ಭಾರತದ ರಾಜಕಾರಣ ಇಷ್ಟು ವರ್ಷಗಳ ಕಾಲ ತನ್ನ ಸುತ್ತಲೂ ನಿರ್ಮಿಸಿಕೊಂಡಿದ್ದ ಒಂದು ಭ್ರಮಾತ್ಮಕ ಪೊರೆಯನ್ನು ಬಹುಶಃ ಈಗ ಕಳೆದುಕೊಳ್ಳುತ್ತಿದೆ. ವಸಾಹತು ಆಳ್ವಿಕೆಯಿಂದ ಸ್ವದೇಶಿ ಆಳ್ವಿಕೆಗೆ ಹಸ್ತಾಂತರವಾದ ಸಂದರ್ಭದಲ್ಲಿ ಮತ್ತು ಅದಕ್ಕೂ ಮುನ್ನ ಕೇಳಿಬರುತ್ತಿದ್ದ ಒಂದು ಕ್ಷೀಣ ದನಿ ಎಂದರೆ “ಬಿಳಿಯರಿಂದ ಕಂದು ಬಣ್ಣದವರಿಗೆ ಅಧಿಕಾರ ಹಸ್ತಾಂತರ ಮಾತ್ರವೇ ಆಗುವುದಾದರೆ, ಭಾರತದ ಸ್ವಾತಂತ್ರ್ಯ ತನ್ನ ಅರ್ಥ ಕಳೆದುಕೊಳ್ಳುತ್ತದೆ ” ಎನ್ನುವ ಆತಂಕದ ಮಾತುಗಳು. ಈ ಆತಂಕವನ್ನು ಭಗತ್ ಸಿಂಗ್ ತನ್ನ ಕ್ರಾಂತಿಕಾರಿ ಚಿಂತನೆಯ ನೆಲೆಯಲ್ಲಿ ವ್ಯಕ್ತಪಡಿಸಿದ್ದರೆ, ಡಾ ಬಿ ಆರ್ ಅಂಬೇಡ್ಕರ್ ತಮ್ಮ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ವ್ಯಕ್ತಪಡಿಸಿದ್ದರು. ಸ್ವಾತಂತ್ರ್ಯ ಪೂರ್ವದ ಚಿಂತನಾ ಲಹರಿಯಲ್ಲಿ ಮುಖ್ಯವಾಗಿ ಹರಿಯುತ್ತಿದ್ದುದು ಒಂದು ವಿಭಿನ್ನ ಭಾರತ. ಸಾಮಾಜಿಕಾರ್ಥಿಕ ಸಮಾನತೆಯೊಂದಿಗೇ ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಪಡೆಯುತ್ತಲೇ ಶತಮಾನಗಳಿಂದ ಪೋಷಿಸಿಕೊಂಡು ಬಂದಂತಹ ಬಹುತ್ವ ಭಾರತದ ಆಶಯಗಳನ್ನು ಪೂರೈಸುವುದು ಬಹುಪಾಲು ಭಾರತೀಯ ಆಶಯವಾಗಿದ್ದುದು ಸತ್ಯ.
ಭಾರತ ಪ್ರಜಾಪ್ರಭುತ್ವವನ್ನು ತಾತ್ವಿಕವಾಗಿಯೂ, ಗಣತಂತ್ರದ ತತ್ವಗಳನ್ನು ಆಡಳಿತಾತ್ಮಕವಾಗಿಯೂ ಅಪ್ಪಿಕೊಳ್ಳಲು ಕಾರಣವೇ ಈ ದೇಶದಲ್ಲಿದ್ದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಮಾಜಿಕ ಸ್ಥಿತ್ಯಂತರಗಳು. ಏಕೀಕೃತ ಭಾರತವನ್ನು ಭೌಗೋಳಿಕವಾಗಿ ನೋಡುವುದಕ್ಕಿಂತಲೂ ಹೆಚ್ಚಾಗಿ ಸಾಂಸ್ಕೃತಿಕವಾಗಿ, ಸಾಮಾಜಿಕ ಚೌಕಟ್ಟಿನಲ್ಲಿ ನೋಡುವ ಒಂದು ದಾರ್ಶನಿಕತೆ ಸ್ವಾತಂತ್ರ್ಯ ಪೂರ್ವದ ಚಿಂತನಾವಾಹಿನಿಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಆದರೆ ಈ ಪ್ರಜಾಪ್ರಭುತ್ವದ ಆಶಯಗಳು ಸಾಕಾರಗೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ, ಸಂವಿಧಾನ ಕರ್ತೃ ಡಾ ಬಿ ಆರ್ ಅಂಬೇಡ್ಕರ್ ವ್ಯಕ್ತಪಡಿಸಿದ ಎಚ್ಚರಿಕೆಯ ಮಾತುಗಳು ನಮ್ಮ ಪ್ರಜ್ಞೆಯನ್ನು ಶಾಶ್ವತ ಜಾಗೃತಾವಸ್ಥೆಯಲ್ಲಿರಿಸಬೇಕಿತ್ತು
ಅಂಬೇಡ್ಕರ್ ಹೇಳಿದಂತೆ ಭಾರತ ಗಣತಂತ್ರವಾಗಿ ಘೋಷಿಸಿಕೊಂಡು ತನ್ನದೇ ಆದ ಸಂವಿಧಾನವನ್ನು ಸಮಸ್ತ ಜನತೆಯ ಪರವಾಗಿ ಅರ್ಪಿಸಿಕೊಂಡ ಸಂದರ್ಭದಲ್ಲಿ ಎರಡು ವೈರುಧ್ಯಗಳು ಸ್ಪಷ್ಟವಾಗಿದ್ದವು. ರಾಜಕೀಯ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಸಾಧಿಸಿದ ಭಾರತ, ಸಾಮಾಜಿಕ ಮತ್ತು ಆರ್ಥಿಕ ನೆಲೆಯಲ್ಲಿ ಅಸಮಾನತೆಯ ಗೂಡಾಗಿತ್ತು. ಮತದಾನದ ಹಕ್ಕುಗಳ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ದೊರೆಯುವ ಸಮಾನ ಮೌಲ್ಯ, ಸಾಮಾಜಿಕ ಆರ್ಥಿಕ ಜೀವನದಲ್ಲಿ ದೊರೆಯುವುದಿಲ್ಲ ಎನ್ನುವ ವಾಸ್ತವವನ್ನು ಅಂಬೇಡ್ಕರ್ ತಮ್ಮ ಎಚ್ಚರಿಕೆಯ ಮಾತುಗಳ ಮೂಲಕ ನೆನಪಿಸಿದ್ದರು. ಈ ಸಾಮಾಜಿಕಾರ್ಥಿಕ ಅಸಮಾನತೆ ಬಹಳ ಕಾಲ ಮುಂದುವರೆದರೆ ಬಹುಶಃ ಪ್ರಜಾಪ್ರಭುತ್ವವೇ ಅಪಾಯಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದ್ದುದೂ ಹೌದು. ತಾತ್ವಿಕ ಸ್ವಾತಂತ್ರ್ಯ -ಸಮಾನತೆ ಮತ್ತು ವಾಸ್ತವಿಕ ದಾಸ್ಯ-ಅಸಮಾನತೆಯ ನಡುವಿನ ವೈರುಧ್ಯಗಳಲ್ಲೇ ಭಾರತ ಒಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆಗಳನ್ನು ನಿರೀಕ್ಷಿಸಿಯೇ ಅಂಬೇಡ್ಕರ್ ಪ್ರಜಾಪ್ರಭುತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತದ ಆಳುವ ವರ್ಗಗಳು ಅನುಸರಿಸಬೇಕಾದ ಸಾಂವಿಧಾನಿಕ ಮಾರ್ಗಗಳನ್ನು ರೂಪಿಸಿದ್ದರು.
ಇಂದು ತನ್ನ ೭೫ನೆಯ ವರ್ಷದಲ್ಲಿ ಸ್ವತಂತ್ರ ಭಾರತ ಈ ವೈರುಧ್ಯಗಳ ಪರಾಕಾಷ್ಠೆ ತಲುಪಿದೆ. ಇದರೊಟ್ಟಿಗೆ ಪ್ರಜಾಸತ್ತೆಯ ಮೂಲ ಬೇರುಗಳೂ ಶಿಥಿಲವಾಗುತ್ತಿರುವುದನ್ನು ಮೌನವಾಗಿ ವೀಕ್ಷಿಸುತ್ತಾ ವಿಶ್ವಗುರುವಿನ ಸ್ಥಾನವನ್ನು ಪಡೆಯಲು ಹಪಹಪಿಸುತ್ತಿದೆ. #ಆತ್ಮನಿರ್ಭರ ಭಾರತ ಎಂದರೆ ಸ್ವಾಭಿಮಾನಿ, ಸ್ವಾವಲಂಬಿ ಭಾರತ ಎಂದೆಣಿಸಿದ್ದವರಿಗೆ ಭ್ರಮನಿರಸನವಾಗುವ ರೀತಿಯಲ್ಲಿ ಇಂದಿನ ಭಾರತ ತನ್ನ ಸ್ವಾವಲಂಬನೆಯನ್ನು ಕಳೆದುಕೊಂಡು, ಸ್ವಾಭಿಮಾನವನ್ನು ಸಾಮ್ರಾಜ್ಯಶಾಹಿಯ ಪದತಳದಲ್ಲಿ ಒತ್ತೆಯಿಡುತ್ತಿರುವುದನ್ನು ದೇಶದ ಜನತೆ ಮೌನವಾಗಿ ವೀಕ್ಷಿಸುತ್ತಲೇ ಇದೆ. ದುರಂತ ಎಂದರೆ ೭೪ ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರ, ವಿಶ್ವಶ್ರೇಷ್ಠ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡ ‘ನಾವು ’ , ಅಂದರೆ ಈ ದೇಶದ ಸಾರ್ವಭೌಮ ಪ್ರಜೆಗಳು, ‘ ದೇಶ ’ಎಂದರೇನು ಎಂಬ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ.
ಏಕೆಂದರೆ #ಆತ್ಮನಿರ್ಭರ ಭಾರತದಲ್ಲಿ ಸ್ವಾತಂತ್ರ ಪೂರ್ವದ ಕನಸುಗಳೆಲ್ಲವೂ ನುಚ್ಚುನೂರಾಗುತ್ತಿದೆ. ಸಾಮಾಜಿಕ ನ್ಯಾಯವನ್ನು ಸಾಧಿಸಲು, ಆರ್ಥಿಕ ಸಮಾನತೆಯನ್ನು ಸಾಕಾರಗೊಳಿಸಲು ಮತ್ತು ಸಾಂಸ್ಕೃತಿಕ ಸೌಹಾರ್ದತೆಯನ್ನು ಮೂಡಿಸಲು ಅಗತ್ಯವಾದ ಎಲ್ಲ ಮಾರ್ಗಗಳಲ್ಲೂ ಅಧಿಕಾರ ರಾಜಕಾರಣದ ದಬ್ಬಾಳಿಕೆ ಮತ್ತು ಸಾಂಸ್ಕೃತಿಕ ರಾಜಕಾರಣದ ಅಹಮಿಕೆ ತಡೆಗೋಡೆಗಳನ್ನು ನಿರ್ಮಿಸುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆರ್ಥಿಕ ಸಮಾನತೆಯನ್ನು ಸಾಧಿಸುವ ಪ್ರಯತ್ನವೇ ಪ್ರಶ್ನಾರ್ಹವಾಗುತ್ತದೆ. ಆದರೆ ಅಂಬೇಡ್ಕರರನ್ನೂ ಸೇರಿದಂತೆ ಭಾರತದ ನಿರ್ಮಾತೃಗಳು ಈ ಚೌಕಟ್ಟಿನಲ್ಲೇ ಈ ಸಾಹಸಕ್ಕೆ ಮುಂದಾಗಿದ್ದರು. ತರತಮಗಳನ್ನು ಸರಿದೂಗಿಸಲು ಅವಶ್ಯವಾದ ಸಮಾಜವಾದದ ಕೆಲವು ಹೆಜ್ಜೆಗಳ ಮೂಲಕ, ಸಮ ಸಮಾಜವನ್ನು ಕಟ್ಟುವ ಗಾಂಧಿ-ನೆಹರೂ-ಅಂಬೇಡ್ಕರರ ಕನಸು ಇಂದು ಶಾಶ್ವತವಾಗಿ ನೆಲಸಮವಾಗುತ್ತಿದೆ.
ಈ ನಡುವೆಯೇ #ಆತ್ಮನಿರ್ಭರ ಭಾರತ ತನ್ನ ಪ್ರಜಾಸತ್ತಾತ್ಮಕ ಅಂತಃಸತ್ವವನ್ನು ಕಳೆದುಕೊಂಡು ಬೆತ್ತಲಾಗುತ್ತಿದೆ. ಜನತೆಯಿಂದಲೇ ಆಯ್ಕೆಯಾಗಿ ಒಂದು ಸಂಸದೀಯ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಚುನಾಯಿತ ಸರ್ಕಾರ ಮೂಲತಃ ಈ ಗಣತಂತ್ರದ ಜನತೆಯ ಪ್ರಾತಿನಿಧಿತ್ವವನ್ನು ಹೊಂದಿರುತ್ತದೆ. ಇಲ್ಲಿ ಸಾಂಸ್ಥಿಕ ಸ್ವರೂಪಕ್ಕಿಂತಲೂ ತಾತ್ವಿಕ ನೆಲೆಗಟ್ಟು ಗಟ್ಟಿಯಾಗಿದ್ದರೆ ಮಾತ್ರವೇ ಆ ಪ್ರಾತಿನಿಧಿತ್ವವೂ ಅರ್ಥಪೂರ್ಣವಾಗುತ್ತದೆ. ಈ ಸರ್ಕಾರವನ್ನು ನಿರ್ವಹಿಸುವ ಪ್ರಧಾನಮಂತ್ರಿ ಹುದ್ದೆಯಲ್ಲಿರುವ ವ್ಯಕ್ತಿ ಸಮಸ್ತ ಭಾರತೀಯರ ಪ್ರತಿನಿಧಿಯಾಗಿ, ದೇಶದಲ್ಲಿ ಸಂಭವಿಸುವ ಪ್ರತಿಯೊಂದು ಘಟನೆಗೂ, ಪಲ್ಲಟಗಳಿಗೂ, ವ್ಯತ್ಯಯಗಳಿಗೂ ನೈತಿಕ ಜವಾಬ್ದಾರಿ ಹೊರುವುದೇ ಅಲ್ಲದೆ, ನೊಂದವರಿಗೆ, ಸಂತ್ರಸ್ತರಿಗೆ ಸಾಂತ್ವನ ಹೇಳುವ ಮಾನವೀಯ ಸ್ಪಂದನೆ ಈ ಹುದ್ದೆಯಲ್ಲಿರುವ ವ್ಯಕ್ತಿಯಲ್ಲಿ ಇದ್ದಾಗ ಮಾತ್ರ ಪ್ರಜಾಸತ್ತೆ ಅರ್ಥಪೂರ್ಣ ಎನಿಸುತ್ತದೆ.
ದುರಂತ ಎಂದರೆ ಭಾರತದ ಪ್ರಜಾಪ್ರಭುತ್ವ ಈ ಸಂವೇದನೆ ಮತ್ತು ಸೂಕ್ಷ್ಮತೆಯನ್ನು ಕಳೆದುಕೊಂಡು ಬೆತ್ತಲಾಗಿಬಿಟ್ಟಿದೆ. ಸಾವಿರಾರು ಕಗ್ಗೊಲೆಗಳಿಗೆ ಮೂಕ ಸಾಕ್ಷಿಯಾಗಿ, ನೂರಾರು ಹತ್ಯಾಕಾಂಡಗಳಿಗೆ ಮೌನ ಸಾಕ್ಷಿಯಾಗಿ ತನ್ನೆಲ್ಲಾ ಸಾಂವಿಧಾನಿಕ ಮೌಲ್ಯಗಳನ್ನೂ ಕಳೆದುಕೊಳ್ಳುತ್ತಲೇ ಬರುತ್ತಿರುವ ಭಾರತ ಇಂದು ಸಾವನ್ನು ಸಂಭ್ರಮಿಸುವ ಹಂತಕ್ಕೆ ಅಧಿಕೃತವಾಗಿಯೇ ತಲುಪಿದೆ. ಲಖೀಂಪುರದಲ್ಲಿ ನಡೆದ ಹತ್ಯಾಕಾಂಡ ಇದಕ್ಕೆ ಸಾಕ್ಷಿಯಾಗಿದೆ. ಕೇಂದ್ರ ಸಚಿವರ ಪುತ್ರನೊಬ್ಬನ ಕೃತ್ಯದಿಂದ ನಾಲ್ವರ ಸಾವು ಸಂಭವಿಸಿದೆ. ಈ ಕೃತ್ಯಕ್ಕೆ ಪೂರಕವಾಗುವಂತಹ ಪ್ರಚೋದನಕಾರಿ ಹೇಳಿಕೆಗಳನ್ನು ರಾಜ್ಯವೊಂದರ ಮುಖ್ಯಮಂತ್ರಿ ಸಾರ್ವಜನಿಕವಾಗಿಯೇ ನೀಡುತ್ತಾರೆ. ಈ ಜನಪ್ರತಿನಿಧಿಗಳನ್ನು ಶಿಕ್ಷಿಸುವುದಿರಲಿ, ಪ್ರಶ್ನಿಸುವ ವ್ಯವಧಾನವನ್ನೂ ನಮ್ಮ ಪ್ರಭುತ್ವ ಕಳೆದುಕೊಂಡಿದೆ.
ಮತ್ತೊಂದೆಡೆ ತಮ್ಮದೇ ಸಂಪುಟ ಸಚಿವರೊಬ್ಬರ ಪುತ್ರನಿಂದ ನಡೆದ ಹತ್ಯೆಯ ಬಗ್ಗೆ ಮಾತನಾಡುವುದಿರಲಿ, ಕೇಂದ್ರ ಸಚಿವರ ಬೆಂಗಾವಲು ವಾಹನಕ್ಕೆ ಸಿಲುಕಿ ಮೃತಪಟ್ಟವರ ಬಗ್ಗೆ ಈ ದೇಶದ ಪ್ರಧಾನಮಂತ್ರಿ ಒಂದೇ ಒಂದು ಸಾಂತ್ವನದ ನುಡಿಯನ್ನೂ ಆಡದಿರುವುದು ಸೋಜಿಗ ಮೂಡಿಸುತ್ತದೆ. ಅಕಾಲಿಕ, ಅಸಹಜ ಮೃತ್ಯುವಿಗೀಡಾಗಿ ಹುತಾತ್ಮರಾದ ನಾಲ್ವರು ರೈತರ ಸಾವಿಗೆ ಸಂತಾಪ ವ್ಯಕ್ತಪಡಿಸುವ ವ್ಯವಧಾನವನ್ನೂ ಭಾರತದ ಪ್ರಭುತ್ವ ಕಳೆದುಕೊಂಡಿರುವುದಕ್ಕೆ ಇದು ಸಾಕ್ಷಿಯಾಗಿ ನಿಲ್ಲುತ್ತದೆ. ಇಲ್ಲಿ ಆಡಳಿತಾರೂಢ ಪಕ್ಷದ ನಿರ್ದಯತೆ, ಆಡಳಿತ ವ್ಯವಸ್ಥೆಯ ಅಸೂಕ್ಚ್ಮತೆ ಮತ್ತು ಸಾಂಸ್ಥಿಕ ಪ್ರಜಾಪ್ರಭುತ್ವದ ನಿಷ್ಕ್ರಿಯತೆ ಈ ಮೂರೂ ವಿದ್ಯಮಾನಗಳನ್ನು ಗಮನಿಸಬೇಕಿದೆ. ಹತ್ತು ತಿಂಗಳ ರೈತ ಮುಷ್ಕರದಲ್ಲಿ ಏಳುನೂರಕ್ಕೂ ಹೆಚ್ಚು ರೈತರು ಮೃತಪಟ್ಟಿರುವುದು ಸರ್ಕಾರವನ್ನು ವಿಚಲಿತಗೊಳಿಸದಿರುವುದೇ, ನಮ್ಮ ಪ್ರಜಾಸತ್ತೆ ಸಂವೇದನೆಯನ್ನು ಕಳೆದುಕೊಂಡು ಬೆತ್ತಲಾಗಿರುವುದಕ್ಕೆ ಸಾಕ್ಷಿಯಾಗಿದೆ.
ಲಖೀಂಪುರ ಎರಡು ಕ್ರೌರ್ಯಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಮೊದಲನೆಯದು ಬಲಪಂಥೀಯ ಸಾಂಸ್ಕೃತಿಕ ರಾಜಕಾರಣದಲ್ಲಿ ಘನೀಕೃತವಾಗುತ್ತಿರುವ ಆಡಳಿತ ವ್ಯವಸ್ಥೆಯ ಕ್ರೌರ್ಯ. ಎರಡನೆಯದು ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯ ಕ್ರೌರ್ಯ. ಇವರೆಡರ ಸಮ್ಮಿಲನವನ್ನು ಮಧ್ಯಕಾಲೀನ ಚರಿತ್ರೆಯ ರಾಜಪ್ರಭುತ್ವಗಳಲ್ಲಿ ಕಾಣಬಹುದಾಗಿತ್ತು. ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಕ್ಷಾಮ ತಲೆದೋರಿ, ಜನರು ಹಸಿವಿನಿಂದ ಸಾಯುತ್ತಿರುವಾಗ, ರಾಣಿ ಮೇರೀ ಅಂಟೋನಿಯಾ ‘ ಜನರು ಬೇಕಾದರೆ ಕೇಕ್ ತಿನ್ನಲಿ ’ ಎಂದು ಹೇಳಿದರೆಂಬ ಐತಿಹ್ಯವಿದೆ. ಹತ್ತು ತಿಂಗಳಿನಿಂದ ತಮ್ಮ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ, ಬದುಕುವ ಹಕ್ಕುಗಳಿಗಾಗಿ ಹೋರಾಡುತ್ತಿರುವ ರೈತರ ಸಾವು ನೋವುಗಳ ಬಗ್ಗೆ ಭಾರತ ಸರ್ಕಾರದ ಮೌನ ಈ ಐತಿಹ್ಯವನ್ನು ನೆನಪಿಸುತ್ತದೆ. ಕಳೆದ ಒಂದು ವರ್ಷದಿಂದ ಸಂಭವಿಸುತ್ತಿರುವ ಕೋವಿದ್ ಸಂಬಂಧಿತ ಸಾವುನೋವುಗಳು, ಕಳೆದ ವರ್ಷದ ದುರಂತಮಯ ವಲಸೆ ಕಾರ್ಮಿಕರ ಬದುಕು ಮತ್ತು ಸರಣಿ ಸಾವುಗಳು, ಗಂಗೆಯಲ್ಲಿ ತೇಲಿಬಂದ ನೂರಾರು ಅನಾಥ ಶವಗಳು, ಉತ್ತರಪ್ರದೇಶದ ಆಸ್ಪತ್ರೆಯಲ್ಲಿ ಅಸುನೀಗಿದ ನೂರಾರು ಮಕ್ಕಳು, ಅಸ್ಸಾಂನಲ್ಲಿ ಪೊಲೀಸರ ದಾಳಿಗೆ ಬಲಿಯಾದ ‘ ಕಲ್ಪಿತ ’ ವಲಸಿಗರು, ಲಖೀಂಪುರದಲ್ಲಿ ಹುತಾತ್ಮರಾದ ರೈತರು, ಈ ಯಾವುದೇ ಘಟನೆಗಳಿಗೂ ಸ್ಪಂದಿಸದ ಒಂದು ನಿರ್ದಯಿ ವ್ಯವಸ್ಥೆ ಈ ಐತಿಹ್ಯವನ್ನು ನೆನಪಿಸುತ್ತದೆ.
ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಶ್ರಮದೊಂದಿಗೆ, ಶ್ರಮ ಶಕ್ತಿಯೂ, ಶ್ರಮಿಕರೂ ಮಾರುಕಟ್ಟೆಯ ಸರಕುಗಳಂತಾಗುತ್ತವೆ. ನವ ಉದಾರವಾದಿ ಕಾರ್ಪೋರೇಟ್ ಅರ್ಥವ್ಯವಸ್ಥೆಯಲ್ಲಿ ಬೀದಿಪಾಲಾಗುವ ಲಕ್ಷಾಂತರ ಕಾರ್ಮಿಕರ ಬವಣೆ ಅರಣ್ಯ ರೋದನವಾಗುತ್ತದೆ. ಇದರ ಒಂದು ಸ್ವರೂಪವನ್ನು ಈಗಾಗಲೇ ದೇಶಾದ್ಯಂತ ನಡೆಯುತ್ತಿರುವ ನೂರಾರು ಕಾರ್ಮಿಕ ಮುಷ್ಕರಗಳಲ್ಲಿ ಕಾಣುತ್ತಿದ್ದೇವೆ. ನಿರ್ಗತಿಕರಾಗುವ ಶ್ರಮಜೀವಿಗಳ ನಿತ್ಯ ಬದುಕಿನ ನೋವುಗಳಿಗೆ ಸ್ಪಂದಿಸುವ ಧನಾತ್ಮಕ ಗುಣಲಕ್ಷಣಗಳನ್ನು ಕಳೆದುಕೊಳ್ಳುತ್ತಲೇ ದೇಶದ ಔದ್ಯಮಿಕ ವಲಯ, ಔದ್ಯೋಗಿಕ ವಲಯ ತನ್ನ ಬಂಡವಾಳದ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋಗುತ್ತದೆ. ಈ ಬಂಡವಾಳ ವಿಸ್ತರಣೆಗೆ ಅಡ್ಡಿಯಾಗುತ್ತಿರುವ ರೈತ ಮುಷ್ಕರ ಈ ಕಾರಣಕ್ಕಾಗಿಯೇ ನಿರ್ಲಕ್ಷ್ಯಕ್ಕೊಳಗಾಗುತ್ತದೆ. ರೈತರ ಸಾವುಗಳು ನಿಕೃಷ್ಟವಾಗುತ್ತವೆ.
ಬಂಡವಾಳಶಾಹಿ-ಬಲಪಂಥೀಯ ಸರ್ಕಾರದಲ್ಲಿ ಬಲಿಷ್ಠ ಸರ್ಕಾರ ಎಂದರೆ ನಿರ್ದಯಿ ಸರ್ಕಾರ ಎಂದೇ ಭಾವಿಸಬೇಕಾಗುತ್ತದೆ. ಏಕೆಂದರೆ ಬಲಪಂಥೀಯ ಫ್ಯಾಸಿಸಂ ಆರ್ಥಿಕ ಅಸಮಾನತೆಯನ್ನೂ ಲೆಕ್ಕಿಸದೆ ಜನಸಾಮಾನ್ಯರ ನಡುವೆ ಬಡತನ-ಶ್ರೀಮಂತಿಕೆಯ ಅಂತರವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಹಾಗೆಯೇ ಜಾತಿ ಮತಗಳ ನೆಲೆಯಲ್ಲಿ ಜನತೆಯ ನಡುವೆ ಪರಕೀಯತೆಯ ಭಾವನೆಯನ್ನು ಬಿತ್ತುತ್ತಾ ‘ ಅನ್ಯರನ್ನು ’ ಸೃಷ್ಟಿಸುತ್ತಾ ಹೋಗುತ್ತದೆ. ದುಡಿಯುವ ಜನತೆ ಎದುರಿಸುವ ಜ್ವಲಂತ ಸಮಸ್ಯೆಗಳ ಜನಕ ಮಾರುಕಟ್ಟೆ ವ್ಯವಸ್ಥೆಯೇ ಆದರೂ, ಅದನ್ನು ಈ ಕಲ್ಪಿತ ‘ ಅನ್ಯರ ’ ಹೆಗಲ ಮೇಲೆ ಹೊರಿಸುತ್ತಾ ಕಂದಕಗಳನ್ನು ನಿರ್ಮಿಸುತ್ತಾ ಹೋಗುತ್ತದೆ. ಹಾಗಾಗಿಯೇ ಆರೆಸ್ಸೆಸ್‌ನಂತಹ ಬಲಪಂಥೀಯ ಸಂಘಟನೆಗಳ ದೃಷ್ಟಿಯಲ್ಲಿ ದೇಶದ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಕೊಳ್ಳೆಹೊಡೆಯುವ ವಿದೇಶಿ ಬಂಡವಾಳಶಾಹಿಗಳು ಸ್ವೀಕೃತರಾಗುತ್ತಾರೆ, ಈ ಮಾರುಕಟ್ಟೆ ಪ್ರಕ್ರಿಯೆಯಿಂದ ದಾರಿದ್ರ್ಯತೆಯ ಕೂಪಕ್ಕೆ ತಳ್ಳಲ್ಪಡುವ ಸ್ವದೇಶೀ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು ನಿಕೃಷ್ಟರಾಗಿ, ನಿರ್ಲಕ್ಷಿತರಾಗಿಬಿಡುತ್ತಾರೆ. ಹತ್ತು ತಿಂಗಳಿನಿಂದ ದೆಹಲಿಯ ಬಳಿಯೇ ಮುಷ್ಕರ ನಿರತರಾಗಿರುವ ರೈತರಲ್ಲಿ ಆರೆಸ್ಸೆಸ್ ಹಿಂದೂ/ಸ್ವದೇಶಿ/ಭಾರತೀಯ ಹಿತಾಸಕ್ತಿಯನ್ನು ಕಾಣುವುದಿಲ್ಲ ಬದಲಾಗಿ, ಅವರು ರೈತರೇ ಅಲ್ಲ ದಲ್ಲಾಳಿಗಳು ಎಂದು ಆರೋಪಿಸುವ ಮೂಲಕ ಕರಾಳ ಕೃಷಿಮಸೂದೆಗಳಲ್ಲಿ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಣುತ್ತದೆ. ಈ ರೈತರ ಸಾವುಗಳು ಬಂಡವಾಳ ಮತ್ತು ಮತೀಯ ರಾಜಕಾರಣದ ದೃಷ್ಟಿಯಲ್ಲಿ ನಗಣ್ಯ ಎನಿಸಿಬಿಡುತ್ತವೆ.
ಬಲಪಂಥೀಯ ರಾಜಕಾರಣದ ಮತೀಯ-ಸಾಂಸ್ಕೃತಿಕ ಕ್ರೌರ್ಯ ಮತ್ತು ನವ ಉದಾರವಾದ ಬಂಡವಾಳಶಾಹಿಯ ಮಾರುಕಟ್ಟೆ ನಿರ್ದಯತೆ, ಇವೆರಡರ ಸಮ್ಮಿಲನಕ್ಕೆ #ಆತ್ಮನಿರ್ಭರ ಭಾರತ ಸಿದ್ಧತೆ ನಡೆಸಿದೆ. ಅಂಚಿನಲ್ಲಿರುವ ಜನಸಮುದಾಯಗಳು ದಾರಿದ್ರ್ಯತೆಯ ಕೂಪಕ್ಕೆ ತಳ್ಳಲ್ಪಡುತ್ತಿರುವಂತೆಯೇ, ಮಾರುಕಟ್ಟೆಯ ನಿರ್ದಯತೆಗೆ ಬಲಿಯಾಗಿ ಅಂಚಿಗೆ ತಳ್ಳಲ್ಪಡುವ ಸಮುದಾಯಗಳು, ಮತಾಂಧತೆಯ ಭ್ರಮೆಗೊಳಗಾಗಿ, ಸಾಂಸ್ಕೃತಿಕ ರಾಜಕಾರಣ ಸೃಷ್ಟಿಸುವ ‘ಅನ್ಯ ’ರನ್ನು ದ್ವೇಷಿಸುವ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಭಾರತ ಈ ಪರ್ವಕಾಲದಲ್ಲಿದೆ. ಶೋಷಿತರು ತಮ್ಮ ಶೋಷಕರನ್ನು ಗುರುತಿಸಲಾಗದಷ್ಟು ಮಟ್ಟಿಗೆ ಮತಾಂಧತೆ ಮತ್ತು ಗ್ರಾಹಕ ಸಂಸ್ಕೃತಿ ಸಮಾಜವನ್ನು ಆವರಿಸಿಕೊಳ್ಳುತ್ತದೆ.
ಈ ನಡುವೆ ಶಿಥಿಲವಾಗುತ್ತಲೇ ಇರುವ ಪ್ರಜಾಪ್ರಭುತ್ವ ಮತ್ತು ನಶಿಸುತ್ತಲೇ ಇರುವ ಸಾಂವಿಧಾನಿಕ ಮೌಲ್ಯಗಳನ್ನು ಸಂರಕ್ಷಿಸುವ ಹೊಣೆ ಪ್ರಜ್ಞಾವಂತ ಸಮಾಜದ ಮೇಲಿದೆ.