ಶಿಮ್ಲಾ:(Himachal Pradesh) ಉತ್ತರ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಲ್ಲಿ 6 ಮೃತದೇಹಗಳು ಪತ್ತೆಯಾಗಿದ್ದು, 53 ಮಂದಿ ನಾಪತ್ತೆಯಾಗಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.ಈ ಕುರಿತು ಮಾಹಿತಿ ಹಂಚಿಕೊಂಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) NDMA)ಹಿಮಾಚಲದ ಕುಲು, ಮಂಡಿ ಮತ್ತು ಶಿಮ್ಲಾ ಪ್ರದೇಶಗಳಲ್ಲಿ ಹಠಾತ್ ಪ್ರವಾಹದಿಂದಾಗಿ ಇಡೀ ಹಳ್ಳಿಗಳು ಕೊಚ್ಚಿಹೋಗಿದ್ದು ಸುಮಾರು ಐವತ್ತು ಮಂದಿ ನಾಪತ್ತೆಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ.
ಶಿಮ್ಲಾ ಜಿಲ್ಲೆಯ ಸಮೇಜ್ ಪ್ರದೇಶ, ರಾಂಪುರ್ ಪ್ರದೇಶ, ಕುಲುವಿನ ಬಘಿಪುಲ್ ಪ್ರದೇಶ ಮತ್ತು ಮಂಡಿಯ ಪದ್ದರ್ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿ ವ್ಯಾಪಕ ವಿನಾಶಕ್ಕೆ ಕಾರಣವಾಗಿದೆ. 53 ಮಂದಿ ನಾಪತ್ತೆಯಾಗಿದ್ದು, ಆರು ಮೃತದೇಹಗಳು ಪತ್ತೆಯಾಗಿವೆ ಎಂದು ಡಿಡಿಎಂಎ ವಿಶೇಷ ಕಾರ್ಯದರ್ಶಿ ಡಿಸಿ ರಾಣಾ ಎಎನ್‌ಐಗೆ ತಿಳಿಸಿದ್ದಾರೆ.ಈ ನಡುವೆ ಅವಘಡದಲ್ಲಿ ಬದುಕುಳಿದ ಇಬ್ಬರು ಅಂದು ನಡೆದ ಕರಾಳ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
ಇಡೀ ಗ್ರಾಮವೇ ಕೊಚ್ಚಿ ಹೋಯಿತು:ಸಮೇಜ್ ಗ್ರಾಮದ ಅನಿತಾ ದೇವಿ ಘಟನೆ ಕುರಿತು ಮಾಹಿತಿ ಹಂಚಿಕೊಂಡಿದ್ದು ಮೇಘ ಸ್ಫೋಟದಿಂದ ನಾವು ವಾಸಿಸುವ ಗ್ರಾಮವೇ ಕೊಚ್ಚಿ ಹೋಗಿದೆ ಕಳೆದ ಬುಧವಾರ ರಾತ್ರಿ ನಾನು ಮತ್ತು ನನ್ನ ಕುಟುಂಬ ಊಟ ಮಾಡಿ ಮಲಗಿದ್ದಾಗ ದೊಡ್ಡ ಶಬ್ದ ಕೇಳಿ ಇಡೀ ಮನೆಯನ್ನು ಅಲುಗಾಡಿಸಿದೆ ಕೂಡಲೇ ಹೊರ ಬಂದು ನೋಡಿದಾಗ ಏನಾಗಿದೆ ಎಂಬುದು ಗೊತ್ತಾಗಿಲ್ಲ ಇಡೀ ಪ್ರದೇಶವೇ ಕೊಚ್ಚಿ ಹೋಗಿತ್ತು ನಮ್ಮ ಮನೆಯ ಪಕ್ಕದಲ್ಲಿದ್ದ ಬೇರೆಯವರ ಮನೆಗಳು ಕಾಣಿಸಲೇ ಇಲ್ಲ ಕೂಡಲೇ ನಾವು ಅಲ್ಲೇ ಪಕ್ಕದಲ್ಲಿದ್ದ ಕಾಳಿಮಾತೆಯ ಗುಡಿಗೆ ಬಂದು ರಾತ್ರಿ ಇಡೀ ರಕ್ಷಣೆ ಪಡೆದೆವು ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ಸಮೇಜ್ ಗ್ರಾಮದ ಮತ್ತೋರ್ವ ಹಿರಿಯ ವ್ಯಕ್ತಿ ಬಕ್ಷಿ ರಾಮ್ ಅವರು ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಕಣ್ಣೀರು ಸುರಿಸುತ್ತಾ, “ನನ್ನ ಕುಟುಂಬ ಸುಮಾರು 14 ರಿಂದ 15 ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ, ನನಗೆ 2 ಗಂಟೆಗೆ ಪ್ರವಾಹದ ಸುದ್ದಿ ಬಂದಿತು ಮತ್ತು ಆ ಸಮಯದಲ್ಲಿ ನಾನು ಹತ್ತಿರದ ಇನ್ನೊಂದು ಊರಿನಲ್ಲಿದ್ದೆ ಹಾಗಾಗಿ ನಾನು ಬದುಕುಳಿದೆ. ಮುಂಜಾನೆ 4 ಗಂಟೆಗೆ ಇಲ್ಲಿಗೆ ಬಂದು ನೋಡಿದಾಗ ಗ್ರಾಮವೇ ನಿರ್ನಾಮವಾಗಿತ್ತು ನನ್ನ ಪ್ರೀತಿ ಪಾತ್ರರು ಕಣ್ಮರೆಯಾಗಿದ್ದಾರೆ ಬದುಕಿ ಬರುತ್ತಾರೆ ಎಂಬ ನಂಬಿಕೆ ಇದೆ ಎಂದು ಬಕ್ಷಿ ರಾಮ್ ಭಾವುಕರಾಗಿದ್ದಾರೆ.