ಬುಡಕಟ್ಟು ಮಹಿಳೆಯನ್ನು ಆಕೆಯ ಪತಿಯೇ ಬೆತ್ತಲುಗೊಳಿಸಿ ಮೆರವಣಿಗೆ ನಡೆಸಿರುವ ಘಟನೆ ರಾಜಸ್ಥಾನ ಪ್ರತಾಪಗಢದ ಜಿಲ್ಲೆಯಲ್ಲಿ ಶನಿವಾರ (ಸೆಪ್ಟೆಂಬರ್ 2) ವರದಿಯಾಗಿದೆ.
ಪತ್ನಿಯ ಅನೈತಿಕ ಸಂಬಂಧ ಆರೋಪಿಸಿ ಪತಿ ಅಮಾನವೀಯ ಕೃತ್ಯ ಎಸಗಿದ್ದಾನೆ ಎಂದು ಧರಿಯಾವಾಡದ ಎಸ್ಎಚ್ಒ ಪೇಶಾವರ್ ಖಾನ್ ತಿಳಿಸಿದ್ದಾರೆ.
ಸಾರ್ವಜನಿಕವಾಗಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಆಕೆಯನ್ನು ಬೆತ್ತಲು ಮೆರವಣಿಗೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಜಸ್ಥಾನ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಆರೋಪಿಗಳನ್ನು ಬಂಧಿಸಲು ಆರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರಾ ಹೇಳಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಗೆಹಲೋತ್ ‘ಇಂತಹ ಘಟನೆಗಳಿಗೆ ಸುಸಂಸ್ಕೃತ ಸಮಾಜದಲ್ಲಿ ಸ್ಥಾನವಿಲ್ಲ’ ಶೀಘ್ರವೇ ಆರೋಪಿಯನ್ನು ಬಂಧಿಸಿ ನ್ಯಾಯಾಲಯ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿದ್ದಾರೆ.
ಜನರ ಮುಂದೆ ಗರ್ಭಿಣಿ ಮಹಿಳೆಯನ್ನು ವಿವಸ್ತ್ರಗೊಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಆದರೆ, ಆಡಳಿತ ಮಂಡಳಿಗೆ ಇದರ ಅರಿವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಆರೋಪಿಸಿದ್ದಾರೆ.
ಈ ಘಟನೆಯು ರಾಜಸ್ಥಾನಕ್ಕೆ ನಾಚಿಕೆಗೇಡಾಗಿದ್ದು, ವಿಡಿಯೊವನ್ನು ಹಂಚಿಕೊಳ್ಳದಂತೆ ಬಿಜೆಪಿ ನಾಯಕರು ಜನರಿಗೆ ಮನವಿ ಮಾಡಿದ್ದಾರೆ.