಾರ್ಯಕರ್ತರು, ಗಡಿ ಭದ್ರತಾ ಪಡೆಗಳ ಸಿಬ್ಬಂದಿ ಜನತೆಯ ಆಕ್ರೋಶಕ್ಕೆ ತುತ್ತಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಬಾಂಗ್ಲಾ ವಿಮೋಚಕ ಎಂದೇ ಖ್ಯಾತಿ ಪಡೆದಿದ್ದ ಶೇಖ್ ಮುಜೀಬುರ್ ರೆಹಮಾನ್ ಅವರ ಪ್ರತಿಮೆಗಳನ್ನೂ ಉದ್ರಿಕ್ತ ಜನರು ಧ್ವಂಸ ಮಾಡಿರುವುದು, 1975ರ ಕ್ಷಿಪ್ರಕ್ರಾಂತಿಯ ನೆನಪುಗಳನ್ನು ಮತ್ತೊಮ್ಮೆ ಮರುಕಳಿಸುವಂತೆ ಮಾಡಿದೆ.
ಬಂಡವಾಳಶಾಹಿ ನೀತಿಯ ಫಲ
ಬಂಡವಾಳಶಾಹಿ ಅಭಿವೃದ್ಧಿ ಮಾದರಿಯಲ್ಲಿ ಕಾಣಲಾಗುವ ಆರ್ಥಿಕ ಪ್ರಗತಿ ಮೇಲ್ನೋಟಕ್ಕೆ, ಮಾರುಕಟ್ಟೆ ಸೂಚ್ಯಂಕಗಳ ನೆಲೆಯಲ್ಲಿ, ಆಕರ್ಷಕವಾಗಿ ಕಂಡರೂ ಈ ಮಾದರಿಯು ತಳಮಟ್ಟದ ಸಮಾಜದಲ್ಲಿ ಸೃಷ್ಟಿಸುವ ಆರ್ಥಿಕ ಅಸಮಾನತೆಗಳು ಮತ್ತು ಸಾಮಾಜಿಕ ಕ್ಷೋಭೆ ಯುವ ಜನತೆಯನ್ನು ಕಂಗೆಡಿಸುತ್ತದೆ. ಬಂಡವಾಳಶಾಹಿಯು ತಳಸಮಾಜದಲ್ಲಿ ಸೃಷ್ಟಿಸುವ ಅಸಮಾನತೆಗಳು ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರವನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಆರ್ಥಿಕ ಅಭಿವೃದ್ಧಿಯ ಫಲಾನುಭವಿಗಳು ಮತ್ತು ಸರ್ಕಾರದ ಸಕಾರಾತ್ಮಕ ತಾರತಮ್ಯ ನೀತಿಗಳಿಂದ ಅನುಕೂಲತೆಗಳನ್ನು ಪಡೆಯುವ ವರ್ಗಗಳು ಕಾಲಕ್ರಮೇಣ ಸಾಮಾಜಿಕವಾಗಿ ಪ್ರಾಬಲ್ಯ ಗಳಿಸುವುದೇ ಅಲ್ಲದೆ ಅಧಿಕಾರ ರಾಜಕಾರಣದ ಭಾಗಿದಾರರೂ ಆಗುತ್ತವೆ. ಕಾರ್ಲ್ ಮಾರ್ಕ್ಸ್ ಹೇಳುವಂತೆ ಆರ್ಥಿಕ ಪ್ರಗತಿಯ ಫಲಾನುಭವಿಗಳಾಗುವ ಜನಸಮುದಾಯಗಳೂ ಒಂದು ಹಂತದಲ್ಲಿ ವರ್ಗವಾಗಿ ರೂಪುಗೊಂಡು, ಆಳುವ ವರ್ಗಗಳೊಡನೆ ಗುರುತಿಸಿಕೊಳ್ಳುವ ಮೂಲಕ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳುತ್ತವೆ. ಈ ಹಾದಿಯಲ್ಲಿ ಅವಕಾಶವಂಚಿತವಾಗುವ ಒಂದು ಜನಸಮುದಾಯ ತನ್ನ ಜೀವನೋಪಾಯದ ಮಾರ್ಗಗಳಿಗೆ ಮಾರುಕಟ್ಟೆಯನ್ನೇ ಅವಲಂಬಿಸಬೇಕಾಗುತ್ತದೆ. ಇಲ್ಲಿ ಸೃಷ್ಟಿಯಾಗುವ ಅಸಮಾಧಾನಗಳೇ ತಳಮಟ್ಟದ ಹತಾಶೆ, ಆಕ್ರೋಶ ಮತ್ತು ಪ್ರತಿರೋಧಕ್ಕೆ ಕಾರಣವಾಗುತ್ತದೆ.
ಕಳೆದ ಹತ್ತು ವರ್ಷಗಳಲ್ಲಿ ಶೇಕ್ ಹಸೀನಾ ಆಡಳಿತವು ಬಾಂಗ್ಲಾದೇಶವನ್ನು ಆರ್ಥಿಕ ಪ್ರಗತಿಯ ಹಾದಿಯಲ್ಲಿ ಕೊಂಡೊಯ್ದಿದೆ. ಒಂದು ಹಂತದಲ್ಲಿ ಇಲ್ಲಿನ ತಲಾ ಆದಾಯವು ಭಾರತವನ್ನೂ ಮೀರಿಸಿದ್ದೂ ಉಂಟು. ನವ ಉದಾರವಾದಿ ಆರ್ಥಿಕತೆಯು ಪೋಷಿಸುವ ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲೂ ಬಾಂಗ್ಲಾದೇಶ ಅಪ್ರತಿಮ ಸಾಧನೆ ಮಾಡಿತ್ತು. ಬಂದರುಗಳು, ರಸ್ತೆಗಳು, ರೈಲು ಮಾರ್ಗಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಎಲ್ಲವೂ ವೃದ್ಧಿ ಕಂಡಿದ್ದವು. ಬಾಂಗ್ಲಾದೇಶದ ಮಾನವ ಅಭಿವೃದ್ಧಿ ಸೂಚಿಗಳೂ ಸಹ ಮೇಲ್ಮುಖಿಯಾಗಿ ಚಲಿಸತೊಡಗಿದ್ದವು. ಮಹಿಳಾ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಲಾಗಿತ್ತು. ವಿಶ್ವದ ಅತಿದೊಡ್ಡ ಗಾರ್ಮೆಂಟ್ ರಫ್ತು ಕೇಂದ್ರವಾಗಿ ರೂಪುಗೊಳ್ಳುವ ಹಂತದಲ್ಲಿದ್ದ ಬಾಂಗ್ಲಾದೇಶ ಹೊರದೇಶದಲ್ಲಿದ್ದ ಅನಿವಾಸಿಗಳಿಂದ ಅಪಾರ ಪ್ರಮಾಣದ ಹಣದ ಹರಿವನ್ನೂ ದಾಖಲಿಸಿತ್ತು. ಪದ್ಮಾ ನದಿಯನ್ನು ಹಾದು ಹೋಗುವ 6.5 ಕಿಲೋಮೀಟರ್ ಸೇತುವೆಯನ್ನು ಆಂತರಿಕ ವೆಚ್ಚದಿಂದಲೇ ಪೂರ್ಣಗೊಳಿಸುವ ಮೂಲಕ 21 ಜಿಲ್ಲೆಗಳಿಗೆ ಪರಸ್ಪರ ಸಂಪರ್ಕ ಸಾಧಿಸಿ ಜಿಡಿಪಿ ವೃದ್ಧಿಗೆ ಕಾರಣವಾಗಿತ್ತು.
ಆದರೆ ಈ ಆರ್ಥಿಕ ಅಭಿವೃದ್ಧಿಯಿಂದಲೇ ದೇಶದಲ್ಲಿ ಶಿಥಿಲವಾಗುತ್ತಿದ್ದ ಪ್ರಜಾಪ್ರಭುತ್ವದ ಬುನಾದಿಯನ್ನು ಮರೆಮಾಚಬಹುದು ಎಂಬ ದಾರ್ಷ್ಟ್ಯ ಮನೋಭಾವವನ್ನೂ ಶೇಕ್ ಹಸೀನಾ ಸರ್ಕಾರದಲ್ಲಿ ಕಾಣಬಹುದಿತ್ತು. ಅಪಾರದರ್ಶಕ ಆಡಳಿತ, ಚುನಾವಣೆಗಳಲ್ಲಿ ಢಾಳಾಗಿ ಕಾಣುವಂತಿದ್ದ Rigging , ಈಜಿಪ್ಟಿನ ಹೊಸ್ನಿ ಮುಬಾರಕ್ ಆಳ್ವಿಕೆಯನ್ನೂ ನಾಚಿಸುವಂತ ಪೊಲೀಸ್ ರಾಜ್ಯ, ನ್ಯಾಯಾಂಗದ ವ್ಯಾಪ್ತಿಗೆ ನಿಲುಕದ ಹತ್ಯೆಗಳು (Extra judicial killingş)̧ ವಿರೋಧ ಪಕ್ಷಗಳ ದನಿ ಅಡಗಿಸಲು ಅನುಸರಿಸಿದ ವಾಮ ಮಾರ್ಗಗಳು, ವಿರೋಧ ಪಕ್ಷಗಳ ನಾಯಕರನ್ನು ಸುಳ್ಳು ಆರೋಪಗಳ ಮೇಲೆ ಅನಗತ್ಯವಾಗಿ ಬಂಧಿಸಿದ್ದು ಇವೆಲ್ಲವೂ ಆವಾಮಿ ಲೀಗ್ ಆಳ್ವಿಕೆಯ ಪ್ರಮುಖ ಲಕ್ಷಣಗಳಾಗಿದ್ದವು. ಚುನಾವಣಾ ಫಲಿತಾಂಶಗಳು ಪೂರ್ವನಿರ್ಧಾರಿತವಾಗಿದ್ದುದರಿಂದ ರಾಜಕೀಯವಾಗಿ ಜನಪ್ರಿಯ ನಾಯಕರನ್ನು ರೂಪಿಸುವುದಾಗಲೀ, ತಳಸಮಾಜದೊಡನೆ ನಿಕಟ ಸೌಹಾರ್ದಯುತ ಸಂಬಂಧಗಳನ್ನು ಏರ್ಪಡಿಸುವುದಾಗಲೀ ಶೇಕ್ ಹಸೀನಾ ಅವರಿಗೆ ಆದ್ಯತೆಯಾಗಲೇ ಇಲ್ಲ.
ಕಳೆದ ಒಂದು ದಶಕದಲ್ಲಿ ಶೇಕ್ ಹಸೀನಾ ಆಳ್ವಿಕೆಯ ವಿಧಾನವೇ ಸಂಪೂರ್ಣವಾಗಿ ಆವಾಮಿ ಲೀಗ್ ಪಕ್ಷದ ಮೂಲ ಧ್ಯೇಯಗಳಿಗೆ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದವು. ಒಂದು ಸಮಯದಲ್ಲಿ ಬಡಜನತೆಯ-ಮಧ್ಯಮ ವರ್ಗಗಳ ಪಕ್ಷ ಎಂದೇ ಹೆಸರಾಗಿದ್ದ ಬಾಂಗ್ಲಾವಿಮೋಚನೆಯ ಹರಿಕಾರ ಪಕ್ಷದಲ್ಲಿ ವೃತ್ತಿಪರರು, ಬೋಧಕರು, ಶಿಕ್ಷಣ ತಜ್ಞರು, ವಕೀಲರು ಮುಂಚೂಣಿ ನಾಯಕತ್ವ ವಹಿಸುತ್ತಿದ್ದುದೂ ಉಂಟು. ಈ ಮಧ್ಯಮ ವರ್ಗದ ನಾಯಕರು ಸೈದ್ಧಾಂತಿಕವಾಗಿ ಪಕ್ಷವನ್ನು ಮುನ್ನಡೆಸುವುದೇ ಅಲ್ಲದೆ ತಳಸಮಾಜದೊಡನೆ ನಿರಂತರ ಒಡನಾಟವನ್ನು ಕಾಪಾಡಿಕೊಂಡಿದ್ದರು. ಆದರೆ ಕಳೆದ ಹತ್ತು ವರ್ಷದಲ್ಲಿ ಪಕ್ಷದ ಆಯಕಟ್ಟಿನ ಜಾಗಗಳನ್ನು ಉದ್ಯಮಿಗಳು ಆಕ್ರಮಿಸತೊಡಗಿದರು. ಸಂಸತ್ತಿನ ಸ್ಥಾನಗಳಿಗೆ ನಾಮ ನಿರ್ದೇಶನ ಪಡೆಯುವ ಮೂಲಕ ಅಧಿಕಾರ ವಲಯದಲ್ಲಿ ಅವಕಾಶ ಪಡೆಯತೊಡಗಿದರು. ತಳಮಟ್ಟದ ಕಾರ್ಯಕರ್ತರಿಂದ, ಜನಸಾಮಾನ್ಯರಿಂದ ಸದಾ ಅಂತರ ಕಾಯ್ದುಕೊಳ್ಳುವ ಈ ನಾಯಕತ್ವವು ತನ್ನ ಅಧಿಕಾರ ಉಳಿಸಿಕೊಳ್ಳಲು ಅಧಿಕಾರಶಾಹಿ ಮತ್ತು ಮಾರುಕಟ್ಟೆ ಶಕ್ತಿಗಳನ್ನು ಅವಲಂಬಿಸಿದ್ದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿತ್ತು.
ಪಕ್ಷದೊಳಗೆ ತನ್ನ ನಿರಂಕುಶಾಧಿಕಾರವನ್ನು ಕಾಪಾಡಿಕೊಂಡಿದ್ದ ಶೇಕ್ ಹಸೀನಾ ಪಕ್ಷದ ಹಿರಿಯರನ್ನು ಕಡೆಗಣಿಸಿದ್ದೇ ಅಲ್ಲದೆ ವಾಣಿಜ್ಯೋದ್ಯಮಿಗಳನ್ನು, ಕೈಗಾರಿಕೋದ್ಯಮಿಗಳನ್ನು ಹೆಚ್ಚು ಆಪ್ತತೆಯಿಂದ ಪರಿಗಣಿಸಿದ್ದು ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸಹಜ ಎನಿಸಿದರೂ ಇದರಿಂದ ಔದ್ಯಮಿಕ ಹಿತಾಸಕ್ತಿಗಳು ಮೇಲುಗೈ ಸಾಧಿಸಿದ್ದವು. ಬಂಡವಾಳಶಾಹಿ ಆರ್ಥಿಕತೆಯು ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆಯನ್ನು ಪೋಷಿಸುತ್ತಲೇ ಒಂದು ವರ್ಗವನ್ನು ಓಲೈಸುವುದರಿಂದ ತಳಸಮಾಜದ ವಂಚಿತ ವರ್ಗಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗುವುದು ಸಾರ್ವತ್ರಿಕ ವಾಸ್ತವ. ಬಾಂಗ್ಲಾದೇಶದಲ್ಲಿ ಆಗಿದ್ದೂ ಇದೇ. ಮತ್ತೊಂದೆಡೆ ಈ ಅಭಿವೃದ್ಧಿ ಮಾದರಿಯಲ್ಲಿ ಸಹಜವಾಗಿಯೇ ನೆಲೆ ಕಾಣುವ ಆಡಳಿತ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಕ್ರಮ ಸಂಪತ್ತಿನ ಸಂಗ್ರಹ ಇವೆಲ್ಲವೂ ಸಹ ಬಾಂಗ್ಲಾದೇಶದ ಅರ್ಥವ್ಯವಸ್ಥೆಯನ್ನು ಶಿಥಿಲಗೊಳಿಸುವ ಅಂಶಗಳಾಗಿದ್ದವು. ಕೋವಿದ್-19 ಸಮಯದಲ್ಲಿ ಉಲ್ಪಣಗೊಂಡ ಆರ್ಥಿಕ ಸಮಸ್ಯೆಗಳು ನಿರುದ್ಯೋಗವನ್ನು ಹೆಚ್ಚಿಸಿದ್ದೇ ಅಲ್ಲದೆ, ಉದ್ಯೋಗಾವಕಾಶಗಳನ್ನೂ ಕಸಿದುಕೊಂಡಿದ್ದವು.
ಆರ್ಥಿಕ ಅಸಮಾನತೆಯ ಉಲ್ಬಣ
ಬಾಂಗ್ಲಾದೇಶದ 170 ದಶಲಕ್ಷ ಜನಸಂಖ್ಯೆಯ ಪೈಕಿ 30 ದಶಲಕ್ಷ ಜನರು ನಿರುದ್ಯೋಗಿಗಳಾಗಿದ್ದರು. ಕಳೆದ ಮೂರು ವರ್ಷಗಳಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಪ್ರಮಾಣ ಶೇಕಡಾ 44ರಷ್ಟು ಕುಸಿದಿತ್ತು. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆದಿದ್ದ ಸಾಲಗಳನ್ನು ಮರುಪಾವತಿ ಮಾಡುವುದೂ ದುಸ್ತರವಾಗತೊಡಗಿತ್ತು. ಕಳೆದ ವರ್ಷದಲ್ಲೇ ಬಾಂಗ್ಲಾದೇಶದ ಕರೆನ್ಸಿ ಟಾಕಾ ಶೇಕಡಾ 28ರಷ್ಟು ಕುಸಿತ ಕಂಡಿತ್ತು. ಇದರೊಟ್ಟಿಗೆ ಅವಶ್ಯಕ ವಸ್ತುಗಳ ನಿರಂತರ ಬೆಲೆ ಏರಿಕೆ, ಏರುತ್ತಿದ್ದ ಹಣದುಬ್ಬರ ತಳಮಟ್ಟದ ಸಮಾಜದಲ್ಲಿ ಜೀವನವನ್ನು ದುರ್ಭರಗೊಳಿಸಿತ್ತು. ಖಾಸಗಿ ಬಂಡವಾಳ ಹೂಡಿಕೆ ಮತ್ತು ಗಾರ್ಮೆಂಟ್ ಕ್ಷೇತ್ರದ ವಿದೇಶಿ ಬಂಡವಾಳವು ಸಮರ್ಪಕವಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರಲ್ಲಿ ವಿಫಲವಾಗಿದ್ದವು. ಗಾರ್ಮೆಂಟ್ ವಲಯದ ಯಾಂತ್ರೀಕರಣವೂ ಇದಕ್ಕೆ ಒಂದು ಕಾರಣವಾಗಿರಲು ಸಾಧ್ಯ. ವಿದೇಶಿ ಬಂಡವಾಳಿಗರು ಬಾಂಗ್ಲಾದೇಶವನ್ನು ಗಾರ್ಮೆಂಟ್ ಸ್ವರ್ಗವನ್ನಾಗಿಸಲು ಮೂಲ ಕಾರಣ ಅಲ್ಲಿ ದೊರೆಯುವ ಅಗ್ಗದ ಕೂಲಿ ಅಥವಾ ಶ್ರಮ ಆಗಿತ್ತು ಎನ್ನುವುದೂ ಗಮನಿಸಬೇಕಾದ ಅಂಶ.
ಸಹಜವಾಗಿಯೇ ನಿರುದ್ಯೋಗ ಮತ್ತು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದ ಸಾಮಾನ್ಯರಲ್ಲಿ, ಸರ್ಕಾರವು ವಿಮೋಚನೆಯ ದಿನದಿಂದಲೂ ಸರ್ಕಾರಿ ಉದ್ಯೋಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂತತಿಗೆ ಒದಗಿಸುತ್ತಿದ್ದ ಶೇಕಡಾ 30ರಷ್ಟು ಮೀಸಲಾತಿ ಮತ್ತು ಒಟ್ಟಾರೆ ಶೇಕಡಾ 56ರಷ್ಟು ಮೀಸಲಾತಿ ಸೌಲಭ್ಯಗಳು, ಆಕ್ರೋಶವನ್ನು ಹೆಚ್ಚಿಸಿದ್ದವು. 2018ರಲ್ಲಿ ವಿದ್ಯಾರ್ಥಿ ಸಮೂಹವು ಈ ನೀತಿಯ ವಿರುದ್ಧ ಬೀದಿಗಿಳಿದು ಹೋರಾಡಿದಾಗ ಶೇಕ್ ಹಸೀನಾ ಸರ್ಕಾರವು ಕೋಟಾ ಪ್ರಮಾಣವನ್ನು ತಗ್ಗಿಸುವ ಅಧಿಸೂಚನೆ ಹೊರಡಿಸಿತ್ತು. ತನ್ನ ಜೂನ್ 5ರ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಈ ಕೋಟಾ ಪ್ರಮಾಣವನ್ನು ಮರುಸ್ಥಾಪಿಸಲು ಆದೇಶ ನೀಡಿತ್ತು. ವಿದ್ಯಾರ್ಥಿಗಳ ಪ್ರತಿರೋಧಕ್ಕೆ ಮಣಿದು ಜುಲೈ21ರ ತೀರ್ಪಿನ ಮೂಲಕ ಶೇಕಡಾ 5ರಷ್ಟು ಕಡಿಮೆ ಮಾಡಿ, ಜನಾಂಗೀಯ ಅಲ್ಪಸಂಖ್ಯಾತರಿಗೆ ಶೇಕಡಾ 2ರ ಮೀಸಲಾತಿಯನ್ನು ಅನುಮೋದಿಸಿತ್ತು. ಈ ಆರು ವರ್ಷಗಳಲ್ಲಿ ಶೇಕ್ ಹಸೀನಾ ವಿದ್ಯಾರ್ಥಿ ನಾಯಕರೊಡನೆ ಸಮಾಲೋಚನೆ ನಡೆಸುವ ಮೂಲಕ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ ಸಮಸ್ಯೆಯನ್ನು ಬಗೆಹರಿಸಬಹುದಿತ್ತು.
ಈ ಕ್ರಮವನ್ನು ಸರ್ಕಾರ ವಿಳಂಬವಾಗಿ ಕೈಗೊಂಡರೂ ಪ್ರತಿಭಟನಾನಿರತ ವಿದ್ಯಾರ್ಥಿ ಸಂಘಟನೆಗಳೊಡನೆ ಮಾತುಕತೆ ನಡೆಸದೆ ಹೋದದ್ದು, ಹೋರಾಟ ಉಲ್ಬಣಿಸಲು ಮುಖ್ಯ ಕಾರಣವಾಯಿತು. “ ಸ್ವಾತಂತ್ರ್ಯ ಹೋರಾಟಗಾರರ ಸಂತತಿಯವರಿಗಲ್ಲದೆ ಇನ್ನೇನು ರಝಾಕರ ಸಂತತಿಗೆ ಮೀಸಲಾತಿ ಕೋಟಾ ಒದಗಿಸಬೇಕೇ ? ” ಎಂಬ ಶೇಕ್ ಹಸೀನಾ ಅವರ ಮಾತುಗಳು ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಯಿತು. ಬಾಂಗ್ಲಾದೇಶದಲ್ಲಿ ರಝಾಕರ್ ಎಂಬ ಪದವನ್ನು ಅಪಮಾನಕರ ಎಂದೇ ಪರಿಗಣಿಸಲಾಗುತ್ತದೆ. ಏಕೆಂದರೆ 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಪಾಕಿಸ್ತಾನದ ದಮನಕಾರಿ ಸೇನೆಯನ್ನು ಬೆಂಬಲಿಸಿದ್ದವರನ್ನು ರಝಾಕರ್ ಎಂದು ಗುರುತಿಸಲಾಗುತ್ತದೆ. ಉಲ್ಬಣಿಸುತ್ತಿದ್ದ ವಿದ್ಯಾರ್ಥಿ-ಯುವ ಸಮುದಾಯದ ಹೋರಾಟವನ್ನು ಶೇಕ್ ಹಸೀನಾ ಸರ್ಕಾರ ಪೊಲೀಸ್ ಮೂಲಕ ದಮನಿಸಲೆತ್ನಿಸಿದ್ದರಿಂದ ತಳಮಟ್ಟದಲ್ಲಿ ಜನಾಕ್ರೋಶವೂ ಇಮ್ಮಡಿಯಾಗತೊಡಗಿತ್ತು. ಇದರ ಪರಿಣಾಮ ಆಗಸ್ಟ್ 5ರ ದಂಗೆ ಮತ್ತು ಪಾರ್ಲಿಮೆಂಟ್ ಮುತ್ತಿಗೆ.
ಅಭಿವೃದ್ಧಿ ಎಂಬ ಭ್ರಮಾಲೋಕ
ದೇಶದ ಭೌತಿಕ ಆರ್ಥಿಕಾಭಿವೃದ್ಧಿಯೊಂದೇ ತಳಸಮಾಜದ ಜೀವನ-ಜೀವನೋಪಾಯಗಳನ್ನು ಸುಗಮಗೊಳಿಸುವುದಿಲ್ಲ ಎನ್ನುವ ಕಟು ಸತ್ಯವನ್ನು ಬಂಡವಾಳಶಾಹಿಯ ಸುದೀರ್ಘ ಚರಿತ್ರೆಯೇ ನಿರೂಪಿಸಿದೆ. ಆಕರ್ಷಕವಾಗಿ ಕಾಣುವ ಮಾರುಕಟ್ಟೆ ಸೂಚ್ಯಂಕಗಳಾಗಲೀ, ಜಿಡಿಪಿ ಇತ್ಯಾದಿಗಳ ಗ್ರಾಫ್‌ಗಳಾಗಲೀ ತಳಮಟ್ಟದಲ್ಲಿ ನಿತ್ಯ ಬದುಕಿಗಾಗಿ ನಿರಂತರವಾಗಿ ಹೋರಾಡಬೇಕಾದ ಸಾಮಾನ್ಯರ ನಿಜಸ್ಥಿತಿಯನ್ನು ಬಿಂಬಿಸುವುದಿಲ್ಲ. ಬಾಂಗ್ಲಾದೇಶ ಮಾತ್ರವಲ್ಲ ಭಾರತವನ್ನೂ ಒಳಗೊಂಡಂತೆ ಯಾವುದೇ ಬಂಡವಾಳಶಾಹಿ ದೇಶಗಳಿಗೂ ಅನ್ವಯಿಸುವಂತಹ ಸತ್ಯ ಇದು. ಈ ಹತಾಶ ಜನತೆಯ ಆಕ್ರೋಶವನ್ನು ಶಮನಗೊಳಿಸುವ ಪ್ರಜಾಸತ್ತಾತ್ಮಕ ಮಾರ್ಗಗಳು ಸರ್ಕಾರಗಳನ್ನು ಒಂದು ಹಂತದವರೆಗಾದರೂ ರಕ್ಷಿಸುತ್ತವೆ. ಆದರೆ ಹಸಿವು, ಬಡತನ, ನಿರುದ್ಯೋಗ ಮತ್ತು ನಿತ್ಯ ಬದುಕಿನ ಸವಾಲುಗಳು ತಳಸಮಾಜದಲ್ಲಿ ಅಂತರ್‌ವಾಹಿನಿಯಾಗಿ ಹರಿಯುತ್ತಲೇ ಇರುತ್ತದೆ. ಈ ಹತಾಶೆ ಆಕ್ರೋಶವಾಗಿ ಸ್ಫೋಟಿಸಿದಾಗ ಆಗಸ್ಟ್ 5 ರಂತಹ ದಂಗೆಗಳು ಸಂಭವಿಸುತ್ತವೆ.
ಅಂತಿಮವಾಗಿ ಈ ಜನಾಂದೋಲನದ ಫಲಾನುಭವಿಗಳು ಯಾರಾಗುತ್ತಾರೆ ? ಏಕೆ ಇದು ಮತ್ತೆ ತಳಸಮಾಜದ ಕೈತಪ್ಪಿ ಮತ್ತೊಂದು ಪ್ರಬಲ ವರ್ಗದ ಪಾಲಾಗುತ್ತದೆ ? ಇಲ್ಲಿ ಸಾಂಸ್ಥಿಕ ಧರ್ಮ ಮತ್ತು ಧಾರ್ಮಿಕ ಗುಂಪುಗಳು ಹೇಗೆ ಮಧ್ಯಪ್ರವೇಶಿಸಿ ತಮ್ಮ ಆಧಿಪತ್ಯ ಸಾಧಿಸುತ್ತವೆ ? ಈ ಜನಾಂದೋಲನಗಳು ಅಧಿಕಾರ ಹಸ್ತಾಂತರದಲ್ಲಿ ಪರ್ಯವಸಾನ ಹೊಂದುತ್ತವೆಯೋ ಅಥವಾ ಜನತೆಯ ಕೈಗೆ ಅಧಿಕಾರ ಕೊಡುತ್ತದೆಯೋ ? ಈ ಜನಾಂದೋಲನದ ಪರಿಣಾಮ ಪ್ರಜಾಸತ್ತೆ ಉಳಿಯವುದೋ ಅಥವಾ ಇನ್ನೂ ಹೆಚ್ಚು ದಮನಕಾರಿ ನಿರಂಕುಶಾಧಿಕಾರಕ್ಕೆ ದಾರಿ ಮಾಡಿಕೊಡುವುದೋ ? ಈ ಪ್ರಶ್ನೆಗಳಿಗೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮತೀಯ ದ್ವೇಷದ ಗಲಭೆಗಳು, ಹತ್ಯೆಗಳು, ಕೋಮು ಸಂಘರ್ಷಗಳು , ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಇವೆಲ್ಲವೂ ಉತ್ತರ ನೀಡುತ್ತವೆ.
( ಈ ಲೇಖನಕ್ಕೆ ಮೂಲ ಆಧಾರ : The leader who lost touch with Bangladesh ̲ ಸುಧೀರ್ ಭೌಮಿಕ್, ದ ಹಿಂದೂ ಪತ್ರಿಕೆ -ಆಗಸ್ಟ್ 8 2024 )
( ಮುಂದಿನ ಭಾಗದಲ್ಲಿ : ಧಾರ್ಮಿಕ ಮೂಲಭೂತವಾದ ಮತ್ತು ತಳಸಮಾಜದ ಅರಾಜಕತೆ)