ಮುಂಬರುವ ಚುನಾವಣೆಗಳಲ್ಲಿ ರಾಜ್ಯದ ಕಾರ್ಮಿಕ ವರ್ಗದ ಹೊಣೆಗಾರಿಕೆಯೂ ಹೆಚ್ಚಿದೆ
ಸಾಮಾನ್ಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅಥವಾ ಚುನಾವಣೆ ಎಂದರೆ, ಜನಸಾಮಾನ್ಯರು ತಮ್ಮ ಯೋಗಕ್ಷೇಮವನ್ನು ಕಾಪಾಡುವಂತಹ, ತಮ್ಮ ಜೀವನಶೈಲಿಯನ್ನು ಸುಧಾರಿಸುವಂತಹ, ತಮ್ಮ ಜೀವನೋಪಾಯದ ಮಾರ್ಗಗಳನ್ನು ಹಸನುಗೊಳಿಸುವಂತಹ ಒಂದು ಸರ್ಕಾರವನ್ನು ಆಯ್ಕೆ ಮಾಡುವ ಪ್ರಕ್ರಿಯೆ ಎಂದೇ ಭಾವಿಸಲಾಗುತ್ತದೆ. ಮತದಾನವನ್ನು ಪವಿತ್ರ ಎಂದೇ ಭಾವಿಸುವ ಭಾರತದ ಸಂದರ್ಭದಲ್ಲಿ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ತನ್ನ ಅಮೂಲ್ಯ ಮತ ಚಲಾಯಿಸುವ ಮೂಲಕ, ಆಳುವವರಿಗೆ ಎಚ್ಚರಿಕೆಯನ್ನು ನೀಡುವುದರೊಂದಿಗೇ, ಅಧಿಕಾರದ ಗದ್ದುಗೆ ಏರುವ ರಾಜಕೀಯ ಪಕ್ಷಗಳಿಗೆ – ನೀವು ನಮ್ಮಿಂದ ಆಯ್ಕೆಯಾದ ಪ್ರತಿನಿಧಿಗಳಷ್ಟೇ ಅದನ್ನೂ ಮೀರಿದ ಸ್ಥಾನ ನಿಮಗೆ ಇರುವುದಿಲ್ಲ – ಎಂಬ ಸೂಕ್ಷ್ಮ ಸಂದೇಶವನ್ನೂ ನೀಡುತ್ತಿರುತ್ತಾನೆ. ತನ್ನ ನಿರೀಕ್ಷೆಗಳು ಹುಸಿಯಾದರೆ ಮತ್ತೊಂದು ಚುನಾವಣೆಯಲ್ಲಿ ಆಯ್ಕೆ ಬದಲಿಸುವ ಮುನ್ನೆಚ್ಚರಿಕೆಯನ್ನೂ ನೀಡುತ್ತಿರುತ್ತಾನೆ.
ಒಂದು ಮತದ ಮೌಲ್ಯವನ್ನು ಈ ಚೌಕಟ್ಟಿನೊಳಗಿಟ್ಟು ನೋಡಿದಾಗಲೇ ಅದರ ವಾಸ್ತವಿಕ ಮೌಲ್ಯವೂ ಅರ್ಥವಾಗಲು ಸಾಧ್ಯ. ಜಾತಿ, ಮತಧರ್ಮ, ಸಮುದಾಯ ಮತ್ತು ಇತರ ಸ್ವನಿರ್ಮಿತ-ಪಾರಂಪರಿಕ ಅಸ್ಮಿತೆಗಳನ್ನು ಆಧರಿಸಿಯೇ ಮತದ ಮೌಲ್ಯಗಳನ್ನೂ ಲೆಕ್ಕ ಹಾಕುವ ರಾಜಕೀಯ ಪಕ್ಷಗಳನ್ನು ಬದಿಗಿಟ್ಟು ನೋಡುವುದಾದರೆ, ಜನಸಾಮಾನ್ಯರ ನಡುವೆ ಈ ವಾಸ್ತವಿಕ ಮೌಲ್ಯದ ಅರಿವು ಮೂಡಿಸುವುದು ನಾಗರಿಕ ಸಮಾಜದ ಆದ್ಯತೆಯಾಗಬೇಕಾಗುತ್ತದೆ. ಮತದಾರ ಜಾಗೃತಿಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿರುವುದನ್ನೂ ಈ ಹಿನ್ನೆಲೆಯಲ್ಲೇ ಸ್ವಾಗತಿಸಬೇಕಿದೆ. ಇದರ ನಡುವೆಯೇ ರಾಜಕೀಯ ಪಕ್ಷಗಳು ಮತದ ಮೌಲ್ಯವನ್ನು ಹಣಕಾಸಿನ ಮೂಲಕ ನಿಗದಿಪಡಿಸಿರುವ ವಿಕೃತ ರಾಜಕಾರಣವನ್ನೂ ನಾವು ಎದುರಿಸುತ್ತಿದ್ದೇವೆ. ಹಣದುಬ್ಬರಕ್ಕೆ ಅನುಗುಣವಾಗಿ ಕಾರ್ಮಿಕರ ವೇತನ, ಕೂಲಿ ಹೆಚ್ಚಾಗದಿದ್ದರೂ, ರಾಜಕೀಯ ಪಕ್ಷಗಳು ಮತದಾರರಿಗೆ ಹಂಚುವ ಹಣದ ಮೌಲ್ಯ ಹೆಚ್ಚಳವಾಗುತ್ತಿರುವುದು ವಿಡಂಬನೆಯೇ ಸರಿ. ಪಕ್ಷಗಳ ಶ್ರೀಮಂತಿಕೆ, ಬಂಡವಾಳ ಶೇಖರಣೆ ಮತ್ತು ಮಾರುಕಟ್ಟೆ ಬೆಂಬಲಗಳು , ಮತದಾರರಿಗೆ ನೀಡಲಾಗುವ ಹಣದ ಮೌಲ್ಯವನ್ನೂ ನಿರ್ಧರಿಸುತ್ತದೆ.
ಯಾರು ಹಿತವರು ನಿಮಗೆ,,,,,
ಈ ವಿಷಮ ಸನ್ನಿವೇಶದಲ್ಲಿ ರಾಜ್ಯದ ಜನತೆ ಮೂರು ಬಂಡವಳಿಗ ಪಕ್ಷಗಳ ಪೈಕಿ ಒಂದು ಪಕ್ಷವನ್ನು ಆಯ್ಕೆ ಮಾಡಬೇಕಿದೆ. ಆಡಳಿತಾರೂಢ ಬಿಜೆಪಿ, ಪ್ರಧಾನ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಪ್ರಾದೇಶಿಕ ಜಾತ್ಯತೀತ ಜನತಾ ದಳ ಈ ಮೂರೂ ಪಕ್ಷಗಳು ಸಾಮಾಜಿಕ ನೆಲೆಯಲ್ಲಿ ವಿಭಿನ್ನ ಸಿದ್ಧಾಂತಗಳನ್ನು ಪ್ರತಿಪಾದಿಸಿದರೂ, ಆರ್ಥಿಕ ನೆಲೆಯಲ್ಲಿ ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಅರ್ಥನೀತಿಯನ್ನೇ ಅನುಸರಿಸುತ್ತವೆ. ಹಾಗಾಗಿ ನವ ಉದಾರವಾದದ ದಾಳಿಯಿಂದ ನಿರಂತರವಾಗಿ ಪೆಟ್ಟು ತಿನ್ನುತ್ತಿರುವ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು, ಗ್ರಾಮೀಣ ದುಡಿಯುವ ವರ್ಗಗಳು ಮತ್ತು ಕೃಷಿ ಕೂಲಿಕಾರರ ದೃಷ್ಟಿಯಲ್ಲಿ ಮೂರೂ ಪಕ್ಷಗಳು ಒಂದೇ ತಾತ್ವಿಕ ನೆಲೆಯಲ್ಲಿ ಕಂಡುಬರುತ್ತವೆ. “ ಯಾರು ಹಿತವರು ಈ ಮೂವರೊಳಗೆ ” ಎಂಬ ಪ್ರಶ್ನೆಗೆ ದುಡಿಯುವ ವರ್ಗಗಳಿಂದ ಉತ್ತರ ಬಯಸುವುದೇ ಆದರೆ ಕಡಿಮೆ ಹಾನಿಕಾರ ಪಕ್ಷವನ್ನೇ ಸಹಜವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ರೈತಾಪಿಗಾಗಲೀ, ಕಾರ್ಮಿಕರಿಗಾಗಲೀ, ಇತರ ಶ್ರಮಜೀವಿ ವರ್ಗಗಳಿಗಾಗಲೀ ಕರ್ನಾಟಕದಲ್ಲಿ ಪರ್ಯಾಯ ರಾಜಕಾರಣದ ನೆಲೆಗಳು ವೃದ್ಧಿಯಾಗಿಲ್ಲ.
ಈ ಬಾರಿಯ ಚುನಾವಣೆಯಲ್ಲಿ ದುಡಿಯುವ ವರ್ಗಗಳ ಮುಂದೆ ಎರಡು ಜಟಿಲ ಪ್ರಶ್ನೆಗಳಿವೆ. ಮೊದಲನೆಯದು ತಮ್ಮ ಸಾಮಾಜಿಕ-ಆರ್ಥಿಕ ಸುಸ್ಥಿರತೆ ಮತ್ತು ಜೀವನೋಪಾಯದ ಮಾರ್ಗಗಳನ್ನು ರಕ್ಷಿಸಿಕೊಳ್ಳುವುದು. ಎರಡನೆಯದು ಈ ರಕ್ಷಣೆಯ ಮಾರ್ಗದಲ್ಲೇ ಎದುರಾಗುತ್ತಿರುವ ಸಮಾಜಕಂಟಕವಾದ ಕೋಮುವಾದ, ಮತಾಂಧತೆ, ಮತದ್ವೇಷ ಮತ್ತು ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವುದು. ದುಡಿಯುವ ಕೈಗಳನ್ನು ಕಟ್ಟಿಹಾಕುವ ಅಥವಾ ನಡೆವ ಹಾದಿಯಲ್ಲಿ ಮುಳ್ಳು ಹಾಸುವ ನವ ಉದಾರವಾದದ ಆರ್ಥಿಕ ನೀತಿಗಳು ಶ್ರಮಜೀವಿಗಳ ಬದುಕಿನಲ್ಲಿ ಅನಿಶ್ಚಿತತೆಯನ್ನು ಹೆಚ್ಚಾಗಿಸುತ್ತಲೇ ಇದೆ. ಭೂಮಿ ಕಳೆದುಕೊಳ್ಳುವ ಹಾಗೂ ಫಸಲಿಗೆ ತಕ್ಕ ಬೆಲೆ ಪಡೆಯಲಾಗದ ರೈತರು, ಕಡಿಮೆ ಕೂಲಿಗೆ ಹೆಚ್ಚು ಬೆವರು ಹರಿಸಬೇಕಾದ ಅಸಂಘಟಿತ ಕಾರ್ಮಿಕರು ಹಾಗೂ ಸಂಘಟಿತರಾಗಿದ್ದರೂ ಸರ್ಕಾರದ ಯೋಜನೆಗಳನ್ನೇ ಅವಲಂಬಿಸಿ ಕಡಿಮೆ ವೇತನದಲ್ಲಿ ಅಹರ್ನಿಶಿ ದುಡಿಯುತ್ತಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸುಭದ್ರ ನೌಕರಿ ಇಲ್ಲದೆ ಭವಿಷ್ಯದತ್ತ ಮುಖಮಾಡಿರುವ ಹೊರಗುತ್ತಿಗೆ, ತಾತ್ಕಾಲಿಕ, ಅತಿಥಿ ನೌಕರರು, ಪೌರಕಾರ್ಮಿಕರು ಈ ಸಮಸ್ತ ವರ್ಗವು ಇಂದು ಒಂದು ಹೊಸ ಬದುಕಿನ ನಿರೀಕ್ಷೆಯಲ್ಲಿವೆ.
ಆದರೆ ಸಾಮಾಜಿಕ ಸೌಹಾರ್ದತೆ ಮತ್ತು ಸಮನ್ವಯದ ನೆಲೆಗಳು ನಾಶವಾದಂತೆಲ್ಲಾ ಈ ದುಡಿಯುವ ವರ್ಗಗಳ ಬದುಕೂ ಸಹ ದುಸ್ತರವಾಗುತ್ತಲೇ ಹೋಗುತ್ತದೆ. ಏಕೆಂದರೆ ಕಾರ್ಮಿಕರ ಬದುಕಿಗೆ ಆಧಾರವಾಗಿರುವಂತಹ ಆರ್ಥಿಕ ಭೂಮಿಕೆಗಳು ಮತ್ತು ಅವುಗಳನ್ನು ನಿಯಂತ್ರಿಸುವ, ನಿರ್ವಹಿಸುವ ಸಾಂಸ್ಥಿಕ-ಸಾಂಘಿಕ-ವ್ಯಕ್ತಿಗತ ಶಕ್ತಿಗಳು ಈ ವಿನಾಶದ ನಡುವೆಯೇ ತಮ್ಮ ಆಪ್ತ ವಲಯಗಳನ್ನು ಗುರುತಿಸಿಕೊಳ್ಳುತ್ತಾ ವಿಘಟನೆಯ ಪ್ರಯೋಜನವನ್ನು ತಮ್ಮದಾಗಿಸಿಕೊಳ್ಳಲು ಬಯಸುತ್ತಿರುತ್ತವೆ. ಕೋಮು-ಮತದ್ವೇಷದ ಭಾವನೆಗಳು ಜನಸಾಮಾನ್ಯರ ನಡುವೆ ವ್ಯಾಪಕವಾಗಿ ಹರಡುತ್ತಿರುವಂತೆಯೇ, ದಾಳಿಗೊಳಗಾಗುವ ಮತ್ತು ದಾಳಿ ನಡೆಸುವ ಎರಡೂ ಬಣಗಳ ಉಸ್ತುವಾರಿ ಮಾರುಕಟ್ಟೆ ಶಕ್ತಿಗಳ ಪಾಲಾಗುತ್ತದೆ. ರಾಜಕೀಯ ನಾಯಕರಿಗೆ ಒತ್ತಾಸೆಯಾಗಿ ನಿಲ್ಲುವ ಔದ್ಯಮಿಕ ಶಕ್ತಿಗಳು ಜನಸಾಮಾನ್ಯರ ನಡುವೆ ಉಂಟಾಗುವ ಪ್ರಕ್ಷುಬ್ಧತೆಯ ನಡುವೆಯೇ ತಮ್ಮ ಶೋಷಣೆಯ ಅಸ್ತ್ರಗಳನ್ನು ತಮ್ಮ ಲಾಭಕ್ಕಾಗಿ ವ್ಯವಸ್ಥಿತವಾಗಿ ಬಳಸಲು ಮಾರ್ಗಗಳನ್ನು ಅರಸುತ್ತಿರುತ್ತವೆ. ಕರಾವಳಿ ಕರ್ನಾಟಕದಲ್ಲಿ ಕಳೆದ ಒಂದು ದಶಕದಲ್ಲಿ ಕಾಣಲಾಗುತ್ತಿರುವ ಮತದ್ವೇಷ, ಸಮುದಾಯಗಳ ವಿಘಟನೆ ಮತ್ತು ಸಾಂಸ್ಕೃತಿಕ ದಾಳಿಗಳಿಗೂ, ಅಲ್ಲಿನ ಬಂಡವಾಳ ಮಾರುಕಟ್ಟೆ ಜಗತ್ತಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಗಮನಿಸಿದರೆ ಇದು ಸುಸ್ಪಷ್ಟವಾಗುತ್ತದೆ. 1980-90ರ ದಶಕದ ಕೋಮುಗಲಭೆಗಳಿಗೂ ರಾಮನಗರ-ಕೋಲಾರ-ಶಿಡ್ಲಘಟ್ಟ-ಚನ್ನಪಟ್ಟಣ ಮುಂತಾದ ಜಿಲ್ಲೆಗಳಲ್ಲಿ ಬಲವಾಗಿದ್ದ ರೇಷ್ಮೆ ಉದ್ದಿಮೆ ಮತ್ತು ಮಾರುಕಟ್ಟೆಯ ವ್ಯತ್ಯಯಗಳಿಗೂ ಇದ್ದ ಸಂಬಂಧವನ್ನು ಇಲ್ಲಿ ಸ್ಮರಿಸಬಹುದು.
ಶ್ರಮಿಕ ವರ್ಗದ ನಿರ್ಣಾಯಕ ಪಾತ್ರ
ಸಂಘಟಿತರಾಗಿರಲಿ, ಅಸಂಘಟಿತರಾಗಿರಲಿ ದುಡಿಯುವ ವರ್ಗಗಳ ನಡುವೆ ಬಿರುಕುಗಳನ್ನು ಸೃಷ್ಟಿಸುವುದು ಬಂಡವಾಳಶಾಹಿ ಮಾರುಕಟ್ಟೆ ತಂತ್ರಗಾರಿಕೆಯ ಒಂದು ಪ್ರಧಾನ ಶಕ್ತಿ. ಒಂದೇ ಸೂರಿನಡಿ ಬೆವರು ಹರಿಸಿ ದುಡಿಯುವ ಸಂಘಟಿತ ಕಾರ್ಮಿಕರೂ ಸಹ ಬಾಹ್ಯ ಸಮಾಜದ ಒತ್ತಡಗಳಿಗೆ ಬಲಿಯಾಗಿ, ಜಾತಿ, ಮತಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಳ ಆಧಾರದಲ್ಲಿ ವಿಭಜನೆಯಾಗುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಈ ಅಸ್ತ್ರಗಳನ್ನು ಬಳಸುವ ಜಾಣ್ಮೆಯನ್ನೂ ಬಂಡವಾಳಶಾಹಿಯು ಹೊಂದಿದೆ. ವಿಶ್ವ ಕಾರ್ಮಿಕರೇ ಒಂದಾಗಿ ಎಂಬ ಘೋಷಣೆ ಚರಿತ್ರೆಯ ನೆನಪುಗಳಲ್ಲಿ ಹುದುಗಿ ಹೋಗಿರುವಂತೆ ಕಾಣುತ್ತಿರುವ ಈ ಹೊತ್ತಿನಲ್ಲಿ, ಶ್ರಮಜೀವಿಗಳನ್ನು ಜಾತಿ, ಉಪಜಾತಿ, ಮತಧರ್ಮ ಮತ್ತು ಭಾಷಿಕ ನೆಲೆಗಳಲ್ಲಿ ಪ್ರತ್ಯೇಕಗೊಳಿಸುವ ಮೂಲಕ ಆಳುವ ವರ್ಗಗಳು ತಮ್ಮ ಶೋಷಣೆಯ ಅಸ್ತ್ರಗಳನ್ನು ನಿರ್ಭಿಡೆಯಿಂದ ಬಳಸುತ್ತಲೇ ಇವೆ. ಈ ಅಸ್ತ್ರಗಳಿಗೆ ಆಕರ್ಷಣೀಯ ಮೆರುಗು ನೀಡಲು ಮಾರುಕಟ್ಟೆ ತನ್ನದೇ ಆದ ವೇದಿಕೆಗಳನ್ನು ಬಳಸಿಕೊಳ್ಳುತ್ತದೆ. ಇನ್ನೂ ದುರಂತ ವಾಸ್ತವ ಎಂದರೆ ವರ್ತಮಾನದ ಭಾರತದಲ್ಲಿ ಮಾರುಕಟ್ಟೆ ನಿಯಂತ್ರಿತ ದೃಶ್ಯ-ಮುದ್ರಣ ಮಾಧ್ಯಮಗಳು ಈ ವೇದಿಕೆಗಳಾಗಿ ಪ್ರಭಾವಶಾಲಿಯಾಗಿವೆ.
ಈ ಜಟಿಲ ಸಿಕ್ಕುಗಳ ನಡುವೆ ಕರ್ನಾಟಕದ ದುಡಿಯುವ ವರ್ಗಗಳು ಮೂರರಲ್ಲಿ ಒಂದು ಕಡಿಮೆ ಹಾನಿಕಾರಕ ಪಕ್ಷವನ್ನು ಆಯ್ಕೆ ಮಾಡಬೇಕಿದೆ. ಸಮನ್ವಯದ ಬದುಕನ್ನು ನಾಶಪಡಿಸುವ, ಸಾಮಾಜಿಕ ಸೌಹಾರ್ದತೆಯನ್ನು ಭಂಗಗೊಳಿಸುವ, ಮನುಷ್ಯ ಸಮಾಜದಲ್ಲಿ ಭೇದಭಾವಗಳ ಗೋಡೆಗಳನ್ನು ನಿರ್ಮಿಸುತ್ತಿರುವ ಕೋಮುವಾದಿ ಹಾಗೂ ಮತಾಂಧ ಶಕ್ತಿಗಳನ್ನು ಶ್ರಮಜೀವಿಗಳು ಎಚ್ಚರಿಕೆಯಿಂದ ಗಮನಿಸಬೇಕಿದೆ. ದಿನನಿತ್ಯ ತಮ್ಮ ವ್ಯಾಪಾರ ವಹಿವಾಟುಗಳಲ್ಲಿ, ಕಸುಬುಗಳ ಹಾದಿಯಲ್ಲಿ, ವೃತ್ತಿಪರ ಚೌಕಟ್ಟುಗಳಲ್ಲಿ ಹಾಗೂ ಸುಭದ್ರ ನೌಕರಿಯ ನೆಲೆಗಳಲ್ಲಿ ತಾವು ಮುಖಾಮುಖಿಯಾಗಬೇಕಾದ ಜನರನ್ನು ದುಡಿಯುವ ವರ್ಗಗಳು ʼ ಅನ್ಯ ʼ ರಂತೆ ನೋಡುವ ಒಂದು ವಿಕೃತ ಮನಸ್ಥಿತಿಯನ್ನು ಕೋಮುವಾದಿ-ಮತಾಂಧ ಶಕ್ತಿಗಳು ಸೃಷ್ಟಿಸಿವೆ. ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ಶತಮಾನಗಳಿಂದ ಬೇರೂರಿದ್ದ ಸಮನ್ವಯದ ಬೇರುಗಳನ್ನು ಶಿಥಿಲಗೊಳಿಸುವ ಪ್ರಕ್ರಿಯೆಯಲ್ಲೇ ಹರ್ಷ, ಪ್ರವೀಣ್ ನೆಟ್ಟಾರು, ಇದ್ರಿಸ್ ಪಾಷಾ ಮೊದಲಾದ ಅಮಾಯಕರು ಬಲಿಯಾಗುತ್ತಿದ್ದಾರೆ. ಮತದ್ವೇಷದ ದಳ್ಳುರಿ ಇಡೀ ಕರಾವಳಿ ಕರ್ನಾಟಕವನ್ನು ದ್ವೇಷಾಸೂಯೆಗಳ ಕುಲುಮೆಯನ್ನಾಗಿಸಿದೆ.
ಈ ವಿಷವರ್ತುಲದ ನಡುವೆಯೇ ಕರ್ನಾಟಕ ಜನತೆ, ವಿಶೇಷವಾಗಿ ದುಡಿಯುವ ಜನತೆ ಸಮನ್ವಯ ಮತ್ತು ಸೌಹಾರ್ದತೆಯ ವಾತಾವರಣವನ್ನು ಸೃಷ್ಟಿಸುವಂತಹ ಒಂದು ಸರ್ಕಾರವನ್ನು ಆಯ್ಕೆ ಮಾಡಬೇಕಿದೆ. ರಾಜಕೀಯವಾಗಿ ತಮ್ಮ ನೆಲೆಯನ್ನು ಕಳೆದುಕೊಂಡಿರುವ ಎಡಪಕ್ಷಗಳೂ ಸಹ ದುಡಿಯುವ ಜನತೆಗೆ ಸಮಾಧಾನಕರವಾದ ಒಂದು ಬದುಕು ರೂಪಿಸುವಂತಹ ಸರ್ಕಾರದ ರಚನೆಗೆ ನೆರವಾಗಬೇಕಿದೆ. ಇಲ್ಲಿ ಸೈದ್ಧಾಂತಿಕವಾಗಿ, ತಾತ್ವಿಕ ನೆಲೆಯಲ್ಲಿ ಎದುರಾಗಬಹುದಾದ ದ್ವಂದ್ವಗಳನ್ನು ಮತ್ತು ವೈರುಧ್ಯಗಳನ್ನು ಬದಿಗಿಟ್ಟು ಯೋಚಿಸಿದಾಗ, ಪ್ರಸ್ತುತ ಸಂದರ್ಭದಲ್ಲಿ ಕರ್ನಾಟಕಕ್ಕೆ ಒಂದು ಜಾತ್ಯತೀತ ಮೌಲ್ಯಗಳನ್ನು ಅನುಸರಿಸುವ ಸರ್ಕಾರದ ಅವಶ್ಯಕತೆ ಎದ್ದುಕಾಣುತ್ತದೆ. ತಮ್ಮ ಆರ್ಥಿಕ ನೀತಿಗಳಲ್ಲಿ ಮೂರೂ ಪ್ರಧಾನ ಪಕ್ಷಗಳು ಸಮಾನ ಅಭಿಪ್ರಾಯವನ್ನು ಹೊಂದಿದ್ದರೂ, ಸಾಮಾಜಿಕ ನೆಲೆಯಲ್ಲಿ ಅಗತ್ಯವಾದ ಸೌಹಾರ್ದತೆ ಮತ್ತು ಸಮನ್ವಯದ ದೃಷ್ಟಿಯಿಂದ ಸಮಸ್ತ ಕನ್ನಡ ಜನತೆಯನ್ನೂ ಸಮನಾಗಿ ಕಾಣುವ, ದ್ವೇಷಾಸೂಯೆಗಳಿಲ್ಲದ, ಜಾತಿ ತಾರತಮ್ಯಗಳಿಂದ ಹೊರತಾದ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗೌರವಿಸುವ ಒಂದು ಪಕ್ಷವನ್ನು ರಾಜ್ಯದ ಜನತೆ ಆಯ್ಕೆ ಮಾಡಬೇಕಿದೆ. ವರ್ತಮಾನದ ಸಂದರ್ಭದಲ್ಲಿ ಕರ್ನಾಟಕದ ಜನತೆಯ ಮುಂದಿರುವ ಆಯ್ಕೆ ಸೀಮಿತ ಎನ್ನುವುದೂ ಕಟುವಾಸ್ತವ. ಏಕೆಂದರೆ ಪ್ರಾದೇಶಿಕ ನೆಲೆಯಲ್ಲೂ ಕರ್ನಾಟಕದಲ್ಲಿ ಒಂದು ಪರ್ಯಾಯ ಜಾತ್ಯತೀತ ರಾಜಕೀಯ ಶಕ್ತಿ ಉದಯಿಸಲು ಸಾಧ್ಯವಾಗಿಲ್ಲ.
ಪರ್ಯಾಯದ ವ್ಯರ್ಥ ಶೋಧ
ಕರ್ನಾಟಕದ ಜನತೆಯ ವರ್ತಮಾನದ ಪರಿಸ್ಥಿತಿಯಲ್ಲಿ ಪರ್ಯಾಯ ರಾಜಕಾರಣ ಅಥವಾ ನೈಜ ಜಾತ್ಯತೀತತೆಯ, ದುಡಿಯುವ ವರ್ಗಗಳ ಪರ ಇರುವಂತಹ ಒಂದು ರಾಜಕೀಯ ಪಕ್ಷ ಅತ್ಯವಶ್ಯವೇ ಹೌದಾದರೂ, ಸಮೀಪಿಸುತ್ತಿರುವ ಚುನಾವಣೆಗಳು ಇಂತಹ ಯಾವುದೇ ಪ್ರಯತ್ನಗಳನ್ನು ದುಸ್ತರವಾಗಿಸಿವೆ. ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆಯ ಆರ್ಥಿಕ ನೀತಿಗಳನ್ನು, ಔದ್ಯೋಗಿಕ ವಲಯದ ಖಾಸಗೀಕರಣ ಮತ್ತು ಕಾರ್ಪೋರೇಟಿಕರಣವನ್ನು, ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣ-ಕಾರ್ಪೋರೇಟಿಕರಣವನ್ನು ವಿರೋಧಿಸುತ್ತಲೇ, ಈ ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆಯನ್ನು ಪಲ್ಲಟಗೊಳಿಸಲು ಅತ್ಯವಶ್ಯವಾದ ಸೌಹಾರ್ದತೆ ಮತ್ತು ಸಮನ್ವಯದ ಸಾಮಾಜಿಕ-ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸುವುದು ಇವತ್ತಿನ ಅನಿವಾರ್ಯತೆಯಾಗಿದೆ. ಹಾಗೆಯೇ ಬಹುಸಾಂಸ್ಕೃತಿಕ ನೆಲೆಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಅನಿವಾರ್ಯತೆಯೂ ಇದೆ. ಈ ವಾತಾವರಣ ಸೃಷ್ಟಿಯಾಗದೆ ಹೋದರೆ ಪ್ರಜಾಸತ್ತಾತ್ಮಕ ಮೌಲ್ಯಗಳೂ ಶಿಥಿಲವಾಗುತ್ತಲೇ ಹೋಗುತ್ತವೆ, ಸಾಂವಿಧಾನಿಕ ಮೌಲ್ಯಗಳೂ ಕುಸಿಯುತ್ತಲೇ ಹೋಗುತ್ತವೆ. ಈ ಶಿಥಿಲ ತಳಪಾಯದ ಮೇಲೆ ನಿರ್ಮಿತವಾಗುವುದು ಅರಮನೆಯೇ ಆದರೂ ದುಡಿಯುವ ವರ್ಗಗಳ ಪಾಲಿಗೆ ಅದು ಮಾರಕವಾಗಿಯೇ ಕಾಣುತ್ತದೆ.
ತಮ್ಮ ಸೈದ್ಧಾಂತಿಕ-ತಾತ್ವಿಕ ನಿಲುವುಗಳಿಗೆ ಅನುಸಾರವಾಗಿ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಎಡ ಪಕ್ಷಗಳು ಮತ್ತು ಸರ್ವೋದಯ ಪಕ್ಷ, ಆಮ್ ಆದ್ಮಿ ಪಕ್ಷ, ಬಹುಜನ ಸಮಾಜ ಪಕ್ಷ, ಕೆಆರ್‌ಎಸ್ ಪಕ್ಷ ಮತ್ತು ಎಸ್‌ಡಿಪಿಐನಂತಹ ಪಕ್ಷಗಳು ತಮ್ಮ ಇತಿಮಿತಿಗಳನ್ನರಿತು ಸ್ಪರ್ಧಿಸುವ ಮೂಲಕ ಜಾತ್ಯತೀತ ಮತಗಳ ವಿಭಜನೆಯನ್ನು ತಪ್ಪಿಸುವುದು ಇವತ್ತಿನ ಆದ್ಯತೆಯಾಗಬೇಕಿತ್ತು. ಆದರೆ ದುರಾದೃಷ್ಟವಶಾತ್ ಹಾಗಾಗಿಲ್ಲ. ಕಾಂಗ್ರೆಸ್ ಪಕ್ಷವೂ ಸಣ್ಣ ಪಕ್ಷಗಳಿಗೆ ಅವಕಾಶ ಬಿಟ್ಟುಕೊಡುವ ಔದಾರ್ಯವನ್ನು ತೋರಿಸುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ಮಾತುಕತೆಗಳೂ ಸಮರ್ಪಕವಾಗಿ ನಡೆಯದೆ ಇರುವುದು ರಾಜಕೀಯ ಕಾರ್ಯತಂತ್ರದ ವೈಫಲ್ಯವಾಗಿದೆ. ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲೆಂದೇ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಜಾತ್ಯತೀತ ಮತಗಳ ವಿಭಜನೆಗೆ ಕಾರಣವಾಗುವುದಷ್ಟೇ ಅಲ್ಲದೆ ಕರ್ನಾಟಕದ ಜನತೆ ಬಯಸುತ್ತಿರುವ ಪರ್ಯಾಯ ಸರ್ಕಾರದ ಸಾಧ್ಯತೆಗಳನ್ನೂ ಮಸುಕಾಗಿಸುತ್ತವೆ. ಅಧಿಕಾರ ರಾಜಕಾರಣದಲ್ಲಿ ತಕ್ಷಣದ ಅಗತ್ಯತೆಗಳಿಗೂ ದೀರ್ಘಕಾಲಿಕ ಆದ್ಯತೆಗಳಿಗೂ ನಡುವೆ ಸೂಕ್ಷ್ಮ ಅಂತರ ಇದ್ದೇ ಇರುತ್ತದೆ. ಇದನ್ನು ಸೂಕ್ತ ರೀತಿಯಲ್ಲಿ ಗ್ರಹಿಸುವ ಮೂಲಕ, ಜನತೆಗೆ ಒಂದು ಉತ್ತಮ ಪರ್ಯಾಯ ಆಡಳಿತ ಒದಗಿಸುವ ಜವಾಬ್ದಾರಿ ಎಲ್ಲ ರಾಜಕೀಯ ಪಕ್ಷಗಳ ಮೇಲೆ ಇರುತ್ತದೆ.
ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಗಳಲ್ಲಿ ಕರ್ನಾಟಕದ ದುಡಿಯುವ ವರ್ಗಗಳ, ಶ್ರಮಜೀವಿಗಳ, ರೈತಾಪಿಯ, ಸಂಘಟಿತ-ಅಸಂಘಟಿತ ಕಾರ್ಮಿಕರ ಪಾತ್ರ ಮಹತ್ವದ್ದಾಗಿರುತ್ತದೆ. ಪ್ರಜಾಪ್ರಭುತ್ವದ ನೆಲೆಗಳು ಶಿಥಿಲವಾಗದಂತೆ, ಸಾಂವಿಧಾನಿಕ ಮೌಲ್ಯಗಳು ಅಪಮೌಲ್ಯಕ್ಕೊಳಗಾಗದಂತೆ, ಸೌಹಾರ್ದತೆ ಮತ್ತು ಸಮನ್ವಯದ ಸಮಾಜವನ್ನು ಕಟ್ಟುವ ಗುರುತರ ಜವಾಬ್ದಾರಿ ದುಡಿಯುವ ವರ್ಗಗಳ ಮೇಲಿದೆ. ಈ ಸುಭದ್ರ ತಳಪಾಯವೇ ಇಲ್ಲದೆ ನವ ಉದಾರವಾದದ ಕ್ರೂರ ಮಾರುಕಟ್ಟೆ ವ್ಯವಸ್ಥೆಯ ವಿರುದ್ಧ ಹೋರಾಡಲೂ ಸಾಧ್ಯವಾಗುವುದಿಲ್ಲ. ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾದಿಸಲೂ ಸಾಧ್ಯವಾಗುವುದಿಲ್ಲ. ಮೊದಲು ತಳಪಾಯವನ್ನು ಭದ್ರಪಡಿಸೋಣ. ಪ್ರತಿಯೊಬ್ಬ ಕಾರ್ಮಿಕ ಚಲಾಯಿಸುವ ಮತದ ವಾಸ್ತವಿಕ ಮೌಲ್ಯ ಅಡಗಿರುವುದು ಇಲ್ಲಿಯೇ.