ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ಒಂದು ಸಮಾಜದಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಅಳೆಯುವುದಾದರೂ ಹೇಗೆ ? ವಿಶ್ವದ ಅತಿದೊಡ್ಡ ಪ್ರಜಾತಂತ್ರ ಎಂಬ ಹೆಗ್ಗಳಿಕೆ ಇರುವ ಭಾರತ, ವಸಾಹತು ಆಳ್ವಿಕೆಯ ದಾಸ್ಯದಿಂದ ವಿಮೋಚನೆ ಪಡೆದು 74 ವರ್ಷಗಳೇ ಕಳೆದಿದ್ದರೂ ತನ್ನ ಪ್ರಜಾತಂತ್ರದ ಬೇರುಗಳನ್ನು ಗಟ್ಟಿಗೊಳಿಸುವ ಪ್ರಯತ್ನವನ್ನೇ ಮಾಡದಿರುವುದು ಈ ಕಾಲದ ದುರಂತ. ಯಾವುದೇ ದೇಶದ ಇತಿಹಾಸದಲ್ಲಿ ಏಳು ದಶಕಗಳ ಸ್ವತಂತ್ರ ಆಳ್ವಿಕೆ ಹಲವು ಪ್ರಶ್ನೆಗಳನ್ನು, ಸವಾಲುಗಳನ್ನು, ಸಂಕೀರ್ಣ ಸಮಸ್ಯೆಗಳನ್ನು ಹುಟ್ಟುಹಾಕುವುದು ಸಹಜ. ಭಾರತವೂ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸ್ವತಂತ್ರ ಭಾರತ ನಡೆದು ಬಂದ ಹಾದಿಯನ್ನೇ ತಿರಸ್ಕರಿಸುವ ಮೂಲಕ, ಎರಡು ಪೀಳಿಗೆಗಳ ಚರಿತ್ರೆಯನ್ನು ನಿರಾಕರಿಸುವ ಪ್ರಯತ್ನದಲ್ಲಿ #ಆತ್ಮನಿರ್ಭರ ಭಾರತವನ್ನು ಸಜ್ಜುಗೊಳಿಸಲಾಗುತ್ತಿದೆ.
ತನ್ನ ಪ್ರತಿಯೊಂದು ಹೆಜ್ಜೆಯೂ ತನ್ನದೇ ಆದ ಸ್ವಂತ ಆಲೋಚನೆಗಳ ಫಲ ಎಂದು ನಿರೂಪಿಸುವ ರಾಷ್ಟ್ರ್ಯವನ್ನು ಈಗಿನ ಆಡಳಿತಾರೂಢ ಪಕ್ಷ, ಬಿಜೆಪಿ, ತೋರುತ್ತಿರುವುದನ್ನು ಈ ದೃಷ್ಟಿಯಿಂದಲೇ ಪರಾಮರ್ಶಿಸಬೇಕಾಗಿದೆ. ಭಾರತ ಇಂದು ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿ ಹೊರಹೊಮ್ಮಿರುವುದು ಈ ದೇಶದ ಸಾರ್ವಭೌಮ ಪ್ರಜೆಗಳ ಕಠಿಣ ಪರಿಶ್ರಮ, ಬದ್ಧತೆ, ಶ್ರದ್ಧೆ ಮತ್ತು ಶ್ರಮಶಕ್ತಿಯ ಮೂಲಕ ಎನ್ನುವ ಪರಿಜ್ಞಾನ ಎಲ್ಲ ರಾಜಕೀಯ ಪಕ್ಷಗಳಲ್ಲೂ ಇರಬೇಕಾಗುತ್ತದೆ. ರಾಜಕೀಯ ಕಾರಣಗಳಿಗಾಗಿ, ಪಕ್ಷ ರಾಜಕಾರಣದ ಸಂಕುಚಿತ ಧೋರಣೆಯನ್ನೇ ಸಾರ್ವತ್ರೀಕರಿಸಿ, ಈ ಏಳು ದಶಕಗಳ ಸಾಧನೆಗಳನ್ನು ಅಲ್ಲಗಳೆಯುವ ವಿಕೃತ ಧೋರಣೆಯನ್ನು ಕಳೆದ ಏಳು ವರ್ಷಗಳ ನರೇಂದ್ರ ಮೋದಿ ಸರ್ಕಾರ ಮಾಡುತ್ತಿದೆ. ಈ ವಿತಂಡವಾದಗಳಿಗೆ ಸೂಕ್ತ ಪ್ರತ್ಯುತ್ತರ ನೀಡುವಲ್ಲಿ ಇತರ ರಾಜಕೀಯ ಪಕ್ಷಗಳೂ ಸೋತಿವೆ.
ಇದರ ಪರಿಣಾಮವನ್ನು ಇಂದು ಸೃಷ್ಟಿಯಾಗಿರುವ ರಾಜಕೀಯ ಮತ್ತು ಸಾಮಾಜಿಕ ಕ್ಷೋಭೆ ಹಾಗೂ ಅರಾಜಕತೆಯಲ್ಲಿ ಕಾಣುತ್ತಿದ್ದೇವೆ. 1991ರಲ್ಲಿ ಭಾರತ ಒಪ್ಪಿಕೊಂಡ ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆ ಈ ದೇಶದ ಒಂದು ಇಡೀ ಪೀಳಿಗೆಯ ಮನಸ್ಸುಗಳನ್ನು ನಿಯಂತ್ರಿಸುತ್ತಿದೆ. ಮೂರು ದಶಕಗಳ ಜಾಗತೀಕರಣದ ವೈಫಲ್ಯಗಳನ್ನು ಅನೇಕ ತಜ್ಞರು ಎಳೆಎಳೆಯಾಗಿ ಬಿಡಿಸಿಡುತ್ತಿದ್ದಾರೆ. ಆರ್ಥಿಕ ಅಭಿವೃದ್ಧಿಯ ಚೌಕಟ್ಟಿನಲ್ಲಿ ಜನಸಾಮಾನ್ಯರ ನಿತ್ಯ ಜೀವನದ ಬವಣೆಗಳು ಮತ್ತು ಜೀವನೋಪಾಯದ ಆಯ್ಕೆಗಳು ಪ್ರಧಾನವಾಗಿ ಪರಿಗಣಿಸಲ್ಪಡದೆ ಹೋದರೆ, ಅದು ಸಾಮಾಜಿಕ ಕ್ಷೋಭೆಗೆ ಮುಕ್ತ ಅವಕಾಶಗಳನ್ನು ಕಲ್ಪಿಸುತ್ತದೆ. ಭಾರತ ಇಂದು ಈ ಸಮಸ್ಯೆಯನ್ನು ಎದುರಿಸುತ್ತಿದೆ. ಹೆಚ್ಚುತ್ತಿರುವ ಅಪರಾಧಗಳು, ಯುವ ಪೀಳಿಗೆಯಲ್ಲಿ ಉಲ್ಬಣಿಸುತ್ತಿರುವ ಆಕ್ರೋಶ ಮತ್ತು ಮಡುಗಟ್ಟುತ್ತಿರುವ ನಿರಾಶೆ, ದುರ್ಬಲ ವರ್ಗಗಳಲ್ಲಿ ಹೆಚ್ಚುತ್ತಿರುವ ಆತಂಕಗಳು, ಶೋಷಿತ ವರ್ಗಗಳನ್ನು ಕಂಗೆಡಿಸುತ್ತಿರುವ ಶೋಷಣೆಯ ಹೊಸ ಆಯಾಮಗಳು ಇವೆಲ್ಲವೂ ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ ಮತ್ತು ಮಾರುಕಟ್ಟೆ ಆರ್ಥಿಕತೆಯ ಫಲವೇ ಆಗಿದೆ.
ಭಾರತವನ್ನು ಒಂದು ಸಮೃದ್ಧ, ಸ್ವಾವಲಂಬಿ, ಸಮ ಸಮಾಜವನ್ನಾಗಿ ಕಟ್ಟುವ ಕನಸು ಕೋಟ್ಯಂತರ ಜನರನ್ನು ಕಾಡುತ್ತಲೇ ಇದೆ. ಕಳೆದ ಐವತ್ತು ವರ್ಷಗಳಿಂದಲೂ ಸೌಹಾರ್ದತೆಗಾಗಿ, ಸಮಾನತೆಗಾಗಿ, ಶೋಷಣಾರಹಿತ ಸಮಾಜಕ್ಕಾಗಿ ಶ್ರಮಿಸುತ್ತಿರುವ ಅಸಂಖ್ಯಾತ ಮನಸುಗಳಿಗೆ ಇಂದು ಸಾಂಸ್ಕೃತಿಕ ಸಂಕೋಲೆಗಳನ್ನು ತೊಡಿಸಲಾಗುತ್ತಿದೆ. ಜಾತಿ ಅಸ್ಮಿತೆಗಳ ಸರಳುಗಳ ಹಿಂದೆ ಇಡೀ ಸಮಾಜವನ್ನು ಬಂಧಿಸುವ ಹುನ್ನಾರದ ನಡುವೆಯೇ, ಮತಧಾರ್ಮಿಕ ಅಸ್ಮಿತೆಗಳ ಸಂಕೋಲೆಗಳಿಂದ ನಿಗ್ರಹಿಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಈ ಪ್ರಯತ್ನಗಳ ವಿರುದ್ಧ ದನಿ ಎತ್ತಬೇಕಾದ ಯುವ ಪೀಳಿಗೆ ಹೊಸ ಜಗತ್ತಿನ ಭ್ರಮಾಲೋಕದಲ್ಲಿ ವಿಹರಿಸುತ್ತಿದೆ. ಮತಧರ್ಮ ಮತ್ತು ಜಾತಿ ಅಸ್ಮಿತೆಗಳ ಸಂಕೋಲೆಗಳಿಂದ ಈ ಯುವ ಪೀಳಿಗೆಯನ್ನು ಹೊರತರುವ ಹೊಣೆಗಾರಿಕೆ ಜಾತ್ಯತೀತ ಶಕ್ತಿಗಳ ಮೇಲಿದೆ.
ಜಾಗತೀಕರಣದ ಮೂರು ದಶಕಗಳಲ್ಲಿ ಇಂತಹ ಪ್ರಯತ್ನಗಳು ನೂರಾರು ನಡೆದಿದ್ದರೂ ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸಿರುವ ಹೊಸ ಸಾಮಾಜಿಕ ನೆಲೆಗಳು ಮತ್ತು ಇದಕ್ಕೆ ಪೂರಕವಾಗಿ ಅಧಿಕಾರ ರಾಜಕಾರಣ ರೂಪಿಸಿರುವ ಸಾಂಸ್ಕೃತಿಕ ನೆಲೆಗಳು ಪ್ರತಿಯೊಂದು ಜನಪರ ಹೋರಾಟವನ್ನೂ ನಿಷ್ಪಲಗೊಳಿಸುತ್ತಲೇ ಬಂದಿರುವುದು ವಾಸ್ತವ. ಜನಸಾಮಾನ್ಯರಲ್ಲಿ ಸಂವಿಧಾನದ ಮೂಲ ಆಶಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಪ್ರಯತ್ನಗಳು ಎಷ್ಟೇ ಸಫಲವಾಗಿದ್ದರೂ, ಆಡಳಿತ ವ್ಯವಸ್ಥೆಯಲ್ಲಿ ಸಾಂವಿಧಾನಿಕ ನಿಯಮಗಳ ಉಲ್ಲಂಘನೆ ಮತ್ತು ಮೌಲ್ಯಗಳ ಕುಸಿತ ಅವ್ಯಾಹತವಾಗಿ ನಡೆಯುತ್ತಿರುವುದನ್ನು ಗಮನಿಸಿದಾಗ, ಅಸ್ಮಿತೆಯ ರಾಜಕಾರಣದ ಅಪಾಯಗಳನ್ನು ಮನಗಾಣಬಹುದು.
ಸ್ವತಂತ್ರ ಭಾರತದಲ್ಲಷ್ಟೇ ಅಲ್ಲ, ಶತಮಾನಗಳ ಭಾರತೀಯ ಇತಿಹಾಸದಲ್ಲೂ ಕಂಡು ಕೇಳರಿಯದಂತಹ ಒಂದು ಬೃಹತ್ ಜನಾಂದೋಲನ ಈ ದೇಶದ ಅನ್ನದಾತರ ಮುಂದಾಳತ್ವದಲ್ಲಿ ಒಂಬತ್ತು ತಿಂಗಳಿನಿಂದ ನಡೆಯುತ್ತಿರುವುದನ್ನು ಈ ಸಂದರ್ಭದಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಿದೆ. ಭೂ ಹೋರಾಟಗಳನ್ನು ನಿರ್ಲಕ್ಷಿಸುತ್ತಲೇ ತಮ್ಮ ಸಾಮುದಾಯಿಕ ಅಸ್ತಿತ್ವಕ್ಕಾಗಿ ಹೋರಾಟಗಳನ್ನು ರೂಪಿಸಿದ ಶೋಷಿತ ವರ್ಗಗಳು ಇಂದು ಬಂಡವಾಳಶಾಹಿ ವ್ಯವಸ್ಥೆಯೊಡನೆ ಹೊಂದಾಣಿಕೆಗಾಗಿ ಹೋರಾಟ ನಡೆಸಬೇಕಿದೆ. ಮತ್ತೊಂದೆಡೆ ತಮ್ಮ ಭೂಮಿಯನ್ನೂ ಕಳೆದುಕೊಂಡು, ತಮ್ಮ ವ್ಯಾವಸಾಯಿಕ ಪರಿಶ್ರಮದ ಫಲವನ್ನೂ ಮಾರುಕಟ್ಟೆಯ ಆಧಿಪತ್ಯಕ್ಕೊಳಪಡಿಸಬೇಕಾದ ಸಂದಿಗ್ಧ ಸನ್ನಿವೇಶವನ್ನು ಈ ದೇಶದ ರೈತ ಸಮುದಾಯ ಎದುರಿಸುತ್ತಿದೆ. ದೆಹಲಿಯಲ್ಲಿ ಒಂಬತ್ತು ತಿಂಗಳಿನಿಂದ ನಡೆಯುತ್ತಿರುವ ರೈತ ಹೋರಾಟದಲ್ಲಿ ಈ ಸಂಕೀರ್ಣ ಸಮಸ್ಯೆಯನ್ನು ನಾವು ಕಾಣಬೇಕಿದೆ.
ನವ ಉದಾರವಾದಿ ಆರ್ಥಿಕ ನೀತಿಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಮೂಲಕ ದೇಶದ ಸಕಲ ಸಂಪನ್ಮೂಲಗಳನ್ನೂ, ಸಂಪತ್ತಿನ ಆಕರಗಳನ್ನೂ, ಉತ್ಪಾದನೆಯ ಮೂಲಗಳನ್ನೂ ಕಾರ್ಪೋರೇಟ್ ಮಾರುಕಟ್ಟೆಯ ವಶಕ್ಕೊಪ್ಪಿಸಲು ನರೇಂದ್ರ ಮೋದಿ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿದೆ. ತಾವು ಕಳೆದುಕೊಳ್ಳುತ್ತಿರುವ ಮೂಲಸೌಕರ್ಯಗಳನ್ನು ಮರಳಿ ಪಡೆಯಲು, ತಮ್ಮ ಜೀವನೋಪಾಯದ ಮಾರ್ಗಗಳ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಶ್ರಮಶಕ್ತಿಯ ಫಲಾಫಲಗಳ ಮೇಲಿನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ರೈತಾಪಿ ಸಮುದಾಯ ನಿರಂತರ ಹೋರಾಟದಲ್ಲಿ ತೊಡಗಿದೆ. ಈ ಹೋರಾಟದೊಂದಿಗೆ ದನಿಗೂಡಿಸಬೇಕಾದ ಕಾರ್ಮಿಕ ವರ್ಗಗಳು ಸಂಘಟಿತ ವಲಯದಲ್ಲಿ ಘರ್ಜಿಸುತ್ತಿದ್ದರೂ, ಶೇ 90ಕ್ಕಿಂತಲೂ ಹೆಚ್ಚು ಶ್ರಮಜೀವಿಗಳನ್ನು ಪ್ರತಿನಿಧಿಸುವ ಅಸಂಘಟಿತ ವಲಯ ಸಮಾನ ಭೂಮಿಕೆ ಇಲ್ಲದೆ ಸೊರಗುತ್ತಿದೆ.
ಈ ವಲಯದ ಶ್ರಮಜೀವಿಗಳ ನೋವುಗಳಿಗೆ ಸ್ಪಂದಿಸಬೇಕಾದ ಒಂದು ಪರ್ಯಾಯ ರಾಜಕಾರಣಕ್ಕಾಗಿ ನಾವಿಂದು ಶ್ರಮಿಸಬೇಕಿದೆ. ಕೋಟ್ಯಂತರ ರೈತರ ಬದುಕು ಮತ್ತು ಭವಿಷ್ಯ ಅನಿಶ್ಚಿತತೆಯನ್ನೆದುರಿಸುತ್ತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳು ರೈತರ ಪಾಲಿಗೆ ಮರಣಶಾಸನವಾಗಲಿವೆ. ಈ ನೂತನ ಕಾಯ್ದೆಗಳಿಗೆ ಅಸ್ತಿಭಾರ ಹಾಕಿರುವ ಕಾಂಗ್ರೆಸ್ ಪಕ್ಷ ತನ್ನ ಕಳೆಗುಂದಿದ ಸ್ಥಿತಿಯಲ್ಲೂ ಸರ್ಕಾರದ ನೀತಿಗಳನ್ನು ಪ್ರಶ್ನಿಸುತ್ತಿದೆ. ಆದರೆ ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಮಾರುಕಟ್ಟೆಯ ವಶಕ್ಕೊಪ್ಪಿಸುವ ಮೂಲ ನವ ಉದಾರವಾದಿ ನೀತಿಯನ್ನು ಕಾಂಗ್ರೆಸ್ ಪಕ್ಷವಾಗಲೀ, ಇತರ ಬಂಡವಳಿಗ ಪಕ್ಷಗಳಾಗಲಿ ವಿರೋಧಿಸುತ್ತಿಲ್ಲ. ಈ ಬಂಡವಳಿಗ ಸಮೂಹದ ರಾಜಕಾರಣಕ್ಕೂ, ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಗಳಿಗೂ ನೇರ ಸಂಬಂಧವಿರುವುದನ್ನು ಗ್ರಹಿಸಿದಾಗ ಮಾತ್ರವೇ ಪರ್ಯಾಯ ರಾಜಕಾರಣದ ಬಗ್ಗೆ ಸ್ಪಷ್ಟ ನಿಲುವು ತಳೆಯುವುದು ಸಾಧ್ಯ.
#ಆತ್ಮನಿರ್ಭರ ಭಾರತದ ಅರ್ಥವ್ಯವಸ್ಥೆಯಲ್ಲಿ ಪ್ರತಿಯೊಂದು ವಲಯವೂ ಇಂದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಿಸಿದ ರಾಷ್ಟ್ರೀಯ ನಗದೀಕರಣ ಯೋಜನೆ ಖಾಸಗೀಕರಣದ ಮತ್ತೊಂದು ನವೀಕೃತ ಸ್ವರೂಪವಷ್ಟೇ ಅಲ್ಲವೇ ? 1991ರಲ್ಲಿ ಜಾಗತೀಕರಣವನ್ನು ಒಪ್ಪಿಕೊಂಡು, ಗ್ಯಾಟ್ ಒಪ್ಪಂದಗಳಿಗೆ ಸಹಿ ಮಾಡಿದಾಗಲೇ ಸಾರ್ವಭೌಮ ಭಾರತ ತನ್ನ ಸಂಪತ್ತಿನ ಮೇಲೆ ಸ್ವಾಮ್ಯತೆಯನ್ನು ಕಳೆದುಕೊಳ್ಳಲು ಸಿದ್ಧವಾಗಿತ್ತು. ಇಂದು ನಗದೀಕರಣದ ಹೆಸರಿನಲ್ಲಿ ಖಾಸಗಿ ಸ್ವತ್ತಾಗುತ್ತಿರುವ ರೈಲ್ವೆ, ವಿಮಾನ, ಬಂದರು, ರಸ್ತೆ ಮತ್ತು ಹೆದ್ದಾರಿ ಹಾಗೂ ಉತ್ಪಾದನಾ ವಲಯದ ಕೈಗಾರಿಕೆಗಳು ಅಂದಿನಿಂದಲೇ ತಮ್ಮ ಅಸ್ತಿತ್ವವನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಲೇ ಬಂದಿದ್ದವು ಅಲ್ಲವೇ ?
ಬ್ಯಾಂಕ್ ಮತ್ತು ವಿಮಾ ಕ್ಷೇತ್ರ ಇಂದು ಸಂಪೂರ್ಣ ಖಾಸಗೀಕರಣದತ್ತ ಸಾಗಿದೆ. ಈ ರಾಷ್ಟ್ರೀಕೃತ ವಲಯದಲ್ಲಿ ಖಾಸಗಿ ಮತ್ತು ವಿದೇಶಿ ಬಂಡವಾಳದ ಪ್ರವೇಶವಾಗಿ ಎರಡು ದಶಕಗಳೇ ಸಂದಿವೆ. ಹಣಕಾಸು ಬಂಡವಾಳದ ಪ್ರಶಸ್ತ ಭೂಮಿಯಾದ ಈ ಎರಡು ಕ್ಷೇತ್ರಗಳನ್ನು ಹಂತಹಂತವಾಗಿ ಕೊಲ್ಲುತ್ತಲೇ ಬಂದಿರುವ ಭಾರತದ ಬಂಡವಳಿಗ ಆಳುವ ವರ್ಗಗಳು ಇಂದು ಅಂತಿಮ ಹಂತದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ರಾಷ್ಟ್ರೀಕರಣದಿಂದ ಜನಸಾಮಾನ್ಯರಿಗೆ ಲಭಿಸಿದ ಸವಲತ್ತುಗಳನ್ನೂ ಕಸಿದುಕೊಳ್ಳಲು ಸಜ್ಜಾಗುತ್ತಿವೆ. ಜೊತೆಗೇ ಈ ಅವಧಿಯಲ್ಲಿ ದೇಶದ ದುರ್ಬಲ ವರ್ಗಗಳು ರಾಷ್ಟ್ರೀಕೃತ ಸಂಸ್ಥೆಗಳಿಂದ ಪಡೆದ ಉಪಯುಕ್ತ ಫಲಗಳನ್ನೂ ನಿರಾಕರಿಸುವುದರಲ್ಲಿ ನಿರತವಾಗಿವೆ. ನೆಹರೂ ಆರ್ಥಿಕತೆಯನ್ನು ನಿರಾಕರಿಸುವ ಬಿಜೆಪಿಯ ಧೋರಣೆಯ ಹಿಂದೆ ಈ ಹುನ್ನಾರವೂ ಅಡಗಿರುವುದನ್ನು ಗಮನಿಸಬೇಕಿದೆ.
ಭಾರತವನ್ನು ಒಂದು ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿ ಕಟ್ಟಿದ ಕೋಟ್ಯಂತರ ಶ್ರಮಿಕರ ಕಠಿಣ ಪರಿಶ್ರಮವನ್ನು ಸಂಪೂರ್ಣವಾಗಿ ನಿರಾಕರಿಸುವ ರೀತಿಯಲ್ಲಿ, ಇದೇ ಶ್ರಮಜೀವಿಗಳ ಬೆವರಿನಿಂದ ಕಟ್ಟಿದ ಸಂಸ್ಥೆಗಳನ್ನು ನೆಲಸಮ ಮಾಡಲಾಗುತ್ತಿದೆ. ಸಾರ್ವಜನಿಕ ಉದ್ದಿಮೆಗಳು, ಉತ್ಪಾದನಾ ವಲಯದ ಔದ್ಯೋಗಿಕ ಸ್ಥಾವರಗಳು, ಬೌದ್ಧಿಕ ವಲಯದ ಜ್ಞಾನ ಕೇಂದ್ರಗಳು, ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದಾದ ಸಂಸ್ಥೆಗಳು ಮತ್ತು ಭಾರತದಂತಹ ವಿಶಾಲ ದೇಶದ ವೈವಿಧ್ಯಮಯ ಪ್ರಾದೇಶಿಕ ಹಿತಾಸಕ್ತಿಗಳನ್ನು ಕಾಪಾಡಲು ಅವಶ್ಯಕವಾದ ಸಂವಹನ ಮಾಧ್ಯಮಗಳು ಇಂದು ಕಾರ್ಪೋರೇಟ್ ಮಾರುಕಟ್ಟೆಯ ವಶವಾಗುತ್ತಿದೆ.
ಜನಸಾಮಾನ್ಯರ ಸ್ವಾವಲಂಬಿ ಬದುಕನ್ನೇ ಕಸಿದುಕೊಳ್ಳುವ ಮೂಲಕ ಆತ್ಮನಿರ್ಭರತೆಯನ್ನು ಸಾಧಿಸಲು ಹೊರಟಿರುವ ಭಾರತದ ನವ ಉದಾರವಾದಿ ಬಂಡವಳಿಗ ಪ್ರಭುತ್ವ , ತನ್ನ ಆಡಳಿತ ನೀತಿಗಳನ್ನು ವಿರೋಧಿಸುವ ಜನತೆಯನ್ನು ನಿಯಂತ್ರಿಸಲು ಬಳಸುತ್ತಿರುವುದು ಸಂವಿಧಾನ ವಿರೋಧಿ ಕರಾಳ ಶಾಸನಗಳನ್ನು. ಮೂರು ಕರಾಳ ಮಸೂದೆಗಳು ದೇಶದ ರೈತರನ್ನು ಸಂಪೂರ್ಣ ಪರಾವಲಂಬಿಗಳನ್ನಾಗಿ ಮಾಡಿದರೆ, ನೂತನ ಕಾರ್ಮಿಕ ಸಂಹಿತೆಗಳು ದುಡಿಯುವ ವರ್ಗಗಳ ಮೂಲಭೂತ ಹಕ್ಕುಗಳನ್ನೂ ಕಸಿದುಕೊಳ್ಳುವ ಮೂಲಕ ಸಮಸ್ತ ದುಡಿಯುವ ವರ್ಗಗಳನ್ನು ನಿರ್ಗತಿಕರನ್ನಾಗಿ ಮಾಡುತ್ತವೆ. ತಮ್ಮ ಸಾಂವಿಧಾನಿಕ ದುಡಿಮೆಯ ಹಕ್ಕುಗಳನ್ನು ಕಳೆದುಕೊಳ್ಳುವ ಶ್ರಮಜೀವಿಗಳು ಖಾಸಗಿ ಕಾರ್ಪೋರೇಟ್ ವಲಯದ ಕಾಲಾಳುಗಳಾಗಿ ಬೆವರುಹರಿಸಬೇಕಾಗುತ್ತದೆ.
ದೇಶದ ಲಕ್ಷಾಂತರ ರೈತರ ಒಂಬತ್ತು ತಿಂಗಳ ಜನಾಂದೋಲನವನ್ನೂ ತಿರಸ್ಕಾರಭಾವದಿಂದ ನೋಡುವ ಪ್ರಭುತ್ವದ ಕ್ರೌರ್ಯ ಮುಂಬರುವ ಕರಾಳ ದಿನಗಳ ದಿಕ್ಸೂಚಿಯಾಗಿದೆ. ಕಾರ್ಮಿಕರ, ರೈತರ ಮತ್ತು ಅವಕಾಶವಂಚಿತರ ಮುಷ್ಕರಗಳನ್ನು ಕಣ್ಣೆತ್ತಿಯೂ ನೋಡದ ಒಂದು ನಿರ್ದಯಿ ಆಡಳಿತ ವ್ಯವಸ್ಥೆಗೆ ಪ್ರತಿರೋಧದ ದನಿಗಳನ್ನು ಕಂಡಲ್ಲಿ ಹತ್ತಿಕ್ಕುವ ಕರಾಳ ಕಾಯ್ದೆಗಳು ಪೂರಕವಾಗಿ ರೂಪುಗೊಳ್ಳುತ್ತವೆ. ಸಾಂವಿಧಾನಿಕವಾಗಿ ಲಭ್ಯವಾಗಿರುವ ಮೀಸಲಾತಿ ಮುಂತಾದ ಸವಲತ್ತುಗಳು ಮತ್ತು ಮೂಲಭೂತ ಹಕ್ಕುಗಳು ಈ ಕರಾಳ ಕಾಯ್ದೆಗಳ ಮೂಲಕ ನಿರಾಕರಿಸಲ್ಪಡುತ್ತವೆ. ನೂತನ ಕಾರ್ಮಿಕ ಸಂಹಿತೆಗಳ ಮೂಲಕ ಈಗಾಗಲೇ ದುಡಿಮೆಗಾರರ ಮುಷ್ಕರದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಸಾರ್ವಜನಿಕರ ಪ್ರತಿರೋಧದ ಹಕ್ಕುಗಳನ್ನು ಹತ್ತಿಕ್ಕಲು ಯುಎಪಿಎ, ರಾಜದ್ರೋಹ ಕಾಯ್ದೆಯಂತಹ ಕರಾಳ ಶಾಸನಗಳು ಸಂವಿಧಾನದ ಚೌಕಟ್ಟಿನಲ್ಲೇ ಜಾರಿಯಲ್ಲಿವೆ.
ಈ ಕ್ರೂರ ಆಡಳಿತ ವ್ಯವಸ್ಥೆಗೆ ಒಂದು ಪ್ರಜಾಸತ್ತಾತ್ಮಕ ಪರ್ಯಾಯ ಶಕ್ತಿ ದೇಶದಲ್ಲಿ ರೂಪುಗೊಳ್ಳಬೇಕಿದೆ. ಪ್ರಶ್ನಾತೀತ ರಾಜಕೀಯ ನಾಯಕರನ್ನು ಸೃಷ್ಟಿಸುವ ಮೂಲಕ ಅಥವಾ ಪ್ರಶ್ನಾತೀತ ಸಿದ್ಧಾಂತಗಳನ್ನು ಪ್ರತಿಪಾದಿಸುವ ಮೂಲಕ ಇದನ್ನು ಸಾಧಿಸಲಾಗುವುದಿಲ್ಲ. ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಪರ್ಯಾಯ ಅಧಿಕಾರ ರಾಜಕಾರಣಕ್ಕಾಗಿ ಹಾತೊರೆಯುತ್ತವೆ. ಜನಸಾಮಾನ್ಯರ ಹಿತದೃಷ್ಟಿಯಿಂದ ನೋಡಿದಾಗ ನಮಗೆ ಅಗತ್ಯವಿರುವುದು ಪರ್ಯಾಯ ಸೈದ್ಧಾಂತಿಕ ರಾಜಕಾರಣ. ನವ ಉದಾರವಾದ, ಕೋಮುವಾದಿ ಫ್ಯಾಸಿಸಂ, ಜಾತಿ ರಾಜಕಾರಣ ಮತ್ತು ಅಸ್ಮಿತೆಯ ರಾಜಕಾರಣದಿಂದ ಹೊರತಾದ ಜನತಾಂತ್ರಿಕ ಆಂದೋಲನ ಮಾತ್ರವೇ ಒಂದು ಪರ್ಯಾಯ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ರೂಪಿಸಲು ಸಾಧ್ಯ.
ಜನಪರ ಅಂದೋಲನಗಳು, ದಲಿತ ಚಳುವಳಿ, ಎಡಪಂಥೀಯ ಚಳುವಳಿಗಳು ಮತ್ತು ಕೋಮುವಾದಿ ಫ್ಯಾಸಿಸಂ ವಿರುದ್ಧ ಹೋರಾಡುತ್ತಿರುವ ಅಸಂಖ್ಯಾತ ಜನ ಚಳುವಳಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಭಾರತದ ಜನಸಾಮಾನ್ಯರ ಮತ್ತು ಶ್ರಮಜೀವಿಗಳ ಮುಂದೆ ಎರಡು ಶತ್ರುಪಾಳಯಗಳಿವೆ. ಒಂದು ನವ ಉದಾರವಾದ ಮತ್ತು ಬಂಡವಾಳಶಾಹಿ ಅರ್ಥವ್ಯವಸ್ಥೆ ಮತ್ತೊಂದು ಹಿಂದುತ್ವದ ಕೋಮುವಾದಿ ಫ್ಯಾಸಿಸಂ ಮತ್ತು ಮತಾಂಧತೆ. ಈ ಪ್ರಬಲ ಶಕ್ತಿಗಳ ವಿರುದ್ಧ ಹೋರಾಡುವ ಮುನ್ನ ನಮ್ಮೊಳಗಿನ ಮತಾಂಧ ಶಕ್ತಿಗಳನ್ನು, ಜಾತಿ ಪೀಡಿತ ಮನಸುಗಳನ್ನು ಮತ್ತು ವಿಭಜಕ ಶಕ್ತಿಗಳನ್ನು ನಿಯಂತ್ರಿಸುವುದೂ ನಮ್ಮ ಆದ್ಯತೆಯಾಗಬೇಕಿದೆ. ಆಳುವ ವರ್ಗಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಎಡಪಂಥೀಯ ಚಿಂತನೆಯ ಜನಾಂದೋಲನಗಳು ಮತ್ತು ದಲಿತ ಚಳುವಳಿಗಳು ಈ ಪ್ರಾಥಮಿಕ ಆದ್ಯತೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಇಂದು ಭಾರತದ ಸಂವಿಧಾನ ಅಪಾಯದಲ್ಲಿದೆ. ಸಂವಿಧಾನದ ಚೌಕಟ್ಟಿನಲ್ಲೇ ಅನುಸರಿಸಲಾಗುತ್ತಿರುವ ದಮನಕಾರಿ ಆಡಳಿತ ನೀತಿಗಳು ಪ್ರಜಾಸತ್ತೆಯ ಬುನಾದಿಯನ್ನೇ ಅಲುಗಾಡಿಸುತ್ತಿವೆ. ಪ್ರಜಾಪ್ರಭುತ್ವದ ತಳಪಾಯವನ್ನು ಶಿಥಿಲಗೊಳಿಸುವ ಮೂಲಕವೇ ಫ್ಯಾಸಿಸ್ಟ್ ಶಕ್ತಿಗಳು ತಮ್ಮ ನಿರಂಕುಶ ಅಧಿಕಾರವನ್ನು ಸ್ಥಾಪಿಸಲು ಬಯಸುತ್ತವೆ. ಜಾತಿ, ಮತಧರ್ಮ, ಲಿಂಗ, ಪ್ರಾದೇಶಿಕ ಅಸ್ಮಿತೆಗಳನ್ನೂ ಮೀರಿ ಈ ವಾಸ್ತವವನ್ನು ನಾವಿಂದು ಗ್ರಹಿಸಬೇಕಿದೆ. ಅಸ್ಮಿತೆಗಳ ಚೌಕಟ್ಟಿನಿಂದ ಹೊರಬಂದು, ಪರ್ಯಾಯ ಪ್ರಜಾಸತ್ತಾತ್ಮಕ ಶಕ್ತಿಯನ್ನು ರೂಪಿಸಬೇಕಿದೆ. ಸ್ಥಾಪಿತ ರಾಜಕೀಯ ಪಕ್ಷಗಳು ಈ ಚಿಂತನೆಯಿಂದ ಬಹುದೂರ ಸಾಗಿರುವ ಸಂದರ್ಭದಲ್ಲಿ, ಈ ಹೊಣೆ ಪ್ರಜ್ಞಾವಂತ ಸಮಾಜದ ಮೇಲಿದೆ. ಈ ಹೊಣೆಗಾರಿಕೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಮುನ್ನಡೆಯೋಣವೇ ?