ಕಳೆದ ಹದಿನೈದು ದಿನದಲ್ಲಿ ಎಲ್ ಪಿಜಿ(ಗೃಹ ಬಳಕೆ ಅಡುಗೆ ಅನಿಲ) ಬೆಲೆ ಎರಡು ಬಾರಿ ಏರಿಕೆಯಾಗಿ, 50 ರೂ. ಹೆಚ್ಚಾಗಿದೆ. ಹಾಗಾಗಿ ಒಂದು ಸಿಲಿಂಡರ್ ಬೆಲೆ ಈಗ ಸರಿಸುಮಾರು 900 ರೂ.ಗೆ ತಲುಪಿದೆ. ಪೆಟ್ರೋಲ್ ಬೆಲೆ ಲೀಟರಿಗೆ 105 ಆಗಿದ್ದರೆ, ಡೀಸೆಲ್ ಬೆಲೆ ಕೂಡ 91 ರೂ. ಗೆ ಮುಟ್ಟಿದೆ.
ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ಏರಿಕೆ ಎಂದರೆ, ಬಡವರು, ಮಧ್ಯಮವರ್ಗದವರ ಪಾಲಿನ ನರಕ ಎಂದೇ ಅರ್ಥ. ಹಾಗಾಗಿಯೇ ಇಂಧನ ಬೆಲೆ ಏರಿಕೆಯ ವಿಷಯ ವ್ಯಾಪಕ ಚರ್ಚೆಯ, ಹೋರಾಟದ, ಪ್ರತಿಭಟನೆಯ ವಿಷಯವಾಗುವುದು ಸಹಜ. ಆದರೆ, ಪ್ರಧಾನಿ ಮೋದಿಯವರು ಏಳು ವರ್ಷಗಳ ಹಿಂದೆ ಅಚ್ಛೇದಿನ ಭರವಸೆ ಮೇಲೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಇಂಧನ ಬೆಲೆ ಏರಿಕೆ ಕೂಡ ದೇಶಪ್ರೇಮ ಮತ್ತು ದೇಶದ್ರೋಹದ ಸಂಗತಿಯಾಗಿ ಬದಲಾಗಿದೆ. ಹಾಗಾಗಿ ಈಗ ಬೆಲೆ ಏರಿಕೆಯ ಬಿಸಿ ಸುಡುತ್ತಿದ್ದರೂ.. ‘ಅದೆಲ್ಲಾ ಏನು ಮಾಡೋಕೆ ಆಗಲ್ಲ, ತಡಕೋಬೇಕು’ ಎಂಬ ದೇಶಭಕ್ತಿಯ ಹುಸಿ ವರಸೆಗಳೂ ಇವೆ. ಆದರೆ, ಅಂತಿಮವಾಗಿ ಇಂತಹ ರಾಜಕೀಯ ವರಸೆಗಳ ಆಚೆಗೆ ಜನಸಾಮಾನ್ಯರ ಬದುಕು ಮಾತ್ರ ಬೇಯುತ್ತಿದೆ.
ಹಾಗಾಗಿ ಅಚ್ಛೇದಿನ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಂತಹ ಪೊಳ್ಳು ಭರವಸೆಗಳ ಭ್ರಮೆ ಕಳಚತೊಡಗಿದಂತೆ ಸರ್ಕಾರದ ಜನವಿರೋಧಿ ನಡೆಗಳ ವಿರುದ್ಧ ಜನಾಕ್ರೋಶ ಕೂಡ ಮಡುವುಗಟ್ಟತೊಡಗಿದೆ. ಅಚ್ಛೇದಿನ ಎಂಬುದು ದೇಶದ ಜನಸಾಮಾನ್ಯರ ಪಾಲಿಗಲ್ಲ, ಆಳುವ ನಾಯಕರು, ಆಳುವ ಪಕ್ಷ ಮತ್ತು ಅವರ ಆಪ್ತ ಉದ್ಯಮಿಗಳ ಪಾಲಿಗೆ ಮಾತ್ರ ಎಂಬ ಸಂಗತಿ ನಿಧಾನವಾಗಿ ದೇಶದ ಮೂಲೆಮೂಲೆಯ ‘ಬಡ ಬೋರೇಗೌಡ’ರಿಗೆ ಅರಿವಾಗತೊಡಗಿದೆ. ಹೀಗೆ ವಾಸ್ತವ ನಿಧಾನಕ್ಕೆ ಜನಮಾನಸಕ್ಕೆ ಇಳಿಯುತ್ತಿರುವುದು ಸಹಜವಾಗೇ ಭ್ರಮೆ ಮತ್ತು ಪೊಳ್ಳುಗಳ ಮೇಲೆಯೇ ರಾಜಕಾರಣ ಮಾಡುವ ಮಂದಿಗೆ ತಲೆನೋವು ತರಿಸಿದೆ.
ಹಾಗಾಗಿ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವ ಇನ್ನಿಲ್ಲದ ಸರ್ಕಸ್ ಮಾಡತೊಡಗಿದ್ದಾರೆ. ಅಂತಹ ಸರ್ಕಸ್ ಗಳ ಪಟ್ಟಿಗೆ ಇದೀಗ ಬಿಜೆಪಿ ಶಾಸಕ, ಕೆಲವೇ ದಿನಗಳ ಹಿಂದೆ ಮುಖ್ಯಮಂತ್ರಿ ಗಾದಿಯ ಪ್ರಬಲ ಆಕಾಂಕ್ಷಿಯಾಗಿದ್ದ ಉದ್ಯಮಿ ಅರವಿಂದ್ ಬೆಲ್ಲದ್ ಹೊಸ ಸೇರ್ಪಡೆಯೊಂದನ್ನು ಮಾಡಿದ್ದಾರೆ. “ಆಫ್ಘಾನಿಸ್ತಾನವನ್ನು ತಮ್ಮ ವಶ ಮಾಡಿಕೊಂಡಿರುವ ತಾಲಿಬಾನ್ ಭಯೋತ್ಪಾದಕ ಸಂಘಟನೆಯೇ ಭಾರತದಲ್ಲಿ ಅಡುಗೆ ಅನಿಲ ಮತ್ತು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕಾರಣ” ಎಂಬ ಉವಾಚವನ್ನು ಅವರು ಪ್ರಯೋಗಿಸಿದ್ದಾರೆ!
ಬಿಜೆಪಿಯ ಅವಿದ್ಯಾವಂತ, ಅಶಿಕ್ಷಿತ ನಾಯಕರ ಪೈಕಿ ಯಾರೋ ಹೇಳಿದ ಮಾತಲ್ಲ; ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ನಲ್ಲಿ ಫ್ರಾನ್ಸ್ ಇನ್ ಸೆಡ್ ಸಂಸ್ಥೆಯಿಂದ ಸ್ನಾತಕೋತ್ತರ ಡಿಪ್ಲೋಮ ಪಡೆದಿರುವ ಎಂಜಿನಿಯರಿಂಗ್ ಕಲಿತಿರುವ ಮತ್ತು ಸ್ವತಃ ಆಟೋಮೊಬೈಲ್ ಉದ್ಯಮದಲ್ಲಿ ಹೆಸರು ಮಾಡಿರುವ ಅರವಿಂದ್ ಬೆಲ್ಲದ್ ಹೇಳಿರುವ ಮಾತು.
ಆದರೆ, ಬೆಲ್ಲದ್ ಅವರು ಜನಸಾಮಾನ್ಯರನ್ನು ದಿಕ್ಕುತಪ್ಪಿಸುವ, ಸುಳ್ಳು ಮತ್ತು ಪೊಳ್ಳು ಮಾತುಗಳ ಮೂಲಕ ಬೆಲೆ ಏರಿಕೆಯ ತಮ್ಮ ಭುರೇ ದಿನಗಳನ್ನು ಸಮರ್ಥಿಸಿಕೊಳ್ಳುವ ಈ ಸರ್ಕಸ್ಸಿಗೆ ಯಾವುದೇ ವಾಸ್ತವಿಕ ನೆಲಗಟ್ಟಿಲ್ಲ, ತಾರ್ಕಿಕ ತಳಹದಿಯೂ ಇಲ್ಲ ಎಂಬುದನ್ನು ಹೇಳಲು ಹೆಚ್ಚೇನು ಬೇಕಿಲ್ಲ; ಸಾಮಾನ್ಯ ಜ್ಞಾನ ಸಾಕು. “ಬೆಲ್ಲದ್ ಅವರ ಈ ಮಾತು, ಕೊನೇ ಘಳಿಗೆಯಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಯಾಕೆ ಅವರ ಕೈತಪ್ಪಿತು ಎಂಬುದಕ್ಕೆ ಸಾಕ್ಷಿ. ಎಷ್ಟೇ ಉದ್ಯಮ, ವ್ಯವಹಾರ, ಪದವಿಗಳ ಹೆಗ್ಗಳಿಕೆ ಇದ್ದರೂ, ವ್ಯಕ್ತಿಯಾಗಿ ಕನಿಷ್ಟ ಸಾಮಾನ್ಯ ಜ್ಞಾನವಿಲ್ಲದೇ ಹೋದವರ ಕೈಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಕೊಟ್ಟರೆ ಎಂಥ ಅನಾಹುತವಾಗಬಹುದು ಎಂಬುದನ್ನು ಗ್ರಹಿಸಿಯೇ ಬಿಜೆಪಿ ವರಿಷ್ಠರು ತಮ್ಮ ನಿರ್ಧಾರ ಬದಲಿಸಿ, ಬೊಮ್ಮಾಯಿ ಅವರಿಗೆ ಸಿಎಂ ಪಟ್ಟ ಕಟ್ಟಿರಬೇಕು” ಎಂಬ ವ್ಯಾಪಕ ಚರ್ಚೆಗೂ ಅವರ ಈ ಹೇಳಿಕೆ ಗ್ರಾಸವಾಗಿದೆ.
ವಾಸ್ತವವಾಗಿ ತೈಲ ರಫ್ತು ಮಾಡುವ ಮಟ್ಟಿನ ಪ್ರಮುಖ ಉತ್ಪಾದಕ ರಾಷ್ಟ್ರವೂ ಅಲ್ಲದ, ತೈಲ ಬಳಕೆಯ ಅತಿ ದೊಡ್ಡ ಗ್ರಾಹಕನೂ ಅಲ್ಲದ ಆಪ್ಘಾನಿಸ್ತಾನದ ಆಂತರಿಕ ಬಂಡಾಯದ ಬೆಳವಣಿಗೆಗಳಿಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಛಾ ತೈಲ ಬೆಲೆಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಅಂತಾರಾಷ್ಟ್ರೀಯ ತೈಲೋದ್ಯಮ ತಜ್ಞರೇ ಹೇಳುತ್ತಿದ್ದಾರೆ. ಆಫ್ಘಾನಿಸ್ತಾನದ ರಾಜಕೀಯ ಕ್ಷಿಪ್ರಕಾಂತಿ ಜಾಗತಿಕ ತೈಲ ಬೆಲೆ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ‘ಇಂಟರ್ ನ್ಯಾಷನಲ್ ಬುಸಿನೆಸ್ ಟೈಮ್ಸ್’ ಮಾಡಿರುವ ವರದಿಯಲ್ಲಿ ಕೂಡ ಆಫ್ಘಾನಿಸ್ತಾನದ ಬೆಳವಣಿಗೆಗಳು ಈವರೆಗೆ ತೈಲ ಬೆಲೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಭವಿಷ್ಯದಲ್ಲಿ ಕೂಡ ಒಂದು ವೇಳೆ ತಾಲಿಬಾನ್ ತನ್ನ ಹಿಂದಿನ ರೀತಿಯಲ್ಲೇ ಹಿಂಸಾಚಾರ ಮತ್ತು ಭಯೋತ್ಪಾದನಾ ಚಟುವಟಿಕೆಗೆ ಪ್ರಚೋದನೆ ನೀಡಿದರೆ, ಕೆಲಮಟ್ಟಿಗೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಅದಕ್ಕೆ ಪೂರಕವಾಗಿ ಆಗಸ್ಟ್ 15ರಂದು ತಾಲಿಬಾನ್ ಆಫ್ಘನ್ ಅಧಿಕಾರ ಹಿಡಿದ ಬಳಿಕ ಈವರೆಗೆ ಕಚ್ಛಾ ತೈಲ ಬೆಲೆಯಲ್ಲಿ ಒಂದು ಡಾಲರ್ ಗಿಂತ ಕಡಿಮೆ ಏರಿಕೆ(ಸರಾಸರಿ) ಕಂಡಿದೆ. ಆಗಸ್ಟ್ 13ರಂದು ಬ್ಯಾರಲ್ ಗೆ 68.44 ಡಾಲರ್ ಇದ್ದ ಕಚ್ಛಾ ತೈಲ ಬೆಲೆ, ಸೆ.3ರಂದು 69.29 ಡಾಲರ್ ಗೆ ಏರಿಕೆಯಾಗಿದೆ. ಆ ನಡುವೆ, ಆಗಸ್ಟ್ 20ರಂದು ಆಗಸ್ಟ್ ತಿಂಗಳ ಅತಿ ಕಡಿಮೆ ಬ್ಯಾರೆಲ್ ಗೆ 62 ಡಾಲರ್ ಗೆ ಕುಸಿದಿತ್ತು. ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆಯ ಈ ಏರಿಳಿಕೆ ಕೂಡ, ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಪದವೀಧರ ಬೆಲ್ಲದ್ ಅವರ ಮಾತು ಎಷ್ಟು ಹಸೀಸುಳ್ಳು ಎಂಬುದನ್ನು ಸಾರಿ ಹೇಳುತ್ತಿದೆ. ಆಗಿರುವ ಒಂದು ಡಾಲರ್ ಹೆಚ್ಚಳ ಕೂಡ, ಕೋವಿಡ್ ನಿರ್ಬಂಧಗಳು ಜಾಗತಿಕ ಮಟ್ಟದಲ್ಲಿ ಸಡಿಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂಧನ ಬೇಡಿಕೆ ಕುದುರುತ್ತಿರುವ ಕಾರಣಕ್ಕೆ ಆಗಿರುವ ಏರಿಕೆಯೇ ವಿನಃ ಬೇರಾವುದೇ ಕಾರಣಕ್ಕಾಗಿ ಅಲ್ಲ ಎಂಬುದನ್ನು ಅಂತಾರಾಷ್ಟ್ರೀಯ ಆರ್ಥಿಕ ತಜ್ಞರು ಕೂಡ ಹೇಳಿದ್ದಾರೆ.
ಆದರೆ, ಈ ಉದ್ಯಮಿ ಮತ್ತು ವ್ಯವಹಾರ ಪರಿಣತ ಬೆಲ್ಲದ್ ಹೇಳಬೇಕಾದ ವಿಚಾರ ಬೇರೆ ಇತ್ತು. ಅದನ್ನು ಹೇಳದೇ, ಜನರ ಕಿವಿಗೆ ಕಮಲ ಮುಡಿಸುವ ಯಥಾ ಚಾಳಿಯನ್ನು ಈ ಬಿಜೆಪಿ ನಾಯಕ ಮಾಡಿ, ಇದೀಗ ಹಾಸ್ಯಾಸ್ಪದ ವ್ಯಕ್ತಿಯಂತಾಗಿರುವುದು ವಿಪರ್ಯಾಸ.
2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟು ಅಚ್ಛೇದಿನದ ಭರವಸೆ ನೀಡುವ ಮುನ್ನ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಬ್ಯಾರಲ್ ಗೆ ಬರೋಬ್ಬರಿ 105 ಡಾಲರ್ ಇರುವಾಗ, ಭಾರತದಲ್ಲಿ ಲೀಟರಿಗೆ 71.51 ರೂ. ಇದ್ದ ಪೆಟ್ರೋಲ್ ಮತ್ತು 57.28 ರೂ. ಇದ್ದ ಡೀಸೆಲ್ ಬೆಲೆಗಳು ಈಗ, ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಕೇವಲ 69 ಡಾಲರ್ ಇರುವಾಗ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 105 ಮತ್ತು 91 ರೂಗೆ ಯಾಕೆ ಮತ್ತು ಹೇಗೆ ಏರಿಕೆಯಾದವು ಎಂಬುದನ್ನು ಬೆಲ್ಲದ್ ಜನತೆಗೆ ವಿವರಿಸಬೇಕಿತ್ತು. ಹಾಗೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಅನಿಲ ದರ 2014ರಲ್ಲಿ ಪ್ರತಿ ಮೆಟ್ರಿಕ್ ಟನ್ ಗೆ 880 ಡಾಲರ್ ಇದ್ದಾಗ ಭಾರತದಲ್ಲಿ ಸಿಲಿಂಡರಿಗೆ 410 ರೂ. ಇದ್ದದ್ದು, ಈಗ ಅಂತಾರಾಷ್ಟ್ರೀಯ ಬೆಲೆ ಕೇವಲ 653 ಡಾಲರ್ ಇರುವಾಗ ಯಾಕೆ ಸಿಲಿಂಡರ್ ದರ 900 ರೂ.ಗೆ ಏರಿಕೆಯಾಗಿದೆ ಎಂಬುದನ್ನೂ ಮತ್ತು ಅಸಲೀ ಅಚ್ಛೇದಿನ್ ಎಂದರೇ ಹೀಗೆ ಸಂಕಷ್ಟದ ಹೊತ್ತಲ್ಲೂ ಜನರ ನೆತ್ತರು ಹೀರುವುದೇ? ಎಂಬುದನ್ನು ಅವರು ವಿವರಿಸಬೇಕಿತ್ತು.
ಇಂತಹ ವಾಸ್ತವಾಂಶಗಳನ್ನು ವಿವರಿಸಬೇಕಿದ್ದ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಪದವೀಧರ ಬೆಲ್ಲದ್, ಅದಕ್ಕೆ ಬದಲಾಗಿ ತಾಲಿಬಾನ್, ಆಫ್ಘನ್ ಬಿಕ್ಕಟ್ಟು ಎಂಬ ಬೂಸಿ ಬಿಟ್ಟು ಜನರನ್ನು ಮಂಗ ಮಾಡಬಹುದು ಎಂದು ಪುಟಾಲು ಬಿಡುತ್ತಿರುವುದು ತೀರಾ ನಾಚಿಕೆಗೇಡಿನ ಸಂಗತಿ. ಬಿಜೆಪಿ ನಾಯಕರ ಇಂತಹ ಹಸೀ ಸುಳ್ಳು ಮತ್ತು ಜನವಿರೋಧಿ ನಡೆಗಳು ನಿಜಕ್ಕೂ ಜನದ್ರೋಹಿ ವರಸೆಗಳಲ್ಲದೆ ಬೇರಲ್ಲ. ಅಲ್ಲವೆ?