
—–ನಾ ದಿವಾಕರ—-
ಕಾರ್ಪೋರೇಟ್ ಕೇಂದ್ರಿತ ನಗರೀಕರಣ ಪ್ರಕ್ರಿಯೆಯ ಒಂದು ಬಂಡವಾಳಶಾಹಿ ಸ್ವರೂಪ
ಆಂಗ್ಲ ಭಾಷೆಯಲ್ಲಿ ಸ್ಮಾರ್ಟ್ (Smart) ಎಂಬ ಪದವನ್ನು ನಾಮಪದವಾಗಿಯೂ, ಲಿಂಗತಟಸ್ಥ ಪದವಾಗಿಯೂ ಬಳಸಲಾಗುತ್ತದೆ. ಕನ್ನಡದಲ್ಲಿ ಈ ಪದಕ್ಕೆ ಸಂವಾದಿಯಾಗಿ ಸೂಕ್ಷ್ಮ ಬುದ್ಧಿ, ಚಾಲಾಕಿ, ಸೂಟಿ, ಕುಶಲ, ಚತುರ ಮುಂತಾದ ಪದಗಳನ್ನು ಬಳಸಲಾಗುತ್ತದೆ. ಈ ಪದವನ್ನೇ ಆರ್ಥಿಕ ಅಭಿವೃದ್ಧಿಯ ಹಾದಿಯ ಮಾರುಕಟ್ಟೆ ಪರಿಭಾಷೆಯಲ್ಲಿ ಆಧುನಿಕ/ಅತ್ಯಾಧುನಿಕ ನಗರಗಳನ್ನು ಬಣ್ಣಿಸಲು ಬಳಸುವುದು ಜಾಗತೀಕರಣದ ನಂತರದಲ್ಲಿ ಕಾಣುವ ಬೆಳವಣಿಗೆ. ನಗರಗಳ ಸೌಂದರ್ಯೀಕರಣದ ಹಂತವನ್ನು ದಾಟಿ ಕೆಲವು ಆಯ್ದ ನಗರಗಳನ್ನು ಸ್ಮಾರ್ಟ್ ಸಿಟಿ ಆಗಿ ಪರಿವರ್ತಿಸುವ ಈ ಆಲೋಚನೆಯ ಹಿಂದೆ, ಕಾರ್ಪೋರೇಟ್ ಹಿತಾಸಕ್ತಿ, ಬಂಡವಾಳದ ಲಾಭ ಹಾಗೂ ಹೂಡಿಕೆದಾರರ ರಿಯಲ್‌ಎಸ್ಟೇಟ್ ಮತ್ತು ಔದ್ಯಮಿಕ ಹಿತಾಸಕ್ತಿಯೂ ಇರುತ್ತದೆ. ಭಾರತ ವಿಕಸಿತ ಆಗುವತ್ತ ಸಾಗುತ್ತಿರುವ ಹಾದಿಯಲ್ಲಿ ಇಂತಹ ಸ್ಮಾರ್ಟ್ ಸಿಟಿಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆ ಸರ್ಕಾರಗಳಿಗೆ ಇರುವುದು ಸಹಜ.
ಈ ಸ್ಮಾರ್ಟ್ ಪದವನ್ನು ಛೇದಿಸಿ ನೋಡಿದಾಗ ನಮಗೆ ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ಎಂಬ ಅರ್ಥವನ್ನೂ ಕೊಡುತ್ತದೆ. ಅಂದರೆ ಇಂತಹ ನಗರಗಳಲ್ಲಿ ವಾಸಿಸುವ ಜನರಿಗೆ ಸಕಲ ಸೌಕರ್ಯಗಳನ್ನು, ಸಂಪನ್ಮೂಲಗಳನ್ನು, ಸಾರಿಗೆ-ಕುಡಿಯುವ ನೀರು-ವಸತಿ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸುವ ಹಾಗೂ ವಸತಿ ಬಡಾವಣೆಗಳನ್ನು ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸುವ , ಕಾರ್ಪೋರೇಟ್ ಬಂಡವಾಳಕ್ಕೆ ಪೂರಕವಾದ ಮಾರುಕಟ್ಟೆ ವ್ಯವಸ್ಥೆಗೆ ಅನುಕೂಲ ಮಾಡಿಕೊಡುವ, ರಿಯಲ್ ಎಸ್ಟೇಟ್ ಮತ್ತು ಕೈಗಾರಿಕೋದ್ಯಮಿಗಳಿಗೆ ಬಂಡವಾಳ ಹೂಡಲು ಮುಕ್ತ ಅವಕಾಶಗಳನ್ನು ಕಲ್ಪಿಸುವ ಚಿಂತನೆ ಸ್ಮಾರ್ಟ್ ಸಿಟಿ ಯೋಜನೆಯ ಹಿಂದಿರುತ್ತದೆ. 2014ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನರೇಂದ್ರ ಮೋದಿ ಸರ್ಕಾರ ಘೋಷಿಸಿದ ಆರಂಭಿಕ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಇದೂ ಒಂದು.
ನೂರು ನಗರಗಳ ಬೃಹತ್ ಯೋಜನೆ
ಭಾರತದಲ್ಲಿ ನೂರು ಸ್ಮಾರ್ಟ್‌ಸಿಟಿಗಳನ್ನು ನಿರ್ಮಿಸುವ ಈ ಯೋಜನೆಗೆ ಈಗ ದಶಕ ಕಳೆದಿದೆ. ಅತ್ಯಾಧುನಿಕ ಸಂವಹನ ಸೌಕರ್ಯಗಳನ್ನೊಳಗೊಂಡ ಈ ನಗರಗಳು ಸಾಮಾನ್ಯವಾಗಿ ಪ್ರಮುಖ ಹೆದ್ದಾರಿಗಳಿಗೆ ಹೊಂದಿಕೊಂಡಂತೆಯೇ ಇರುವುದು , ಆಪ್ಟಿಕಲ್ ಫೈಬರ್ ನೆಟ್ ವರ್ಕ್ ಹೊಂದಿರುವುದು ಮತ್ತು ಮುಂದಿನ ತಲೆಮಾರಿನ ಮೂಲಸೌಕರ್ಯಗಳನ್ನು (Next Generation Infrastructure) ಸ್ಥಾಪಿಸುವುದು ಈ ನಗರಗಳ ಮೂಲ ಉದ್ದೇಶವಾಗಿರುತ್ತದೆ. ಮೂಲತಃ 1.2 ಬಿಲಿಯನ್ ಡಾಲರ್ ಹೂಡಿಕೆಯ ಉದ್ದೇಶದೊಂದಿಗೆ ಘೋಷಿಸಲಾದ ಈ ಮಹತ್ವಾಕಾಂಕ್ಷಿ ಯೋಜನೆಗೆ ಖಾಸಗಿ ಬಂಡವಾಳಿಗರೂ ಬಂಡವಾಳ ಹೂಡಿಕೆ ಮಾಡುವುದರ ಮೂಲಕ ವಿಶ್ವದ ಅತಿದೊಡ್ಡ ಮೂಲ ಸೌಕರ್ಯ ಯೋಜನೆಯಾಗಿ ಇದನ್ನು ಸಾಕಾರಗೊಳಿಸಲಾಗುವುದು ಎಂದು ಸರ್ಕಾರ 2014ರಲ್ಲಿ ಘೋಷಿಸಿತ್ತು. ಇಂತಹ ನೂರು ಸ್ಮಾರ್ಟ್ ಸಿಟಿಗಳನ್ನು ಪ್ರಮುಖ ಬೃಹತ್ ನಗರಗಳ ಸುತ್ತ ಉಪನಗರಗಳಾಗಿ (Satellite Towns) ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲೂ ಘೋಷಿಸಲಾಗಿತ್ತು. ಇಲ್ಲಿ ಬಂಡವಾಳ ಹೂಡುವ ವಿದೇಶಿ ಹೂಡಿಕೆದಾರಿಗೆ ವಿಶೇಷ ಉತ್ತೇಜನ ನೀಡುವ ಭರವಸೆಯನ್ನೂ ನೀಡಲಾಗಿತ್ತು.

ಆಧುನಿಕ ಭಾರತವನ್ನು , ಈಗ ವಿಕಸಿತ ಭಾರತ ಎಂದು ಬಣ್ಣಿಸಲಾಗುತ್ತಿದೆ, ಬಿಂಬಿಸುವ ಮೋದಿ ಸರ್ಕಾರದ ದೂರಗಾಮಿ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಇದೂ ಒಂದಾಗಿತ್ತು. ಕಾರ್ಪೋರೇಟ್ ಆರ್ಥಿಕತೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಮತ್ತು ಮೇಲ್ ಚಲನೆಯಲ್ಲಿರುವ ಮಧ್ಯಮ ವರ್ಗಗಳಿಗೆ ಈ ಸ್ಮಾರ್ಟ್ ಸಿಟಿಗಳು ವೃತ್ತಿ ಕೇಂದ್ರಿತ ಅವಕಾಶಗಳ ಕೇಂದ್ರಗಳಾಗಿ ಪರಿಣಮಿಸುತ್ತವೆ ಎಂದು ಹೇಳಲಾಗಿತ್ತು. ಇದೇ ವೇಳೆ ಸರ್ಕಾರ ಘೋಷಿಸಿದ ಮೇಕ್ ಇನ್ ಇಂಡಿಯಾ ( ಭಾರತದಲ್ಲೇ ತಯಾರಿಸುವ) ಯೋಜನೆಯಡಿ ರಿಯಲ್ ಎಸ್ಟೇಟ್ ಹೂಡಿಕೆದಾರರು, ವಿದೇಶಿ ಸರಬರಾಜು ಉದ್ದಿಮೆಗಳು, ಜಾಗತಿಕ ತಂತ್ರಜ್ಞಾನ ಹಾಗೂ ಐಟಿ ಉದ್ದಿಮೆಗಳಿಗೆ ಈ ಸ್ಮಾರ್ಟ್ ಸಿಟಿ ಪ್ರಧಾನ ಆಕರ್ಷಣೆಯಾಗಿ ಕಂಡಿತ್ತು. 2015ರ ವೇಳೆಗೆ ಫ್ರಾನ್ಸ್, ಅಮೆರಿಕ, ಚೀನಾ, ಸ್ವೀಡನ್, ಜರ್ಮನಿ, ಇಸ್ರೇಲ್, ಬ್ರೆಜಿಲ್ ಮತ್ತು ಸಿಂಗಪೂರ್ ಮೊದಲಾದ 14 ದೇಶಗಳು ಇಲ್ಲಿ ಹೂಡಿಕೆಯ ಆಸಕ್ತಿಯನ್ನು ವ್ಯಕ್ತಪಡಿಸಿದ್ದವು.
ಬಂಡವಾಳ ಹಾಗೂ ಹಣಕಾಸು ಸೌಲಭ್ಯವನ್ನು ಒದಗಿಸುವ ವಿಶ್ವಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ಮತ್ತು ಯುಎಸ್‌ಎಐಡಿ (USAID) ಮೊದಲಾದ ಸಂಸ್ಥೆಗಳು ಈ ಯೋಜನೆಗೆ ಮುಕ್ತ ಬೆಂಬಲ ಸೂಚಿಸಿದ್ದವು. ಇಲ್ಲಿ ಬಂಡವಾಳ ಹೂಡುವ ಖಾಸಗಿ ಉದ್ದಿಮೆಗಳಿಗೆ, ಐಟಿ ಉದ್ದಿಮೆಗಳಿಗೆ ಬಳಕೆದಾರ ಶುಲ್ಕವನ್ನು (User Charges) ವಿಧಿಸುವ ಮುಕ್ತ ಅಧಿಕಾರವನ್ನು ನೀಡಲಾಗಿತ್ತು. 7 ಲಕ್ಷ ಕಿಲೋಮೀಟರ್ ವ್ಯಾಪ್ತಿಯ ಬ್ರಾಡ್‌ಬ್ಯಾಂಡ್ ಕೇಬಲ್ ಸಂಪರ್ಕವನ್ನು 2.5 ಲಕ್ಷ ಗ್ರಾಮಗಳಿಗೆ ವಿಸ್ತರಿಸುವ ಮಹದಾವಕಾಶಕ್ಕಾಗಿ ಗುತ್ತಿಗೆದಾರ ಉದ್ದಿಮೆಗಳು ಹಾತೊರೆಯುತ್ತಿದ್ದವು. ಫ್ರಾನ್ಸ್‌ನ ಥೇಲ್ಸ್ ಉದ್ದಿಮೆಯು 3,300 ಕೋಟಿ ರೂಗಳ ಮಾರುಕಟ್ಟೆಯನ್ನು ಆಕ್ರಮಿಸಲು ಸಜ್ಜಾಗಿತ್ತು. ಆದರೆ ಈ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ಹೊರೆಯಾಗುತ್ತದೆ ಎಂಬ ಆತಂಕವೂ ಸರ್ಕಾರವನ್ನು, ವಿತ್ತಸಚಿವಾಲಯವನ್ನು ಕಾಡತೊಡಗಿತ್ತು.

ಆರ್ಥಿಕ ಹೊರೆ ಮತ್ತು ಉಪಯುಕ್ತತೆ
ಏಕೆಂದರೆ ಮುಂದಿನ ಅವಧಿಯಲ್ಲಿ ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಖಾಸಗಿ, ವಿದೇಶಿ ಹೂಡಿಕೆದಾರರು ಇಲ್ಲಿ ಆಸಕ್ತಿ ತೋರಲಿಲ್ಲ. ಆರಂಭದಲ್ಲಿ ವ್ಯಕ್ತವಾದ ಅತಿಯಾದ ಆಸಕ್ತಿಗೆ ತಕ್ಕಂತೆ ಬಂಡವಾಳ ಹೂಡಿಕೆ ಸಾಧ್ಯವಾಗಲಿಲ್ಲ. ತಂತ್ರಜ್ಞಾನದ ನೆಲೆಯಲ್ಲಿ ತಾಂತ್ರಿಕವಾಗಿ ಈ ಕನಸಿನ ಯೋಜನೆಯನ್ನು ಸಾಕಾರಗೊಳಿಸುವುದು ಭಾರತದ ಆರ್ಥಿಕತೆಗೆ ಧಕ್ಕೆ ಉಂಟುಮಾಡಬಹುದು ಎಂಬ ಆತಂಕ ಅರ್ಥಶಾಸ್ತ್ರಜ್ಞರನ್ನೂ, ಆರ್ಥಿಕ ಸಲಹೆಗಾರರನ್ನೂ ಕಾಡತೊಡಗಿತ್ತು. ವಿಶ್ವದ ಇತರ ದೇಶಗಳ ಅನುಭವದ ಹಿನ್ನೆಲೆಯಲ್ಲಿ, ಆಧುನಿಕ ತಂತ್ರಜ್ಞಾನ ಮತ್ತು ಸಂವಹನ ಸಾಧನಗಳು ನಿರಂತರ ಬದಲಾವಣೆಗೆ ಒಳಪಡುತ್ತಿರುವುದರಿಂದ, ಇಲ್ಲಿ ಹೂಡುವ ಅಗಾಧ ಮೊತ್ತದ ಬಂಡವಾಳ ಮುಂದೆ ಅನುಪಯುಕ್ತವಾಗಬಹುದು ಎಂಬ ಆತಂಕದ ನಡುವೆ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲೇ ತನ್ನ ಉದ್ದೇಶಿತ ಗುರಿಯನ್ನು ಬದಲಾಯಿಸಲು ಮುಂದಾಗಿತ್ತು.
ತತ್ಪರಿಣಾಮವಾಗಿ, ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯನ್ನು ಈಗಿರುವ ನಗರಗಳನ್ನೇ ನಾವೀನ್ಯಗೊಳಿಸುವ ಮೂಲಕ, ಪುನರ್ ನಿರ್ಮಿಸುವ ಮೂಲಕ, ಅತ್ಯಾಧುನಿಕ ಸಂವಹನ-ಸಂಪರ್ಕ ಸಾಧನೆಗಳನ್ನು ಅಳವಡಿಸಲು ನಿರ್ಧರಿಸಿತ್ತು. ಈ ನವೀಕೃತ ನಗರಗಳಲ್ಲಿ ವಸತಿ, ಶುದ್ಧ ನೀರು, ನಿರಂತರ ವಿದ್ಯುತ್ ಮತ್ತು ಸರಾಗವಾದ ಸಾರಿಗೆ ವ್ಯವಸ್ಥೆಯನ್ನು ರೂಪಿಸಲು ಉದ್ದೇಶಿಸಿತ್ತು. ಖಾಸಗಿ ಕಂಪನಿಗಳು ಅಥವಾ ಖಾಸಗಿ-ಸಾರ್ವಜನಿಕ ಭಾಗವಹಿಸುವಿಕೆಯ ವಿಶೇಷ ಉದ್ದೇಶ ವಾಹಕಗಳ (Special Purpose Vehicle)ಮೂಲಕ ಈ ಯೋಜನೆಯನ್ನು ಪೂರೈಸಲು ನಿರ್ಧರಿಸಲಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆಯ ಮೂಲ ಧಾತುವನ್ನು ಮನಮೋಹನ್ ಸಿಂಗ್ ಸರ್ಕಾರ ಜಾರಿಗೊಳಿಸಿದ್ದ ಜವಹರಲಾಲ್ ನೆಹರೂ ರಾಷ್ಟ್ರೀಯ ನವೀಕರಣ ಮಿಷನ್ (JNNURM) ನಲ್ಲಿ ಗುರುತಿಸಬಹುದು.

ಇದರ ನಾಲ್ಕು ಉಪಯೋಜನೆಗಳನ್ನೂ ಒಳಗೊಂಡಂತೆ ಬಿಜೆಪಿ ಸರ್ಕಾರವು Atal Mission for Rejunevation & Urban Transformationn (AMRUT) , ಪ್ರಧಾನ ಮಂತ್ರಿ ವಸತಿ ಯೋಜನೆ ( PMAY-U), ರಾಷ್ಟ್ರೀಯ ನಗರ ಕಲಿಕಾ ವೇದಿಕೆ (NLUP) ಮತ್ತು 2022ರ ಹೊತ್ತಿಗೆ ಎಲ್ಲರಿಗೂ ವಸತಿ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷಿ ಉಪಯೋಜನೆಗಳನ್ನು ಹಮ್ಮಿಕೊಂಡಿತ್ತು. ಮೂಲತಃ 2020ರಲ್ಲಿ ತನ್ನ ಮೊದಲ ಹಂತವನ್ನು ಪೂರ್ಣಗೊಳಿಸಬೇಕಿದ್ದ ಈ ಯೋಜನೆಯನ್ನು ಈಗ 2025ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ. ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಮಾಹಿತಿಯ ಅನುಸಾರ ಈ ಗಡುವು ಪೂರ್ಣವಾಗುವವರೆಗೆ ಕೇಂದ್ರ-ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವತಿಯಿಂದ 47,320.26 ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಜವಾಬ್ದಾರಿ ಹೊತ್ತಿರುವ SPV 2013ರ ಕಂಪನಿ ಕಾಯ್ದೆಗಳಡಿ ಸ್ಥಾಪಿಸಲಾಗಿದ್ದು, ಇಡೀ ಯೋಜನೆಯ ಉಸ್ತುವಾರಿ ವಹಿಸಿಕೊಂಡಿದೆ. ಆದರೆ ಈ ಬೃಹತ್ ಮೊತ್ತದಲ್ಲಿ ಎಷ್ಟು ಫಲಪ್ರದವಾಗಿ ಹೂಡಿಕೆಯಾಗಿದೆ ಎನ್ನುವುದು ಅನುಮಾನ.
ಪರಿಷ್ಕೃತ ಯೋಜನೆಯ ಸಾಫಲ್ಯ-ವೈಫಲ್ಯ
ಯೋಜನೆಯನ್ನು ಘೋಷಿಸಿ ಪರಿಷ್ಕರಿಸಿದ ನಂತರ, ಸರ್ಕಾರವೇ ನಿಗದಿಪಡಿಸಿದ ಅಂತಿಮ ಗಡುವು ಸಹ ಈಗ ಪೂರಣಗೊಂಡಿದ್ದು, ಈ ಅವಧಿಯಲ್ಲಿ ಮೂಲ ಸೌಕರ್ಯಗಳನ್ನು, ಪರಿಶುದ್ಧ ವಾತಾವರಣವನ್ನು ಹಾಗೂ ಉತ್ತಮ ಗುಣಮಟ್ಟದ ಪರಿಹಾರಗಳನ್ನು (Smart Solutions) ಒದಗಿಸಲಾಗಿದೆಯೇ ಎಂದು ಪರಾಮರ್ಶಿಸಬೇಕಿದೆ. ಸದ್ಯಕ್ಕೆ ಸ್ಥಗಿತಗೊಂಡಿರುವ ಈ ಯೋಜನೆಯನ್ನು ಪುನಃ ಆರಂಭಿಸಲಾಗುವುದೇ ಎಂಬ ಪ್ರಶ್ನೆಯೂ ಔದ್ಯಮಿಕ ವಲಯವನ್ನು ಕಾಡುತ್ತಿದೆ. ಈ ಮಿಷನ್ನಿನ ಹಠಾತ್ ನಿಲುಗಡೆಯ ಪರಿಣಾಮವಾಗಿ ಸಾವಿರಾರು ಉದ್ಯೋಗಗಳ ನಷ್ಟವಾಗಿದ್ದು, ಇದು ಹಲವು ಆಯಾಮಗಳ ಅನಿಶ್ಚಿತತೆಗಳಿಗೆ ಕಾರಣವಾಗಿದೆ. SPV ಮತ್ತು ಸಮಗ್ರ ನಿರ್‌ವಹಣೆ ಮತ್ತು ನಿಯಂತ್ರಣ ಕೇಂದ್ರವು (Integrated Command & Control Centre) ಈಗಾಗಲೇ ಸಿಬ್ಬಂದಿಯನ್ನು ವಜಾ ಮಾಡಲು ಮುಂದಾಗಿದೆ. ಉತ್ತರ ಪ್ರದೇಶ ಸರ್ಕಾರವು ಈ ಕಾರ್ಯಾಚರಣೆಯನ್ನು ಸೀಮಿತಗೊಳಿಸಿದ್ದು, ಕಂಪನಿ ಕಾಯ್ದೆಯ ಅನುಸಾರ ಕನಿಷ್ಠ ಸಂಖ್ಯೆಯ ಉದ್ಯೋಗಿಗಳನ್ನು ಮಾತ್ರ ಉಳಿಸಿಕೊಳ್ಳುವುದಾಗಿ ಘೋಷಿಸಿದೆ.
ಈ ನಡುವೆ ಅಪೂರ್ಣವಾಗಿರುವ ಯೋಜನೆಯ ಕಾಮಗಾರಿಗಳ ಬಗ್ಗೆ ಆತಂಕವೂ ಹೆಚ್ಚಾಗಿದೆ. ಇದರ ಕಾರಣಗಳನ್ನು ಶೋಧಿಸಿದಾಗ ಹಲವು ಅಂಶಗಳು ಎದುರಾಗುತ್ತವೆ. ಇತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವಂತೆ ಭಾರತದಲ್ಲಿ ಸ್ಮಾರ್ಟ್ ಸಿಟಿ ಎಂಬ ಕಲ್ಪನೆಯನ್ನು ಸಮಗ್ರವಾಗಿ ಅಥವಾ ನಿರ್ದಿಷ್ಟವಾಗಿ ನಿರ್ವಚಿಸಲಾಗಿಲ್ಲ. ಅಭಿವೃದ್ಧಿ ಹೊಂದಿರುವ ಆರ್ಥಿಕತೆಗಳಲ್ಲಿ ಕನಿಷ್ಠ ಸೌಲಭ್ಯ-ಸೌಕರ್ಯಗಳು ಈಗಾಗಲೇ ಲಭ್ಯವಾಗುವಂತಿವೆ. ಹಾಗಾಗಿ ಇಡೀ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವುದು, ಅತ್ಯುನ್ನತ ತಂತ್ರಜ್ಞಾನವನ್ನು ಒದಗಿಸುವುದು ಸುಲಭವಾಗುತ್ತದೆ. ಆದರೆ ಭಾರತದಲ್ಲಿ ಆಹಾರ, ವಸತಿ, ವಿದ್ಯುತ್ ಸಂಪರ್ಕ ಮತ್ತು ಸಾರಿಗೆ ಮುಂತಾದ ಅತ್ಯವಶ್ಯ ಸೌಕರ್ಯಗಳನ್ನು ಒದಗಿಸುವುದೇ ದುಸ್ತರವಾಗುತ್ತಿದೆ. ಭಾರತವನ್ನು ವಿಶ್ವ ಭೂಪಟದಲ್ಲಿ ಆರ್ಥಿಕವಾಗಿ ದಾಪುಗಾಲು ಹಾಕುತ್ತಿರುವ ವಿಶ್ವಗುರು ಆಗಿ ಬಿಂಬಿಸುವ ಮಹತ್ವಾಕಾಂಕ್ಷೆಗೆ ಪೂರಕವಾಗಿ ಈ ಯೋಜನೆಯನ್ನು ಮುಂದುವರೆಸಲು ಸಾಧ್ಯವಾಗಿಲ್ಲ.
ಬದಲಾಗಿ ಈ ಯೋಜನೆಯಡಿಯಲ್ಲೇ ಈಗಾಗಲೇ ಜಾರಿಯಲ್ಲಿದ್ದ ಶುದ್ಧೀಕರಿಸಿದ ಸಮರ್ಪಕ ನೀರು ಪೂರೈಕೆ, ವಿದ್ಯುತ್ ಸಂಪರ್ಕ, ವಸತಿ ಸೌಲಭ್ಯ, ಆರೋಗ್ಯ ಸೇವೆ, ಸಾರಿಗೆ ವ್ಯವಸ್ಥೆ ಮತ್ತು ಘನ ತ್ಯಾಜ್ಯ ನಿರ್ವಹಣೆ, ಭದ್ರತೆ ಮತ್ತು ಬಹುಮುಖ್ಯವಾಗಿ ತಂತ್ರಜ್ಞಾನ ಆಳ್ವಿಕೆ (E-Governance) ಮತ್ತು ಡಿಜಿಟಲೀಕರಣ ಕಾರ್ಯಕ್ರಮಗಳನ್ನು ಪುನರ್ ನವೀಕರಣಗೊಳಿಸಲಾಗುತ್ತಿದೆ. ಈ ಯೋಜನೆಯ ಫಲಿತಾಂಶವನ್ನು ಗುರುತಿಸುವ ಸಲುವಾಗಿ ಅಧಿಕೃತವಾಗಿಯೇ 75 ಅಧ್ಯಯನಗಳು, ವಿಶ್ಲೇಷಣೆಗಳನ್ನು ಕೈಗೊಳ್ಳಲಾಗಿದೆ. ವಿದೇಶಿ ವಿಶ್ವವಿದ್ಯಾಲಯಗಳ, ಸ್ವತಂತ್ರ ಮಾಧ್ಯಮಗಳ ಅಥವಾ ಇತರ ಸಂಸ್ಥೆಗಳ ಮೂಲಕ ಹೆಚ್ಚಿನ ಸಮೀಕ್ಷೆ, ವಿಶ್ಲೇಷಣೆಗಳು ನಡೆದಿಲ್ಲ. ಹಲವು ಖಾಸಗಿ ಅಧ್ಯಯನಗಳಲ್ಲಿ ಹೇಳುವಂತೆ ಈ ಯೋಜನೆಗಳು ಸಾಕಾರಗೊಂಡರೆ ಸಮಾಜದಲ್ಲಿ ವರ್ಣಬೇಧಕ್ಕೆ ಅವಕಾಶ ಮಾಡಿಕೊಟ್ಟಂತಾಗುವುದೇ ಅಲ್ಲದೆ, ಇದನ್ನು ನಿರ್ವಹಿಸುವ ಉದ್ದಿಮೆಗಳ ಉತ್ತರದಾಯಿತ್ವವೂ ಸಹ ಕಾಣದಿರುವ ಅಂಶವನ್ನು ಒತ್ತಿ ಹೇಳಲಾಗಿದೆ. ಕೆಲವು ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ಮೀರಿ SPV ಗಳು ಈ ಯೋಜನೆಯನ್ನು ಜಾರಿಗೊಳಿಸಿರುವುದರಿಂದ ಅನಗತ್ಯವಾಗಿ ಕೋಟ್ಯಂತರ ರೂಗಳನ್ನು ವ್ಯರ್ಥ ಮಾಡಲಾಗಿದೆ ಎಂದು ಕೇರಳ ನಗರ ಆಯೋಗದ ಸದಸ್ಯ ತೀಕೇಂದರ್ ಸಿಂಗ್ ಪನ್ವಾರ್ ಅವರು ನಡೆಸಿದ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಅಂತಿಮ ಫಲಿತಾಂಶ ಏನು ?
ವಿಡಂಬನೆ ಎಂದರೆ ನಗರ ಯೋಜನೆ ಮತ್ತು ಸ್ಮಾರ್ಟ್ ಸಿಟಿ ಮಿಷನ್ ಕುರಿತಂತೆ ವಿಪುಲವಾದ ದತ್ತಾಂಶಗಳು ಲಭ್ಯವಾಗುತ್ತವೆ. ಸ್ಮಾರ್ಟ್ ಸಿಟಿ ಡ್ಯಾಶ್ ಬೋರ್ಡ್, NULP, ಇತ್ಯಾದಿ ಆಕರಗಳು ಲಭ್ಯವಾಗುತ್ತವೆ. ಆದರೆ ತಳಮಟ್ಟದಲ್ಲಿ ಸೂಕ್ತವಾದ ವಿಶ್ಲೇಷಣೆ ನಡೆಸಲು ಅನುಕೂಲವಾಗುವಂತಹ ಮಾಹಿತಿ ಎಲ್ಲಿಯು ಲಭ್ಯವಾಗುವುದಿಲ್ಲ. ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಹೂಡಿಕೆ ಮಾಡಿರುವ ಕೋಟ್ಯಂತರ ರೂಗಳ ಬಂಡವಾಳ ಫಲಪ್ರದವಾಗಿ ಬಳಕೆಯಾಗಿದೆಯೇ ಅಥವಾ ವ್ಯರ್ಥವಾಗಿದೆಯೇ, ನಗರಗಳು ಉದ್ದೇಶಿತ ಯೋಜನೆಗೆ ಪೂರಕವಾಗಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿವೆಯೇ, ಅತ್ಯಾಧುನಿಕ ನಗರ ನಿರ್ಮಾಣದ ಕನಸು ಈಡೇರುವ ಸಾಧ್ಯತೆಗಳಿವೆಯೇ ಇವೇ ಮುಂತಾದ ಪ್ರಶ್ನೆಗಳು, ಉತ್ತರವಿಲ್ಲದೆ ಅಥವಾ ಉತ್ತರಿಸುವ ಉತ್ತರದಾಯಿತ್ವದ ಸಂಸ್ಥೆಗಳಿಲ್ಲದೆ ಪ್ರಶ್ನೆಗಳಾಗಿಯೇ ಉಳಿಯಲಿವೆ.
ಏತನ್ಮಧ್ಯೆ ಮುಂಗಾರು-ಪೂರ್ವ ಮುಂಗಾರು ಮಳೆಯಿಂದ ಬೆಂಗಳೂರು, ಮುಂಬೈ, ನಾಗಪುರ, ಅಹಮದಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳ ಜನತೆ ಮೊದಲಿನಂತೆಯೇ ಮೂಲ ಸೌಕರ್ಯಗಳ ಕೊರತೆಯಿಂದ, ಪ್ರವಾಹಗಳಿಂದ, ವಸತಿ ಪ್ರದೇಶಗಳು ಜಲಾನಯನವಾಗುವ ಬವಣೆಗಳಿಂದ ಮುಕ್ತವಾಗಿ ಜೀವನ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸ್ಮಾರ್ಟ್ ಸಿಟಿ ಹೆಸರಿಗೆ ತಕ್ಕಂತೆ ಮೇಲ್ನೋಟಕ್ಕೆ ಬಾಹ್ಯ ಸ್ವರೂಪದಲ್ಲಿ ಸುಂದರವಾಗಿ ಕಾಣುವ ಆದರೆ ಆಂತರಿಕವಾಗಿ ಸಾಮಾನ್ಯ ಜನರಷ್ಟೇ ಅಲ್ಲದೆ, ಹಿತವಲಯದ ಸಿರಿವಂತರೂ, ಮಧ್ಯಮವರ್ಗಗಳೂ ಸಹ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. ಮಳೆಗಾಲ ಎಂದರೆ ಸಿಂಹಸ್ವಪ್ನ ಎನಿಸುವಂತಹ ಪರಿಸ್ಥಿತಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಕ ಮೆಟ್ರೊಪಾಲಿಟನ್ ನಗರಗಳಲ್ಲಿ ಸೃಷ್ಟಿಯಾಗಿದೆ.

ಉದಾತ್ತ ಚಿಂತನೆ ಮತ್ತು ಕ್ಷಿಪ್ರ ಅಭಿವೃದ್ಧಿಯ ಕಲ್ಪನೆಯೊಂದಿಗೆ ಘೋಷಣೆಯಾದ ಮಹತ್ವಾಕಾಂಕ್ಷಿ ಯೋಜನೆಯ ಈ ವೈಫಲ್ಯದ ಕಾರಣ ಮತ್ತು ಪರಿಣಾಮಗಳನ್ನು ನಗರಾಭಿವೃದ್ಧಿ ತಜ್ಞರು, ಅರ್ಥಶಾಸ್ತ್ರಜ್ಞರು ಅಧ್ಯಯನದ ಮೂಲಕ ಸಾರ್ವಜನಿಕರ ಮುಂದಿಡಬೇಕಿದೆ.