ಬೆಂಗಳೂರು: ಶುಕ್ರವಾರದಂದು ನಡೆಯಲಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ವ್ಯಕ್ತಪಡಿಸಿದೆ. ಅಂದು ನಡೆಯುವ ಪ್ರತಿಭಟನೆಗಳಲ್ಲಿ ಕನ್ನಡದ ನಟ- ನಟಿಯರು ಹಾಗೂ ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಂ. ಸುರೇಶ್ ಅವರು ಹೇಳಿದ್ದಾರೆ.
ಅಂದು ಚಿತ್ರೋದ್ಯಮದ ಎಲ್ಲಾ ಚಟುವಟಿಕೆಗಳನ್ನು ಬಂದ್ ಮಾಡಿ ಎಲ್ಲರೂ ಬಂದ್ ಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್ ಅವರು ತಿಳಿಸಿದ್ದಾರೆ. ಇದೇ ವೇಳೆ, ಚಲನಚಿತ್ರ ಮಂಡಳಿಯ ಕಚೇರಿಯವರೆಗೆ ಬಂದು ಬಂದ್ ಗೆ ಬೆಂಬಲ ಕೋರಿದ ವಾಟಾಳ್ ನಾಗರಾಜ್ ಹಾಗೂ ಸಾರಾ ಗೋವಿಂದು ಸೇರಿದಂತೆ ಎಲ್ಲಾ ಕನ್ನಡಪರ ಸಂಘಟನೆಗಳ ಸದಸ್ಯರಿಗೆ ಅವರು ಧನ್ಯವಾದ ಹೇಳಿದರು.
ಸಾ.ರಾ. ಗೋವಿಂದು ಅಸಮಾಧಾನ
ವಾಣಿಜ್ಯ ಮಂಡಳಿಯ ಪದಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಾ.ರಾ. ಗೋವಿಂದು, “ಕಾವೇರಿ ವಿಚಾರದಲ್ಲಿ ಸಿಡಬ್ಲ್ಯೂಎಂಎ, ಸಿಡಬ್ಲ್ಯೂಆರ್ ಸಿಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. ಕರ್ನಾಟಕದಲ್ಲಿರುವ ಬರ ಪರಿಸ್ಥಿತಿಯನ್ನು ವಿವರಿಸಿ ಹೇಳಿದರೂ ಆ ಬಗ್ಗೆ ಕಿಂಚಿತ್ತಾದರೂ ತಲೆ ಕೆಡಿಸಿಕೊಳ್ಳದೆಯೇ ಇರುವುದನ್ನು ನೋಡಿದರೆ ಇದರ ಹಿಂದೆ ಪ್ರಧಾನಿ ಹಾಗೂ ಕೇಂದ್ರದ ಪ್ರಭಾವಿ ಸಚಿವರು ಇದ್ದಾರೆ ಎಂದೆನಿಸುತ್ತದೆ ಎಂದು ಅವರು ತಿಳಿಸಿದರು.