ಮನುಷ್ಯನ ಸಾಮಾಜಿಕ ಬದುಕಿನಲ್ಲಿ ಮತ್ತು ಈ ಬದುಕು ರೂಪುಗೊಳ್ಳುವ ಸಾಂಸ್ಕೃತಿಕ ಪರಿಸರದಲ್ಲಿ ಬಹು ಮುಖ್ಯವಾಗಿ ಕಾಣಬೇಕಿರುವುದು ವ್ಯಕ್ತಿ ಸ್ವಾತಂತ್ರ್ಯದ ನೆಲೆಗಳು ಮತ್ತು ಈ ನೆಲೆಗಳನ್ನೇ ಆಧರಿಸಿ ನಿರ್ಮಿತವಾಗುವಂತಹ ವ್ಯಕ್ತಿತ್ವ. ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಯಾವುದೋ ಒಂದು ತಾತ್ವಿಕ ನೆಲೆಯನ್ನು, ಸೈದ್ಧಾಂತಿಕ ಚಿಂತನೆಯನ್ನು, ಆಲೋಚನೆಯ ವಾಹಿನಿಯನ್ನು ಮತ್ತು ಅಭಿವ್ಯಕ್ತಿಯ ಮಾಧ್ಯಮಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಸಾಂಪ್ರದಾಯಿಕ ಸಮಾಜಗಳಲ್ಲಿ ಈ ವಿಭಿನ್ನ ಆಯಾಮಗಳನ್ನು ಸಮಷ್ಟಿ ಪ್ರಜ್ಞೆಯಿಂದಷ್ಟೇ ನೋಡಲಾಗುತ್ತದೆ. ವ್ಯಷ್ಟಿ ಪ್ರಜ್ಞೆಯನ್ನೂ ಈ ಸಮಷ್ಟಿಯ ಒಂದು ಭಾಗವಾಗಿ ಕಾಣಲಾಗುತ್ತದೆ. ವ್ಯಕ್ತಿಯ ಚಿಂತನೆಗಳು ಮತ್ತು ಆಲೋಚನೆಗಳು ತನ್ನ ಸುತ್ತಲಿನ ಸಾಮಾಜಿಕ ಭೌತಿಕ ಪರಿಸರದಿಂದಲೇ ರೂಪುಗೊಳ್ಳುತ್ತದೆ ಎನ್ನುವುದು ಶತಃಸಿದ್ಧ. ಆದರೆ ಈ ಆಲೋಚನೆಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವಾಗ ಎದುರಾಗುವ ಸವಾಲುಗಳು ಹಲವು. ಸಾಮಾಜಿಕಾರ್ಥಿಕ ಸ್ಥಾನಮಾನ, ಸಾಂಸ್ಕೃತಿಕ ನೆಲೆ ಮತ್ತು ತನ್ನ ಸುತ್ತಲಿನ ವಾತಾವರಣದ ನಡುವೆಯೇ ವ್ಯಕ್ತಿ ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ.
ಈ ಪರಿಧಿಯಲ್ಲೇ ಸಾಮಾಜಿಕ ದೃಷ್ಟಿಕೋನಗಳೂ ರೂಪುಗೊಳ್ಳುತ್ತವೆ. ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯವನ್ನು ಸಮಷ್ಟಿಯ ದೃಷ್ಟಿಯಿಂದ ಹೇಗೆ ನೋಡಲಾಗುತ್ತದೆ ಎನ್ನುವುದಕ್ಕೆ ಆ ಸಮಾಜವನ್ನು ನಿಯಂತ್ರಿಸುವ ಒಂದು ಆಧ್ಯಾತ್ಮಿಕ ದೃಷ್ಟಿಕೋನ, ಮತೀಯ ಚಿಂತನೆ ಮತ್ತು ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟು ಸಹ ಕಾರಣವಾಗುತ್ತದೆ. ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಸದಾ ಚರ್ಚೆಯಲ್ಲಿರುವ ಇಂತಹ ಒಂದು ವಿದ್ಯಮಾನ ಎಂದರೆ ‘ ಅಪರಾಧ-ಅಪರಾಧಿ-ಅಪರಾಧದ ಜಗತ್ತು’. ನಾವು ಯಾವುದನ್ನು ಅಪರಾಧ ಎಂದು ಭಾವಿಸುತ್ತೇವೆ, ಯಾರನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸುತ್ತೇವೆ ಎನ್ನುವುದನ್ನೂ ಸಹ ಈ ಚೌಕಟ್ಟಿನ ಒಳಗೇ ನಿಷ್ಕರ್ಷೆ ಮಾಡಲಾಗುತ್ತದೆ. ಸಮಾಜದ ದೃಷ್ಟಿಯಲ್ಲಿ ಅಪರಾಧಿಯಾಗುವ ಒಬ್ಬ ವ್ಯಕ್ತಿ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಬೇಕಾದರೆ, ಈ ಎಲ್ಲ ಗಡಿರೇಖೆಗಳನ್ನೂ ಮೀರಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಭಾರತದಂತಹ ಜಾತಿಪೀಡಿತ ಸಮಾಜದಲ್ಲಿ ಇದು ಇನ್ನೂ ಹೆಚ್ಚು ಜಟಿಲ ಪ್ರಕ್ರಿಯೆಯಾಗಿರುತ್ತದೆ.
ಬ್ರಿಟೀಷ್ ವಸಾಹತುಶಾಹಿಯ ಸಂದರ್ಭದಲ್ಲಿ ಇಡೀ ಬುಡಕಟ್ಟು ಸಮುದಾಯಗಳನ್ನೇ ಕ್ರಿಮಿನಲ್ ಅಥವಾ ಅಪರಾಧಿ ಬುಡಕಟ್ಟುಗಳು ಎಂದು ವಿಷದೀಕರಿಸಿ ಕಾನೂನಿನ ವ್ಯಾಪ್ತಿಗೊಳಪಡಿಸಲಾಗಿತ್ತು. ಈ ಪರಂಪರೆ ಸ್ವತಂತ್ರ ಭಾರತದಲ್ಲೂ ಯಾವುದೋ ಒಂದು ರೀತಿಯಲ್ಲಿ ಹೇಗೆ ಜೀವಂತವಾಗಿದೆ ಎನ್ನುವುದನ್ನು ಇತ್ತೀಚಿನ ಜೈ ಭೀಮ್ ಚಿತ್ರ ಸ್ಪಷ್ಟವಾಗಿ ಬಿಂಬಿಸುತ್ತದೆ. ಕಾನೂನು ಮತ್ತು ಆಡಳಿತದ ಪರಿಧಿಯಿಂದಾಚೆಗೆ ನೋಡಿದಾಗಲೂ, ಭಾರತದ ಶ್ರೇಣೀಕೃತ ಜಾತಿವ್ಯವಸ್ಥೆಯಲ್ಲಿ, ಬೌದ್ಧಿಕ ನೆಲೆಯಲ್ಲೇ ಇಡೀ ಸಮುದಾಯಗಳನ್ನು ಅಪರಾಧಿ ಎಂದು ಪರಿಭಾವಿಸುವ ಪರಂಪರೆಯನ್ನೂ ಕಾಣುತ್ತೇವೆ. ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಗಳಿಗೊಳಗಾಗಿ ಊರ ಹೊರವಲಯಗಳಲ್ಲೇ ವಾಸಿಸುವ ಅನಿವಾರ್ಯತೆಯೊಂದಿಗೇ ಶತಮಾನಗಳನ್ನು ಸವೆಸಿದ ಅತಿಶೂದ್ರ, ಅಸ್ಪೃಶ್ಯ ಸಮುದಾಯಗಳು ಅಗ್ರಹಾರಗಳ ದೃಷ್ಟಿಯಲ್ಲಿ ದುಷ್ಟ ಕೇರಿಗಳಾಗಿಯೇ ಕಾಣುತ್ತಿದ್ದುದು ಇತಿಹಾಸದಲ್ಲಿ ಕಾಣುತ್ತದೆ. ಹಾಗಾಗಿಯೇ ಈ ಕೇರಿಗಳಲ್ಲಿ ವಾಸಿಸುವ ಜನರಿಗೆ ಮೂಲಭೂತ ವ್ಯಕ್ತಿಗತ ಸ್ವಾತಂತ್ರ್ಯವನ್ನೂ ನಿರಾಕರಿಸುವ ಕ್ರೂರ ವ್ಯವಸ್ಥೆಯನ್ನು ಪೇಶ್ವೆಗಳ ರಾಜ್ಯಭಾರದಲ್ಲಿ, ಕೇರಳದಲ್ಲಿ, ತಮಿಳುನಾಡಿನಲ್ಲಿ ಇತಿಹಾಸ ಗುರುತಿಸುತ್ತದೆ.
ಇವತ್ತಿನ ಭಾರತೀಯ ಸಮಾಜವೂ ಈ ಪೂರ್ವಗ್ರಹಗಳಿಂದ ಮುಕ್ತವಾಗಿಲ್ಲ. ಜಾತಿ ವ್ಯವಸ್ಥೆಯ ಬೇರುಗಳು ಇನ್ನೂ ಗಟ್ಟಿಯಾಗುತ್ತಿದ್ದು ಅಸ್ಪೃಶ್ಯ ಸಮುದಾಯಗಳು ಸಾರ್ವಜನಿಕ ವಲಯದಿಂದಾಚೆಗೆ, ಕೌಟುಂಬಿಕ ನೆಲೆಗಳಲ್ಲಿ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಇಂದಿಗೂ ಶೋಷಣೆಯನ್ನು ಎದುರಿಸುತ್ತಲೇ ಇವೆ. ಈ ಅಪರಾಧ ಎನ್ನುವ ಪರಿಕಲ್ಪನೆಯೂ ಸಹ ನಮ್ಮ ಸಮಾಜದಲ್ಲಿ ಜಾತಿ ಸಂಕೋಲೆಗಳಿಂದಲೇ ಬಂಧಿತವಾಗಿವೆ. ಇತ್ತೀಚೆಗೆ ತೀವ್ರ ಚರ್ಚೆಗೊಳಗಾಗಿರುವ ಹಂಸಲೇಖ ಅವರ ವಿವಾದದಲ್ಲಿ ಇದರ ಸೂಕ್ಷ್ಮಗಳನ್ನು ಕಾಣಬಹುದು. ಅಪರಾಧವೇ ಸಾಂಸ್ಥೀಕರಣಗೊಂಡಿರುವ ಒಂದು ಭ್ರಷ್ಟ ಸಮಾಜದಲ್ಲೂ, ಅಪರಾಧಿಗಳನ್ನು ಗುರುತಿಸುವಾಗ ಜಾತಿ ತರತಮಗಳು ಕಾರ್ಯೋನ್ಮುಖವಾಗುವುದನ್ನು ಇಂದಿಗೂ ಸಹ ಸಾರ್ವಜನಿಕ ವಲಯದಲ್ಲಿ, ಪೊಲೀಸ್ ಠಾಣೆಗಳಲ್ಲಿ, ನ್ಯಾಯಾಂಗದ ಅವರಣದಲ್ಲಿ ಕಾಣಬಹುದಾಗಿದೆ. ಸಾಮಾಜಿಕ ಬದುಕಿನಲ್ಲಿ ಅವಕಾಶವಂಚಿತರಾದ ಸಮುದಾಯಗಳು ಇಂದಿಗೂ ಸಹ ಕಾನೂನು ಮತ್ತು ನ್ಯಾಯ ವ್ಯವಸ್ಥೆಯ ಪರಿಧಿಯಲ್ಲಿ ಸುಲಭವಾಗಿ ಅಪರಾಧಿ ನೆಲೆಯಲ್ಲಿ ನಿಂತುಬಿಡುತ್ತವೆ. “ ಓ,,,,,, ಅವರಲ್ಲವೇ, ಆ ಜನಾನೇ ಹಾಗೆ ಬಿಡಿ,,, ಅಲ್ಲಿ ಅವೆಲ್ಲಾ ಮಾಮೂಲಿ,,,,” ಎಂಬ ಉದ್ಗಾರಗಳಿಗೇನೂ ಕೊರತೆಯಿಲ್ಲ.
ಇಷ್ಟೆಲ್ಲಾ ಪೀಠಿಕೆಗೆ ಕಾರಣವಾಗಿದ್ದು ಗೆಳೆಯ ಕೆ ಗೋವಿಂದರಾಜ್ ಅವರ ಮೂರು ಪುಸ್ತಕಗಳ ಓದು. ಗೋವಿಂದರಾಜ್ ಅವರ ಜೀವನ ಚರಿತ್ರೆ “ ಅಲಗಿನ ಮೊನೆಯ ಆಲಿಂಗನ ” , ಅವರ ಅನುಭವಾತ್ಮಕ ಕಥನ “ ಸರಳುಗಳ ಕಂದರ ಸರಪಳಿಗಳ ಪಂಜರ ” ಮತ್ತು ಆನಂದನಾರಾಯಣ ಮುಲ್ಲಾ ಅವರ ಜೈಲು ಬದುಕಿನ ಸುತ್ತ ಬರೆದಿರುವ “ ಜೀವಂತ ಶವಾಗಾರ ”, ಈ ಮೂರೂ ಪುಸ್ತಕಗಳು ಪರಸ್ಪರ ಕೊಂಡಿಯಂತೆಯೇ ಕಾಣುತ್ತವೆ ಅಪರಾಧ ಜಗತ್ತಿನಲ್ಲಿ ತನ್ನ ತಪ್ಪಿಲ್ಲದೆಯೇ, ತನ್ನ ಅಪರಾಧದ ಅರಿವಿಲ್ಲದೆಯೇ ಅಪರಾಧಿ ಸ್ಥಾನದಲ್ಲಿ ನಿಂತು ಕಾನೂನು ಶಿಕ್ಷೆಯನ್ನು ಅನುಭವಿಸಿ, ಅಪರಾಧ ಜಗತ್ತಿನ ಕರಾಳ ಮುಖಗಳೊಡನೆಯೇ, ಅಪರಾಧ ನಿಯಂತ್ರಿಸಲು ನಿಯೋಜಿಸಲಾಗಿರುವ ಪೊಲೀಸ್ ಮತ್ತು ಕಾನೂನು ವ್ಯವಸ್ಥೆಯ ಕರಾಳ ಮುಖಗಳನ್ನೂ ಪರಿಚಯಿಸುವ ಈ ಮೂರೂ ಕೃತಿಗಳು ಅಧ್ಯಯನ ಯೋಗ್ಯವಾಗುವುದು ಏಕೆಂದರೆ, ಈ ಬಿಳಿ ಹಾಳೆಗಳಲ್ಲಿ ನಮ್ಮ ಸಮಾಜದ ಗರ್ಭದಲ್ಲೇ ಅಡಗಿರುವ ಕರಾಳ ಮುಖವಾಡಗಳು ಒಂದೊಂದಾಗಿ ಕಳಚಿಕೊಳ್ಳುತ್ತಾ ಹೋಗುತ್ತವೆ. ತನ್ಮೂಲಕ ಸುಧಾರಿತ ಎಂದು ಕರೆಯಲ್ಪಡುವ ನಾಗರಿಕ ಜೀವನದಲ್ಲಿ ಅಡಗಿರಬಹುದಾದ ಸುಧಾರಣೆಗೊಳಪಡಬೇಕಾದ ಅನೇಕ ಸಂಗತಿಗಳು ಅನಾವರಣಗೊಳ್ಳುತ್ತಾ ಹೋಗುತ್ತದೆ.
ತಮ್ಮ ಜೀವನಾನುಭವವನ್ನು ತೆರೆದಿಡಲು ಗೋವಿಂದರಾಜು “ ಸರಳುಗಳ ಕಂದರ ,,,,” ಪುಸ್ತಕದ ಪ್ರತಿಯೊಂದು ಹಾಳೆಯನ್ನೂ ಜೀವಂತಿಕೆಯೊಡನೆ ದಾಖಲಿಸುತ್ತಾ ಹೋಗುತ್ತಾರೆ. ತಾವು ಹುಟ್ಟಿ ಬೆಳೆದ ಅಶೋಕಪುರಂ ಮತ್ತು ಅದರ ಸುತ್ತಲಿನ ಬದುಕಿನ ಚಿತ್ರಣವನ್ನು ಅದ್ಭುತವಾಗಿ ಕಟ್ಟಿಕೊಡುವ ಲೇಖಕರು ಇದರೊಂದಿಗೇ ಈ ಒಂದು ದ್ವೀಪದಲ್ಲಿ ನಡೆಯುವ ನಿತ್ಯ ಬದುಕಿನ ಘಟನೆಗಳು ಹೇಗೆ ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದೆ ಎನ್ನುವುದನ್ನೂ ಬಿಂಬಿಸುತ್ತಾರೆ. ದುಡಿಯುವ ವರ್ಗಗಳ ರಾಜಧಾನಿ ಎನ್ನಬಹುದಾದ ಅಶೋಕಪುರಂನಂತಹ ಒಂದು ಊರಿನಲ್ಲಿ ಇದ್ದಿರಬಹುದಾದ ಜಾತಿ ಭಿನ್ನತೆಗಳು, ತಾರತಮ್ಯಗಳು ಮತ್ತು ಹೊರಜಗತ್ತಿನ ಕಾಕದೃಷ್ಟಿಯ ನಡುವೆಯೇ ಈ ಒಂದು ಚಿಕ್ಕ ಊರಿನ ಸಾರ್ವಜನಿಕ ಬದುಕಿನ ನಡುವೆಯೇ ಬೆಳೆದುಬರುವ ಒಂದು ಅಪರಾಧ ಜಗತ್ತು ಹೇಗೆ ವ್ಯಕ್ತಿ ಜೀವನವನ್ನು ಪ್ರಭಾವಿಸುತ್ತವೆ ಎನ್ನುವುದನ್ನು ಲೇಖಕರು ಗುರುತಿಸುತ್ತಾ ಹೋಗುತ್ತಾರೆ. ಯಾವುದೇ ಒಂದು ಸಮಾಜದ ಬೆಳವಣಿಗೆಯಲ್ಲಿ ಸಂಭವಿಸಬಹುದಾದ ತಪ್ಪು ಒಪ್ಪುಗಳು ಅಶೋಕಪುರದಲ್ಲೂ ಸಂಭವಿಸುತ್ತವೆ. ಹೊರಜಗತ್ತಿನಲ್ಲಿ ತೆರೆಮರೆಯಲ್ಲಿ ನಡೆಯುವ ಹಲವಾರು ಚಟುವಟಿಕೆಗಳು ಇಂತಹ ದುಡಿಯುವ ವರ್ಗಗಳ ಸಮಾಜದಲ್ಲಿ ಬಹಿರಂಗವಾಗಿಯೇ ನಡೆಯುತ್ತದೆ.
ಅದು ಪುರುಷ ಪ್ರಧಾನ ದಬ್ಬಾಳಿಕೆಯೇ ಇರಬಹುದು. ಮೇಲ್ವರ್ಗದ ದೌರ್ಜನ್ಯವೇ ಇರಬಹುದು ಅಥವಾ ಮಹಿಳೆಯರ ಮೇಲಿನ ಶೋಷಣೆಯೇ ಇರಬಹುದು, ಶ್ರೀಮಂತಿಕೆಯ ಸೋಂಕು ಇಲ್ಲದ ಅಥವಾ ಐಷಾರಾಮಿ ಬದುಕಿನ ಪರಿಕಲ್ಪನೆಯೇ ಇಲ್ಲದ ಅಶೋಕಪುರದಂತಹ ಊರುಗಳಲ್ಲಿ ನೇರವಾಗಿಯೇ ಕಾಣುವಂತಿರುತ್ತದೆ. ಒಂದು ಶಿಕ್ಷಣ ವಂಚಿತ ಸಮಾಜ ಆಧುನಿಕ ಜಗತ್ತಿಗೆ ವಿಮುಖವಾಗಿಯೇ ಬೆಳೆಯುತ್ತಾ ಹೋಗುತ್ತದೆ. ಆದರೂ ಹೊರಜಗತ್ತಿಗೂ ಮಾರ್ಗದರ್ಶಿಯಾಗಬಹುದಾದ ಕೆಲವು ನಿಯಮಗಳನ್ನು ಅಶೋಕಪುರಂನಲ್ಲಿ ಲೇಖಕರು ಗುರುತಿಸುತ್ತಾರೆ. Federal in Structure Unitary in spirit ಎಂಬ ಭಾರತದ ಸಂವಿಧಾನದ ಆಶಯದಂತೆ ಈ ಪ್ರದೇಶದಲ್ಲೂ ಸಹ ಜನರು ತಮ್ಮ ಬದುಕು ಸವೆಸುವುದನ್ನು ಹೆಮ್ಮೆಯಿಂದ ನೆನೆಯುವುದು ಸಹಜವೇ ಆಗಿದೆ. ತನ್ನದೇ ಆದ ನೆಲ ಸಂಸ್ಕøತಿಯನ್ನು ಸಂರಕ್ಷಿಸಿಕೊಳ್ಳುತ್ತಲೇ, ಹೊರಜಗತ್ತಿನೊಡನೆ ಒಂದು ಸೌಹಾರ್ದಯುತ ಸಂಬಂಧವನ್ನು ಬೆಸೆದುಕೊಳ್ಳುವ ಅಶೋಕಪುರಂ ಪ್ರದೇಶದ ಶೋಷಿತ ವರ್ಗಗಳ ಕಥನ ಯಾವುದೇ ಸಮಾಜಶಾಸ್ತ್ರ ಅಧ್ಯಯನಕ್ಕೆ ಉತ್ತಮ ಸರಕು ಎನಿಸುತ್ತದೆ. ಸ್ವಾವಲಂಬನೆ ಮತ್ತು ಸ್ವಾಭಿಮಾನದ ನಡುವೆಯೇ ಇಲ್ಲಿ ಕಂಡುಬರುವ ಪಿತೃ ಪ್ರಧಾನ ವ್ಯವಸ್ಥೆಯ ದರ್ಪ ಮತ್ತು ದಬ್ಬಾಳಿಕೆ, ಹಾಗೆಯೆ ಕೌಟುಂಬಿಕ ನೆಲೆಯಲ್ಲಿ ವ್ಯಕ್ತವಾಗುವ ಮಾತೃ ಪ್ರಧಾನ ಧೋರಣೆ ಇವೆರಡರ ಬೆಸುಗೆಯನ್ನು ಬಯಸುವ ಸಮಾಜಶಾಸ್ತ್ರಜ್ಞರಿಗೆ ಅಶೋಕಪುರಂ ಒಂದು ಉದಾಹರಣೆಯಾಗಿ ಕಾಣಬಹುದು.
ಕೇರಿಯಲ್ಲಿ ನಡೆಯುತ್ತಿದ್ದ ಕಳ್ಳತನಗಳು, ಸಣ್ಣ ಪುಟ್ಟ ಅಪರಾಧಗಳು ಮತ್ತು ಇವುಗಳ ಪರಿಣಾಮ ಜೈಲು ವಾಸ ಇವೆಲ್ಲವನ್ನೂ ಗೋವಿಂದರಾಜು ಅವರು ಸಾಮಾಜಿಕ ನೆಲೆಯಲ್ಲಿ ವಿಶ್ಲೇಷಿಸುತ್ತಾ ಹೋಗುವ ಪರಿ ನಿಜಕ್ಕೂ ಗಮನಸೆಳೆಯುತ್ತದೆ. ಅಶೋಕಪುರಂ ಪ್ರದೇಶಕ್ಕೂ ಅಪರಾಧ ಲೋಕಕ್ಕೂ ಇರುವ ನಂಟು ಜೈಲಿನವರೆಗೂ ವಿಸ್ತರಿಸಿದಾಗ ಕಾನೂನು ಮತ್ತು ಸಮಾಜ ಈ ಪ್ರದೇಶದಲ್ಲಿನ ಇಡೀ ಸಮಾಜವನ್ನೇ ಹೇಗೆ ಅನುಮಾನದ ದೃಷ್ಟಿಯಿಂದ ನೋಡುತ್ತದೆ, ಹೇಗೆ ಅಪಮಾನಕರವಾಗಿ ನಡೆಸಿಕೊಳ್ಳುತ್ತದೆ ಎನ್ನುವುದನ್ನು ಬಿಂಬಿಸುವ ಹಲವು ಪ್ರಕರಣಗಳು ಈ ಹಾಳೆಗಳಲ್ಲಿ ತೆರೆದುಕೊಳ್ಳುತ್ತವೆ. ನಿತ್ಯ ಜೀವನಕ್ಕೆ ಅವಶ್ಯವಾದ ಆದಾಯದ ಕೊರತೆ ಸಹಜವಾಗಿಯೇ ಸಮಾಜದಲ್ಲಿ ಶಿಕ್ಷಣದ ಕೊರತೆಯನ್ನೂ ಸೃಷ್ಟಿಸುತ್ತದೆ. ದುಡಿದು ಬಳಲಿದ ಜೀವಿಗಳು ತಮ್ಮ ನಿತ್ಯ ಕಾಯಕದ ದಣಿವಾರಿಸಲು ಹೆಂಡ, ಸಾರಾಯಿ, ವೇಶ್ಯವಾಟಿಕೆಗಳಿಗೆ ಮುಂದಾಗುವ ಸಹಜ ಪ್ರವೃತ್ತಿ ಹೇಗೆ ತಮ್ಮ ಬಾಲ್ಯ ಜೀವನದಿಂದ ಯೌವ್ವನದವರೆಗಿನ ಹಾದಿಯಲ್ಲಿ ಪ್ರಭಾವಿಸಿತ್ತು ಎನ್ನುವುದನ್ನು ಲೇಖಕ ಗೋವಿಂದರಾಜು ಸಂವೇದನಾಶೀಲತೆಯಿಂದ ಗುರುತಿಸುತ್ತಾ ಹೋಗುತ್ತಾರೆ.
ತಾವು ಮಾಡದ ತಪ್ಪಿಗೆ ಅಥವಾ ಯಾವುದೋ ಒಂದು ವಿಷಗಳಿಗೆಯಲ್ಲಿ ಅಕಸ್ಮಾತ್ತಾಗಿ ಸಂಭವಿಸಿದ ಘಟನೆಗಳಿಗೆ ತಾವೇ ಗುರಿಯಾಗಿ ಜೈಲು ಶಿಕ್ಷೆ ಅನುಭವಿಸುವ ಗೋವಿಂದರಾಜು ಜೈಲಿನ ಅನುಭವಗಳನ್ನು ಒಬ್ಬ ಸಮಾಜಶಾಸ್ತ್ರಜ್ಞರ ನೆಲೆಯಲ್ಲಿ ನಿಂತು ತೆರೆದಿಡುತ್ತಾರೆ. ಬ್ಯಾಂಕ್ ವೃತ್ತಿಯಲ್ಲಿದ್ದು ನಂತರ ತಮ್ಮ ವಕೀಲಿ ವೃತ್ತಿಯನ್ನು ಮುಂದುವರೆಸುತ್ತಿರುವ ಲೇಖಕರು, ನ್ಯಾಯ ವ್ಯವಸ್ಥೆಯ ದೃಷ್ಟಿಯಲ್ಲಿ ಈ ದೇಶದ ಜೈಲುಗಳು ಹೇಗಿರಬೇಕು ಆದರೆ ಹೇಗಿದೆ ಎನ್ನುವುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಗೋವಿಂದರಾಜು ಅವರ ಜೈಲು ಅನುಭವಗಳನ್ನು ಓದುತ್ತಾ ಹೋದಂತೆ ಮೈ ಝುಂ ಎನ್ನುತ್ತದೆ. ಜೈ ಭೀಮ್ ಚಿತ್ರದಲ್ಲಿ ತೋರಿಸಿರುವ ಪೊಲೀಸರ ದೌರ್ಜನ್ಯ ಅತಿಯಾಯಿತು ಎನ್ನುವವರು ಈ ಮೂರೂ ಪುಸ್ತಕಗಳನ್ನು ಒಮ್ಮೆ ಓದಿದರೆ ಒಳಿತು. ಕಾನೂನುಬದ್ಧವಾಗಿ ಶಿಕ್ಷೆಗೊಳಗಾಗಬೇಕಾದ ಬಂಧಿಗಳು, ಕಾನೂನು ಸಮ್ಮತವಲ್ಲದ ಚಿತ್ರಹಿಂಸೆಗೊಳಗಾಗುವ ಒಂದು ಸುದೀರ್ಘ ಚರಿತ್ರೆಯನ್ನೇ ಲೇಖಕ ಗೋವಿಂದರಾಜು ಮೂರೂ ಪುಸ್ತಕಗಳಲ್ಲಿ ಹಿಡಿದಿಟ್ಟಿದ್ದಾರೆ.
Criminals are not born they are made ಎಂಬ ಆಂಗ್ಲ ನಾಣ್ಣುಡಿ ಇದೆ. ಸಮಾಜದಲ್ಲಿ ಅಪರಾಧಿಗಳೇ ಜನಿಸುವುದಿಲ್ಲ, ಸಮಾಜವೇ ಅಪರಾಧಿಗಳನ್ನು ಸೃಷ್ಟಿಸುತ್ತದೆ. ಬಡತನ, ದಾರಿದ್ರ್ಯ, ದೌರ್ಜನ್ಯ, ದಬ್ಬಾಳಿಕೆ, ಶೋಷಣೆ ಇವೆಲ್ಲವೂ ಅಪರಾಧಗಳನ್ನು ಹುಟ್ಟುಹಾಕುವ, ಅಪರಾಧಿಗಳನ್ನು ಸೃಷ್ಟಿಸುವ ಸಾಧನಗಳು. ಆದರೂ ನಮ್ಮ ಆಧುನಿಕ ಸಮಾಜವೂ ಸಹ ಅಪರಾಧಿಯನ್ನು ವಿಭಿನ್ನ ದೃಷ್ಟಿಕೋನದಿಂದಲೇ ನೋಡುತ್ತದೆ. ಯಾವುದೇ ಪ್ರಮಾಣದ, ಎಷ್ಟೇ ಗಂಭೀರ ಅಪರಾಧವನ್ನು ಎಸಗಿದವನಲ್ಲೂ ಒಂದು ಮಾನವ ಸಂವೇದನೆಯ ಸೂಕ್ಷ್ಮ ಎಳೆ ಜೀವಂತವಾಗಿರುತ್ತದೆ ಎನ್ನುವುದನ್ನು ಗೋವಿಂದರಾಜ್ ವೀರಪ್ಪನ್ ಸಹಚರ ಅನ್ಬುರಾಜ್ (ಅಲಗಿನ ಮೊನೆಯ,,,,,, ಪುಸ್ತಕ) ಅವರ ಅನುಭವಗಳಲ್ಲಿ ಸ್ಪಷ್ಟವಾಗಿ ಬಿಡಿಸಿಡುತ್ತಾರೆ. ಓರ್ವ ಕೊಲೆಪಾತನಕನಾಗಿ, ಉಗ್ರವಾದಿಯಾಗಿ ಬಂಧಿತನಾಗುವ ಅನ್ಬುರಾಜ್ ಕಲಾವಿದನಾಗಿ, ಕಲಾಪೋಷಕನಾಗಿ ಹೊರಬರಲು ಎರಡು ದಶಕಗಳೇ ಬೇಕಾಗುತ್ತವೆ.
ಯಾವುದೇ ಅಪರಾಧ ಎಸಗದೆಯೂ ಅಥವಾ ಒಂದು ಸಣ್ಣ ಅಪರಾಧ ಎಸಗಿ, ಜೈಲು ಶಿಕ್ಷೆ ಅನುಭವಿಸಿ, ವರುಷಗಳ ಕಾಲ ಸೆರೆಮನೆಯಲ್ಲಿದ್ದು, ಕೊನೆಗೆ ನಿರಪರಾಧಿಯಾಗಿ ಹೊರಬರುವ ವ್ಯಕ್ತಿಯ ಮನದ ತುಮುಲಗಳನ್ನು ಗೋವಿಂದರಾಜ್ ತಮ್ಮ ಪುಸ್ತಕಗಳಲ್ಲಿ ಅದ್ಭುತವಾಗಿ ತೆರೆದಿಡುತ್ತಾರೆ. ಕಳೆದ ಮೂರು ದಶಕಗಳಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕುವ ಪ್ರಭುತ್ವದ ನೀತಿಗೆ ಬಲಿಯಾಗಿರುವ ಅಮಾಯಕರ ಸಂಖ್ಯೆ ಹೇರಳವಾಗಿದೆ. ಈ ರೀತಿ ಕಾನೂನು ವ್ಯವಸ್ಥೆಯ ಅಪಕಲ್ಪನೆಗೆ ಬಲಿಯಾಗಿ ಸಮಾಜದ ದೃಷ್ಟಿಯಲ್ಲಿ ಅವಮಾನಿತರಾಗುವ, ಅನುಮಾನಿತರಾಗುವ ವ್ಯಕ್ತಿಗಳು ನಂತರದ ಬದುಕಿನಲ್ಲಿ ಎದುರಿಸಬೇಕಾದ ವಾಸ್ತವ ಬದುಕಿನ ಸನ್ನಿವೇಶಗಳನ್ನು ಲೇಖಕ ಗೋವಿಂದರಾಜ್ ತಮ್ಮ “ ಅಲಗಿನ ಮೊನೆಯ,,,,” ಮತ್ತು “ ಸರಳುಗಳ ಕಂದರ,,,,,” ಪುಸ್ತಕಗಳಲ್ಲಿ ಹೃದಯ ತಟ್ಟುವಂತೆ ವಿವರಿಸುತ್ತಾರೆ. ನಾಗರಿಕತೆಯ ಉತ್ತುಂಗ ತಲುಪಿದ್ದೇವೆ, ಪ್ರಜಾಪ್ರಭುತ್ವವನ್ನೇ ಉಸಿರಾಡುತ್ತಿದ್ದೇವೆ ಎಂದು ಹೆಮ್ಮೆಯಿಂದ ಎದೆತಟ್ಟಿಕೊಳ್ಳುವ ಪ್ರತಿಯೊಬ್ಬ ಭಾರತದ ಪ್ರಜೆಗೂ, ಅಪರಾಧ ಜಗತ್ತಿನ, ಕಾನೂನು ಜಗತ್ತಿನ ಈ ಕರಾಳ ಮುಖಗಳ ಪರಿಚಯವಾಗುವುದು ಅತ್ಯವಶ್ಯಕ ಎನಿಸುತ್ತದೆ.
ಬ್ಯಾಂಕ್ ಸೇವೆಯಲ್ಲಿದ್ದುಕೊಂಡು ಜನಜೀವನದೊಡನೆ ಅವಿನಾಭಾವ ಸಂಬಂಧಗಳನ್ನು ಪೋಣಿಸಿಕೊಂಡೇ ಬಂದಿರುವ ಲೇಖಕ ಗೋವಿಂದರಾಜ್, ತಮ್ಮ ವಕೀಲ ವೃತ್ತಿಯ ಮೂಲಕ ಜನರ ಬದುಕಿನ ಸಮಸ್ಯೆಗಳಿಗೆ ಮುಖಾಮುಖಿಯಾಗುವ ಮೂಲಕ ತಮ್ಮ ಅನುಭವಾತ್ಮಕ ಅಭಿವ್ಯಕ್ತಿಯನ್ನು ಸಮಾಜಮುಖಿಯಾಗಿಸುತ್ತಿದ್ದಾರೆ. ಈ ಮೂರೂ ಪುಸ್ತಕಗಳಲ್ಲಿನ ಕಾವ್ಯಾತ್ಮಕ ಭಾಷೆ ಮತ್ತು ಮನ ತಟ್ಟುವ ಸಂವೇದನಾತ್ಮಕ ಶೈಲಿ ಜನಸಾಮಾನ್ಯರ ಬದುಕಿನ ವಾಸ್ತವಗಳಿಗೆ ಓದುಗರನ್ನು ಮುಖಾಮುಖಿಯಾಗಿಸುತ್ತದೆ. ಓರ್ವ ಕವಿಯಾಗಿ, ಸಾಹಿತ್ಯೋಪಾಸಕರಾಗಿ ಭಾಷಾ ಪ್ರೌಢಿಮೆಯೊಂದಿಗೆ ಮೂರೂ ಪುಸ್ತಕಗಳನ್ನು ರಚಿಸಿರುವ ಗೆಳೆಯ ಗೋವಿಂದರಾಜ್, ಈ ಕೃತಿಗಳ ಮೂಲಕವೇ ನಮ್ಮ ಸುತ್ತಲಿದ್ದುಕೊಂಡೇ ನಮ್ಮರಿವಿಗೆ ಬಾರದ ಒಂದು ಕರಾಳ ಜಗತ್ತಿನ ಪರಿಚಯವನ್ನು ಮಾಡಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಇದು ಮೈಸೂರಿನ ಇಂದಿನ ಒಂದು ಬಡಾವಣೆ ಅಥವಾ ಅಂದಿನ ನೆರೆ ಊರಿನ ಕಥಾನಕವೇ ಆದರೂ ಈ ಕಥನಗಳಲ್ಲಿ ಅಂತರ್ಗತವಾಗಿರುವ ಸಾಮಾಜಿಕ ಸೂಕ್ಷ್ಮಗಳು ಮತ್ತು ಸಾಂಸ್ಕೃತಿಕ ತಲ್ಲಣಗಳು ಸರ್ವವ್ಯಾಪಿಯಾದವು.
ಈ ಮೂರೂ ಪುಸ್ತಕಗಳನ್ನು ಓದಿ ಅದರೊಳಗಿನ ಸಾಮಾಜಿಕ-ಸಾಂಸ್ಕೃತಿಕ ಪಲ್ಲಟಗಳನ್ನು ಸಮಕಾಲೀನ ಸಂದರ್ಭದ ಸಾಮಾಜಿಕ ಜಗತ್ತಿಗೆ ಮುಖಾಮುಖಿಯಾಗಿಸಿ, ನಮ್ಮ ಅರಿವಿಗೆ ಬಾರದ ಒಂದು ಜಗತ್ತಿನ ನಡುವೆಯೇ ನಾವು ಬದುಕುತ್ತಿದ್ದೇವೆ ಎಂಬ ಅರಿವನ್ನು ಓದುಗರು ಮೂಡಿಸಿಕೊಂಡರೆ, ಅದೇ ಮಾನ್ಯ ಗೋವಿಂದರಾಜು ಅವರ ಸ್ತುತ್ಯಾರ್ಹ ಅಕ್ಷರ ಗಣಿಗೆ ಸಲ್ಲಿಸಬಹುದಾದ ಅಭಿನಂದನೆ.