ಬೆಂಗಳೂರು: ನ್ಯಾಯಾಲಯ ಹೊರಡಿಸಿದ್ದ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ದಾಖಲಾದ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರು ಹೈಕೋರ್ಟ್‌ನಲ್ಲಿ ಬೇಷರತ್ ಕ್ಷಮೆ ಕೋರಿರುವುದೇ ಅಲ್ಲದೆ, ಆರು ತಿಂಗಳ ಕಾಲ ಪ್ರತಿ ತಿಂಗಳಲ್ಲಿ ಒಂದು ದಿನ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
ಆ ಮುಚ್ಚಳಿಕೆ ಮತ್ತು ಬೇಷರತ್ ಕ್ಷಮಾಪಣೆ ಪ್ರಮಾಣಪತ್ರವನ್ನು ಒಪ್ಪಿರುವ ನ್ಯಾಯಾಲಯ, ವೈದ್ಯೆ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಟ್ಟಿದೆ. ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿ, ಸಿಜೆ ಪಿ.ಬಿ ವರ್ಲೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಆಗ ಖುದ್ದು ವಿಚಾರಣೆಗೆ ಹಾಜರಾದ 33 ವರ್ಷದ ವೈದ್ಯೆ, ತಮ್ಮ ತಪ್ಪಿಗೆ ಬೇಷರತ್ ಕ್ಷಮೆ ಕೋರಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದರು. ಜತೆಗೆ, ಭವಿಷ್ಯದಲ್ಲಿ ತಮ್ಮ ವಿರುದ್ಧ ನ್ಯಾಯಾಲಯವು ಯಾವುದೇ ಕ್ರಮ ತೆಗೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗದಂತೆ ನಡೆದುಕೊಳ್ಳಲಾಗುವುದು. ಆ ಮಾತನ್ನು ಸಾಬೀತುಪಡಿಸಲು ಮುಂದಿನ ಆರು ತಿಂಗಳ ಕಾಲ ತಿಂಗಳಲ್ಲಿ ಒಂದು ದಿನ ಪೂರ್ತಿ ಬೆಂಗಳೂರಿನ ಯಾವುದಾದರೂ ಸರಕಾರಿ ಆಸ್ಪತ್ರೆಯಲ್ಲಿ ಸಂಬಂಧಪಟ್ಟ ಮುಖ್ಯಸ್ಥರು, ಸಿವಿಲ್ ಸರ್ಜನ್ ಅಥವಾ ನಿರ್ದೇಶಕರ ಪೂರ್ವಾನುಮತಿ ಪಡೆದು ಸಮುದಾಯ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಸಹ ಬರೆದುಕೊಟ್ಟರು.