ಭಾರತವು ಹಸಿವಿನ ಸೂಚ್ಯಂಕದಲ್ಲಿ 94ನೇ ಸ್ಥಾನದಿಂದ 101ನೇ ಸ್ಥಾನಕ್ಕೆ ಕುಸಿದಿದೆ ಎಂದು 2021 ರ ಜಾಗತಿಕ ಹಸಿವಿನ ಸೂಚ್ಯಂಕ (GHI) ವರದಿಯನ್ನು ಪ್ರಕಟಿಸಿತ್ತು. ಈ ವರದಿಯು ಭಾರತವನ್ನು ಜಿಎಚ್‌ಐ ತೀವ್ರತೆಯ ಮಾಪಕದಲ್ಲಿ ‘ಗಂಭೀರ’ ವರ್ಗಕ್ಕೆ ಸೇರಿದೆ. ಪರಿಶೀಲನೆಗೆ ಒಳಪಟ್ಟ 116 ದೇಶಗಳಲ್ಲಿ ಭಾರತವು ಪಾಕಿಸ್ತಾನ (92), ನೇಪಾಳ (76), ಮತ್ತು ಬಾಂಗ್ಲಾದೇಶ (76) ನಂತಹ ಕೆಲವು ನೆರೆಹೊರೆಯವರನ್ನು ಹಿಂದಿಕ್ಕಿದೆ. ಈ ವರದಿ ಪ್ರಕಟವಾದ ನಂತರ ಕೇಂದ್ರ ಸರ್ಕಾರವು ಎಲ್ಲಾ ಕಡೆಯಿಂದಲೂ ಟೀಕೆಯನ್ನು ಎದುರಿಸಿತ್ತು. ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ “
1) ಬಡತನ
2) ಹಸಿವು
3) ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡುವುದು
4) ನಮ್ಮ ಡಿಜಿಟಲ್ ಆರ್ಥಿಕತೆಗಾಗಿ
5) ………………
ನಿರ್ಮೂಲನೆ ಮಾಡಿರುವುದಕ್ಕೆ ಮೋದಿ ಜೀ ಅವರಿಗೆ ಅಭಿನಂದನೆಗಳು.
ಜಾಗತಿಕ ಹಸಿವಿನ ಸೂಚ್ಯಂಕ:
2020: ಭಾರತ 94 ನೇ ಸ್ಥಾನದಲ್ಲಿತ್ತು
2021: ಭಾರತ 101 ನೇ ಸ್ಥಾನದಲ್ಲಿದೆ” ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೆಟ್ಟಿಗರಿಂದ ವ್ಯಾಪಕವಾಗಿ ಶೇರ್ ಮಾಡಲ್ಪಟ್ಟಿತ್ತು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರವು “ಜಿಒಐ ಪ್ರಕಟಿಸಿರುವ ಸೂಚ್ಯಂಕವು ವಾಸ್ತವಾಂಶಗಳು ಮತ್ತು ಫ್ಯಾಕ್ಟ್ಸ್‌ಗಳನ್ನು ಕಡೆಗಣಿಸಿವೆ ಮತ್ತು ಗಂಭೀರ ಕ್ರಮಶಾಸ್ತ್ರೀಯ ಸಮಸ್ಯೆಗಳಿಂದ ಬಳಲುತ್ತಿದೆ ” ಎಂದು ಹೇಳಿದೆ.
“ತಲಾ ಆಹಾರ ಧಾನ್ಯಗಳ ಲಭ್ಯತೆಯಂತಹ ಅಪೌಷ್ಟಿಕತೆಯನ್ನು ಅಳೆಯಲು ಯಾವುದೇ ವೈಜ್ಞಾನಿಕ ವಿಧಾನವನ್ನು ಬಳಸಲಾಗಿಲ್ಲ. ಪೌಷ್ಟಿಕಾಂಶದ ಕೊರತೆಯ ವೈಜ್ಞಾನಿಕ ಅಳತೆಗೆ ತೂಕ ಮತ್ತು ಎತ್ತರವನ್ನು ಅಳೆಯುವ ಅಗತ್ಯವಿರುತ್ತದೆ, ಆದರೆ ಇಲ್ಲಿ ಜನಸಂಖ್ಯೆಯ ಟೆಲಿಫೋನಿಕ್ ಅಂದಾಜಿನ ಆಧಾರದ ಮೇಲೆ ಅಂಕಿ ಅಂಶಗಳನ್ನು ನೀಡಲಾಗಿದೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಅಧಿಕೃತ ಹೇಳಿಕೆಯನ್ನು ನೀಡಿದೆ.”ಡಾಟಾ ಲಭ್ಯವಿದ್ದರೂ, ಕೋವಿಡ್ ಅವಧಿಯಲ್ಲಿ ಭಾರತದಲ್ಲಿನ ಬೃಹತ್ ಜನಸಂಖ್ಯೆಯ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಸರ್ಕಾರದ ಪ್ರಯತ್ನವನ್ನು ವರದಿಯು ಸಂಪೂರ್ಣವಾಗಿ ನಿರ್ಲಕ್ಷಿಸಿದೆ” ಎಂದೂ ಸಚಿವಾಲಯವು ದೂರಿದೆ.

ಆದರೆ GHI ಅನ್ನು ನಾಲ್ಕು ಸೂಚಕಗಳನ್ನು ಬಳಸಿ ನಿರ್ಧರಿಸಲಾಗುತ್ತದೆ . ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನಸಂಖ್ಯೆಯ ಶೇಕಡಾವಾರು ಮತ್ತು ದುರ್ಬಲತೆ, ಬೆಳವಣಿಗೆಯಲ್ಲಿನ ಕುಂಠಿತತೆ ಮತ್ತು ಐದು ವರ್ಷದೊಳಗಿನ ಮಕ್ಕಳ ಮರಣದ ಶೇಕಡಾವಾರನ್ನು ಬಳಸಿ ವರದಿ ತಯಾರಿಸಲಾಗುತ್ತದೆ. ಜಿಎಚ್ಐ ತಯಾರಿಸಿರುವ ಪ್ರಸ್ತುತ ವರದಿಯ ಡೇಟಾವನ್ನು ವಿಶ್ವಸಂಸ್ಥೆ ಮತ್ತು ಇತರ ಏಜೆನ್ಸಿಗಳಿಂದ ಪಡೆಯಲಾಗಿದೆ.
ಈ ವರದಿಯ ಪ್ರಕಾರ ಭಾರತದ ಜಾಗತಿಕ ಹಸಿವಿನ ಸೂಚ್ಯಂಕ ಸ್ಕೋರ್ 27.5 ಆಗಿದೆ. ಇದು ಕಳೆದ ವರ್ಷದ 27.2 ಗಿಂತ ಸಣ್ಣ ಮಟ್ಟದಲ್ಲಿ ಸುಧಾರಣೆಯನ್ನು ಕಂಡಿದೆ. ಆದರೆ ಈ ಸಂಖ್ಯೆಯು ಇನ್ನೂ ಭಾರತವನ್ನು ‘ಗಂಭೀರ’ ವರ್ಗದಲ್ಲಿ ಇರಿಸುತ್ತದೆ. ನೇಪಾಳ ಮತ್ತು ಭೂತಾನ್ ಅನ್ನು ‘ಮಧ್ಯಮ’ ವರ್ಗದಲ್ಲಿ ಇರಿಸಲಾಗಿದೆ. ಮಕ್ಕಳ ದುರ್ಬಲತೆಯ ವಿಷಯದಲ್ಲಿ ಅಂದರೆ ಮಕ್ಕಳ ಅಪೌಷ್ಟಿಕತೆಯಲ್ಲಿ ಕಳೆದ ವರ್ಷವೂ ಭಾರತವು ಅತ್ಯಂತ ಕೆಟ್ಟ ಸ್ಥಿತಿಯಲ್ಲಿತ್ತು. ಈ ವರ್ಷವೂ ಅದೇ ಸ್ಥಿತಿಯಲ್ಲಿದೆ.

“ಜಾಗತಿಕ ಹಸಿವಿನ ಸೂಚ್ಯಂಕವನ್ನು ಆಧರಿಸಿದ ಪ್ರಸ್ತುತ ದತ್ತಾಂಶವು ಒಟ್ಟಾರೆಯಾಗಿ ಜಗತ್ತು ಮತ್ತು ನಿರ್ದಿಷ್ಟವಾಗಿ 47 ದೇಶಗಳು 2030 ರ ವೇಳೆಗೆ ‘ಕಡಿಮೆ ಹಸಿವ’ನ್ನು ಸಹ ಸಾಧಿಸಲು ವಿಫಲವಾಗುತ್ತವೆ” ಎಂದು ಹೇಳಿರುವ ವರದಿಯು “ಶೂನ್ಯ ಹಸಿವು ಎನ್ನುವ ಕಲ್ಪನೆಯನ್ನು ಸಾಕಾರಗೊಳಿಸುವುದು ಅಸಾಧ್ಯ ಅನ್ನುವಷ್ಟು ದೂರದಲ್ಲಿದೆ” ಎಂದು ವಿಷಾದ ವ್ಯಕ್ತಪಡಿಸಿದೆ.







