ಪ್ರವರ್ಧಮಾನಕ್ಕೆ ಬರುತ್ತಿರುವ ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾರ್ವಜನಿಕರ ನಡುವೆ, ಯುವ ಪೀಳಿಗೆಯಲ್ಲಿ, ಸಾಮಾಜಿಕ ಅರಿವು ಮತ್ತು ರಾಜಕೀಯ ಪ್ರಜ್ಞೆ ಬಲವಾಗುತ್ತಿದ್ದಂತೆಲ್ಲಾ ಆಡಳಿತ ವ್ಯವಸ್ಥೆಯ ಕೀಲುಗಳು ಸದ್ದುಮಾಡಲಾರಂಭಿಸುತ್ತವೆ. ಭಾರತದಂತಹ ಸಾಂಪ್ರದಾಯಿಕ, ಶ್ರೇಣೀಕೃತ ಸಮಾಜದಲ್ಲಿ ಶೋಷಣೆ, ಅನ್ಯಾಯ ಮತ್ತು ದೌರ್ಜನ್ಯಗಳ ವಿರುದ್ಧ ಮೂಡುವ ದನಿಗಳು ಆಳುವ ವರ್ಗಗಳನ್ನು, ಆಡಳಿತ ವ್ಯವಸ್ಥೆಯನ್ನು ಸದಾ ಜಾಗೃತಾವಸ್ಥೆಯಲ್ಲೇ ಇರಿಸುತ್ತವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಶೋಷಣೆಯ ಆಯಾಮಗಳು ರೂಪಾಂತರ ಹೊಂದುತ್ತಿರುವ ಹಾಗೆಯೇ, ಆರ್ಥಿಕವಾಗಿ ಜನಸಾಮಾನ್ಯರ ವಿರುದ್ಧ ಬಳಸಲಾಗುವ ಶೋಷಣೆಯ ಅಸ್ತ್ರಗಳೂ ರೂಪಾಂತರ ಹೊಂದುತ್ತಿರುತ್ತವೆ. ಸಾಂವಿಧಾನಿಕವಾಗಿ ಮತದಾನ ವ್ಯವಸ್ಥೆಯ ಮೂಲಕವೇ ಅಧಿಕಾರ ಪಡೆಯುವ ಆಡಳಿತ ವ್ಯವಸ್ಥೆಯ ವಾರಸುದಾರರು, ತಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಎಚ್ಚರ ವಹಿಸಬೇಕಾದ ಒಂದು ಸನ್ನಿವೇಶವನ್ನು ಸಾಮಾಜಿಕಾರ್ಥಿಕ ಸ್ಥಿತ್ಯಂತರಗಳೇ ಸೃಷ್ಟಿಸುತ್ತಿರುತ್ತವೆ.
ಬಂಡವಾಳಶಾಹಿ ಅರ್ಥವ್ಯವಸ್ಥೆಯು ಮೂಲತಃ ಶ್ರಮಿಕರ ಮತ್ತು ಉತ್ಪಾದಕೀಯ ಶಕ್ತಿಗಳ ಶೋಷಣೆಯ ಮೂಲಕವೇ ಉನ್ನತಿ ಸಾಧಿಸಲು ಹವಣಿಸುವುದರಿಂದ, ರಾಷ್ಟ್ರ ನಿರ್ಮಾಣದ ಎಲ್ಲ ಹಂತಗಳಲ್ಲೂ, ಎಲ್ಲ ಕ್ಷೇತ್ರಗಳಲ್ಲೂ, ನಿರ್ಮಾಣ ಕಾರ್ಯದಲ್ಲಿ ಬೆವರು ಸುರಿಸುವ ದುಡಿಯುವ ಜೀವಗಳನ್ನು ಪರಾವಲಂಬಿಗಳಾಗಿಯೇ ಉಳಿಸುವ ನಿಟ್ಟಿನಲ್ಲಿ ಆರ್ಥಿಕ ನೀತಿಗಳನ್ನು ರೂಪಿಸಲಾಗುತ್ತದೆ. ಆಳುವ ವರ್ಗಗಳು ಜಾರಿಗೊಳಿಸುವ ಜನೋಪಯೋಗಿ ಯೋಜನೆಗಳು ಮತ್ತು ಸಾಂವಿಧಾನಿಕ ಚೌಕಟ್ಟಿನಲ್ಲಿ ಜನಸಾಮಾನ್ಯರಿಗೆ ಒದಗಿಸಲಾಗುವ ಸೌಲಭ್ಯ-ಸವಲತ್ತುಗಳು ಒಂದು ಹಂತದವರೆಗೂ ಹಿತವಲಯಗಳನ್ನು ಸೃಷ್ಟಿಸಿದರೂ, ಬಹುಸಂಖ್ಯೆಯ ದುಡಿಮೆಗಾರರ ಪರಾವಲಂಬನೆಯನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲೇ ಆಡಳಿತ ನೀತಿಗಳನ್ನು ಜಾರಿಗೊಳಿಸಲಾಗುತ್ತದೆ. ಈ ಹಂತದಲ್ಲಿ ಬಳಕೆಯಾಗುವ ಅಸ್ತ್ರಗಳೇ ಜಾತಿ, ಮತ, ಧರ್ಮ ಮತ್ತು ಪ್ರಾದೇಶಿಕ ಅಸ್ಮಿತೆ ಹಾಗೂ ಅಸ್ತಿತ್ವಗಳು.
ಶ್ರಮಜೀವಿಗಳ ಬೆವರಿನ ದುಡಿಮೆಯಿಂದ ನಿರ್ಮಾಣವಾಗುವ ಒಂದು ಸುಭದ್ರ ರಾಷ್ಟ್ರವನ್ನು ರಾಷ್ಟ್ರೀಯತೆ, ಮತಧಾರ್ಮಿಕ ಅಸ್ಮಿತೆ ಮತ್ತು ಭಾವನಾತ್ಮಕ ಭೌಗೋಳಿಕ ಚೌಕಟ್ಟಿನೊಳಗೆ ಬಂಧಿಸುವ ಮೂಲಕ, ಆಳುವ ವರ್ಗಗಳು ತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ದೇಶ ಎಂಬ ಪರಿಕಲ್ಪನೆಯನ್ನು ವಾಸ್ತವಿಕ ನೆಲೆಯಿಂದ ಬೇರ್ಪಡಿಸಿ, ಭಾವುಕ ನೆಲೆಯಲ್ಲಿ ಸ್ಥಾಪಿಸಿಬಿಡುತ್ತವೆ. ರಾಷ್ಟ್ರ ನಿರ್ಮಾಣ, ರಾಷ್ಟ್ರ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆ ಮುಂತಾದ ಪರಿಕಲ್ಪನೆಗಳು ಒಂದು ಸೀಮಿತ ವರ್ಗದ ಹಿತಾಸಕ್ತಿಗಳನ್ನು ಕಾಪಾಡುವ ಕವಚಗಳಾಗಿಬಿಡುತ್ತವೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಈ ವರ್ಗವನ್ನು ಬಂಡವಳಿಗರು ಮತ್ತು ಪ್ರಬಲ ಮೇಲ್ವರ್ಗದ ಸಮೂಹಗಳು ಪ್ರತಿನಿಧಿಸುತ್ತವೆ.
ಈ ಬೆಳವಣಿಗೆಯ ಮತ್ತೊಂದು ಬದಿಯಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು ಹವಣಿಸುವ ಬೃಹತ್ ಜನಸಮೂಹಗಳು ಪ್ರಭುತ್ವ ರೂಪಿಸುವ ಶಾಸನಗಳು, ಕಾಯ್ದೆಗಳು, ನಿಯಮಗಳಿಂದಲೇ ತಮ್ಮ ವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತು ಬದುಕುವ ಹಕ್ಕುಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳೂ ಹೆಚ್ಚಾಗುತ್ತಲೇ ಇರುತ್ತವೆ. ಬಂಡವಾಳಶಾಹಿ ವ್ಯವಸ್ಥೆಗೆ ಹೇಗೆ ಶೋಷಣೆಯೇ ಬುನಾದಿಯಾಗುವುದೋ ಹಾಗೆಯೇ ಸಾಂಪ್ರದಾಯಿಕ ಸಮಾಜದಲ್ಲಿ ಮತಧಾರ್ಮಿಕ ಆಧಿಪತ್ಯವನ್ನು ಭದ್ರಪಡಿಸಲು ಹವಣಿಸುವ ಒಂದು ಸಮಾಜಕ್ಕೆ ಶೋಷಣೆಯೇ ಪ್ರಧಾನ ಭೂಮಿಕೆಯಾಗುತ್ತದೆ. ತುಳಿತಕ್ಕೊಳಗಾದವರನ್ನು, ಅವಕಾಶವಂಚಿತರನ್ನು ಮತ್ತು ಪರಾವಲಂಬಿ ಜನಸಮುದಾಯಗಳನ್ನು ನಿರಂತರ ಶೋಷಣೆಗೊಪಡಿಸಲು ಜಾತಿ-ಮತ-ಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಏ ಅಸ್ತ್ರಗಳಾಗಿರುತ್ತವೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯ ಫಲಾನುಭವಿಗಳು ಪ್ರತಿನಿಧಿಸುವ ಹಿತವಲಯದ ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗದ ಜನಸಮೂಹಗಳು ತಮ್ಮ ಮೂಲ ಅಸ್ಮಿತೆಗಳ ಬೇಲಿಗಳನ್ನು ದಾಟಿ, ಶೋಷಕ ವ್ಯವಸ್ಥೆಯ ಒಂದು ಭಾಗವಾಗಿಯೇ ಇರಲಿಚ್ಚಿಸುತ್ತವೆ. ಈ ಪ್ರಬಲ ಮಧ್ಯಮ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲೇ ಆಡಳಿತ ನೀತಿಗಳನ್ನೂ ಜಾರಿಗೊಳಿಸುವ ಸರ್ಕಾರಗಳು, ಕೆಲವೇ ಜನೋಪಯೋಗಿ ಯೋಜನೆಗಳ ಮೂಲಕ ಅವಕಾಶವಂಚಿತರ ತುಷ್ಟೀಕರಣದಲ್ಲೂ ತೊಡಗುತ್ತವೆ.

ಮತ್ತೊಂದೆಡೆ ಬಂಡವಾಳಶಾಹಿಯ ನಿಯಂತ್ರಣದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯಾಂಗ ಶಾಸಕಾಂಗಗಳೂ ಬಂಡವಾಳ, ಮಾರುಕಟ್ಟೆ ಮತ್ತು ಇದರ ಫಲಾನುಭವಿಗಳ ಪರವಾಗಿಯೇ ಇರುತ್ತವೆ. ಧರ್ಮ ರಕ್ಷಣೆ, ಜಾತಿ ಪದ್ಧತಿಯ ಯಥಾಸ್ಥಿತಿವಾದ ಮತ್ತು ಸಮುದಾಯ ಸಂರಕ್ಷಣೆ ಈ ಮೂರೂ ಹಾದಿಗಳಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗ ಉಳ್ಳವರ ಪರವಾಗಿಯೇ ಇರುತ್ತವೆ. ಭಾರತದ ಸಂದರ್ಭದಲ್ಲಿ ಇದನ್ನು ಕಾಣುತ್ತಲೇ ಬಂದಿದ್ದೇವೆ. ಹಾಗಾಗಿಯೇ ಬಂಡವಾಳ ಮತ್ತು ಮಾರುಕಟ್ಟೆಯ ಪ್ರಬಲ ಶಕ್ತಿಗಳು ಜಾತಿ-ಮತಧರ್ಮಗಳ ನೆಲೆಗಳನ್ನೇ ಬಳಸಿ, ನ್ನ್ಯಾಯಾಂಗದ ಮೇಲೆ ಪ್ರಭಾವ ಬೀರಲೆತ್ನಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಯಶಸ್ವಿಯಾದರೂ, ಭಾರತದ ನ್ಯಾಯಾಂಗ ವ್ಯವಸ್ಥೆ ಇದಕ್ಕೆ ಪೂರ್ಣ ಅವಕಾಶವನ್ನು ನೀಡಿಲ್ಲ, ಇಂದಿಗೂ ನೀಡುತ್ತಿಲ್ಲ ಎನ್ನುವುದು ಸಮಾಧಾನಕರ ಅಂಶ. ಇತ್ತ ಪ್ರಜಾತಂತ್ರದ ಬೇರುಗಳು ಗಟ್ಟಿಯಾಗತೊಡಗಿದಂತೆಲ್ಲಾ ತಳಸಮುದಾಯಗಳ ಅರಿವಿನ ವಿಸ್ತರಣೆಯೂ ಆಗುವುದರಿಂದ ಶೋಷಣೆಗೊಳಗಾದ ಜನಸಮೂಹಗಳು ಬಂಡವಾಳ ವ್ಯವಸ್ಥೆ ಮತ್ತು ಜಾತಿ-ಮತಧರ್ಮಗಳ ಪಾರಮ್ಯದ ಒಳಸುಳಿಗಳನ್ನು ಅರ್ಥಮಾಡಿಕೊಳ್ಳಲಾರಂಭಿಸುತ್ತವೆ. ಈ ಒಳಸುಳಿಗಳನ್ನು ಭೇದಿಸಿ, ಶೋಷಕ ವ್ಯವಸ್ಥೆಯ ಶೋಷಣೆಯ ರೂಪಾಂತರಗಳನ್ನು ಶೋಷಿತರಿಗೆ ಪರಿಯಚಿಸುವುದೇ ಅಲ್ಲದೆ, ತುಳಿತಕ್ಕೊಳಗಾದವರ ಮೇಲೆ ನಡೆಯುವ ದೌರ್ಜನ್ಯ, ತಾರತಮ್ಯ ಮತ್ತು ಶೋಷಣೆಯ ಮಜಲುಗಳನ್ನು ಸಮಾಜದ ಮುಂದಿಸಿರುವ ನೈತಿಕ ಹೊಣೆಗಾರಿಕೆ ಮಾಧ್ಯಮಗಳ ಮೇಲಿರುತ್ತದೆ.
ಮಾಧ್ಯಮಗಳ ಪಾತ್ರ ಮತ್ತು ಹೊಣೆ
ಹಾಗಾಗಿಯೇ ಒಂದು ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಪ್ರಧಾನ ಅಂಶಗಳಾಗಿ ಪರಿಗಣಿಸಲಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯ ಅಥವಾ ಮಾಧ್ಯಮ ಸ್ವಾತಂತ್ರ್ಯ ಎಂದರೆ ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳ ಸ್ವೇಚ್ಚಾಚಾರ ಎಂದು ಭಾವಿಸಬೇಕಿಲ್ಲ. ಬದಲಾಗಿ ದೇಶದ ಸಂವಿಧಾನದ ಆಶಯದಂತೆ ಆಡಳಿತ ವ್ಯವಸ್ಥೆ ಜನಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಾಗುತ್ತಿದೆಯೇ ಎಂದು ಗಮನಿಸುವ ಮೂಲಕ, ಆಳುವ ವರ್ಗಗಳ ತಪ್ಪು ನಿರ್ಧಾರಗಳನ್ನು, ವಾಮ ಮಾರ್ಗಗಳನ್ನು ಮತ್ತು ಜನವಿರೋಧಿ ಆಡಳಿತ ನೀತಿಗಳನ್ನು ಎತ್ತಿ ತೋರುತ್ತಾ, ಸಾಮಾನ್ಯ ಜನತೆಯಲ್ಲಿ ಪ್ರಜಾಪ್ರಭುತ್ವದ ಬಗ್ಗೆ ವಿಶ್ವಾಸವನ್ನು ಹೆಚ್ಚಿಸುವ ರೀತಿಯಲ್ಲಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೆಲವೊಮ್ಮೆ ಮಾಧ್ಯಮ ಸಮೂಹಗಳು, ಪತ್ರಿಕೋದ್ಯಮಿಗಳು, ಪತ್ರಕರ್ತರು ಆಡಳಿತ ವ್ಯವಸ್ಥೆಯ ಅವಕೃಪೆಗೆ ಪಾತ್ರರಾಗುವುದೂ ಉಂಟು. ಆದರೆ ಭಾರತದ ಸಂವಿಧಾನ ಇಂತಹ ಒಂದು ಸಂಭಾವ್ಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡೇ ಪತ್ರಿಕಾ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಾನ್ಯತೆ ಮತ್ತು ವಿಶ್ವಾಸಾರ್ಹ ಸ್ಥಾನ ನೀಡಿದೆ. ಈ ಸಾಂವಿಧಾನಿಕ ಕವಚವನ್ನು ನ್ಯಾಯಯುತವಾಗಿ ಬಳಸಿಕೊಳ್ಳುವುದರ ಮೂಲಕವೇ ಮಾಧ್ಯಮಗಳು ಸಾಮಾನ್ಯ ಜನತೆ ಎದುರಿಸುವ ಜ್ವಲಂತ ಸಮಸ್ಯೆಗಳನ್ನು ಬಿಂಬಿಸುವುದರೊಂದಿಗೆ, ಆಡಳಿತ ನೀತಿಗಳಿಂದ ಜನತೆಗೆ ಉಂಟಾಗುತ್ತಿರುವ ಸಂಕಷ್ಟಗಳು, ಎದುರಾಗುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸಬೇಕಿದೆ.
ಇಲ್ಲಿಯೂ ಸಹ ಬಂಡವಾಳಶಾಹಿ ಆರ್ಥಿಕತೆ ಮತ್ತು ಮಾರುಕಟ್ಟೆ ತನ್ನ ಸೂತ್ರಧಾರಿಯ ಪಾತ್ರವನ್ನು ಜಾಣ್ಮೆಯಿಂದ ಬಳಸಿಕೊಳ್ಳುತ್ತದೆ. ಇದರ ಒಂದು ಆಯಾಮವನ್ನು ವರ್ತಮಾನದ ಸನ್ನಿವೇಶದಲ್ಲಿ ಕಾಣುತ್ತಿದ್ದೇವೆ. ಮಾಧ್ಯಮ ಸ್ವಾತಂತ್ರ್ಯದ ಜಾಗತಿಕ ಸೂಚ್ಯಂಕದಲ್ಲಿ ಮತ್ತಷ್ಟು ಕುಸಿದಿರುವ ಭಾರತ 150ನೆಯ ಸ್ಥಾನದಲ್ಲಿದ್ದರೂ, ಭಾರತದ ಮಾಧ್ಯಮಗಳು ಆಳುವ-ಶೋಷಕ ವರ್ಗಗಳ ಪರ ವಹಿಸುವ ಸಂದರ್ಭಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನೇ ಪಡೆದಿರುವುದು ವಿಡಂಬನೆ ಎನಿಸಿದರೂ ವಾಸ್ತವ. ಏಕೆಂದರೆ ಬಹುಪಾಲು ಮುದ್ರಣ ಮತ್ತು ದೃಶ್ಯ ಮಾಧ್ಯಮ ಸಮೂಹಗಳು ಬಂಡವಳಿಗರ ಒಡೆತನದಲ್ಲಿವೆ. ಈ ಬಂಡವಳಿಗ ವರ್ಗವೇ ಬಹುಸಂಖ್ಯಾವಾದವನ್ನು ಪೋಷಿಸುವ ರಾಜಕೀಯ ಪಕ್ಷಗಳ ಪೋಷಕ ಶಕ್ತಿಯೂ ಆಗಿದೆ. ಮಾರುಕಟ್ಟೆ ವಿಸ್ತರಣೆಗಾಗಿ, ಶೋಷಕ ವರ್ಗಗಳ ರಕ್ಷಣೆಗಾಗಿ ಮತ್ತು ಜಾಗತಿಕ ಬಂಡವಾಳದ ಹರಿವು ಮತ್ತು ಅಸ್ತಿತ್ವದ ಸಂರಕ್ಷಣೆಯ ದೃಷ್ಟಿಯಿಂದಲೇ ರೂಪಿಸಲಾಗುವ ಸರ್ಕಾರಗಳ ಆಡಳಿತ ನೀತಿ-ಯೋಜನೆಗಳನ್ನು ಸಮರ್ಥಿಸುವುದೇ ಮಾಧ್ಯಮ ಸಮೂಹಗಳ ಆದ್ಯತೆಯಾಗಿಬಿಡುತ್ತದೆ. ಈ ದಿಕ್ಕಿನಲ್ಲಿ ಸಾಗಲು ಭಾರತದ ಮಾಧ್ಯಮಗಳಿಗೆ ಪೂರ್ಣ ಸ್ವಾತಂತ್ರ್ಯವಿದೆ ಎನ್ನುವುದು ನಿಸ್ಸಂದೇಹ. 1980ರಿಂದಲೇ ಪ್ರಭುತ್ವ ಪರ ಧೋರಣೆ ಮಾಧ್ಯಮ ಸಮೂಹಗಳ ಒಂದು ಮುಖ್ಯ ಲಕ್ಷಣವಾಗಿ ಕಾಣಿಸಿಕೊಳ್ಳಲಾರಂಭಿಸಿದ್ದು ಇಂದು ಪೂರ್ಣ ಪ್ರಮಾಣದಲ್ಲಿ ಗೋಚರಿಸುತ್ತಿದೆ.

ಆದರೆ, ಶೋಷಿತ ಜನಸಮೂಹಗಳ, ಶ್ರಮಜೀವಿಗಳ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾದ ಮತ್ತು ಸಾಂವಿಧಾನಿಕ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಉಂಟುಮಾಡುವ ಆಡಳಿತ ನೀತಿಗಳ ಬಗ್ಗೆ ಸಾರ್ವಜನಿಕರ ನಡುವೆ ಚರ್ಚೆಗಳನ್ನು ಹುಟ್ಟುಹಾಕುವುದು, ಪ್ರಭುತ್ವ ಜಾರಿಗೊಳಿಸುವ ಜನವಿರೋಧಿ ಶಾಸನಗಳ ವಿರುದ್ಧ ಜಾಗೃತಿ ಮೂಡಿಸುವುದು ಮಾಧ್ಯಮಗಳ ಆದ್ಯತೆಯಾದಾಗ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತವೆ. 150ನೆಯ ಸ್ಥಾನದಲ್ಲಿ ನಾವು ಗುರುತಿಸಬೇಕಾದ್ದು ಈ ಸ್ವಾತಂತ್ರ್ಯವನ್ನು. ಸಾಮಾಜಿಕ ನ್ಯಾಯಕ್ಕಾಗಿ, ಬದುಕುವ ಹಕ್ಕುಗಳಿಗಾಗಿ, ಜೀವನೋಪಾಯದ ಮಾರ್ಗಗಳಿಗಾಗಿ ಜನಸಮುದಾಯಗಳೊಳಗಿಂದ ಉದ್ಭವಿಸುವ ಆಗ್ರಹಗಳು ಮತ್ತು ಈ ಮಾರ್ಗದಲ್ಲಿ ಅಡ್ಡಿಯಾಗಬಹುದಾದ ಆಡಳಿತ ನೀತಿಗಳ ವಿರುದ್ಧ ಕೇಳಿಬರಬಹುದಾದ ಪ್ರತಿರೋಧದ ದನಿಗಳು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಬಿಂಬಿಸಲ್ಪಟ್ಟ ಕೂಡಲೇ ಆಳುವ ವರ್ಗಗಳು, ಮಾರುಕಟ್ಟೆ ವ್ಯವಸ್ಥೆ ಜಾಗೃತವಾಗುತ್ತವೆ. ಪ್ರತಿರೋಧದ ದನಿಗಳನ್ನು ಹತ್ತಿಕ್ಕಲು ಬಳಸಲಾಗುವ ಕಾನೂನು ಚೌಕಟ್ಟಿಗೊಳಪಟ್ಟ ನಿಯಮಗಳನ್ನೇ ಬಳಸಿ, ಮಾಧ್ಯಮಗಳ ದನಿಯನ್ನೂ ಅಡಗಿಸಲಾಗುತ್ತದೆ. ಸಾರ್ವಭೌಮ ಪ್ರಜೆಗಳ ಸಾಂವಿಧಾನಿಕ ಹಕ್ಕೊತ್ತಾಯಗಳ ದನಿಗೆ ದನಿಗೂಡಿಸುವ ಮಾಧ್ಯಮಗಳು ಆಡಳಿತ ವ್ಯವಸ್ಥೆಯ ಅವಕೃಪೆಗೆ ಪಾತ್ರವಾಗುತ್ತವೆ. ಈ ಬೀಸುದೊಣ್ಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಸುದ್ದಿಮನೆಗಳು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ವಂದಿಮಾಗಧ ಸಂಸ್ಕೃತಿಗೆ ಶರಣಾಗಿಬಿಡುತ್ತವೆ.
ಆದರೆ ಈ ದಬ್ಬಾಳಿಕೆಯನ್ನು ಎದುರಿಸಿ ನಿಲ್ಲುವ ತಾತ್ವಿಕ ಶಕ್ತಿಯನ್ನು ಭಾರತದ ಸಂವಿಧಾನ ಮಾಧ್ಯಮ ಜಗತ್ತಿಗೆ ನೀಡಿದೆ. ಈ ಶಕ್ತಿಯನ್ನು ಭಾರತದ ಮಾಧ್ಯಮ ಸಮೂಹಗಳು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶಿಸಿವೆ. ಮಾಧ್ಯಮವನ್ನು ಪ್ರತಿನಿಧಿಸುವ ವ್ಯಕ್ತಿಗಳು ಸಮಾಜಮುಖಿಯಾಗಿದ್ದರೆ, ಜನಹಿತದ ಕಾಳಜಿ ಉಳ್ಳವರಾಗಿದ್ದರೆ, ಸಾಂವಿಧಾನಿಕ ನಿಯಮಗಳ ಪರಿಜ್ಞಾನ ಹೊಂದಿರುವವರಾದರೆ, ತಮ್ಮ ವೃತ್ತಿಪರತೆ ಮತ್ತು ವೃತ್ತಿಧರ್ಮಕ್ಕೆ ಬದ್ಧರಾಗಿರುವುದಾದರೆ, ಹಾಗೆಯೇ ಮಾರುಕಟ್ಟೆಯ ಹಿಂಬಾಲಕರಾಗದೆ, ರಾಜಕೀಯ ಅಧಿಕಾರ ಪೀಠಗಳ ಬಾಲಂಗೋಚಿಗಳಾಗದೆ, ವ್ಯಕ್ತಿನಿಷ್ಠತೆಯನ್ನು ಬದಿಗಿಟ್ಟು ವಸ್ತುನಿಷ್ಠತೆಯನ್ನು ರೂಢಿಸಿಕೊಂಡರೆ, ಭಾರತದ ಮಾಧ್ಯಮ ಲೋಕ ತನ್ನ ಸುವರ್ಣ ಯುಗಕ್ಕೆ ಮರಳಲು ಸಾಧ್ಯ. ತಾವು ಪ್ರತಿನಿಧಿಸುವ ಒಂದು ಬೃಹತ್ ಸಾಮ್ರಾಜ್ಯ, ಅಂದರೆ ಮಾಧ್ಯಮ ಲೋಕ, ಬಂಡವಾಳ ಮತ್ತು ಮಾರುಕಟ್ಟೆಯನ್ನೇ ಅವಲಂಬಿಸಿದ್ದರೂ, ತಮ್ಮ ಪ್ರಾತಿನಿಧ್ಯ ಮೂಲತಃ ಈ ದೇಶದ ಜನಸಮುದಾಯಗಳ ನಡುವೆ ಇದೆ ಎಂದು ಗುರುತಿಸಿಕೊಳ್ಳುವ ವಿವೇಕ, ವಿವೇಚನೆ ಮತ್ತು ವ್ಯವಧಾನವನ್ನು ಮಾಧ್ಯಮ ಪ್ರತಿನಿಧಿಗಳು ಬೆಳೆಸಿಕೊಳ್ಳುವುದು ವರ್ತಮಾನದ ತುರ್ತು.
ಬದುಕಿನ ಪಯಣದಲ್ಲಿ ತಾವೇ ದಾಟಿಬಂದ ಗಡಿರೇಖೆಗಳ ಒಳಗೇ, ತಮ್ಮ ಅನುಭವಕ್ಕೆ ಮತ್ತು ಅನುಭಾವಕ್ಕೆ ಲಭಿಸಿದ ಜೀವನಾನುಭವಗಳು, ಅಲ್ಲಿನ ಕಷ್ಟಕೋಟಲೆಗಳು, ಶ್ರಮಿಕ ಜಗತ್ತಿನ ಸಾಮಾಜಿಕಾರ್ಥಿಕ ಸಂಕಷ್ಟಗಳು, ಸಾಂಸ್ಕೃತಿಕ ತಲ್ಲಣಗಳು, ಶೋಷಕ ವ್ಯವಸ್ಥೆಯ ದಮನಕಾರಿ ಒತ್ತಡಗಳು ಇಂದಿಗೂ ಜೀವಂತವಾಗಿವೆ ಎಂಬ ಪರಿಜ್ಞಾನ ಭಾರತದ ಪ್ರತಿಯೊಬ್ಬ ಮಾಧ್ಯಮ ಪ್ರತಿನಿಧಿಯಲ್ಲೂ ಇರಲೇಬೇಕು. ಏಕೆಂದರೆ ಇಡೀ ಮಾಧ್ಯಮ ಜಗತ್ತನ್ನು ಜಾಲಾಡಿದಾಗಲೂ ಅಲ್ಲಿ ಪ್ರಧಾನವಾಗಿ ಕಾಣುವುದು, ಸಮಾಜದ ಕೆಳಸ್ತರದ, ಕೆಳ ವರ್ಗದ ಜನಸಮುದಾಯಗಳ ಪ್ರತಿನಿಧಿಗಳೇ ಆಗಿರುತ್ತಾರೆ. ಪತ್ರಿಕೋದ್ಯಮ ಅಥವಾ ಪತ್ರಿಕೋದ್ಯೋಗವನ್ನೇ ತಮ್ಮ ಬದುಕಿನ ಭಾಗವಾಗಿ ಬದುಕುವ ಅಸಂಖ್ಯಾತ ಮಾಧ್ಯಮ ಪ್ರತಿನಿಧಿಗಳು, ತಾವು ಯಾವುದೇ ಶ್ರೇಣಿಯ ಹುದ್ದೆಯನ್ನಲಂಕರಿಸಿದ್ದರೂ ಸಹ ಮಾರುಕಟ್ಟೆ ಅಥವಾ ಬಂಡವಾಳದ ಕಟ್ಟುಪಾಡುಗಳ ನಡುವೆಯೇ ಬದುಕಬೇಕಾಗುತ್ತದೆ. ತಮ್ಮ ವೃತ್ತಿ ಬದುಕಿನ ಪ್ರತಿ ಹೆಜ್ಜೆಯಲ್ಲೂ, ತಾವೇ ಸವೆಸಿ ಬಂದ ಹಾದಿಯನ್ನು, ಆ ಹಾದಿಯ ಇಕ್ಕೆಲಗಳಲ್ಲಿ ಕಂಡಂತಹ ಸುಡು ವಾಸ್ತವಗಳನ್ನು, ಅಗೋಚರವಾಗಿ ಇರಬಹುದಾದಂತಹ ಸಾರ್ವಜನಿಕ ಬದುಕಿನ ದುರಂತಗಳನ್ನು ಪ್ರತಿಯೊಬ್ಬ ಪತ್ರಿಕೋದ್ಯೋಗಿಯೂ ಗುರುತಿಸುತ್ತಾ ನಡೆದಲ್ಲಿ ಪತ್ರಿಕೋದ್ಯಮ ತನ್ನ ಸ್ವಾತಂತ್ರ್ಯ ಮತ್ತು ಸ್ವಂತಿಕೆ ಎರಡನ್ನೂ ಮೌಲ್ಯಯುತವಾಗಿ ಸಂರಕ್ಷಿಸಿಕೊಳ್ಳಲು ಸಾಧ್ಯ. ಇದು ಸಾಧ್ಯವಾಗುತ್ತಿಲ್ಲ.

ಇಂದು ಮಾಧ್ಯಮ ವಲಯ ಕಳೆದುಕೊಂಡಿರುವುದು ಸ್ವಾತಂತ್ರ್ಯಕ್ಕಿಂತಲೂ ಹೆಚ್ಚು ತನ್ನ ಸ್ವಂತಿಕೆಯನ್ನು. ತಮ್ಮ ಪ್ರಾತಿನಿಧ್ಯದ ಮೂಲ ನೆಲೆಯನ್ನೂ ಗುರುತಿಸಲಾಗದಷ್ಟು ಮಟ್ಟಿಗೆ ಭಟ್ಟಂಗಿತನ, ವಂದಿಮಾಗಧ ಸಂಸ್ಕೃತಿ ಈ ಕ್ಷೇತ್ರದಲ್ಲಿ ಬೇರೂರಿಬಿಟ್ಟಿದೆ. ಹಾಗಾಗಿಯೇ ಕೋಮು ದ್ವೇಷ, ಜನಾಂಗೀಯತೆ, ಯುದ್ಧೋನ್ಮಾದ, ಸ್ತ್ರೀ ದ್ವೇಷ, ಜಾತೀಯತೆ, ಸಾರ್ವಜನಿಕ ಹಿಂಸೆ, ದೌರ್ಜನ್ಯ ಇವೆಲ್ಲವೂ ಟಿವಿ ಪರದೆಯ ಮೇಲೆ, ಪತ್ರಿಕೆಗಳ ಮುಖಪುಟಗಳಲ್ಲಿ ಮನರಂಜನೆಯ ರೋಚಕ ವಸ್ತುಗಳಾಗಿ, ಟಿ ಆರ್ ಪಿ ಗಳಿಕೆಯ ಅಸ್ತ್ರಗಳಾಗಿಬಿಡುತ್ತವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕೋಮುಗಲಭೆ ಪ್ರಚೋದಿಸುವಂತಹ ಸುದ್ದಿಗಳನ್ನು ಬಿತ್ತರಿಸಿದ್ದ ಕೆಲವು ವಾಹಿನಿಗಳಿಗೆ ಪೊಲೀಸ್ ಮುಖ್ಯಸ್ಥರು ಛೀಮಾರಿ ಹಾಕಿರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕೋವಿದ್ ಸಂದರ್ಭದ ದ್ವೇಷಾರೋಪಗಳು, ಕೆಜಿ ಹಳ್ಳಿ, ಡಿಜೆ ಹಳ್ಳಿ, ಮುಝಫರಪುರ, ಸಿಎಎ ವಿರೋಧಿ ಪ್ರತಿಭಟನೆ, ಇತ್ತೀಚಿನ ಹುಬ್ಬಳ್ಳಿ ಘಟನೆ ಮುಂತಾದ ಪ್ರಸಂಗಗಳು ಧುತ್ತೆಂದು ಗೋಚರಿಸುವುದು ಸಹಜ. ಸ್ನೇಹ ವಾತ್ಸಲ್ಯ ಹಂಚಿಕೊಳ್ಳಲು ಬಾಗಿಲಿಗೆ ಬಂದ ಒಂದು ಸಣ್ಣ ನಾಗರಿಕ ಗುಂಪನ್ನು ಭೇಟಿ ಮಾಡಲೂ ನಿರಾಕರಿಸಿ, ಪೊಲೀಸ್ ರಕ್ಷಣೆ ಪಡೆಯುವ ಮಾಧ್ಯಮ ವಾಹಿನಿಗಳ ಧೋರಣೆ, ಸ್ವಂತಿಕೆಯನ್ನು ಕಳೆದುಕೊಂಡು ಪೂರ್ಣ ಬೆತ್ತಲಾಗಿರುವುದರ ಸಂಕೇತವಾಗಿಯೇ ಕಾಣುತ್ತದೆ.
ತಮ್ಮ ಸುತ್ತಮುತ್ತಲಿನ ಆಗುಹೋಗುಗಳಿಗಾಗಿ ಮಾಧ್ಯಮಗಳನ್ನೇ ಆಶ್ರಯಿಸುವ ಬೃಹತ್ ಜನಸಮೂಹ ಇಂದು ಸುಳ್ಳು ಸುದ್ದಿಗಳ ಮೂಲಕವೇ ತಮ್ಮ ಅರಿವಿನ ವಿಸ್ತರಣೆ ಮಾಡಿಕೊಳ್ಳುತ್ತಾ, ಹಾದಿ ತಪ್ಪುತ್ತಿವೆ. ಪ್ರತಿಯೊಂದು ಪತ್ರಿಕೆಯಲ್ಲೂ “ಫ್ಯಾಕ್ಟ್ ಚೆಕ್” ಎಂಬ ಒಂದು ಕಾಲಂ ಪ್ರಕಟವಾಗುತ್ತಿರುವುದು, ಸುಳ್ಳುಸುದ್ದಿಗಳ ಉತ್ಪಾದನೆಯ ಮಟ್ವವನ್ನೂ ತೋರುತ್ತದೆ. ಸಾಮಾಜಿಕ ಜಾಲತಾಣಗಳ ಖಾಸಗಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮದ ವೆಬ್ ತಾಣಗಳ ನೆರವಿನೊಂದಿಗೇ ಇಂದು ಜನಸಾಮಾನ್ಯರು ವರ್ತಮಾನದ ವಾಸ್ತವಗಳನ್ನು ಮತ್ತು ಇತಿಹಾಸದ ಸತ್ಯಾಸತ್ಯತೆಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಈ ಜನತೆಯ ನೋವು, ಸಂಕಷ್ಟ, ಸಮಸ್ಯೆ ಮತ್ತು ಸವಾಲುಗಳಿಗೆ ಸ್ಪಂದಿಸಬೇಕಾದ ಮಾಧ್ಯಮ ಸಮೂಹ ತನ್ನದೇ ಆದ ಸಾಮ್ರಾಜ್ಯದಲ್ಲಿ ಬಂಧಿಯಾಗಿದೆ. ತನ್ನ ಸಾಂವಿಧಾನಿಕ ಹೊಣೆಯನ್ನೂ ಅರಿಯದೆ, ಪ್ರಜಾತಾಂತ್ರಿಕ ಆದ್ಯತೆಗಳ ಪರಿವೆಯೂ ಇಲ್ಲದೆ, ಜನಪರ ಕಾಳಜಿಯೂ ಇಲ್ಲದೆ, ವೃತ್ತಿಧರ್ಮದ ಆಶಯಗಳ ಪರಿಜ್ಞಾನವೂ ಇಲ್ಲದೆ, ಬಂಡವಾಳ-ಮಾರುಕಟ್ಟೆ ಮತ್ತು ಅಧಿಕಾರ ರಾಜಕಾರಣದ ಬಾಲಂಗೋಚಿಗಳಾಗಿರುವ ಮಾಧ್ಯಮಗಳು, ಭಾರತದ ಪ್ರಜಾತಂತ್ರ ವ್ಯವಸ್ಥೆಯೊಳಗಿನ ಕಪ್ಪು ಚುಕ್ಕೆಗಳಾಗಿ ಕಂಡರೆ ಅಚ್ಚರಿಯೇನಿಲ್ಲ. ದೌರ್ಜನ್ಯ, ದಬ್ಬಾಳಿಕೆ ಮತ್ತು ಶೋಷಣೆಯಿಂದ ವಿಮೋಚನೆ ಬಯಸಿ ಮಾಧ್ಯಮಗಳತ್ತ ನೋಡುವ ಸಾಮಾನ್ಯ ಜನತೆ ಇಂತಹ ಮಾಧ್ಯಮಗಳಿಂದಲೇ ವಿಮೋಚನೆಯನ್ನು ಬಯಸಿದರೂ ಅಚ್ಚರಿಯೇನಿಲ್ಲ.
 
			
 
                                 
                                 
                                