
ಕೇಂದ್ರ ಸರ್ಕಾರ ಜಾತಿ ಜನಗಣತಿ ಘೋಷಣೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ತುರ್ತು ಸಭೆ ನಡೆಸಿದ್ದಾರೆ. ಕೇಂದ್ರ ಸರ್ಕಾರ ಕಾಂಗ್ರೆಸ್ ಹೋರಾಟಕ್ಕೆ ಮಣಿದು ಜಾತಿ ಜನಗಣತಿ ಮಾಡಲು ಮುಂದಾಗಿದೆ. ಇದು ಕಾಂಗ್ರೆಸ್ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ಜಯ ಎಂದಿದೆ ಕಾಂಗ್ರೆಸ್. ಈ ಹಿಂದೆ ಜಾತಿ ಜನಗಣತಿ ಮಾಡುವಂತೆ ಕಾಂಗ್ರೆಸ್ ಒತ್ತಾಯ ಮಾಡಿತ್ತು. ಇದೀಗ ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಜಾತಿ ಜನಗಣತಿಗೆ ಮುಂದಾಗಿದೆ ಎಂದಿದ್ದು, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

ಕೇಂದ್ರ ಸರ್ಕಾರಿದಂದ ಜಾತಿ ಜನಗಣತಿಗೆ ತೀರ್ಮಾನ ವಿಚಾರದ ಬಗ್ಗೆ ಬಾಗಲಕೋಟೆಯ ಕೂಡಲಸಂಗಮದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಜಾತಿ ಜನಗಣತಿ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿಯೇ ಹೇಳಿದ್ದೆವು. ಸಾಮಾಜಿಕ, ಆರ್ಥಿಕ, ಜಾತಿ ಜನಗಣತಿ ಮಾಡ್ತೇವೆ ಎಂದು ಹೇಳಿದ್ದೆವು. ನನಗೆ ಗೊತ್ತಿಲ್ಲ ಅವ್ರು ಯಾವ ಜನಗಣತಿ ಮಾಡ್ತಾರೆ ಅಂತ. ಅವ್ರು ಸಾಮಾಜಿಕ ಜನಗಣತಿ ಮಾಡ್ತಾರಾ? ಆರ್ಥಿಕ ಜನಗಣತಿ ಮಾಡ್ತಾರಾ? ಅಥವಾ ಜಾತಿ ಜನಗಣತಿ ಮಾಡ್ತಾರಾ ನನಗೆ ಗೊತ್ತಿಲ್ಲ, ಅದನ್ನು ನೋಡಿಬಿಟ್ಟು ನಾನು ಪ್ರತಿಕ್ರಿಯೆ ನೀಡ್ತೇನೆ. ಈಗಿನದು ಕೇವಲ ಜಾತಿ ಗಣತಿ, ಜನಗಣತಿ ಮಾಡ್ತೀವಿ ಅಂದಿದ್ದಾರೆ. ಸಾಮಾಜಿಕ, ಆರ್ಥಿಕ ಸರ್ವೆ ಬಹಳ ಮುಖ್ಯ. ಸಾಮಾಜಿಕ ನ್ಯಾಯ ಕೊಡಬೇಕಾದ್ರೆ ಸಾಮಾಜಿಕ, ಆರ್ಥಿಕ ಸರ್ವೆ ಮಾಡಬೇಕಾಗುತ್ತದೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.

ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರದ ನಿರ್ಧಾರವನ್ನ ಸ್ವಾಗತಿಸಿದ ಸಚಿವ ಖಂಡ್ರೆ ಸ್ವಾಗತಿಸಿದ್ದಾರೆ. ದೇಶದಾದ್ಯಂತ ಜಾತಿಗಣತಿ ಆಗಬೇಕೆಂಬುವುದು ನಮ್ಮ ಪಕ್ಷದ ಬೇಡಿಕೆಯಾಗಿತ್ತು. ಸಾಮಾಜಿಕ ನ್ಯಾಯ ಎಲ್ಲ ಸಮುದಾಯಕ್ಕೆ ಸಿಗಬೇಕೆಂಬುವುದು ಸಾಂವಿಧಾನಿಕ ಹಕ್ಕಾಗಿದೆ. ಇವತ್ತು ಜಾತಿಗಣತಿಯ ಬಗ್ಗೆ ಬಿಜೆಪಿ ಕೇಂದ್ರ ಸರ್ಕಾರ ಕಣ್ತೆರೆದಿದೆ. ಕೇಂದ್ರ ಸರ್ಕಾರದ ಜಾತಿಗಣತಿ ಮಾಡ್ತೀನಿ ಅಂತಾ ಘೋಷಿಸಿರುವುದನ್ನ ಸ್ವಾಗತಿಸುತ್ತೇನೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಪ್ರತಿಯೊಂದ ಸಮಾಜದ ಹಿಂದುಳಿದಿರುವಿಕೆಯನ್ನ, ಯಾವುದೇ ಅಪಸ್ವರ ಇಲ್ಲದೇ, ಯಾವುದೇ ಸಮಾಜಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಜಾತಿಗಣತಿ ಮಾಡಬೇಕು ಎಂದಿದ್ದಾರೆ.

ಜಾತಿಗಣತಿ ವಾಸ್ತವಾಂಶದಿಂದ ಕೂಡಿರಬೇಕು, ಸರ್ವ ಸಮಾಜದ, ದೇಶದ ಅಭಿವೃದ್ಧಿಗೆ ಅಡಿಪಾಯ ಆಗುವ ದೃಷ್ಟಿಕೋನದಲ್ಲಿ ಜಾತಿಗಣತಿ ಆಗಬೇಕು. 1931ರ ಬಳಿಕ ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಜಾತಿಗಣತಿ ಆಗ್ತಿರುವುದನ್ನ ಸ್ವಾಗತಿಸುತ್ತೇನೆ. ರಾಜ್ಯದಲ್ಲಿ ಜಾತಿಗಣತಿ ವರದಿ ಗೊಂದಲ, ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಜಾತಿಗಣತಿಯನ್ನ ಆದಷ್ಟು ಶೀಘ್ರವೇ ಮಾಡಲಿ ಎಂದು ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಜಾತಿ ಗಣತಿ ಗೊಂದಲದ ಗೂಡಾಗಿರುವ ಬೆನ್ನಲ್ಲೇ ಕೇಂದ್ರ ಜಾತಿ ಗಣತಿಗೆ ಮುಂದಾಗಿರುವುದು ಕಾಂಗ್ರೆಸ್ ನಾಯಕರಿಗೆ ಟೆನ್ಷನ್ ಆದಂತೆ ಕಾಣ್ತಿದೆ.