
——ನಾ ದಿವಾಕರ—–
ಶಾಸಕರು ಸದನ ಕಲಾಪದಲ್ಲಿ ತಾವು ಬಳಸುವ ಭಾಷೆ-ಪರಿಭಾಷೆಯ ಬಗ್ಗೆ ಎಚ್ಚರವಹಿಸಬೇಕು
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಕಳೆದಿವೆ. ಯಾವುದೇ ಚುನಾಯಿತ ಸರ್ಕಾರಕ್ಕೆ ಎರಡು ವರ್ಷದ ಆಡಳಿತ ಎಂದರೆ ಮೌಲ್ಯಮಾಪನಕ್ಕೆ ಅರ್ಹತೆ ಪಡೆದಿದೆ ಎಂದೇ ಅರ್ಥ. ಈ ಅಧಿಕಾರಾವಧಿಯಲ್ಲಿ ಹಲವು ಸಾಧನೆಗಳೊಂದಿಗೇ ಹಲವಾರು ಪ್ರಮಾದಗಳಿಗೆ ಕಾರಣವಾಗಿರುವ ಸಿದ್ದರಾಮಯ್ಯ ಸರ್ಕಾರದ ಮೌಲ್ಯಮಾಪನ ಮಾಡಿದರೆ, ಸಂಪೂರ್ಣವಾಗಿ ಸಮಾಧಾನಕರ ಚಿತ್ರಣ ಕಾಣುವುದಿಲ್ಲ. ಹೆಚ್ಚುತ್ತಿರುವ ಅಪರಾಧಗಳು, ಮಹಿಳಾ ದೌರ್ಜನ್ಯಗಳು ಕಾನೂನು ಪಾಲನೆಯ ವೈಫಲ್ಯವನ್ನು ಎತ್ತಿ ತೋರಿಸುವಂತಿದೆ. ಆದಾಗ್ಯೂ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ, ಫಲಾನುಭವಿಗಳ ಸಕಾರಾತ್ಮಕ ಸ್ಪಂದನೆ ಮತ್ತು ಇದರೊಂದಿಗೇ ಬಹುಮತದ ಸರ್ಕಾರವೊಂದು ಹೊಸ ಆಡಳಿತ ನೀತಿ ಮತ್ತು ಯೋಜನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಾಗುತ್ತಿರುವಾಗ, ಹಾದಿಯಲ್ಲಿ ಸಂಭವಿಸಬಹುದಾದ ರಾಜಕೀಯ ಪಲ್ಲಟಗಳು ಮತ್ತು ನೀತಿ ವ್ಯತ್ಯಯಗಳು ಸಹಜ. ಇಲ್ಲಿ ಪ್ರಶ್ನೆ ಇರುವುದು ವಿರೋಧ ಪಕ್ಷ ನಿರ್ವಹಿಸಬೇಕಾದ ಜವಾಬ್ದಾರಿಯುತ ಪಾತ್ರ ಮತ್ತು ಸದನದಲ್ಲಿ ಧ್ವನಿಸಬೇಕಾದ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳು.
ತಪ್ಪುಗಳನ್ನೇ ಮಾಡದ ಸರ್ಕಾರಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಚರಿತ್ರೆಯಲ್ಲಿ ದಾಖಲಾಗಿರುವುದೂ ಇಲ್ಲ. ಸಹಜವಾಗಿಯೇ ವಿರೋಧ ಪಕ್ಷಗಳು ಈ ತಪ್ಪುಗಳನ್ನು ಎತ್ತಿತೋರಿಸುವ ನೈತಿಕ ಜವಾಬ್ದಾರಿ ಹೊಂದಿರುವಂತೆಯೇ, ಸೂಕ್ತ ಪರ್ಯಾಯವನ್ನು ಜನತೆಯ ಮುಂದಿಡುವ ಸಾಂವಿಧಾನಿಕ ಕರ್ತವ್ಯವನ್ನೂ ಹೊಂದಿರುತ್ತವೆ. ಆದರೆ ರಾಜ್ಯ ಬಿಜೆಪಿ ನಾಯಕರು ಅಧಿಕಾರ ಕಳೆದುಕೊಂಡ ಹತಾಶೆ ಮತ್ತು ಅಧಿಕಾರರಹಿತವಾಗಿ ಇರಲಾರದ ತೊಳಲಾಟಗಳ ನಡುವೆ ಸಿಲುಕಿ ಪರದಾಡುತ್ತಿರುವುದು ಮೇಲ್ನೋಟಕ್ಕೆ ಕಾಣಿಸುವಂತಿದೆ. ಬಿಜೆಪಿ ಸ್ಥಳೀಯ ನಾಯಕರು ಮತ್ತು ರಾಷ್ಟ್ರೀಯ ನಾಯಕರೂ ಸಹ, ಸರ್ಕಾರದ ಯೋಜನೆಗಳ ವಿರುದ್ಧ ದನಿ ಎತ್ತುವ ಭರದಲ್ಲಿ, ಅವುಗಳಿಂದ ಸಮಾಜದ ನಿರ್ಲಕ್ಷಿತ ಸಮುದಾಯಗಳಿಗೆ ಆಗುತ್ತಿರುವ ಉಪಯೋಗಗಳನ್ನೇ ಮರೆತಿರುವುದು ರಾಜಕೀಯ ಅಪ್ರಬುದ್ಧತೆಯ ದ್ಯೋತಕ. ಅಷ್ಟೇ ಅಲ್ಲದೆ ಪ್ರತಿಯೊಂದು ತಪ್ಪು ಹೆಜ್ಜೆಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತಿರುವುದು, ಪಕ್ಷದ ಗುರಿ ಸರ್ಕಾರಕ್ಕಿಂತಲೂ ಹೆಚ್ಚಾಗಿ ವ್ಯಕ್ತಿಗತವಾಗಿ ಸಿದ್ದರಾಮಯ್ಯನವರೇ ಎನ್ನುವುದನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.

ಸದನ ಕಲಾಪಗಳ ಘನ ಚೌಕಟ್ಟಿನಲ್ಲಿ
ವಿಧಾನಸಭೆ ಮತ್ತು ಲೋಕಸಭೆಯಲ್ಲಿ ನಡೆಯುವ ಕಲಾಪಗಳು ಮೂಲತಃ ವಿಶಾಲ ಸಮಾಜದ ಜನಸಾಮಾನ್ಯರ ಕುಂದು ಕೊರತೆಗಳನ್ನು, ಬೇಕು ಬೇಡಗಳನ್ನು, ಅಗತ್ಯತೆಗಳನ್ನು ಹಾಗೂ ಅವಕಾಶವಂಚಿತ ಸಮಾಜದಲ್ಲಿ ಕಾಣಬಹುದಾದ ಜಟಿಲ ಸಮಸ್ಯೆಗಳನ್ನು ಚರ್ಚಿಸುವ ಒಂದು ಪ್ರಬುದ್ಧ ವೇದಿಕೆಯಾಗಿರಬೇಕು. ನೆಹರೂ ಯುಗದಲ್ಲಿ, ತಮ್ಮ ಪರಿಧಿಗೆ ಬರುವ ಪ್ರಶ್ನೆಗಳೇನಾದರೂ ಸಂಸತ್ ಕಲಾಪದಲ್ಲಿ ಚರ್ಚೆಯಾಗುವ ಸಂಭವವಿದ್ದಾಗ ತಪ್ಪದೇ ಸಂಸತ್ ಅಧಿವೇಶನಕ್ಕೆ ಹಾಜರಾಗುತ್ತಿದ್ದರು. ವಾಜಪೇಯಿ, ಲೋಹಿಯಾ ಮುಂತಾದ ದಿಗ್ಗಜರ ಪ್ರಶ್ನೆಗಳನ್ನು ಆಲಿಸುತ್ತಿದ್ದರು, ಸೂಕ್ತ ಪ್ರತಿಕ್ರಿಯೆ ನೀಡುತ್ತಿದ್ದರು. ವಿರೋಧ ಪಕ್ಷದ ನಾಯಕರೂ ಸಹ ಪಕ್ಷಾತೀತವಾಗಿ ತಮ್ಮ ಆಕ್ಷೇಪಗಳನ್ನು ನಾಗರಿಕ ಪರಿಭಾಷೆಯಲ್ಲೇ ಮಂಡಿಸುತ್ತಿದ್ದುದು ಸ್ವಾಭಾವಿಕವಾಗಿತ್ತು. ರಾಜಕೀಯವಾಗಿ, ಸೈದ್ಧಾಂತಿಕವಾಗಿ ವಿರೋಧ ಇದ್ದರೂ ವಾಜಪೇಯಿ ಅವರ ಕಲಾಪದ ಮಾತುಗಳನ್ನು ಕಿವಿಗೊಟ್ಟು ಆಲಿಸುವ ಒಂದು ಪರಂಪರೆ ಭಾರತದ ಪ್ರಜಾಪ್ರಭುತ್ವದ ಮೂಲ ಲಕ್ಷಣವಾಗಿತ್ತು. ಇದಕ್ಕೆ ಕಾರಣ ಈ ನಾಯಕರು ತಾವು ಬಳಸುವ ಭಾಷೆ-ಪರಿಭಾಷೆಯಲ್ಲಿ ಸಭ್ಯತೆಯ ಎಲ್ಲೆಯನ್ನು ಮೀರಿ ನಡೆಯುತ್ತಿರಲಿಲ್ಲ. ವ್ಯಕ್ತಿ ಗೌರವಕ್ಕೆ ಧಕ್ಕೆ ಉಂಟಾಗುವ ಮಾತುಗಳನ್ನು ಆಡುತ್ತಿರಲಿಲ್ಲ.

ಆದರೆ ಬದಲಾದ ಭಾರತದಲ್ಲಿ ಈ ವಿದ್ಯಮಾನವೂ ಪಲ್ಲಟಗೊಂಡಿದೆ. ಇಂದು ಸಂಸತ್ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಪ್ರಧಾನಮಂತ್ರಿಗಳು ವಿದೇಶ ಪ್ರವಾಸಕ್ಕೆ ಹೊರಡುತ್ತಾರೆ. ಸಚಿವರು ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಸಮರ್ಪಕವಾಗಿ ಸದನದ ಮುಂದೆ ಮಂಡಿಸುವುದಿಲ್ಲ. ಬಹುಪಾಲು ಸನ್ನಿವೇಶಗಳಲ್ಲಿ ಸಂಬಂಧ ಪಟ್ಟ ಸಚಿವರು ಕಲಾಪದಿಂದಲೇ ದೂರ ಉಳಿಯುವುದನ್ನೂ ಕಾಣುತ್ತಲೇ ಬಂದಿದ್ದೇವೆ. ಈ ಬದಲಾದ ʼ ಸದನ ಸಂಸ್ಕೃತಿʼಯಲ್ಲಿ ಇನ್ನೂ ಢಾಳಾಗಿ ಕಾಣುವ ಒಂದು ದುಷ್ಟ ಪರಂಪರೆ ಎಂದರೆ, ಜನಪ್ರತಿನಿಧಿಗಳು , ಪಕ್ಷಾತೀತವಾಗಿ, ಸದನದ ಕಲಾಪದಲ್ಲಿ ಬಳಸುವ ಭಾಷೆ, ಪರಿಭಾಷೆ, ಮಾತಿನ ಧಾಟಿ ಮತ್ತು ಸಭ್ಯತೆ-ಸೌಜನ್ಯದ ಎಲ್ಲೆ ಮೀರಿದಂತಹ ವಾಗ್ವಾದ. ತಾವು ಆಡುವ ಮಾತುಗಳನ್ನು ಕಲಾಪ ವೀಕ್ಷಿಸಲು ಬರುವ ಸಾರ್ವಜನಿಕರಷ್ಟೇ ಅಲ್ಲದೆ ಸಂವಹನ ಮಾಧ್ಯಮಗಳ ಮೂಲಕ ಇಡೀ ಸಮಾಜವು ಕೇಳಿಸಿಕೊಳ್ಳುತ್ತದೆ ಎಂಬ ಸಾಮಾನ್ಯ ಪರಿವೆಯೂ ಇಲ್ಲದೆ ವರ್ತಿಸುವುದು, ವರ್ತಮಾನ ರಾಜಕಾರಣದ ನವ ಸಂಸ್ಕೃತಿಯೇ ಆಗಿದೆ.

ನಡವಳಿಕೆ ಮತ್ತು ಬಳಸುವ ಭಾಷೆಯ ನಂಟು
ನಿನ್ನೆ ಕರ್ನಾಟಕದ ವಿಧಾನಸಭೆಯ ಕಲಾಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿ. ಅಶ್ವತ್ಥ ನಾರಾಯಣ ಅವರ ನಡುವೆ ನಡೆದ ಸಂವಾದ ಈ ಹೊಸ ಬೆಳವಣಿಗೆಯ ಇತ್ತೀಚಿನ ನಿದರ್ಶನವಷ್ಟೇ. ಇಂತಹ ಪ್ರಸಂಗಗಳು ನಡೆಯುತ್ತಲೇ ಇವೆ. ಮಾಧ್ಯಮಗಳೂ ಸುದ್ದಿರೋಚಕತೆಗಾಗಿ ಇಂತಹ ವೈಯುಕ್ತಿಕ ವರ್ತನೆಗಳನ್ನು ಆಕರ್ಷಕವಾಗಿ ಬಿತ್ತರಿಸುವುದು, ಮುದ್ರಿಸುವುದು ಈ ಹೊಸ ಪರಂಪರೆಯ ಮತ್ತೊಂದು ದುಷ್ಟ ಮುಖ. ಉದಾಹರಣೆಗೆ ಹೇಳುವುದಾದರೆ “ ತೋಳೇರಿಸಿದ ಡಿಸಿಎಂ – ಎದೆಯುಬ್ಬಿಸಿದ ಮಾಜಿ ಡಿಸಿಎಂ” ಎಂಬ ವಿವರಣೆಯ ಹಿಂದೆ ಜನಪ್ರತಿನಿಧಿಗಳ ದುರ್ವರ್ತನೆಯನ್ನು Romanticise ಮಾಡುವ, ಆಕರ್ಷಣೀಯ ಮಾಡುವ ಒಂದು ಮಾದರಿ ಇದೆ. ಈ ಪರಿಭಾಷೆಯನ್ನು ಬಳಸುವ ಅಗತ್ಯತೆ ಇದೆಯೇ ? ಇದು ಸಾರ್ವಜನಿಕ ವಲಯದ ಬೀದಿ ಕಾಳಗದಲ್ಲಿ ಬಳಸಬಹುದಾದ ಪದಗಳಲ್ಲವೇ ? ಮಾಧ್ಯಮಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಟಿವಿ ವಾಹಿನಿಗಳಂತೆಯೇ ಮುದ್ರಣ ಮಾಧ್ಯಮಗಳೂ ಸಹ ಮಾರುಕಟ್ಟೆಗಾಗಿ ಪದಬಳಕೆಯನ್ನು ಪ್ರಯೋಗಿಸುವುದು, ವಿಶಾಲ ಸಮಾಜಕ್ಕೆ ಹಾನಿ ಮಾಡುವುದೇ ಹೆಚ್ಚು.
ಈ ಇಬ್ಬರು ನಾಯಕರು ತಮ್ಮ ಸಾಂವಿಧಾನಿಕ ಘನತೆ ಮತ್ತು ನಾಗರಿಕ ಜವಾಬ್ದಾರಿಯನ್ನು ಮರೆತು ಸದನದಲ್ಲಿ ಆಡಿರುವ ಮಾತುಗಳು, ತದನಂತರದಲ್ಲಿ ಸಂಧಾನದ ಮೂಲಕ ಸರಿಹೋಗಿದ್ದರೂ, ಆಡಿದ ಮಾತು ಒಡೆದ ಮುತ್ತು ಸರಿಪಡಿಸಲಾಗುವುದಿಲ್ಲ ಎಂಬ ಪರಿಜ್ಞಾನ ರಾಜಕೀಯ ನಾಯಕರಲ್ಲಿ ಇರಬೇಕಲ್ಲವೇ. ವರ್ತಮಾನದ ರಾಜಕಾರಣದಲ್ಲಿ ಚುನಾಯಿತ ಪ್ರತಿನಿಧಿಗಳೆಲ್ಲರೂ ಹಾಲಿ ಭ್ರಷ್ಟರೋ ಮಾಜಿ ಭ್ರಷ್ಟರೋ ಆಗಿರುವುದು ಸಮಾಜದ ಅರಿವಿಗೆ ಬಂದಾಗಿದೆ. ಆದಾಗ್ಯೂ ಸದನ ಕಲಾಪದಲ್ಲಿ ʼ ನೀನು-ತಾನು ʼ ಎಂದು ಏಕವಚನದಲ್ಲಿ ಸಂಬೋಧಿಸುವುದು, ವೈಯುಕ್ತಿಕವಾಗಿ ಈ ನಾಯಕರ ಘನತೆಗೆ ಅಷ್ಟೇ ಅಲ್ಲದೆ ಸದನದ ಘನತೆಗೂ ಧಕ್ಕೆ ಉಂಟುಮಾಡುತ್ತದೆ ಎಂಬ ಪರಿವೆ ಇರಬೇಕಲ್ಲವೇ ? ಇಡೀ ಭಾರತದ ರಾಜಕೀಯ ವಲಯವೇ ಭ್ರಷ್ಟಾಚಾರ-ಸ್ವಜನಪಕ್ಷಪಾತದ ಆಡುಂಬೊಲವಾಗಿರುವಾಗ, ʼ ಭ್ರಷ್ಟಾಚಾರದ ಪಿತಾಮಹ ʼಎಂಬ ಘನ ಬಿರುದನ್ನು ಸಾರ್ವತ್ರೀಕರಿಸಬಹುದಾಗಿದೆ. ಹೀಗಿದ್ದರೂ ಜನಪ್ರತಿನಿಧಿಗಳು ಇಂತಹ ಮಾತುಗಳನ್ನು, ಅಸಭ್ಯ ರೀತಿಯಲ್ಲಿ ಕಲಾಪದಲ್ಲಿ ದಾಖಲಿಸುವುದು ನಿಜಕ್ಕೂ ಪ್ರಜಾಪ್ರಭುತ್ವದ ಚೋದ್ಯ ಮತ್ತು ಸಾಂವಿಧಾನಿಕ ದುರಂತ ಎಂದೇ ಹೇಳಬಹುದು.

ಕರ್ನಾಟಕದ ತಳಸಮುದಾಯಗಳ ಹೋರಾಟಗಳಿಗೆ ಒಂದು ನೈತಿಕ ಭೂಮಿಕೆ ಒದಗಿಸಿದ ಕವಿ ಸಿದ್ದಲಿಂಗಯ್ಯ ಅವರ ಕಲಾಪದ ಭಾಷಣಗಳ ಪುಸ್ತಕವನ್ನು ಎಲ್ಲ ಹಾಲಿ ಪ್ರತಿನಿಧಿಗಳೂ ಮತ್ತೊಮ್ಮೆ ಓದಬೇಕಿದೆ. ಆಕ್ರೋಶ ಅಥವಾ ಅಸಮಾಧಾನ ಅಸಭ್ಯತೆಗೆ ಎಡೆಮಾಡಿಕೊಡುವುದು ನಾಗರಿಕ ಸಮಾಜಕ್ಕೆ ಒಪ್ಪುವಂತಹ ವರ್ತನೆಯಾಗಲಾರದು. ಅಂತಿಮವಾಗಿ ಜನಪ್ರತಿನಿಧಿಗಳು ಕಲಾಪದಲ್ಲಿ ಆಡುವ ಮಾತುಗಳು ವಿಶಾಲ ಸಮಾಜಕ್ಕೆ, ಸಾಮಾನ್ಯ ಜನತೆಗೆ ಸಂಬಂಧಿಸಿರುತ್ತವೆ, ಅವರ ಸಮಸ್ಯೆಗಳನ್ನು ಬಿಂಬಿಸುತ್ತವೆ. ಈ ಪರಿಜ್ಞಾನವನ್ನು ಎಲ್ಲ ಪ್ರತಿನಿಧಿಗಳೂ ಹೊಂದಿರಬೇಕಾಗುತ್ತದೆ. ನಿನ್ನೆಯ ಪ್ರಸಂಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಿವಿಮಾತು ಎಲ್ಲ ಶಾಸಕರಿಗೂ ಅನ್ವಯಿಸುತ್ತದೆ. ಇಂತಹ ಪೂರ್ವನಿದರ್ಶನಗಳು ಭಾರತದ ಸಂಸದೀಯ ಇತಿಹಾಸದಲ್ಲಿ ಪುಟಗಟ್ಟಲೆ ಇವೆ. ಆದರೆ ಬದಲಾದ ಭಾರತದ ಚುನಾಯಿತ-ಪರಾಜಿತ ಪ್ರತಿನಿಧಿಗಳು ಸಾರ್ವಜನಿಕ ಸಭ್ಯತೆ ಮತ್ತು ಸೌಜನ್ಯಯುತ ಭಾಷೆಯನ್ನು ಮೀರಿ ವರ್ತಿಸುವುದು ಸಾಮಾನ್ಯ ಸಂಗತಿಯಾಗಿದೆ. ಅಂತಿಮವಾಗಿ ಧಕ್ಕೆಯಾಗುವುದು ಸದನದ ಘನತೆಗೆ ಎಂಬ ಅರಿವು ರಾಜಕೀಯ ನಾಯಕರಲ್ಲಿದ್ದರೆ ಸಾಕು.
ಉತ್ತರದಾಯಿತ್ವದ ಪ್ರಶ್ನೆ
ಈ ಅಸಭ್ಯತೆಯನ್ನು ಹೊರತುಪಡಿಸಿ, ಭಾರತದ ರಾಜಕಾರಣದಲ್ಲಿ, ವಿಶೇಷವಾಗಿ ಕಳೆದ 25 ವರ್ಷಗಳಲ್ಲಿ, ನಿರ್ದಿಷ್ಟವಾಗಿ 2014ರ ನಂತರ ಬದಲಾದ ಭಾರತದಲ್ಲಿ, ಯಾವುದೇ ಸರ್ಕಾರವಾದರೂ, ಮುಖ್ಯಮಂತ್ರಿ/ಸಚಿವರಾಗಲೀ ಅಥವಾ ಇಡಿಯಾಗಿ ಸರ್ಕಾರವೇ ಆಗಲೀ, ಸಾರ್ವಜನಿಕ ಜೀವನದಲ್ಲಿ ಸಂಭವಿಸುವ ದುರ್ಘಟನೆಗಳಿಗೆ ಕಾನೂನು ಭಂಜಕ ಚಟುವಟಿಕೆಗಳಿಗೆ, ಸಮಾಜದ ಸೌಹಾರ್ದತೆಗೆ ಹಾನಿ ಉಂಟುಮಾಡುವ ಪ್ರಸಂಗಗಳಿಗೆ ಅಥವಾ ತನ್ನ ಆಡಳಿತ ನೀತಿ ಮತ್ತು ಅದರೊಳಗಿನ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸ್ವಹಿತಾಸಕ್ತಿ, ಒಳಜಗಳಗಳ ಪರಿಣಾಮವಾಗಿ ಸಂಭವಿಸುವ ದುರಾಡಳಿತಗಳಿಗೆ ನೈತಿಕ ಹೊಣೆ ಹೊತ್ತು, ಉತ್ತರದಾಯಿತ್ವವನ್ನು ಒಪ್ಪಿಕೊಂಡು, ತಮ್ಮ ಸ್ಥಾನ ತ್ಯಜಿಸಿರುವ ನಿದರ್ಶನಗಳು ಇದೆಯೇ ? ಮಹಿಳಾ ದೌರ್ಜನ್ಯಗಳು ನಡೆದರೆ ಸಂತ್ರಸ್ತರನ್ನೆ ಕಾರಣಕರ್ತರನ್ನಾಗಿ ನೋಡುವ, ಮೂಲ ಸೌಕರ್ಯ ಕೊರತೆಗಳಿಗೆ ಅಧಿಕಾರಶಾಹಿಯನ್ನು ದೂರುವ, ನೈಸರ್ಗಿಕ ಅನಾಹುತಗಳಿಗೆ ಪ್ರಕೃತಿಯನ್ನೇ ಜವಾಬ್ದಾರಿ ಮಾಡುವ ಒಂದು ಹೊಸ ಆಲೋಚನಾ ವಿಧಾನ ಕಳೆದ 25 ವರ್ಷಗಳಲ್ಲಿ ಪಕ್ಷಾತೀತವಾಗಿ ರೂಢಿಗತವಾಗಿದೆ . ವಿಪರ್ಯಾಸವೆಂದರೆ ವರ್ತಮಾನದ ಭಾರತದಲ್ಲಿ ಆಡಳಿತ ವ್ಯವಸ್ಥೆ/ಸರ್ಕಾರದ ಉತ್ತರದಾಯಿತ್ವ ಮತ್ತು ನೈತಿಕ ಜವಾಬ್ದಾರಿ ಎರಡೂ ಔದಾತ್ಯಗಳು ಚರಿತ್ರೆಯ ಪುಟಗಳಲ್ಲಿ ಸೇರಿಹೋಗಿದೆ.

ಉದಾಹರಣೆಗೆ ಚಾರ್ ಧಾಮ್ ಕ್ಷೇತ್ರದ, ಉತ್ತರಖಂಡದ ನೈಸರ್ಗಿಕ ವಿಕೋಪ, ವಯನಾಡಿನ ಪ್ರಕೃತಿ ನಾಶದ ದುಷ್ಪಪರಿಣಾಮ, ಈಗ ಹಿಮಾಚಲಪ್ರದೇಶದಲ್ಲಿ ಸಂಭವಿಸುತ್ತಿರುವ ದುರಂತಗಳು ಇವೆಲ್ಲದಕ್ಕೂ ಕಾರಣ ಸರ್ಕಾರಗಳು ಅನುಸರಿಸುತ್ತಿರುವ ಆರ್ಥಿಕ ನೀತಿಗಳು ಮತ್ತು ʼ ಅಭಿವೃದ್ಧಿ ʼಯ ಹೆಸರಿನಲ್ಲಿ ಕೈಗೊಳ್ಳುವ ಮೂಲ ಸೌಕರ್ಯ ಯೋಜನೆಗಳು. ಈ ದುರಂತಗಳಲ್ಲಿ ಮಡಿದವರ ಸಂಖ್ಯೆ, ಆದ ಅನಾಹುತಗಳು, ಎಷ್ಟೇ ಇರಲಿ, ಯಾವುದೇ ಸರ್ಕಾರ ಉತ್ತರದಾಯಿತ್ವವನ್ನು ಹೊತ್ತಿದೆಯೇ ? ಅಥವಾ ಜನಸಾಮಾನ್ಯರ ಅತಿರೇಕದ ಶ್ರದ್ಧಾಭಕ್ತಿಗಳ ಪರಿಣಾಮವಾಗಿ ಉತ್ತರಪ್ರದೇಶದ ಪ್ರಯಾಗ, ಹರಿಯಾಣ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮುಂತಾದೆಡೆಗಳಲ್ಲಿ ಸಂಭವಿಸಿದ ಕಾಲ್ತುಳಿತದ ಸಾವುಗಳು ಎಷ್ಟು ಸರ್ಕಾರಗಳನ್ನು, ಅಧಿಕಾರ ಕೇಂದ್ರದ ರಾಜಕಾರಣಿಗಳನ್ನು ಪಲ್ಲಟಗೊಳಿಸಿವೆ. ಯಾವುದೇ ಪ್ರಕರಣದಲ್ಲಾದರೂ ಅಧಿಕಾರಶಾಹಿ ಅಥವಾ ಕಾನೂನು ಪಾಲಕರು ಶಿಕ್ಷೆಗೊಳಗಾಗಿರುವುದೇ ಹೊರತು, ರಾಜಕೀಯ ನಾಯಕರನ್ನು ಅಲುಗಾಡಿಸಲೂ ಸಾಧ್ಯವಾಗಿಲ್ಲ. ಈ ಘಟನೆಗಳಿಗೆ ಉತ್ತರದಾಯಿತ್ವ ಹೊತ್ತು ರಾಜೀನಾಮೆ ನೀಡುವ ಒಂದು ಪ್ರಸಂಗವನ್ನಾದರೂ ಕಾಣಲು ಸಾಧ್ಯವೇ ?

ಇನ್ನು ಭ್ರಷ್ಟಾಚಾರದ ಭಂಡಾರವನ್ನು ತೆರೆದು ನೋಡಿದರೆ ಅಲ್ಲಿ ಪಕ್ಷಾತೀತವಾಗಿ, ತತ್ವ ಸಿದ್ಧಾಂತಗಳಿಂದಾಚೆಗೆ ಎಲ್ಲ ರಾಜಕೀಯ ಪಕ್ಷಗಳ ಚಹರೆಗಳೂ ಕಾಣುತ್ತವೆ. ಪಕ್ಷಾಂತರದ ಹಾದಿಯಲ್ಲಿ ಆಡಳಿತ ಪಕ್ಷಕ್ಕೆ ಹಾರಿದರೆ ಭ್ರಷ್ಟರೆಲ್ಲರೂ ಪರಿಶುದ್ಧರಾಗುವ ಒಂದು ಯಾಂತ್ರಿಕ ವ್ಯವಸ್ಥೆಯನ್ನು ಬಿಜೆಪಿ 2014ರಿಂದಲೇ ಚಾಲ್ತಿಯಲ್ಲಿರಿಸಿದೆ. ಹಾಗಾಗಿ ಕೇಂದ್ರದಿಂದ ರಾಜ್ಯದವರೆಗೆ, ಸಂಸತ್ತಿನಿಂದ ವಿಧಾನಸಭೆಗಳವರೆಗೆ, ರಾಜ್ಯ ಸರ್ಕಾರದಿಂದ ಜಿಲ್ಲಾ ಪಂಚಾಯತ್‌ವರೆಗೆ, ಆಡಳಿತ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ನೆಲೆಗಳಲ್ಲೂ ವ್ಯಾಪಕವಾಗಿ ಕಾಣುವ, ಬಹಿರಂಗವಾಗಿರುವ, ತನಿಖೆಗೊಳಗಾಗಿರುವ ಭ್ರಷ್ಟಾಚಾರದ ಹಗರಣಗಳು ಈಗ ಚುನಾವಣೆಗಳಷ್ಟೇ ನಿಯತ ಕಾಲಿಕ ವಿದ್ಯಮಾನಗಳಾಗಿವೆ. ಅಷ್ಟೇ ರೆಗ್ಯುಲರ್ ಆಗಿ ಎಲ್ಲ ರಾಜ್ಯಗಳಲ್ಲೂ ಕಾಣುವುದು ಮಹಿಳಾ ದೌರ್ಜನ್ಯಗಳು, ಅತ್ಯಾಚಾರಗಳು, ದಲಿತರ ಮೇಲಿನ ಅಮಾನುಷ ದಾಳಿಗಳು, ಅಸ್ಪೃಶ್ಯತೆ-ಸಾಮಾಜಿಕ ಬಹಿಷ್ಕಾರದ ಪ್ರಸಂಗಗಳು, ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ಮತಾಂಧ ಶಕ್ತಿಗಳ ಅಟ್ಟಹಾಸಗಳು.

ವಿರೋಧ ಪಕ್ಷಗಳ ಜವಾಬ್ದಾರಿ
ಈ ಯಾವುದೇ ಪ್ರಕರಣಗಳಲ್ಲಿ, ಅಧಿಕಾರಸ್ಥರ ರಾಜೀನಾಮೆ ಒತ್ತಟ್ಟಿಗಿರಲಿ, ಯಾವ ಸರ್ಕಾರ ಅಥವಾ ಸಚಿವರಾದರೂ ನೈತಿಕ ಹೊಣೆ ಹೊತ್ತು, ರಾಜೀನಾಮೆ ಕೊಡುವುದು ದೂರದ ಮಾತು, ಸಮಾಜದ ಮುಂದೆ ಒಪ್ಪಿಕೊಂಡಿರುವ ನಿದರ್ಶನಗಳಿವೆಯೇ ? ಹೀಗಿದ್ದರೂ ಕರ್ನಾಟಕದಲ್ಲಿ ಪ್ರಧಾನ ವಿರೋಧ ಪಕ್ಷ ಬಿಜೆಪಿ ಗಳಿಗೆಗೊಮ್ಮೆ ಮುಖ್ಯಮಂತ್ರಿಗಳ ಮತ್ತು ಸರ್ಕಾರದ ರಾಜೀನಾಮೆಗಾಗಿ ಆಗ್ರಹಿಸುವ ಚಟವನ್ನು ಬೆಳೆಸಿಕೊಂಡಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಎಷ್ಟು ಪ್ರಸಂಗಗಳಲ್ಲಿ ರಾಜೀನಾಮೆ ಆಗ್ರಹಿಸಲಾಗಿದೆ, ಸರ್ಕಾರದ ಪತನಕ್ಕೆ ಎಷ್ಟು ದಿನಾಂಕಗಳನ್ನು ನಿಗದಿಪಡಿಸಲಾಗಿದೆ, ಮುಖ್ಯಮಂತ್ರಿಗಳ ಪದಚ್ಯುತಿಗೆ ಎಷ್ಟು ಬಾರಿ ಸಮಯ ನಿಗದಿ ಮಾಡಲಾಗಿದೆ ಎಂದು ಲೆಕ್ಕ ಇಡಲು ಸಾಧ್ಯವಿಲ್ಲ. ಮೂಡಾ ಹಗರಣವನ್ನೇ ನಿರ್ದಿಷ್ಟ ನಿದರ್ಶನವಾಗಿ ನೋಡಿದರೆ, ಮುಖ್ಯಮಂತ್ರಿಯ ಜೈಲುವಾಸ, ರಾಜೀನಾಮೆ, ಸರ್ಕಾರದ ಪತನ ಇವೆಲ್ಲದಕ್ಕೂ ದಿನಾಂಕಗಳನ್ನೂ ನಿಗದಿಪಡಿಸಲಾಗಿತ್ತು.
ತನ್ನ ಅಧಿಕಾರಾವಧಿಯಲ್ಲಿ ಪಾಲಿಸದ ಔನ್ನತ್ಯಗಳನ್ನು ವಿರೋಧಪಕ್ಷವಾಗಿದ್ದಾಗ ಆಗ್ರಹಿಸುವ ಒಂದು ರಾಜಕೀಯ ಚಾಳಿಯ ಹಾಗೆಯೇ ರಾಜೀನಾಮೆಗಾಗಿ ಆಗ್ರಹಿಸುವ ಚಟವೂ ಸಹ ರಾಜ್ಯ ರಾಜಕಾರಣವನ್ನು ಅಂಟಿಕೊಂಡಿದೆ. ಒಂದು ರೈಲು ಅಪಘಾತಕ್ಕಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸ್ತ್ರಿ, ಫೋನ್ ಕದ್ದಾಲಿಕೆಯ ಆರೋಪಕ್ಕೆ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಹೆಗ್ಡೆ ಈಗ ಗ್ರಾಂಥಿಕ ಉಲ್ಲೇಖಗಳಾಗಿದ್ದಾರೆಯೇ ಹೊರತು, ರಾಜಕೀಯ ನೈತಿಕತೆ ಮತ್ತು ಪ್ರಾಮಾಣಿಕ ಆಳ್ವಿಕೆಗೆ ಪೂರ್ವನಿದರ್ಶನವಾಗಿ ಉಳಿದಿಲ್ಲ. ಭ್ರಷ್ಟಾಚಾರ ಸರ್ವವ್ಯಾಪಿಯಾದಂತೆಯೇ ಭ್ರಷ್ಟಾಚಾರದ ಕಳಂಕವೂ ಸರ್ವವ್ಯಾಪಿಯಾಗಿ ಎಲ್ಲ ರಾಜಕಾರಣಿಗಳಿಗೂ ಅಂಟಿರುವುದರಿಂದ, “ ನಿಮಗಿಂತ ನಾನು ಮೇಲು ! ” ಎಂಬ ದಾರ್ಷ್ಟ್ಯ ಎಲ್ಲರನ್ನೂ ಜನತಾ ನ್ಯಾಯಾಲಯದ ಕಟಕಟೆಗಳಿಂದ ದೂರ ಇರಿಸಿದೆ.

ಹೀಗಿದ್ದಾಗಲೂ, ಕರ್ನಾಟಕದ ವಿಧಾನಸಭಾ ಕಲಾಪಗಳಲ್ಲಿ ವಿರೋಧಪಕ್ಷದ ಕಡೆಯಿಂದ ಕೇಳಿಬರುವ ಒಕ್ಕೊರಲ ದನಿ ಎಂದರೆ ಸರ್ಕಾರದ/ಮುಖ್ಯಮಂತ್ರಿಗಳ ರಾಜೀನಾಮೆಯ ಆಗ್ರಹ. ಪ್ರತಿ ಬಾರಿಯೂ ರಾಜೀನಾಮೆಯನ್ನೇ ಪ್ರಧಾನವಾಗಿ ಬಿಂಬಿಸಿ, ಜನಸಾಮಾನ್ಯರ ನೈಜ ಸಮಸ್ಯೆಗಳಿಗೆ ಕುರುಡಾಗುವುದು ವಿರೋಧ ಪಕ್ಷಗಳ ವಿಷಯ ದಾರಿದ್ರ್ಯಕ್ಕೆ ಸಾಕ್ಷಿ ಎಂದರೆ ಅತಿಶಯೋಕ್ತಿಯಾಗಲಾರದು.
ಕೊನೆಯ ಹನಿ : ಸಾರ್ವತ್ರಿಕ ಪ್ರಶ್ನೆ : ಧರ್ಮಸ್ಥಳದ ಸುತ್ತಲಿನ ಘಟನೆಗಳಿಗೆ ಯಾರು ರಾಜೀನಾಮೆ ಕೊಡಬೇಕು ?
-೦-೦-೦-೦-