ಮುಂಬೈ: ನಿನ್ನೆ(ಭಾನುವಾರ)ಯಷ್ಟೇ ಏಕನಾಥ್ ಶಿಂಧೆ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್ ಮತ್ತು ಇತರ ಎಂಟು ಮಂದಿ ಶಾಸಕರ ವಿರುದ್ಧ ಎನ್ಸಿಪಿ ಪಕ್ಷ ಅನರ್ಹತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಹೌದು ಉದ್ಧವ್ ಠಾಕ್ರೆ ಅವರ ಒಂದು ನಿರ್ಧಾರಿಂದ ಮಹಾರಾಷ್ಟ್ರದಲ್ಲಿ ಈಗ ಟ್ರಿಪಲ್ ಎಂಜಿನ್ ಸರ್ಕಾರ ಬಂದಿದೆ. ದೇಶದಲ್ಲಿ ಮೋದಿಯನ್ನು ಸೋಲಿಸಲು ವಿಪಕ್ಷಗಳನ್ನು ಒಗ್ಗೂಡಿಸುತ್ತಿದ್ದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪಕ್ಷವೇ ಈಗ ಇಬ್ಭಾಗವಾಗಿದೆ. ವಿರೋಧ ಪಕ್ಷದ ನಾಯಕರಾಗಿದ್ದ ಅಜಿತ್ ಪವಾರ್ ಆಡಳಿತ ಪಕ್ಷವನ್ನು ಬೆಂಬಲಿಸಿ ಡಿಸಿಎಂ ಪಟ್ಟವನ್ನು ಅಲಂಕರಿಸಿದ್ದಾರೆ
ಮಹಾರಾಷ್ಟ್ರದಲ್ಲಿ ನಡೆದ ಈ ಬೆಳವಣಿಗೆಯ ಪರಿಣಾಮ ಭಾನುವಾರ ಎನ್ಸಿಪಿ ಪಾಳಯದ ಅಜಿತ್ ಪವಾರ್ ಹಾಗೂ 8 ಇತರೆ ಶಾಸಕರು ಮಹಾರಾಷ್ಟ್ರ ಸರ್ಕಾರದ ಜತೆ ಸೇರಿದ್ದು,. ಅಜಿತ್ ಪವಾರ್ ಡಿಸಿಎಂ ಆಗಿ ಹಾಗೂ ಇತರೆ 8 ಮಂದಿ ಎನ್ಸಿಪಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಆದರೀಗ ಅಜಿತ್ ಪವಾರ್ ಅವರ ನಡೆಯನ್ನು ಖಂಡಿಸಿದ ಎನ್ಸಿಪಿ ಪವಾರ್ ಸೇರಿದಂತೆ ಉಳಿದ ಎಂಟು ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಕೆ ಮಾಡಿದ್ದು, ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ಗೆ ಅನರ್ಹತೆ ಅರ್ಜಿ ಕಳಿಸಿದ್ದಾರೆ.
ಬಿಜೆಪಿ ಜತೆ ಸೇರಿ ಬಂಡೆದ್ದವರ ವಿರುದ್ಧ ಕ್ರಮಕ್ಕೆ ಎನ್ಸಿಪಿ ಮುಂದಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಅಷ್ಟೇ ಅಲ್ಲದೆ, ಎನ್ಸಿಪಿಯ ಶ್ರೇಣಿ ಮತ್ತು ಫೈಲ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಬಳಿ ಇದೆ ಎಂದು ತಿಳಿಸುವ ಇ-ಮೇಲ್ ಅನ್ನು ಭಾರತದ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. 1999 ರಲ್ಲಿ ಶರದ್ ಪವಾರ್ ಸ್ಥಾಪಿಸಿದ ಎನ್ಸಿಪಿ ಈಗ ವಿಭಜನೆಯಾಗಿದ್ದು, ಶಿವಸೇನೆ ಹಾದಿ ಹಿಡಿದಿದೆ. ಛಗನ್ ಭುಜಬಲ್ ಮತ್ತು ದಿಲೀಪ್ ವಾಲ್ಸೆ ಪಾಟೀಲ್ ಅವರಂತಹ ಕಟ್ಟಾ ಶರದ್ ಪವಾರ್ ನಿಷ್ಠಾವಂತರು ಸೇರಿದಂತೆ ಇತರ ಎಂಟು ಎನ್ಸಿಪಿ ಶಾಸಕರನ್ನು ಮಂತ್ರಿ ಮಾಡಲಾಯಿತು.
1999 ರಲ್ಲಿ ಎನ್ಸಿಪಿ ಸ್ಥಾಪಿಸಿದ ಶರದ್ ಪವಾರ್ ಅವರು ಪಕ್ಷದ ಮುಖ್ಯಸ್ಥರಾಗಿ ಮುಂದುವರೆದಿದ್ದಾರೆ ಮತ್ತು ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪಕ್ಷವು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿ) ಪತ್ರ ಬರೆದಿದೆ. ಅಜಿತ್ ಪವಾರ್ ಕ್ಯಾಂಪ್ನಿಂದ ಯಾವುದೇ ವಿನಂತಿಯ ಮೇರೆಗೆ ಕಾರ್ಯನಿರ್ವಹಿಸುವ ಮೊದಲು ಅವರು ಚುನಾವಣಾ ಸಂಸ್ಥೆಯನ್ನು ಕೇಳಬೇಕೆಂದು ಅವರು ಒತ್ತಾಯಿಸಿದರು.
ಶರದ್ ಪವಾರ್ ಸಂಬಂಧಿ ಅಜಿತ್ ಪವಾರ್ ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಯಲ್ಲಿ 2ನೇ ಬಾರಿ ದಂಗೆ ನಡೆಸಿದ್ದು, 8 ಇತರ ಪಕ್ಷದ ನಾಯಕರೊಂದಿಗೆ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಸೇರಿದ್ದಾರೆ. ಈ ಹಿನ್ನೆಲೆ ಈ ಬಗ್ಗೆ ಮಾತನಾಡಿದ ಎನ್ಸಿಪಿ ಮುಖ್ಯಸ್ಥ ಮತ್ತು ಹಿರಿಯ ರಾಜಕಾರಣಿ ಶರದ್ ಪವಾರ್ “ಕುಟುಂಬದಲ್ಲಿ ಯಾವುದೇ ಸಮಸ್ಯೆ ಇಲ್ಲ” ಎಂದು ಹೇಳಿದ್ದಾರೆ.
“ಕುಟುಂಬದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವು ಕುಟುಂಬದಲ್ಲಿ ರಾಜಕೀಯವನ್ನು ಚರ್ಚಿಸುವುದಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ಅವರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಇನ್ನು ನಿರೀಕ್ಷೆಯಂತೆ ಬಿಜೆಪಿ ಮತ್ತು ಶಿವಸೇನೆ ಸರ್ಕಾರ ಅಧಿಕಾರಕ್ಕೆ ಏರಬೇಕಿತ್ತು. ಆದರೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಪಟ್ಟಕ್ಕೆ ಹಠ ಹಿಡಿದಿದ್ದರು. ಬಿಜೆಪಿ ಈ ಹಠಕ್ಕೆ ಬಗ್ಗಲಿಲ್ಲ. ಕೊನೆಗೆ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡ ಉದ್ಧವ್ ಠಾಕ್ರೆ ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆಗೂಡಿ ಮೈತ್ರಿ ಮಾಡಿಕೊಂಡರು. ಪರಿಣಾಮ ಮಹಾ ವಿಕಾಸ್ ಅಘಾಡಿ (Maha Vikas Aghadi) ಸರ್ಕಾರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂತು.
ಮುಂದಿನ ಲೋಕಸಭಾ ಚುನಾವಣೆಗೆ ನಾವು ಒಂದಾಗಿ ಮೋದಿಯನ್ನು ಸೋಲಿಸುತ್ತೇವೆ ಎಂದು ಮೂರು ಪಕ್ಷಗಳು ಘೋಷಣೆ ಮಾಡಿದ್ದವು. ರಾಜಕೀಯ ಚಾಣಕ್ಯ ಅಮಿತ್ ಶಾ ತಂತ್ರವನ್ನೇ ಬಳಸಿಕೊಂಡು ನಾವು ಅಧಿಕಾರಿಕ್ಕೆ ಏರಿದ್ದೇವೆ. ಇದರಲ್ಲಿ ತಪ್ಪೇನು ಎಂದು ಶರದ್ ಪವಾರ್ ಪ್ರಶ್ನಿಸಿದ್ದರು. ಆದರೆ ಎರಡು ವಿರುದ್ಧ ಸಿದ್ಧಾಂತಗಳನ್ನು ಹೊಂದಿರುವ ರಾಜಕೀಯ ಪಕ್ಷಗಳು ಅಧಿಕಾರದಲ್ಲಿ ಇರುವುದು ಕಷ್ಟ ಎನ್ನುವಂತೆ 2022ರಲ್ಲಿ ಏಕನಾಥ್ ಶಿಂಧೆ ನೇತೃತ್ವದಲ್ಲಿ 40 ಮಂದಿ ಶಾಸಕರು ಉದ್ಧವ್ ನಿರ್ಧಾರಕ್ಕೆ ಬೇಸತ್ತು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ನಿರ್ಧಾರ ಕೈಗೊಂಡರು.
ಹಾಗೆ ನೋಡಿದರೆ ಶಿಂಧೆಗಿಂತ ಮೊದಲೇ ಅಜಿತ್ ಪವಾರ್ 2019ರಲ್ಲೇ ಬಿಜೆಪಿ ಜೊತೆ ಹೋಗಿದ್ದರು. ನವೆಂಬರ್ ತಿಂಗಳಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದರು. ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರೆ, ಅಜಿತ್ ಪವಾರ್ ಡಿಸಿಎಂ ಪಟ್ಟ ಅಲಂಕರಿಸಿದ್ದರು. ಆದರೆ ಈ ಮೈತ್ರಿಗೆ ಬಹುಮತ ಇಲ್ಲದ ಕಾರಣ ಮಹಾ ವಿಕಾಸ ಅಘಾಡಿ ಸರ್ಕಾರ ಅಸ್ವಿತ್ವಕ್ಕೆ ಬಂದಿತ್ತು.
2019 ರಿಂದ 2022ರವರೆಗೆ ಮಹಾ ವಿಕಾಸ ಅಘಾಡಿ ಸರ್ಕಾರ ಪತನವಾಗುವರೆಗೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿದ್ದರು. ಶಿಂಧೆ ಸರ್ಕಾರ ರಚನೆಯಾದ ಬಳಿಕ ಅಜಿತ್ ಪವಾರ್ ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಆಗಿದ್ದರು. ಈ ವರ್ಷದ ಏಪ್ರಿಲ್ನಲ್ಲಿ ಅಜಿತ್ ಪವಾರ್ ಮುಂಬೈನಲ್ಲಿ ನಡೆದ ಎನ್ಸಿಪಿ ಸಭೆಗೆ ಗೈರಾಗಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಹೊಗಳಿ ಹೇಳಿಕೆ ನೀಡಿದ್ದರು.
ಮೇ ತಿಂಗಳಿನಲ್ಲಿ ಶರದ್ ಪವಾರ್ ಅವರು ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಸಂದರ್ಭದಲ್ಲಿ ಅಜಿತ್ ಪವಾರ್ ಅವರಿಗೆ ಅಧ್ಯಕ್ಷ ಸ್ಥಾನ ಸಿಗಬಹುದು ಎಂದು ವರದಿ ಪ್ರಕಟವಾಗಿತ್ತು.
ರಾಜಕೀಯ ಎಂಬ ಚದುರಂಗದ ಆಟದಲ್ಲಿ ಅಂದು ಅಘಾಡಿ ಸರ್ಕಾರ ರಚನೆಯಲ್ಲಿ ಶರದ್ ಪವಾರ್ ಮುಖ್ಯ ಪಾತ್ರವನ್ನು ವಹಿಸಿದ್ದರು. ಚುನಾವಣೆಗೂ ಮೊದಲು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಶಿವಸೇನೆ ಜೊತೆ ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿ ಮಾಡಿಕೊಂಡಿದ್ದು ಬಹಳ ಅಚ್ಚರಿಗೆ ಕಾರಣವಾಗಿತ್ತು. ಆದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ 1 ವರ್ಷ ಬಾಕಿ ಇರುವಾಗ ಶಿಂಧೆ ಬಣ ಶಿವಸೇನೆ, ಬಿಜೆಪಿ ಜೊತೆ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಮೈತ್ರಿ ಮಾಡಿಕೊಂಡಿದ್ದು ಹುಬ್ಬೇರುವಂತೆ ಮಾಡಿದೆ.