
—-ನಾ ದಿವಾಕರ—-
ನವ ಉದಾರವಾದದ ಪ್ರಭಾವಳಿಯಲ್ಲೇ ಸಿದ್ಧರಾಮಯ್ಯ ಅವರ ಸಮಾಜಮುಖಿ ಬಜೆಟ್ ಒಳನೋಟ
ಭಾರತದ ರಾಜಕೀಯ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಳೆದ ಮೂರು ದಶಕಗಳಲ್ಲಿ ಆಗಿರುವ ಮಹತ್ವದ ಪರಿವರ್ತನೆಯೊಂದನ್ನು ಗುರುತಿಸಲು ಸಾಧ್ಯ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಹೆಸರನ್ನು ಸೂಚಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮನ್ವಂತರದ ಸಾಂಕೇತಿಕ ಸೂಚನೆ ನೀಡಿದ್ದಾರೆ. ಜಾಗತೀಕರಣ-ನವ ಉದಾರವಾದದ ಪಿತಾಮಹ ಎಂದೇ ಹೇಳಬಹುದಾದ ಸಿಂಗ್ 1990ರ ದಶಕದಲ್ಲಿ ರಚಿಸಿದ, ಐಎಂಎಫ್-ವಿಶ್ವಬ್ಯಾಂಕ್ ನಿರ್ದೇಶಿತ ಹಣಕಾಸು ನೀತಿಗಳ ನೀಲ ನಕ್ಷೆ 2025ರಲ್ಲೂ ಭಾರತದ ಆರ್ಥಿಕ ನೀತಿಗಳ ಅಡಿಪಾಯವಾಗಿದೆ. ಇದರ ಮೂಲ ಮಾರುಕಟ್ಟೆ ತತ್ವಗಳಿಗೆ ಭಂಗ ಉಂಟಾಗದ ಹಾಗೆ ಸಮತೋಲನದ ಬಜೆಟ್ ಮಂಡಿಸುವ ಕಲೆಯನ್ನು ಮುಖ್ಯವಾಹಿನಿಯ ಎಲ್ಲ ಪಕ್ಷಗಳೂ ಕರಗತಮಾಡಿಕೊಂಡಿವೆ. ಇದಕ್ಕೆ ʼ ಸಮಾಜವಾದಿ ʼ ಎನಿಸಿಕೊಂಡಿರುವ ಕರ್ನಾಟಕದ ಸಿದ್ಧರಾಮಯ್ಯ ಸರ್ಕಾರವೂ ಹೊರತೇನಲ್ಲ.
ಬೃಹದಾರ್ಥಿಕತೆಯ (Macro Economy) ನಿರ್ದೇಶಿತ ನಿಯಮಗಳಿಗೆ ಬದ್ದವಾಗಿದ್ದುಕೊಂಡೇ, ಇಲ್ಲಿ ರೂಪಿಸಲ್ಪಡುವ ಕಾರ್ಪೋರೇಟ್-ಮಾರುಕಟ್ಟೆ ನಿರ್ದೇಶಿತ ಆರ್ಥಿಕ ನೀತಿಗಳನ್ನು ಅಳವಡಿಸಿಕೊಳ್ಳುವ ಚುನಾಯಿತ ಸರ್ಕಾರಗಳು, ಈ ಮಾರುಕಟ್ಟೆ ನೀತಿಗಳ ಪರಿಣಾಮವಾಗಿ ಅವಕಾಶವಂಚಿತರಾಗುವ ತಳಸಮಾಜದ ಬಹುಸಂಖ್ಯಾತ ಜನತೆಯತ್ತ ನೋಡುವುದು ರಾಜಕೀಯ ಅನಿವಾರ್ಯವೂ ಹೌದು, ಸಮಾಜಮುಖಿಯಾಗಿ ತೋರ್ಪಡಿಸಿಕೊಳ್ಳುವ ವಿಧಾನವೂ ಹೌದು. ಹಾಗಾಗಿ ತಳಸಮಾಜದಲ್ಲಿ ಮಾರುಕಟ್ಟೆ ಆರ್ಥಿಕತೆಯು ಸೃಷ್ಟಿಸುವ ಅಸಮಾನತೆ, ತಾರತಮ್ಯ ಮತ್ತು ಒಳಬಿರುಕುಗಳನ್ನು ಸಮತೋಲನಗೊಳಿಸುವುದು ಸರ್ಕಾರಗಳ ಆದ್ಯತೆಯಾಗುತ್ತದೆ. ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಜನಸ್ತೋಮದ ಜೀವನ ಮತ್ತು ಜೀವನೋಪಾಯದ ಮಾರ್ಗಗಳನ್ನು ಸುಗಮಗೊಳಿಸುವ ಕಾರ್ಯತಂತ್ರಗಳು ಇಲ್ಲಿ ಮುಖ್ಯವಾಗುತ್ತವೆ. ಇದನ್ನೇ ಆಧುನಿಕ ರಾಜಕೀಯ ಪರಿಭಾಷೆಯಲ್ಲಿ ʼ ಗ್ಯಾರಂಟಿ ʼ ಯೋಜನೆಗಳು ಎನ್ನಲಾಗುತ್ತಿದೆ.

ರಾಜ್ಯ ಆರ್ಥಿಕತೆಯ ಆಯಾಮಗಳು
ಇಂದು ಭಾರತದ ಯಾವುದೇ ರಾಜ್ಯ ಸರ್ಕಾರವೂ ಈ ಪರಿಕಲ್ಪನೆಯಿಂದಾಚೆಗೆ ಯೋಚಿಸಲೂ ಸಾಧ್ಯವಿಲ್ಲದಂತಾಗಿದೆ. ಕರ್ನಾಟಕದ ಬಿಜೆಪಿ ನಾಯಕರು ಸಿದ್ಧರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಬೊಕ್ಕಸ ಬರಿದಾಗುತ್ತದೆ, ಸಾಲದ ಹೊರೆ ಹೆಚ್ಚಾಗುತ್ತದೆ ಎಂದು ಹೇಳುವ ಮುನ್ನ ಒಮ್ಮೆ ಇತ್ತೀಚೆಗೆ ಅಧಿಕಾರಕ್ಕೆ ಬಂದ ದೆಹಲಿ ಮತ್ತು ಮಹಾರಾಷ್ಟ್ರದ ಬಿಜೆಪಿ ಸರ್ಕಾರಗಳತ್ತ ಗಮನಹರಿಸಿದರೆ, ಈ ಆರೋಪಗಳು ಎಷ್ಟು ಶುಷ್ಕ ಎಂದು ಅರ್ಥವಾಗುತ್ತದೆ. ಚುನಾವಣಾ ಪ್ರಣಾಳಿಕೆ ಎನ್ನುವುದೇ ಗ್ಯಾರಂಟಿಗಳ ಕಾರ್ಯಸೂಚಿಯಾಗಿದ್ದು, ನರೇಂದ್ರ ಮೋದಿ ಸರ್ಕಾರವು ಮೂರನೆಯ ಅವಧಿಯಲ್ಲೂ ಇದನ್ನೇ ಅನುಸರಿಸಿರುವುದು, ವಿಕಸಿತ ಭಾರತ ಸಾಗಬಹುದಾದ ದಾರಿಯನ್ನು ಸೂಚಿಸುತ್ತದೆ. ಕರ್ನಾಟಕವೂ ಇದೇ ದಾರಿಯನ್ನು ಕ್ರಮಿಸುತ್ತಿದೆ.
ಹಾಗಾಗಿ ಕರ್ನಾಟಕದ ಸಮಾಜವಾದಿ ಮುಖ್ಯಮಂತ್ರಿಯಿಂದ ನವ ಉದಾರವಾದದಿಂದ ಹೊರತಾದ ಆರ್ಥಿಕ ಉಪಕ್ರಮಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. 2025-26ರ ಹಣಕಾಸು ವರ್ಷಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ ಬಜೆಟ್ ಈ ದೃಷ್ಟಿಯಿಂದ ನೋಡಿದಾಗ, ಆಡಳಿತಾತ್ಮಕವಾದ ಸೂಕ್ಷ್ಮ ಆರ್ಥಿಕತೆಯ (Micro Economy) ಹಣಕಾಸು ನೀತಿಗಳನ್ನು ಅನುಸರಿಸುವ ಮೂಲಕ ಬೃಹದಾರ್ಥಿಕತೆಯು ಸೃಷ್ಟಿಸುವ ಅಸಮಾನತೆಗಳನ್ನು ಸಮತೋಲನಗೊಳಿಸುವ ಪ್ರಯತ್ನವಾಗಿ ಕಾಣುತ್ತದೆ. ಇದರಿಂದಾಚೆಗೆ ಕಾಣಬಹುದಾದ ಕಾರ್ಪೋರೇಟ್ ಮಾರುಕಟ್ಟೆ ಪರವಾದ ನೀತಿಗಳಿಂದ ಭಿನ್ನವಾದ ಹಾದಿಯನ್ನು ಈ ಸರ್ಕಾರದಿಂದ ನಿರೀಕ್ಷಿಸುವುದು ಅಪೇಕ್ಷಣೀಯವಾದರೂ ವಾಸ್ತವಿಕ ನೆಲೆಯಲ್ಲಿ ವ್ಯರ್ಥಾಲಾಪವಾಗುತ್ತದೆ. ಇದು ಭಾರತದ ದುಡಿಯುವ ವರ್ಗಗಳು ಎದುರಿಸುತ್ತಿರುವ ಜಟಿಲ ಸಮಸ್ಯೆಯಾಗಿದ್ದು, ಪರ್ಯಾಯ ರಾಜಕಾರಣ ಮಾತ್ರ ಪರ್ಯಾಯ ಆರ್ಥಿಕತೆಯನ್ನು ಆಗುಮಾಡಬಹುದು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 2025-26ರ ಬಜೆಟ್ ಗಮನಿಸಿದಾಗ ಬೃಹದಾರ್ಥಿಕ ಚೌಕಟ್ಟಿನೊಳಗೆ ಪ್ರಚಲಿತವಾಗಿರುವ ʼ ಅಭಿವೃದ್ಧಿ ಮಾದರಿಯನ್ನೇ ಅನುಸರಿಸಿರುವುದು ಸ್ಪಷ್ಟವಾಗುತ್ತದೆ. ನವ ಉದಾರವಾದದ ನೆಚ್ಚಿನ ಕಾರ್ಯಸೂಚಿ ʼಮೂಲ ಸೌಕರ್ಯಗಳ ಅಭಿವೃದ್ಧಿ ʼ ಇಲ್ಲಿಯೂ ವ್ಯಕ್ತವಾಗಿದ್ದು ಇದಕ್ಕಾಗಿಯೇ 8,000 ಕೋಟಿ ರೂಗಳನ್ನು ಮೀಸಲಾಗಿಡಲಾಗಿದೆ. ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆ ಸಮಾವೇಶ (GIM) ಈ ಉಪಕ್ರಮದ ಸೂಚಕವಾಗಿತ್ತು. ಆದರೆ ವ್ಯಕ್ತಿಗತವಾಗಿ ತಮ್ಮ ಸಮಾಜವಾದಿ ನಂಬಿಕೆಗಳು ಮತ್ತು ತಳಸಮಾಜದಲ್ಲಿರುವ ಅಸಮಾನತೆಗಳಿಗೆ ಸ್ಪಂದಿಸುವ ಸಮಾಜಮುಖಿ ಧೋರಣೆಯನ್ನು ಬಿಂಬಿಸುವ ರೀತಿಯಲ್ಲಿ ಮುಖ್ಯಮಂತ್ರಿಗಳು ಎಲ್ಲ ಜಾತಿ ವರ್ಗಗಳನ್ನೂ ತಲುಪುವ ಪ್ರಯತ್ನಗಳನ್ನು ಬಜೆಟ್‌ನಲ್ಲಿ ಮಾಡಿದ್ದಾರೆ.
ಸಮಾಜಮುಖಿ ಧೋರಣೆಯ ಝಲಕ್
ಈ ಬಜೆಟ್‌ನಲ್ಲಿ ಅಪ್ಯಾಯಮಾನ ಎನಿಸುವ ಒಂದು ಅಂಶ ಎಂದರೆ ಸಿದ್ಧರಾಮಯ್ಯನವರು ತಮ್ಮ ಅಭಿವೃದ್ಧಿ ಕಲ್ಪನೆಯಲ್ಲಿ ಯೋಚಿಸಿರುವ ಆರು ಆಯಾಮಗಳು. ಜನಕಲ್ಯಾಣ ಕಾರ್ಯಕ್ರಮಗಳು, ಕೃಷಿ-ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಮೂಲ ಸೌಕರ್ಯಗಳು, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಆಡಳಿತ ಸುಧಾರಣೆ. ಈ ಆರೂ ಆಯಾಮಗಳಲ್ಲಿ ಗುರುತಿಸಬೇಕಾದ ಅವಕಾಶವಂಚಿತ, ಅಂಚಿಗೆ ತಳ್ಳಲ್ಪಟ್ಟ ಜನಸಮುದಾಯಗಳನ್ನು ಗುರುತಿಸುವ ನಿಟ್ಟಿನಲ್ಲಿ ಅಹಿಂದ, ಎಸ್‌ಸಿ-ಎಸ್‌ಟಿ, ಅಲ್ಪಸಂಖ್ಯಾತರು, ಮಹಿಳೆಯರು, ಅಂಗನವಾಡಿ-ಆಶಾ ಮುಂತಾದ ಸಾಮಾಜಿಕ ಯೋಜನೆಗಳಿಗೆ ಗಮನಹರಿಸುವ ಮೂಲಕ ಸಮತೋಲನಗೊಳಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಪ್ರವರ್ಗ 1, 2ಎ , 2ಬಿ ( ಮುಸ್ಲಿಂ ಸಮುದಾಯದವರಿಗೆ ಕಾಮಗಾರಿ ಗುತ್ತಿಗೆಯಲ್ಲಿ 2 ಕೋಟಿ ರೂಗಳವರೆಗೆ ಮತ್ತು ಕೈಗಾರಿಕಾ ಪ್ರದೇಶದ ಭೂಹಂಚಿಕೆಯಲ್ಲೂ ಶೇಕಡಾ 20ರಷ್ಟು ಮೀಸಲಾತಿ ನೀಡಿರುವುದು ಸಕಾರಾತ್ಮಕ ಕ್ರಮವಾಗಿದೆ. ಇದೊಂದು ಕಾರಣಕ್ಕೇ ಬಿಜೆಪಿ ನಾಯಕರಿಗೆ ಇದು ಮುಸ್ಲಿಂ-ಬಜೆಟ್ ಆಗಿ ಕಾಣುವುದು ಸಂಕುಚಿತ ವಕ್ರದೃಷ್ಟಿಯ (Myopic View) ಫಲ ಅಷ್ಟೇ.

ಕರ್ನಾಟಕದ ರೈತರನ್ನು ಮತ್ತು ಒಟ್ಟಾರೆ ಕೃಷಿ ವಲಯವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶೇಕಡಾ 14ರಷ್ಟು ಅನುದಾನವನ್ನು ನೀಡಿರುವುದನ್ನು ಸ್ವಾಗತಿಸುತ್ತಲೇ, ಗುರುತಿಸಬೇಕಾದ ಸಂಗತಿ ಎಂದರೆ ಕೇಂದ್ರ ಸರ್ಕಾರವು ಒಮ್ಮೆ ಹಿಂಪಡೆದು ಪುನಃ ಜಾರಿಗೊಳಿಸಲು ಮುಂದಾಗಿರುವ ಹೊಸ ಕೃಷಿ ನೀತಿಗಳನ್ನು ಮತ್ತು ವಿದ್ಯುತ್ ಖಾಸಗೀಕರಣದ ನೀತಿಗಳನ್ನು ತಿರಸ್ಕರಿಸುವ ಯಾವುದೇ ಪ್ರಸ್ತಾಪ ಇಲ್ಲದಿರುವುದು ನಿರಾಸೆ ಮೂಡಿಸುತ್ತದೆ. ರಾಜ್ಯ ಸರ್ಕಾರ ಇನ್ನೂ ಸಹ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದಿಲ್ಲ ಎನ್ನುವುದೂ ಗಮನಿಸಬೇಕಾದ ಅಂಶ. ಕೃಷಿ ಉತ್ಪಾದನೆ ಹೆಚ್ಚಿಸುವುದು, ಯಾಂತ್ರೀಕರಣ ಮತ್ತು ನೀರಾವರಿಗೆ ಒತ್ತು ನೀಡಿರುವುದು, ಐದು ಸಾವಿರ ಕಿರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು,ಕೃಷಿ ಹೊಂಡಗಳ ನಿರ್ಮಾಣ ಇವೆಲ್ಲವೂ ಸಣ್ಣ-ಅತಿಸಣ್ಣ ರೈತರಿಗೆ ನೆರವಾಗುವ ಅಂಶಗಳು.
ಆದರೆ ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ನೂತನ ಕೃಷಿ ನೀತಿ ಮತ್ತು ವಿದ್ಯುತ್ ಖಾಸಗೀಕರಣ ನೀತಿಗಳನ್ನು ತಿರಸ್ಕರಿಸದೆ ಹೋದರೆ ಈ ಯೋಜನೆಗಳೆಲ್ಲವೂ ಅಲಂಕಾರಿಕವಾಗಿಬಿಡುತ್ತವೆ. ಸರ್ಕಾರದ ಅಧಿಕೃತ ಮಾಹಿತಿಯ ಅನುಸಾರವೇ ರಾಜ್ಯದಲ್ಲಿ 2022-24ರ ಅವಧಿಯಲ್ಲಿ 2,329 ರೈತರು ಆತ್ಮಹತ್ಯೆಗೀಡಾಗಿದ್ದಾರೆ. ಪಿಎಂ ಕಿಸಾನ್, ಫಸಲ್ ಬಿಮಾ ಯೋಜನೆಗಳ ಹೊರತಾಗಿಯೂ ರೈತ ಆತ್ಮಹತ್ಯೆಗಳು ಕಡಿಮೆಯಾಗದಿರುವುದು ವ್ಯವಸ್ಥೆಯ ಲೋಪವನ್ನು (Systemic Defect) ಎತ್ತಿ ತೋರಿಸುತ್ತದೆ. ರೈತರ ಆತ್ಮಹತ್ಯೆಗೆ ಪ್ರಧಾನವಾಗಿ ಸಾಲದ ಹೊರೆಯೇ ಕಾರಣವಾಗಿರುತ್ತದೆ. ಇದರೊಟ್ಟಿಗೆ ಕೌಟುಂಬಿಕ ಸಮಸ್ಯೆಗಳು, ನಿರುದ್ಯೋಗ, ಆದಾಯದ ಕುಸಿತ ಮತ್ತು ಬೇಸಾಯದಲ್ಲಿನ ಏರಿಳಿತಗಳೂ ಕಾರಣವಾಗಿರುತ್ತವೆ. ಪ್ರಸಕ್ತ ಬಜೆಟ್‌ನಲ್ಲಿ 35 ಲಕ್ಷ ರೈತರಿಗೆ 28 ಸಾವಿರ ಕೋಟಿ ರೂ ಸಾಲ ವಿತರಣೆಗೆ ನಿರ್ಧರಿಸಿದ್ದರೂ, ಈ ಸಾಲಗಳು ಅನುತ್ಪಾದಕವಾಗದಂತೆ ಎಚ್ಚರವಹಿಸುವ ಸಾಂಸ್ಥಿಕ ಜವಾಬ್ದಾರಿಯನ್ನು ಸರ್ಕಾರ ನಿಭಾಯಿಸಬೇಕಿದೆ. ಮೈಕ್ರೋ ಫೈನಾನ್ಸ್‌ಗಳ ಕಿರುಕುಳವನ್ನು ನಿಯಂತ್ರಿಸುವ ಸುಗ್ರೀವಾಜ್ಞೆ ಈ ನಿಟ್ಟಿನಲ್ಲಿ ಸಹಾಯಕವಾಗಲಿದೆ.

ಶಿಕ್ಷಣ ಆರೋಗ್ಯ ವಲಯದ ಕಾಳಜಿ
2025ರ ಬಜೆಟ್‌ನ ಮುಖ್ಯ ಆಕರ್ಷಣೆ ಎಂದರೆ ಶಿಕ್ಷಣ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿರುವುದು. ಕಳೆದ ಬಜೆಟ್‌ಗೆ ಹೋಲಿಸಿದರೆ ಶೇಕಡಾ 2ರಷ್ಟು ಕಡಿಮೆ ಅನುದಾನವನ್ನು ಒದಗಿಸಲಾಗಿದ್ದರೂ ಶೇಕಡಾ 10ರಷ್ಟು ಬಜೆಟ್ ಅನುದಾನದ ಮೂಲಕ ಶೈಕ್ಷಣಿಕ ವಲಯಕ್ಕೆ 45,286 ಕೋಟಿ ರೂಗಳನ್ನು ನೀಡಿರುವುದು ಸ್ವಾಗತಾರ್ಹ ಕ್ರಮ. ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಉತ್ತಮಪಡಿಸುವ ಉಪಕ್ರಮಗಳು ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುತ್ತದೆ. ಆದರೆ 4,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗವನ್ನು ಆರಂಭಿಸುವುದು ಕನ್ನಡ ಕಲಿಕೆಗೆ ಹಿನ್ನಡೆ ಉಂಟುಮಾಡಬಹುದು. ಆಂಗ್ಲ ಭಾಷೆಯನ್ನು ಪ್ರಾಥಮಿಕ ಹಂತದಿಂದಲೇ ಒಂದು ಭಾಷೆಯಾಗಿ ಕಲಿಸುವುದು ವಿವೇಕಯುತವಾಗುತ್ತಿತ್ತು. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸ್ಪರ್ಧೆ ನೀಡಲು ಈ ದ್ವಿಭಾಷಾ ಶಾಲೆಗಳು ನೆರವಾಗುವುದಾದರೂ, ಈಗಾಗಲೇ ಕುಸಿದಿರುವ ಕನ್ನಡ ಮಾಧ್ಯಮದ ಕಲಿಕೆ ಮತ್ತಷ್ಟು ಕುಸಿಯುವ ಸಾಧ್ಯತೆಗಳಿರುತ್ತವೆ. ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಹಾಗೂ ಮಕ್ಕಳ ಕಲಿಕಾ ಸಾಮರ್ಥ್ಯದ ಬೆಳವಣಿಗೆಯ ದೃಷ್ಟಿಯಿಂದ ಇದು ಅಪೇಕ್ಷಣೀಯ ಎನಿಸುವುದಿಲ್ಲ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಸಕಾರಾತ್ಮಕ ಕ್ರಮ ಎಂದರೆ ಪ್ರಾಥಮಿಕ-ಪ್ರೌಢಶಾಲೆಗಳಲ್ಲಿ ದುಡಿಯುತ್ತಿರುವ ಅತಿಥಿ ಬೋಧಕರಿಗೆ ಮತ್ತು ಬಿಸಿಯೂಟದ ನೌಕರರಿಗೆ ಮಾಸಿಕ ಗೌರವಧನವನ್ನು ತಲಾ 2,000 ಮತ್ತು 1,000ದಷ್ಟು ಹೆಚ್ಚಿಸಿರುವುದು. 100ಕ್ಕೂ ಹೆಚ್ಚು ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮತ್ತು 50 ಪ್ರೌಢಶಾಲೆಗಳನ್ನು ಪದವಿಪೂರ್ವ ದರ್ಜೆಗೆ ಉನ್ನತೀಕರಿಸುವುದು ಹೆಣ್ಣುಮಕ್ಕಳ ಶಾಲಾ ದಾಖಲಾಗಿ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ. ಆದರೆ ಅತಿಥಿ ಶಿಕ್ಷಕರಿಗೆ, ಉಪನ್ಯಾಸಕರಿಗೆ ಕೇವಲ ಗೌರವ ಧನ ಹೆಚ್ಚಿಸುವುದರಿಂದ ಅವರ ಅನಿಶ್ಚಿತ ಬದುಕು ಹಸನಾಗುವುದಿಲ್ಲ. ಖಾಲಿ ಇರುವ 5,267 ಶಿಕ್ಷಕ ಹುದ್ದೆಗಳನ್ನು ಭರ್ತಿಮಾಡುವುದಾಗಿ ಘೋಷಿಸಿದ್ದರೂ, ಶಾಲಾ ಕಾಲೇಜುಗಳಲ್ಲಿರುವ ಸಾವಿರಾರು ಅತಿಥಿ ಬೋಧಕರಿಗೆ ಶಾಶ್ವತ ನೌಕರಿ ಒದಗಿಸುವತ್ತ ಯೋಚಿಸುವುದು ಸಮಾಜವಾದಿ ಮುಖ್ಯಮಂತ್ರಿಯ ಆದ್ಯತೆಯಾಗಬೇಕಿತ್ತು. ಕಾರ್ಪೋರೇಟ್ ಮಾರುಕಟ್ಟೆಯ ಆರ್ಥಿಕತೆಯ ತಡೆಗೋಡೆಗಳು ನೇರವಾಗಿ ಕಾಣಿಸುವುದು ಇಂತಹ ವಿದ್ಯಮಾನಗಳಲ್ಲೇ.

ಬಜೆಟ್‌ನಲ್ಲಿ ಘೋಷಿಸಿರುವಂತೆ ಸರ್ಕಾರವು 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತಿರುವುದು ಸ್ವಾಗತಾರ್ಹವೇ ಆದರೂ, ಇಲ್ಲಿಯೂ ಸಹ ಖಾಸಗಿ-ಸಾರ್ವಜನಿಕ ಸಹಭಾಗಿತ್ವ ಎನ್ನುವುದು ಶಿಕ್ಷಣ ವ್ಯವಸ್ಥೆಯನ್ನು ಮಾರುಕಟ್ಟೆಯ ಕೈಗೆ ಒಪ್ಪಿಸುವ ತಂತ್ರವಾಗಿಯೇ ಕಾಣುತ್ತದೆ. ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನ ಶೇಕಡಾ 17ರಷ್ಟು ಅನುದಾನ ನೀಡಿರುವುದು ಸಿದ್ಧರಾಮಯ್ಯ ಅವರ ಸಾಮಾಜಿಕ ಕಳಕಳಿ ಮತ್ತು ಕಾಳಜಿಯನ್ನು ತೋರಿಸುತ್ತದೆ. ಆದರೆ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ತಳಸಮಾಜದ ಮಕ್ಕಳ ಪೌಷ್ಟಿಕತೆ ಮತ್ತು ಕಲಿಕೆಯನ್ನು ಕಾಪಾಡುವ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ಇನ್ನೂ ಹೆಚ್ಚಿಸಬೇಕಿತ್ತು. ಕಾರ್ಯಕರ್ತೆಯರಿಗೆ 1,000 ರೂ, ಸಹಾಯಕರಿಗೆ 750 ರೂ ಹೆಚ್ಚಿಸಿರುವುದು ಸಮರ್ಪಕ ಎನಿಸುವುದಿಲ್ಲ.
ಶ್ರಮಿಕರ ಬದುಕಿನ ಒಳನೋಟ
ಕಟ್ಟಡ ಕಾರ್ಮಿಕರಿಗೆ ಸಹಜ ಮರಣ ಹೊಂದಿದಾಗ ನೀಡಲಾಗುವ ಪರಿಹಾರ ಧನವನ್ನು 75 ಸಾವಿರದಿಂದ 1.5 ಲಕ್ಷಕ್ಕೆ, ಕೆಲಸದ ಸ್ಥಳದಲ್ಲಿ ನಿಧನರಾದರೆ 5 ಲಕ್ಷದಿಂದ 8 ಲಕ್ಷ ರೂಗಳಿಗೆ ಹೆಚ್ಚಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಬಹುತೇಕ ಆಂತರಿಕ-ಹೊರ ರಾಜ್ಯಗಳ ವಲಸೆ ಕಾರ್ಮಿಕರನ್ನೇ ಒಳಗೊಂಡಿರುವ ಈ ಅಸಂಘಟಿತ ಕ್ಷೇತ್ರದ ಸಮಗ್ರ ಯೋಗಕ್ಷೇಮವನ್ನು ಗಮನಿಸುವ ನಿಟ್ಟಿನಲ್ಲಿ ಸಿದ್ಧರಾಮಯ್ಯ ಸರ್ಕಾರ ಒಂದು ವಲಸೆ ಕಾರ್ಮಿಕ ನೀತಿಯನ್ನು ರೂಪಿಸಬಹುದಿತ್ತು. ಇದು ದೇಶದಲ್ಲೇ ಪ್ರಥಮ ಪ್ರಯತ್ನವೂ ಆಗುತ್ತಿತ್ತು. ಕಾರ್ಮಿಕರಿಗೆ ಮರಣೋತ್ತರ ಪರಿಹಾರ ನೀಡುವುದಕ್ಕೂ, ಅವರ ದುಡಿಮೆಯ ಬದುಕನ್ನು ಹಸನುಗೊಳಿಸುವುದಕ್ಕೂ ಇರುವ ಸೂಕ್ಷ್ಮ ಅಂತರವನ್ನು ʼಸಮಾಜವಾದʼವನ್ನು ತಾತ್ವಿಕವಾಗಿ ಪ್ರತಿಪಾದಿಸುವ ಮುಖ್ಯಮಂತ್ರಿಯಾದರೂ ಅರ್ಥಮಾಡಿಕೊಳ್ಳಬೇಕಲ್ಲವೇ. ಇಲ್ಲಿಯೂ ತಡೆಗೋಡೆಯಾಗುವುದು ಅದೇ ಕಾರ್ಪೋರೇಟ್ ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆಯ ಸಿದ್ಧಾಂತ.

ಕೈಗಾರಿಕಾಭಿವೃದ್ಧಿಗೆ ಬಜೆಟ್‌ನಲ್ಲಿ ಉತ್ತೇಜನಕಾರಿ ಯೋಜನೆಗಳನ್ನು ಘೋಷಿಸಲಾಗಿದೆ. ನಿರುದ್ಯೋಗ ಪ್ರಮಾಣದಲ್ಲಿ ಕರ್ನಾಟಕ ದೇಶದ ಸರಾಸರಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದ್ದರೂ, ನಿರುದ್ಯೋಗ ಸಮಸ್ಯೆಯನ್ನು ತಳ್ಳಿಹಾಕಲಾಗುವುದಿಲ್ಲ. ಉತ್ಪಾದನಾ ಕೈಗಾರಿಕೆಗಳನ್ನು (Manufacturing Industries)ಹೆಚ್ಚು ಪ್ರೋತ್ಸಾಹಿಸುವ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕಿದೆ. ಹಾಗೆಯೇ ಇಂದು ಸೇವಾ ಅಭದ್ರತೆ ಎದುರಿಸುತ್ತಿರುವ ಗಿಗ್ ಕಾರ್ಮಿಕರು (ಓಲಾ, ಊಬರ್,ಅಮೆಜಾನ್, ಸ್ವಿಗಿ , ಜಮೋಟೋ ಇತ್ಯಾದಿ) ವಿಶೇಷ ಗಮನ ಸೆಳೆಯಬೇಕಿತ್ತು. ಈ ನೌಕರರ ಪೈಕಿ ಪದವೀಧರ ಯುವಸಮೂಹವೂ ಇರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ಕಾರ್ಮಿಕರಿಗೆ ಸೇವಾ ಸುರಕ್ಷತೆಯನ್ನು ಒದಗಿಸುವುದು, ಭದ್ತತಾ ನೀತಿಗಳನ್ನು ಜಾರಿಗೊಳಿಸುವುದು ಬಜೆಟ್‌ನ ಆದ್ಯತೆಯಾಗಬೇಕಿತ್ತು. ಸಂಘಟಿತ ವಲಯದ ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ ಎಂಟುಗಂಟೆಗೆ ಸೀಮಿತಗೊಳಿಸುವ ಕಾನೂನಿಗೆ ಸಿದ್ಧರಾಮಯ್ಯ ಸರ್ಕಾರ ಮನ್ನಣೆ ನೀಡಬೇಕಿದೆ. ಈ ಕೊರತೆ ಬಜೆಟ್‌ನಲ್ಲಿ ಎದ್ದುಕಾಣುವಂತಿದೆ.
ಎಸ್‌ಸಿ-ಎಸ್‌ಟಿ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಸಿಂಹಪಾಲು ನೀಡಲಾಗಿದೆ. ಆದರೆ ಹೀಗೆ ಮೀಸಲಿಟ್ಟ ಹಣವನ್ನು ಮತ್ತಾವುದೋ ಯೋಜನೆಗಳಿಗೆ ವಿನಿಯೋಗಿಸುವ ಅಶಿಸ್ತಿನ ನಡವಳಿಕೆಯಿಂದ ಸಿದ್ಧರಾಮಯ್ಯ ಸರ್ಕಾರ ಹೊರಬರಬೇಕಿದೆ. ಉದಾಹರಣೆಗೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ನಿಧಿಯ ದುರ್ಬಳಕೆ. ಅಹಿಂದ, ಅಲ್ಪಸಂಖ್ಯಾತರನ್ನೂ ಸೇರಿದಂತೆ ತಳಸಮುದಾಯಗಳ ಅಭಿವೃದ್ಧಿಯು ಅಂಕಿಅಂಶಗಳಲ್ಲಿ ಕಾಣುವಷ್ಟು ಸುಂದರವಾಗಿ ತಳಸಮಾಜದಲ್ಲಿ ಕಾಣುವುದಿಲ್ಲ. ಈ ಯೋಜನೆಗಳ ಫಲಾನುಭವಿಗಳನ್ನೂ ದಾಟಿ, ಅವಕಾಶವಂಚಿತರ ಸಂಖ್ಯೆ ಬಹುದೊಡ್ಡದಿದೆ ಎನ್ನುವ ವಿವೇಚನೆ ಸರ್ಕಾರಕ್ಕೆ ಇರಬೇಕು. ತಳಸಮುದಾಯಗಳಲ್ಲಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ, ಶುಚಿತ್ವ, ವಸತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರದಲ್ಲಿ ಸಾಧಿಸಬೇಕಾದ್ದು ಸಾಕಷ್ಟಿದೆ. ಇಲ್ಲಿ ವಂಚಿತ-ಅಂಚಿನಲ್ಲಿರುವ ಸಮಾಜಗಳನ್ನು ಗುರುತಿಸಿ, ಉನ್ನತೀಕರಿಸುವ ದೂರಗಾಮಿ ಯೋಜನೆಗಳು ಬಜೆಟ್‌ನಲ್ಲಿ ಕಾಣುವುದಿಲ್ಲ.
ಸಾಮಾಜಿಕ ಒಳಬಿರುಕುಗಳ ನಡುವೆ
2025ರ ಬಜೆಟ್ ಮೆಲ್ನೋಟಕ್ಕೆ ರೈತರಿಗೆ, ನಗರದ ಬಡಜನತೆಗೆ, ಗ್ರಾಮೀಣ ವ್ಯವಸ್ಥೆಗೆ, ಯುವ ಸಮೂಹಕ್ಕೆ ಆಶಾದಾಯಕವಾದ ಪರಿಸರವನ್ನು ನಿರ್ಮಿಸುವಂತೆ ಕಾಣುವುದಾದರೂ, ಅಂತಿಮವಾಗಿ ನೋಡಬೇಕಿರುವುದು ಈ ಯೋಜನೆಗಳ ಅನುಷ್ಠಾನದಲ್ಲಿ ಕಾರ್ಪೋರೇಟ್ ಬಂಡವಾಳದ ಪ್ರವೇಶ, ಮಧ್ಯಸ್ತಿಕೆ ಮತ್ತು ನಿರ್ವಹಣೆ. ಬಡ ರೈತರಿಗೆ ಭೂಮಿಯನ್ನು ಹಂಚುವ ಅಥವಾ ರೈತರ ಭೂಮಿಯನ್ನು ರಕ್ಷಿಸುವ ಯಾವುದೇ ದೂರಗಾಮಿ ದೃಷ್ಟಿ ಇಲ್ಲದ ಸರ್ಕಾರದ ಆರ್ಥಿಕ ನೀತಿಗಳು ರೈತಾಪಿ ಸಮುದಾಯವನ್ನು ಹೆಚ್ಚಿನ ಸಾಲ ಸೌಲಭ್ಯ, ಬೆಳೆ ವಿಮೆ, ಬೆಂಬಲ ಬೆಲೆ ಮೊದಲಾದ ಉಪಕ್ರಮಗಳ ಮೂಲಕ ಸರಿದೂಗಿಸುತ್ತವೆ. ಆದರೆ ಇವೆಲ್ಲವೂ ರೈತರ ನಿತ್ಯ ಜೀವನೋಪಾಯವನ್ನು ಸುಗಮಗೊಳಿಸುವ ಕ್ರಮಗಳೇ ಹೊರತು, ಭವಿಷ್ಯವನ್ನು ಸುಸ್ಥಿರಗೊಳಿಸುವುದಿಲ್ಲ. ಇರುವ ಭೂಮಿಯನ್ನೂ ಕಸಿದುಕೊಂಡು, ಕಾರ್ಪೋರೇಟ್ ಮಾರುಕಟ್ಟೆಗೆ ಪರಭಾರೆ ಮಾಡುವ ನವ ಉದಾರವಾದಿ ನೀತಿಗಳು ರೈತರನ್ನು ಅಂತಿಮವಾಗಿ ವಲಸೆ ಕಾರ್ಮಿಕರನ್ನಾಗಿ ಪರಿವರ್ತಿಸುವುದನ್ನು ನೋಡುತ್ತಲೇ ಬಂದಿದ್ದೇವೆ. ಈ ಬೆಳವಣಿಗೆಯನ್ನು ತಡೆಗಟ್ಟಿ ರೈತರ ಬದುಕಿಗೆ ಕಾಯಕಲ್ಪ ಒದಗಿಸುವ ನೀತಿಗಳು ಇಂದು ಅತ್ಯವಶ್ಯವಾಗಿವೆ.
ಸಿದ್ಧರಾಮಯ್ಯ ಸರ್ಕಾರದ ʼ ಸಮಾಜವಾದಿ ʼ ಹಣೆಪಟ್ಟಿ ಅರ್ಥಪೂರ್ಣವಾಗಬೇಕಾದರೆ – ರೈತರು, ಕೃಷಿ ಕಾರ್ಮಿಕರು, ಭೂರಹಿತರು, ಸಂಘಟಿತ-ಅಸಂಘಟಿತ ಕಾರ್ಮಿಕರು, ಮಹಿಳೆಯರು, ತಳಸಮುದಾಯಗಳು, ಗ್ರಾಮೀಣ ಬಡಜನತೆ, ವಲಸೆ ಕಾರ್ಮಿಕರು, ಆದಿವಾಸಿಗಳು ಹಾಗೂ ತಳಸ್ತರದಲ್ಲಿ ತಮ್ಮ ದುಡಿಮೆಯ ಮೂಲಕ ಸಮಾಜವನ್ನು ಸುಸ್ಥಿತಿಯಲ್ಲೂ, ಆರೋಗ್ಯಕರವಾಗಿಯೂ ಇರಿಸುವ ಅಸಂಖ್ಯಾತ ಕಾರ್ಮಿಕರು, ಪ್ರಾಥಮಿಕ ಶಿಕ್ಷಣದ ಮೂಲಕ ಭವಿಷ್ಯದ ಸಮಾಜವನ್ನು ಕಟ್ಟುವ ಶಿಕ್ಷಕ-ಬೋಧಕ ಸಮೂಹ-ಈ ಎಲ್ಲ ಜನಸಮೂಹಗಳ ಬದುಕನ್ನು ಸುಸ್ಥಿರಗೊಳಿಸುವ ಆರ್ಥಿಕ ನೀತಿಯನ್ನು ಅನುಸರಿಸಬೇಕಾಗುತ್ತದೆ. ಆದರೆ ಭಾರತ ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕತೆಯಲ್ಲಿ ರಾಜ್ಯಗಳ ತೆರಿಗೆ ಸಂಗ್ರಹವೂ ಕೇಂದ್ರಿಕರಣಕ್ಕೊಳಗಾಗಿದ್ದು, ರಾಜ್ಯ ಸರ್ಕಾರಗಳು ತಮ್ಮ ಪಾಲಿನ ತೆರಿಗೆಗಾಗಿ ಕೇಂದ್ರದ ಬಳಿ ಅಂಗಲಾಚುವ ಪರಿಸ್ಥಿತಿ ಉಂಟಾಗಿದೆ.

ಈ ತೊಡಕನ್ನು ಎದುರಿಸುತ್ತಲೇ ರಾಜ್ಯ ಸರ್ಕಾರಗಳು ಸಂಪನ್ಮೂಲದ ಕೊರತೆಯನ್ನೂ ನೀಗಿಸಬೇಕಾಗುತ್ತದೆ. 2025-26ರ ರಾಜ್ಯ ಬಜೆಟ್‌ನಲ್ಲಿ ಸಾಲದ ಹೊರೆ ಹೆಚ್ಚಾಗಿರುವುದು ಬಹುಚರ್ಚಿತ ವಿಷಯವಾಗಿದೆ. ಆದರೆ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸರ್ಕಾರಗಳು ಸಾಲದ ಮೂಲಕವೇ ತಮ್ಮ ಆದಾಯ-ವೆಚ್ಚದ ಕೊರತೆಯನ್ನು ನೀಗಿಸುವುದನ್ನು ಗಮನಿಸಬೇಕಲ್ಲವೇ ? ರಾಜ್ಯ ಬಜೆಟ್‌ನ ಗಾತ್ರ 4 ಲಕ್ಷ ಕೋಟಿ ರೂ ಆಗಿದ್ದರೆ ಒಂದು ಲಕ್ಷ ಕೋಟಿ ಸಾಲದ ಹೊರೆಯನ್ನೂ ಹೊರಬೇಕಾಗಿದೆ. ಇದರಲ್ಲಿ 51 ಸಾವಿರ ಕೋಟಿಯ ಗ್ಯಾರಂಟಿ ಯೋಜನೆಗಳೂ ಇವೆ. ಕರ್ನಾಟಕದ ಒಟ್ಟು ಸಾಲ 7 ಲಕ್ಷ ಕೋಟಿ ರೂ ದಾಟಿದ್ದು ನಾಗರಿಕರ ಮೇಲೆ ತಲಾ 1.05 ಲಕ್ಷ ರೂಗಳ ಸಾಲದ ಹೊರೆ ಬೀಳಲಿದೆ. ಇದನ್ನೇ ಬಿಜೆಪಿ-ಜೆಡಿಎಸ್ ಪ್ರಧಾನವಾಗಿ ಬಿಂಬಿಸುತ್ತಿರುವುದು ವಿಡಂಬನೆ ಎನಿಸುತ್ತದೆ. ಈ ವರ್ಷದ ಕೇಂದ್ರ ಬಜೆಟ್‌ನಲ್ಲೂ ಹಣಕಾಸು ಕೊರತೆ ಜಿಡಿಪಿಯ ಶೇಕಡಾ 4.4ರಷ್ಟಾಗಿದ್ದು, 14.82 ಲಕ್ಷ ಕೋಟಿ ರೂಗಳ ಸಾಲದ ಹೊರೆಯನ್ನು ಸರ್ಕಾರ ಹೊರಬೇಕಿದೆ. ಈವರೆಗಿನ ಕೇಂದ್ರ ಸರ್ಕಾರದ ಸಾಲದ ಹೊರೆ 185.11 ಲಕ್ಷ ಕೋಟಿ ರೂಗಳಾಗಿವೆ.
ಬಜೆಟ್ ಎಂಬ ಅಲಂಕಾರಿಕ ದಸ್ತಾವೇಜು
ಈ ಅಂಕಿಅಂಶಗಳನ್ನು ಬದಿಗಿಟ್ಟು ನೋಡಿದಾಗ, ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಮಂಡಿಸುವ ವಾರ್ಷಿಕ ಬಜೆಟ್‌ಗಳು ಮುಂದಿನ ಒಂದು ವರ್ಷದಲ್ಲಿ ಸರ್ಕಾರ ಕೈಗೊಳ್ಳಬೇಕಾದ ಯೋಜನೆಗಳನ್ನು ರೂಪಿಸುತ್ತವೆ. ಆದರೆ ಇದು ಕಾರ್ಯಗತವಾಗುವುದು ತಳಸ್ತರದ ಆರ್ಥಿಕತೆಯಲ್ಲಿ, ಅಧಿಕಾರಶಾಹಿಯ ಮೂಲಕ. ರಾಜ್ಯ ಸರ್ಕಾರದ ಬಜೆಟ್ ಎಷ್ಟೇ ಸುಂದರವಾಗಿ ಕಂಡರೂ ಅಂತಿಮವಾಗಿ ಫಲಾನುಭವಿ ಜನತೆಯನ್ನು ತಲುಪುವ ವೇಳೆಗೆ ಸಾಕಷ್ಟು ಸೋರಿ ಹೋಗಿರುವುದನ್ನು ಅಧಿಕಾರಶಾಹಿಯ ಭ್ರಷ್ಟತೆಯಲ್ಲಿ ಕಾಣಬಹುದು. ಇದನ್ನು ತಡೆಗಟ್ಟದೆ ಹೋದರೆ ಬಜೆಟ್ ಎನ್ನುವುದು ಕೇವಲ ಅಲಂಕಾರಿಕ ದಸ್ತಾವೇಜು ಆಗಿಬಿಡುತ್ತದೆ. ರಾಜಕೀಯ-ಅಧಿಕಾರಶಾಹಿ ಭ್ರಷ್ಟಾಚಾರದ ಮೂಲ ಬೇರುಗಳನ್ನು ತೊಡೆದುಹಾಕಲು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಾಧ್ಯವಾಗಿಲ್ಲ ಎನ್ನುವುದು ಲೋಕಾಯುಕ್ತದ ಕಾರ್ಯಾಚರಣೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಪಕ್ಷಾತೀತವಾಗಿ ಹರಡಿರುವ ಆಡಳಿತ ಹಾಗೂ ಹಣಕಾಸು ಭ್ರಷ್ಟಾಚಾರ ಸರ್ಕಾರಗಳ ಸದುದ್ದೇಶದ ಯೋಜನೆಗಳೆಲ್ಲವನ್ನೂ ಮಣ್ಣುಪಾಲು ಮಾಡುತ್ತವೆ. ಈ ಎಚ್ಚರ ಆಳ್ವಿಕೆಯಲ್ಲಿರುವಷ್ಟೇ ನಾಗರಿಕರಲ್ಲೂ ಇರಬೇಕು.

ಅಂತಿಮವಾಗಿ, ಬಜೆಟ್ ಎನ್ನುವುದು ಒಂದು ಹಣಕಾಸು ಆದಾಯ-ವೆಚ್ಚ-ಕೊರತೆಯ ಒಂದು ಸುಂದರ ಕಸರತ್ತು. ಈ ದಸ್ತಾವೇಜಿನಲ್ಲಿ ಕಾಣುವ ಸುಂದರ ದೃಶ್ಯಗಳು ತಳಮಟ್ಟದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲೂ ಕಾಣುವಂತಾದರೆ ಮಾತ್ರ ಅದು ಅರ್ಥಪೂರ್ಣವಾಗುತ್ತದೆ. ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆ ಇದಕ್ಕೆ ಅವಕಾಶವನ್ನೇ ನೀಡದಂತೆ ಎಚ್ಚರವಹಿಸುತ್ತದೆ. ಇಲ್ಲಿ ಅಸಮಾಧಾನಕ್ಕೆ ಒಳಗಾಗುವ ತಳಸ್ತರದ ಜನಸಮುದಾಯಗಳನ್ನು ಸಂತೈಸುವ ಒಂದು ಸಾಧನವಾಗಿ ಗ್ಯಾರಂಟಿ ಯೋಜನೆಗಳು ನೆರವಾಗುತ್ತವೆ. ಈ ಗ್ಯಾರಂಟಿಗಳನ್ನೇ ಶಾಶ್ವತಗೊಳಿಸುವುದು, ಅಸಮಾನತೆಗಳನ್ನು ನಿರಂತರವಾಗಿ ಕಾಪಾಡಿದಂತೆಯೇ ಆಗುತ್ತದೆ. ಈ ಎಚ್ಚರ ಸರ್ಕಾರಗಳಲ್ಲಿರಬೇಕು. ಏಕೆಂದರೆ ಗ್ಯಾರಂಟಿ ಯೋಜನೆಗಳು ವರ್ತಮಾನದ ಜೀವನೋಪಾಯವನ್ನು ಸುಗಮಗೊಳಿಸುವ ವಿಧಾನವಷ್ಟೇ. ಸುಸ್ಥಿರ ಬದುಕು ರೂಪಿಸುವ ದೂರಗಾಮಿ ಚಿಂತನೆ ಅಲ್ಲ.
ಇದು ಸಾಧ್ಯವಾಗಬೇಕಾದರೆ ʼಸಮಾಜವಾದ ʼ ತಾತ್ವಿಕವಾಗಿ ಆಳ್ವಿಕೆಯ ಆಧಾರಸ್ತಂಭವಾಗಬೇಕು. ಸದ್ಯಕ್ಕೆ ಇದು ಗ್ರಾಂಥಿಕವಾಗಿ ಸಂವಿಧಾನದಲ್ಲಿ ವೈಭವೀಕರಣಕ್ಕೊಳಗುತ್ತಿದೆ. ನೆಲದ ವಾಸ್ತವಗಳು (Ground Realities) ಭಿನ್ನವಾಗಿವೆ. ಭಾರತ ಸಾಕುತ್ತಿರುವ ವಿಕಾಸದ ಹಾದಿ ನೈಜ ಸಮಾಜವಾದದ ಬೇರುಗಳನ್ನೇ ಕ್ರಮೇಣವಾಗಿ ಶಿಥಿಲಗೊಳಿಸಿ ನಿರ್ವೀರ್ಯಗೊಳಿಸುವ ಸೂಚನೆಗಳನ್ನು ಈಗಾಗಲೇ ನೋಡುತ್ತಿದ್ದೇವೆ. ಹಾಗಾಗಿ ಸ್ವಾತಂತ್ರ್ಯದ ಪೂರ್ವಸೂರಿಗಳ ಹಾಗೂ ವರ್ತಮಾನ ಭಾರತದ ತಳಸಮಾಜದ ಜನಸಮುದಾಯಗಳ ಸಮಾಜವಾದದ ಕನಸು ನನಸಾಗಬೇಕಾದರೆ, ಪರ್ಯಾಯ ಆರ್ಥಿಕ ಚಿಂತನೆಗಳು ಅಗತ್ಯ. ಇದು ಎಡಪಕ್ಷಗಳನ್ನೂ ಸೇರಿದಂತೆ ಯಾವ ರಾಜಕೀಯ ಪಕ್ಷದಿಂದಲೂ ಸ್ಪಷ್ಟವಾಗಿ ಹೊರಬರುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಯೋಚಿಸಬೇಕಿದೆ.

ಹೀಗೆ ಯೋಚಿಸುತ್ತಲೇ, ಸಿದ್ಧರಾಮಯ್ಯ ಸರ್ಕಾರದ 2025-26ರ ಬಜೆಟ್‌ನ್ನು ʼ ಇದ್ದುದರಲ್ಲಿ ಪರವಾಗಿಲ್ಲ ʼ ಎಂಬ ಸಮಾಧಾನಕರ ನಿಟ್ಟುಸಿರಿನೊಂದಿಗೆ ಸ್ವಾಗತಿಸಬಹುದು. ಹಾಗೆಯೇ ಇದು ಅಂತಿಮ ನ್ಯಾಯದ ಹಾದಿಯಲ್ಲ ಎಂಬ ಎಚ್ಚರ ಸಹ ನಮ್ಮೊಳಗಿರಬೇಕು.
-೦-೦-೦-೦-