ಬೆಂಗಳೂರು: ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಇದೇ ಶುಕ್ರವಾರ (ಸೆ. 29) ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿವೆ. ಈ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ 80ಕ್ಕೂ ಹೆಚ್ಚು ಸಂಸ್ಥೆಗಳು, ಸಂಘಟನೆಗಳು ಸಂಪೂರ್ಣ ಬೆಂಬಲವನ್ನು ಕೊಟ್ಟಿವೆ. ಆದರೆ, ಮಹತ್ವದ ಬೆಳವಣಿಗೆಯಲ್ಲಿ ಬಂದ್ ನ ದಿನವೇ ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ಸಭೆಯು ನಡೆಯಲಿದ್ದು, ಅದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸೆ. 26ರಂದು ಕಾವೇರಿ ವಿಚಾರವಾಗಿ ಕರೆಯಲಾಗಿದ್ದ ಬೆಂಗಳೂರು ಬಂದ್ ಸಂದರ್ಭದಲ್ಲೇ ಅದೇ ದಿನ ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ (ಕೆಡಬ್ಲ್ಯೂಆರ್ ಸಿ) ಸಭೆ ನಡೆದಿದ್ದು, ಆ ಸಭೆಯಲ್ಲಿ ಸೆ. 26ರಿಂದ ಅ. 15ರವರೆಗೆ ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಲಾಗಿತ್ತು. ಕಾಕತಾಳೀಯವೆಂಬಂತೆ, ಶುಕ್ರವಾರದ ಬಂದ್ ದಿನವೇ ಸಿಡಬ್ಲ್ಯೂ ಎಂಎ ಸಭೆಯೂ ನಡೆಯಲಿದೆ. ಅಂದು ಏನು ಆದೇಶ ಬರುತ್ತೋ ಕಾದು ನೋಡಬೇಕಿದೆ.