ಬಹುನಿರೀಕ್ಷಿತ 17ನೇ ಆವೃತ್ತಿಯ IPL 2024ರ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(CSK) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡಗಳು ಹಣಾಹಣಿ ನಡೆಸಲಿವೆ. ಈ ಬಾರಿಯ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮೊದಲ 17 ದಿನಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಪ್ರಸಕ್ತ ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದ್ದು, ಟೂರ್ನಿಯ ಆರಂಭಿಕ 17 ದಿನಗಳ ವೇಳಾಪಟ್ಟಿಯಲ್ಲಿ ಒಟ್ಟು 21 ಪಂದ್ಯಗಳು ನಡೆಯಲಿವೆ. ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಚೆನ್ನೈ ಹಾಗೂ ಬೆಂಗಳೂರು ತಂಡಗಳು ಐಪಿಎಲ್ ಟೂರ್ನಿಯಲ್ಲಿ 9ನೇ ಬಾರಿಗೆ ಮುಖಾಮುಖಿಯಾಗಲಿವೆ.
![](https://pratidhvani.com/wp-content/uploads/2024/02/IPL-2024-1024x672.webp)
ಪಂದ್ಯಾವಳಿಯ ಎರಡನೇ ದಿನವಾದ ಮಾರ್ಚ್ 23ರಂದು ಪ್ರಸಕ್ತ ಟೂರ್ನಿಯ ಮೊದಲ ಡಬಲ್ ಹೆಡರ್ ಪಂದ್ಯ ನಡೆಯಲಿದ್ದು, ಮೊಹಾಲಿಯಲ್ಲಿ ನಡೆಯುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಹಣಾಹಣಿ ನಡೆಸಲಿದ್ದು, ದಿನದ 2ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದ್ರಾಬಾದ್ ತಂಡಗಳು ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಮುಖಾಮುಖಿಯಾಗಲಿವೆ.
![](https://pratidhvani.com/wp-content/uploads/2024/02/IPL-819x1024.webp)
ಮಾರ್ಚ್ 24ರಂದು ನಡೆಯುವ ಟೂರ್ನಿಯ ಎರಡನೇ ಡಬಲ್-ಹೆಡರ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಜೈಪುರ್ನಲ್ಲಿ ಮುಖಾಮುಖಿಯಾಗಲಿದ್ದು, ದಿನದ 2ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಅಹ್ಮದಾಬಾದ್ನಲ್ಲಿ ಕಾದಾಟ ನಡೆಸಲಿವೆ. ಈ ಬಾರಿಯ ಟೂರ್ನಿಯಲ್ಲಿ ದಿನದ ಪಂದ್ಯಗಳು ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದ್ದು, ಡಬಲ್-ಹೆಡರ್ ದಿನದಂದು ನಡೆಯುವ 2ನೇ ಪಂದ್ಯಗಳು ರಾತ್ರಿ 7:30ಕ್ಕೆ ಪ್ರಾರಂಭವಾಗಲಿದೆ.
#IPL2024 #CSK #RCB #schedule #21 matches