ಪ್ರೇಯಸಿಯನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಇಂದಿರಾ ನಗರದ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಅಸ್ಸಾಂ ಮೂಲದ ಮಾಯಾ ಗೊಗೋಯಿ ಎಂದು ಗುರುತಿಸಲಾಗಿದ್ದು, ಮಾಯಾಳನ್ನು ಕೊಂದ ಆರವ್ ಹಾರ್ನಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಇಂದಿರಾನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರವ್ ಹಾರ್ನಿಗಾಗಿ ಬಲೆ ಬೀಸಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಹೆಚ್ಎಸ್ಆರ್ ಲೇಔಟ್ನಲ್ಲಿ ವಾಸವಿದ್ದ ಮಾಯಾ ಗೊಗೋಯಿ, ನವೆಂಬರ್ 23ರಂದು ಮಾಯಾ ಹಾಗೂ ಪ್ರಿಯಕರ ಆರವ್ ಹಾರ್ನಿ ಇಂದಿರಾನಗರದ ಅಪಾರ್ಟ್ಮೆಂಟ್ ನಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದರು. ಆದರೆ ಏನಾಯ್ತೋ ಏನೋ ಪ್ರಿಯಕರ ಆರವ್ ಹಾರ್ನಿ, ತನ್ನ ಪ್ರೇಯಸಿ ಮಾಯಾಳನ್ನು ಕೊಂದು ಪರಾರಿಯಾಗಿದ್ದಾನೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಇಂದಿರಾನಗರ ಪೊಲೀಸರು ಆಗಮಿಸಿ ಪರಿಶೀಲಿಸಿ ಹತ್ಯೆಗೆ ಕಾರಣ ಏನು ಎನ್ನುವುದನ್ನು ತನಿಖೆ ನಡೆಸಿದ್ದಾರೆ. ಆದರೆ ಅಪಾರ್ಟ್ಮೆಂಟ್ ಒಳಗೆ ಇಬ್ಬರೇ ಹೋಗಿರುವುದರಿಂದ ಪ್ರಿಯಕರನಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಪ್ರಾಥಮಿಕ ಮಾಹಿತಿ ಸಂಗ್ರಹ ಮಾಡಿರುವ ಪೊಲೀಸರು ಆರೋಪಿ ಆರವ್ ಹಾರ್ನಿಗಾಗಿ ಬಲೆ ಬೀಸಿದ್ದಾರೆ.
ಅಪಾರ್ಟ್ಮೆಂಟ್ ಗೆ ಆಗಮಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನವೆಂಬರ್ 23ರಂದು ಮಧ್ಯಾಹ್ನ ಮಾಯಾ ಗೊಗೋಯ್ ಹಾಗೂ ಆರವ್ ಹಾರ್ನಿ ಇಬ್ಬರು ಒಟ್ಟಿಗೆ ತಂಗಲು ಅಪಾರ್ಟ್ಮೆಂಟ್ ಗೆ ಆಗಮಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 24 ರಂದೇ ಮಾಯಾ ಹತ್ಯೆ ಮಾಡಲಾಗಿರೊ ಶಂಕೆ ವ್ಯಕ್ತವಾಗಿದೆ. ಹತ್ಯೆ ಬಳಿಕ ಅದೇ ರೂಮ್ ನಲ್ಲಿಯೇ ಆರೋಪಿ ಆರವ್ ಹಾರ್ನಿ ಉಳಿದುಕೊಂಡಿದ್ದಾನೆ. ಮೃತದೇಹ ಜೊತೆಯಲ್ಲೇ ಕಾಲ ಕಳೆದಿದ್ದು, ಇಂದು ಬೆಳಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಅಪಾರ್ಟ್ಮೆಂಟ್ನಿಂದ ತೆರಳಿದ್ದಾನೆ.