ತಮ್ಮ ಇತ್ತೀಚಿನ ಭಾಷಣವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಜೆಗಳ ಸಾಂವಿಧಾನಿಕ ಹಾಗೂ ಮೂಲಭೂತ ಹಕ್ಕುಗಳನ್ನು ಕುರಿತು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ಭಾರತ ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅಚರಿಸುತ್ತಿರುವ ಸಂದರ್ಭದಲ್ಲಿಯೂ ಈ ದೇಶದ ಸಾರ್ವಭೌಮ ಪ್ರಜೆಗಳು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವುದನ್ನು ಗಮನಿಸಿದಾಗ, ಭಾರತದ ಆಳುವ ವರ್ಗಗಳು ಕಳೆದ ಏಳು ದಶಕಗಳಲ್ಲಿ ತಮ್ಮ ಸಾಂವಿಧಾನಿಕ ಕರ್ತವ್ಯ ಪಾಲಿಸುವುದರಲ್ಲಿ ವಿಫಲರಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಷ್ಟೇ ಅಲ್ಲ ಭಾರತದ ಪ್ರಸ್ತುತ ಜನಪ್ರತಿನಿಧಿಗಳಿಗೆ ಮತ್ತು ಆಡಳಿತ ವ್ಯವಸ್ಥೆಯ ಸಾರಥ್ಯ ವಹಿಸಿರುವವರಿಗೆ, ಪ್ರಜಾತಂತ್ರ ಮತ್ತು ಗಣತಂತ್ರದ ಅರ್ಥವನ್ನು ವಿವರಿಸಿ ಹೇಳಬೇಕಾದ ಅವಶ್ಯಕತೆ ಎದ್ದು ಕಾಣುತ್ತಿದೆ. ಜನರ, ಜನರಿಗಾಗಿ, ಜನರಿಂದ ರೂಪುಗೊಳ್ಳುವ ಒಂದು ಆಡಳಿತ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎಂದು ಬಣ್ಣಿಸಲಾಗುತ್ತದೆ.
ಗಣತಂತ್ರ ಎಂದರೆ ಈ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಅಧಿಕಾರವನ್ನು ಜನಪ್ರತಿನಿಧಿಗಳಿಗೆ ಜನರೇ ನೀಡಬೇಕಾಗುತ್ತದೆ. ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಮತ್ತು ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಮಂತ್ರಿ ಎರಡೂ ಸ್ಥಾನಗಳು ಜನರ ಆಯ್ಕೆಯನ್ನು ಅವಲಂಬಿಸಿರುತ್ತದೆ. ಸಾರ್ವಭೌಮ ಪ್ರಜೆಗಳ ಆಯ್ಕೆಯನ್ನು ಮೀರಿ ಅಥವಾ ಉಲ್ಲಂಘಿಸಿ ಅಥವಾ ಧಿಕ್ಕರಿಸಿ ನಿರಂಕುಶಾಧಿಕಾರವನ್ನು ಸ್ಥಾಪಿಸುವ ಹಕ್ಕು ಯಾವುದೇ ವ್ಯಕ್ತಿ, ಪಕ್ಷ ಅಥವಾ ಗುಂಪಿಗೆ ಇರುವುದಿಲ್ಲ. ಹಾಗಾಗಿಯೇ ಭಾರತದ ಸಂವಿಧಾನವೂ ಸಹ “ ಭಾರತದ ಪ್ರಜೆಗಳಾದ ನಾವು ” ಎಂದು ಆರಂಭಗೊಂಡು “ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ” ಎಂದು ಸಮಾಪ್ತಿಯಾಗುತ್ತದೆ. ಅಂದರೆ ಈ ದೇಶದ ಆಡಳಿತ ನಿರ್ವಹಣೆಯ ಸೂತ್ರಗಳನ್ನು ನಿರೂಪಿಸುವ ಸಂವಿಧಾನವನ್ನು ಜನತೆ ತನಗೆ ತಾನೇ ಅರ್ಪಿಸಿಕೊಂಡು, ಸ್ವೀಕರಿಸಿದೆ, ಹಾಗೆಯೇ ಈ ಸಂವಿಧಾನದ ಸೂತ್ರಗಳನ್ನು ನಿರ್ಧರಿಸಿರುವವರೂ ಪ್ರಜೆಗಳೇ ಆಗಿರುತ್ತಾರೆ.
“ ಜನರು ತಮ್ಮ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆಯೇ ಹೊರತು ಕರ್ತವ್ಯಗಳ ಬಗ್ಗೆ ಯೋಚಿಸುವುದಿಲ್ಲ ” ಎಂಬ ಆಪಾದನೆ ಸಾರ್ವಜನಿಕ ವಲಯದಲ್ಲಿ ಪದೇಪದೇ ಕೇಳಿಬರುತ್ತಿರುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾರ್ವಭೌಮ ಹಕ್ಕು ಬಾಧ್ಯತೆಗಳು ಸಹಜವಾಗಿಯೇ ಒಟ್ಟೊಟ್ಟಿಗೇ ಹೋಗುತ್ತವೆ. ಪ್ರತಿಯೊಬ್ಬ ಪ್ರಜೆಯೂ ದೇಶದ ಕಾನೂನು ಗೌರವಿಸುವುದು, ಸಂವಿಧಾನಕ್ಕೆ ನಿಷ್ಠೆಯಿಂದಿರುವುದು, ಸಾಮಾಜಿಕ ಸೌಹಾರ್ದತೆಯಿಂದ ವರ್ತಿಸುವುದು, ಯಾವುದೇ ರೀತಿಯ ಸಾಮಾಜಿಕ ಅನ್ಯಾಯಗಳನ್ನು ಪ್ರೋತ್ಸಾಹಿಸದಿರುವುದು, ಅಸ್ಪೃಶ್ಯತೆ, ಜಾತಿ ತಾರತಮ್ಯ ಮುಂತಾದ ಧೋರಣೆಯಿಂದ ಹೊರತಾಗಿರುವುದು ಇವೆಲ್ಲವೂ ಕಾನೂನು ಮತ್ತು ಸಂವಿಧಾನದ ಕಟ್ಟಳೆಗಳಿಂದ ಹೊರತಾದ ಮಾನವೀಯ ಮತ್ತು ನೈತಿಕ ಮೌಲ್ಯಗಳು. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಭಾರತದ ಬಹುಸಂಖ್ಯೆಯ ಜನರು ತಮ್ಮ ಈ ಬಾಧ್ಯತೆಗಳನ್ನು ವ್ಯಕ್ತಿಗತ ನೆಲೆಯಲ್ಲಿ ಪಾಲಿಸಿಕೊಂಡೇ ಬದುಕುತ್ತಿದ್ದಾರೆ.

ಆದರೆ ವ್ಯಕ್ತಿಗತ ಚಿಂತನೆ ಮತ್ತು ಧೋರಣೆಯನ್ನು ಸಾಮಾಜಿಕ ಅಥವಾ ಸಾಮುದಾಯಿಕ ನೆಲೆಯಲ್ಲಿಟ್ಟು ನೋಡಿದಾಗ, ಸಮಾಜ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಅಸ್ಮಿತೆ, ಅಸ್ತಿತ್ವ ಮತ್ತು ಅನನ್ಯತೆಯನ್ನು ಗುರುತಿಸಿ, ಅದರಂತೆಯೇ ಹೆಜ್ಜೆಯೂರಬೇಕೆಂದು ಬಯಸುತ್ತದೆ. ಸಮಾಜಗಳು, ಸಮುದಾಯಗಳು ಮತ್ತು ಈ ಎರಡೂ ಚೌಕಟ್ಟುಗಳನ್ನು ನಿಯಂತ್ರಿಸುವ ಮತ, ಧರ್ಮ, ಜಾತಿ ಮತ್ತು ವರ್ಗಗಳ ಸಾಂಸ್ಥಿಕ ನೆಲೆಗಳು ಮನುಷ್ಯನ ವರ್ತನೆಯನ್ನು ಸಮಾಜಮುಖಿಯನ್ನಾಗಿ ಮಾಡುವಂತೆಯೇ ಸಮಾಜಘಾತುಕವಾಗಿಯೂ ಮಾಡಿಬಿಡುತ್ತವೆ. ಈ ರೀತಿಯ ಬೆಳವಣಿಗೆಗಳನ್ನು ನಿಯಂತ್ರಿಸಲೋಸುಗವೇ ಭಾರತದ ಸಂವಿಧಾನದಲ್ಲಿ ಸಾಂವಿಧಾನಿಕ ನೈತಿಕತೆಗೆ, ಮೌಲ್ಯಗಳಿಗೆ ಮತ್ತು ಸಾಮಾಜಿಕ ಭ್ರಾತೃತ್ವದ ಪರಿಕಲ್ಪನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಭಾರತೀಯ ಸಮಾಜವನ್ನು ಈ ಮಾನವೀಯ ದಿಕ್ಕಿನಲ್ಲಿ ಕೊಂಡೊಯ್ಯುವ ಗುರುತರ ಜವಾಬ್ದಾರಿ ಹೊತ್ತಿದ್ದ ಭಾರತದ ಪ್ರಭುತ್ವಕ್ಕೆ ಸಂವಿಧಾನ ದಿಕ್ಕು ಕಾಣಿಸುತ್ತದೆ.
ಸಂವಿಧಾನ ರಚನೆಯ ಸಂದರ್ಭದಲ್ಲೂ ಡಾ ಬಿ ಆರ್ ಅಂಬೇಡ್ಕರ್ ಮತ್ತಿತರರು ಮೂಲಭೂತ ಹಕ್ಕುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಪ್ರಜೆಗಳ ಕರ್ತವ್ಯ ಮತ್ತು ಬಾಧ್ಯತೆಗಳ ನೆಲೆಯಲ್ಲಿ ನಿರ್ದಿಷ್ಟವಾದ ಮೂಲಭೂತ ಹಕ್ಕುಗಳನ್ನು ರೂಪಿಸುವುದಿಲ್ಲ. ಮಹಾತ್ಮ ಗಾಂಧಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ತಮ್ಮ ಲೇಖನವೊಂದರಲ್ಲಿ ಈ ಮೂಲಭೂತ ಕರ್ತವ್ಯಗಳ ಬಗ್ಗೆ ಪ್ರಸ್ತಾಪಿಸಿದ್ದರೂ, ಸಂವಿಧಾನ ರಚಯಿತರಿಗೆ ಇದು ಮುಖ್ಯವಾಗಿ ಕಂಡಿರಲಿಲ್ಲ. ಹಕ್ಕು ಮತ್ತು ಬಾಧ್ಯತೆಗಳು ಸರಿಸಮಾನವಾಗಿಯೇ ಇರಬೇಕು ಎಂಬುದು ವಾಸ್ತವವೇ ಆದರೂ, ಸಂವಿಧಾನದಲ್ಲಿ ಹಕ್ಕುಗಳೇ ಪ್ರಧಾನವಾಗಿ ಕಾಣಿಸಿಕೊಳ್ಳುತ್ತವೆ. ಮೂಲಭೂತ ಹಕ್ಕುಗಳಂತೆಯೇ ಕರ್ತವ್ಯಗಳನ್ನೂ ಸಾಂವಿಧಾನಿಕ ಸಂಹಿತೆಗೊಳಪಡಿಸಲು ಹೆಚ್ಚಿನ ಒಲವು ಕಂಡುಬಂದಿರಲಿಲ್ಲ. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ ಬಿ ಆರ್ ಅಂಬೇಡ್ಕರ್ ಸಂವಿಧಾನ ಅನುಚ್ಚೇದ 32ರಲ್ಲಿ, ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಲ್ಲಿ ಇರುವ ಪರಿಹಾರ ಮಾರ್ಗಗಳನ್ನು ಸೂಚಿಸುತ್ತಾರೆ. ಈ ಅನುಚ್ಚೇದವನ್ನು ಅಂಬೇಡ್ಕರ್ ಸಂವಿಧಾನದ ಅಂತರಾತ್ಮ ಎಂದೇ ಬಣ್ಣಿಸುತ್ತಾರೆ.
ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ಸಂವಿಧಾನ ಅನುಚ್ಚೇದ 12 ರಿಂದ 25ರವರೆಗೆ, ಮೂರನೆಯ ಪರಿಚ್ಚೇದದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಹಕ್ಕುಗಳು ಸಾಂವಿಧಾನಿಕ ರಕ್ಷಣೆಯನ್ನು ಹೊಂದಿದ್ದು, ಹಕ್ಕುಗಳ ಉಲ್ಲಂಘನೆಯನ್ನು ನ್ಯಾಯಾಂಗದ ಮೂಲಕ ಪ್ರಶ್ನಿಸುವ ಹಕ್ಕು ಪ್ರಜೆಗಳಿಗೆ ಇರುತ್ತದೆ. ಆದರೆ ಹಕ್ಕುಗಳನ್ನು ಚಲಾಯಿಸುವ ಪರಮಾಧಿಕಾರವನ್ನು ಸಂವಿಧಾನ ನೀಡುವುದಿಲ್ಲ. ಅಗತ್ಯವೆನಿಸಿದಲ್ಲಿ ಕೇಂದ್ರ ಸರ್ಕಾರಕ್ಕೆ ಈ ಹಕ್ಕುಗಳನ್ನು ನಿರ್ಬಂಧಿಸುವ ಸೀಮಿತ ಅಧಿಕಾರವನ್ನೂ ಸಂವಿಧಾನ ನೀಡಿರುತ್ತದೆ. ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯನ್ನು ವಿರೋಧಿಸುವ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು, ಸಾಂವಿಧಾನಿಕ ಪರಿಹಾರೋಪಾಯಗಳ ಹಕ್ಕು ಇವು ಭಾರತದ ಸಂವಿಧಾನ ಪ್ರಜೆಗಳಿಗೆ ನೀಡಿರುವ ಮೂಲಭೂತ ಹಕ್ಕುಗಳು ಎಂದು ಪರಿಗಣಿಸಲ್ಪಟ್ಟಿವೆ. ಈ ಹಕ್ಕುಗಳು ಪರಮೋಚ್ಛ ಅಲ್ಲದಿದ್ದರೂ, ಯಾವುದೇ ಸಂದರ್ಭದಲ್ಲೂ ಪ್ರಜೆಗಳ ಈ ಹಕ್ಕುಗಳನ್ನು ಕಾಪಾಡುವುದು ಸರ್ಕಾರಗಳ ಜವಾಬ್ದಾರಿಯಾಗಿರುತ್ತದೆ.

ಮೂಲ ಸಂವಿಧಾನದಲ್ಲಿ ಯಾವುದೇ ರೀತಿಯ ಮೂಲಭೂತ ಕರ್ತವ್ಯಗಳನ್ನು ಸಂಹಿತೆಯಾಗಿ ಜಾರಿಗೊಳಿಸಿರಲಿಲ್ಲ. 1976ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಧಾನಿ ಶ್ರೀಮತಿ ಇಂದಿರಾಗಾಂದಿ ಸಂವಿಧಾನ ತಿದ್ದುಪಡಿ 42ರ ಮೂಲಕ 10 ಮೂಲಭೂತ ಕರ್ತವ್ಯಗಳನ್ನು ಜಾರಿಗೊಳಿಸಿದ್ದರು. ನಂತರ 2002ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಮತ್ತೊಂದು ಅಂಶವನ್ನು ಸೇರ್ಪಡೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ರಚಿಸಲಾಗಿದ್ದ ಅಂದಿನ ವಿದೇಶಾಂಗ ಸಚಿವ ಸ್ವರಣ್ ಸಿಂಗ್ ನೇತೃತ್ವದ ಸಮಿತಿ ಮಾಡಿದ್ದ ಎಲ್ಲ ಶಿಫಾರಸುಗಳನ್ನೂ ಜಾರಿಗೊಳಿಸಲಾಗಲಿಲ್ಲ. ಈ ಮೂಲಭೂತ ಹಕ್ಕುಗಳಿಗೆ ಚ್ಯುತಿ ಉಂಟುಮಾಡುವ ಪ್ರಜೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಶಿಫಾರಸ್ಸನ್ನು ಇಂದಿರಾ ಸರ್ಕಾರ ತಿರಸ್ಕರಿಸಿತ್ತು. ಪ್ರಜೆಗಳಿಂದ ಪಾಲನೆಯಾಗಲು ನಿರೀಕ್ಷಿಸಲಾಗುವ ಮೂಲಭೂತ ಕರ್ತವ್ಯಗಳು ಒಂದು ರೀತಿಯಲ್ಲಿ ಜನರನ್ನೇ ಪ್ರತಿನಿಧಿಸುವ ಸರ್ಕಾರಗಳ ಸಾಂವಿಧಾನಿಕ ಕರ್ತವ್ಯಗಳೂ ಆಗಿರುತ್ತವೆ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
(ಮುಂದುವರೆಯುವುದು)