ಅದಾನಿ ಸಾಮ್ರಾಜ್ಯದ ಏಳು-ಬೀಳು
ಅದಾನಿ ಸಮೂಹದ ತಲೆಬೇನೆಗೆ ಕಿಡಿ ಹೊತ್ತಿಸಿದ್ದು ಅಮೆರಿಕದ ಹಿಂಡನ್‌ಬರ್ಗ್ ಸಂಶೋಧನಾ ಸಂಸ್ಥೆಯೊಂದು ನಡೆಸಿದ “ ನ್ಯಾಯಸ್ಥಾನಕ ಹಣಕಾಸು ಸಂಶೋಧನೆ ”. ತನ್ನ ವರದಿಯಲ್ಲಿ ಹಿಂಡನ್‌ಬರ್ಗ್ ಭಾರತದ ಅದಾನಿ ಸಮೂಹದ ವಾಣಿಜ್ಯಕೂಟವು ಗಂಭೀರ ಸ್ವರೂಪದ ಅವ್ಯವಹಾರಗಳನ್ನು ನಡೆಸಿರುವುದಾಗಿ ಹೇಳಿದೆ. ಅದಾನಿ ಸಮೂಹವು ಅಕ್ರಮವಾಗಿ ಹೊರದೇಶದ ಹೂಡಿಕೆಯ ನಿಧಿಯನ್ನು ಬಳಸಿಕೊಂಡು, ತನ್ನ ಷೇರು ಬೆಲೆಗಳನ್ನು ಹೆಚ್ಚಿಸಿಕೊಂಡು, ಸಮೂಹದ ಆದಾಯವನ್ನು ಹೆಚ್ಚಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಸಾಧಾರಣ ಸರಕುಗಳ ವ್ಯಾಪಾರಿಯಾಗಿ ಔದ್ಯಮಿಕ ಜಗತ್ತನ್ನು ಪ್ರವೇಶಿಸಿದ ಗೌತಮ್ ಅದಾನಿ ಕ್ರೀಡಾ ಉತ್ಪನ್ನಗಳು, ವಿದ್ಯುತ್ ಉತ್ಪಾದನೆ, ವಿಮಾನಯಾನ, ಗಣಿಗಾರಿಕೆ, ಖಾದ್ಯ ತೈಲ, ನವೀಕೃತ ಇಂಧನ, ಮಾಧ್ಯಮ ವಲಯ ಮತ್ತು ಸಿಮೆಂಟ್ ಉತ್ಪಾದನೆ ಹೀಗೆ ಹಲವು ವಲಯಗಳಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ. ಕಳೆದ ವಾರಾಂತ್ಯದವರೆಗೂ ವಿಶ್ವದ ಮೂರನೆಯ ಅತಿ ಶ್ರೀಮಂತ ವ್ಯಕ್ತಿಯಾಗಿದ್ದರೂ, ಹಿಂಡನ್‌ಬರ್ಗ್ ವರದಿಯ ನಂತರ 15ನೆಯ ಸ್ಥಾನಕ್ಕೆ ಕುಸಿದಿದ್ದಾರೆ.
ಜನವರಿ 24ರಂದು ಹಿಂಡನ್‌ಬರ್ಗ್ ಸಂಸ್ಥೆಯು ಪ್ರಕಟಿಸಿದ ವರದಿಯಲ್ಲಿ ಅದಾನಿ ಸಮೂಹವು ಜಗತ್ತಿನ ಇತಿಹಾಸದಲ್ಲೇ ಅತಿ ದೊಡ್ಡ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದು, ಭಾರತದ ಈ ವಾಣಿಜ್ಯಕೂಟವು ಷೇರು ದುರುಪಯೋಗ, ಲೆಕ್ಕಪತ್ರಗಳ ವಂಚನೆ, ತೆರಿಗೆ ಆಶ್ರಯ ತಾಣಗಳ ದುರ್ಬಳಕೆ ಮತ್ತು ಅಕ್ರಮ ಹಣ ಸಾಗಾಣಿಕೆಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದೆ ಎಂದು ಗುರುತರ ಆರೋಪಗಳನ್ನು ಹೊರಿಸಿತ್ತು. ತನ್ನ ಉದ್ಯಮದ ಷೇರುಗಳ ಬೆಲೆಗಳನ್ನು ಏರಿಸುವ ಉದ್ದೇಶದಿಂದಲೇ ಅದಾನಿ ಸಮೂಹವು ಅಕ್ರಮ ಮಾರ್ಗಗಳನ್ನು ಅನುಸರಿಸಿದ್ದು 218 ಬಿಲಿಯನ್ ಡಾಲರ್ ಮೌಲ್ಯದ ವಂಚನೆ ಎಸಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಗೌತಮ್ ಅದಾನಿ ಉದ್ಯಮಗಳ ಒಟ್ಟು ಮಾರುಕಟ್ಟೆ ಮೌಲ್ಯಕ್ಕೆ ನೂರು ಬಿಲಿಯನ್ ಡಾಲರ್ ಸೇರ್ಪಡೆಯಾಗಿರುವುದು ಮಾರುಕಟ್ಟೆ ತಜ್ಞರನ್ನೂ ಅಚ್ಚರಿಗೊಳಪಡಿಸಿದೆ. ಅದಾನಿ ಸಮೂಹದ ಷೇರು ಬೆಲೆಗಳು ಶೇ 800ರಷ್ಟು ಏರಿಕೆಯಾಗಿರುವುದು ಷೇರುಮಾರುಕಟ್ಟೆಯ ಅತ್ಯುತ್ತಮ ವಿಶ್ಲೇಷಕರನ್ನೂ ಚಕಿತಗೊಳಿಸಿದೆ. ಕೋವಿದ್ ಸಾಂಕ್ರಾಮಿಕದ ಸಂಕಷ್ಟದ ಸಮಯದಲ್ಲಿ ಭಾರತದ ಜಿಡಿಪಿ ಶೇ 8ರಷ್ಟು ಕುಸಿತ ಎದುರಿಸುತ್ತಿದ್ದಾಗಲೂ, ಅದಾನಿ ಸಮೂಹವು ಮಾಸಿಕ ಸರಾಸರಿ 56,700 ಕೋಟಿ ರೂಗಳನ್ನು ಕ್ರೋಢೀಕರಿಸುತ್ತಿದ್ದುದು, ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮರುಶೋಧನೆಗೊಳಪಡಬೇಕಿದೆ.
2022ರ ಆಗಸ್ಟ್‌ನಲ್ಲೇ ಅಮೆರಿಕದ ಹಣಕಾಸು ಮತ್ತು ವಿಮಾ ಕಂಪನಿ ಫಿಚ್ ಸಮೂಹವು, ಅದಾನಿ ಸಮೂಹದ ಸಾಲದ ಹೊರೆ ತೀವ್ರ ಹೆಚ್ಚಳವಾಗಿದೆ ಎಂದು ಮುನ್ನೆಚ್ಚರಿಕೆಯನ್ನು ನೀಡಿತ್ತು. ಭಾರತದಲ್ಲಿ ಬ್ಯಾಂಕುಗಳೊಡನೆ ಮತ್ತು ಸರ್ಕಾರದೊಡನೆ ನಿಕಟ ಸಂಬಂಧ ಹೊಂದಿರುವುದರಿಂದ ಹೆಚ್ಚಿನ ಅಪಾಯ ಆಗಲಾರದು ಎಂಬ ಭರವಸೆಯನ್ನೂ ವ್ಯಕ್ತಪಡಿಸಲಾಗಿತ್ತು. ಆದರೆ ಒಂದು ವೇಳೆ ಅದಾನಿ ಸಮೂಹವು ಸಾಲ ಮರುಪಾವತಿಯಲ್ಲಿ ವಿಫಲವಾದರೆ ಅದು ಭಾರತದ ಆರ್ಥಿಕತೆಯ ಮೇಲೆ, ಷೇರು ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ ಎಂದು ಡಿಸೆಂಬರ್ ತಿಂಗಳ ತನ್ನ ವರದಿಯಲ್ಲಿ Quartz ಸಂಸ್ಥೆ ತಿಳಿಸಿತ್ತು. ಬ್ಯಾಂಕ್ ಮತ್ತು ವಿಮಾ ಕಂಪನಿಗಳಿಗೆ ಉಂಟಾಗುವ ನಷ್ಟವು ಪರೋಕ್ಷವಾಗಿ ತೆರಿಗೆದಾರರ ಹಣ ಅಥವಾ ರಾಜ್ಯದ ಬೊಕ್ಕಸಕ್ಕೇ ಹೊರೆಯಾಗುತ್ತದೆ ಎಂದೂ ಈ ವರದಿಯಲ್ಲಿ ಮುನ್ನೆಚ್ಚರಿಕೆ ನೀಡಲಾಗಿತ್ತು.
ಆದರೆ ಈ ಆರೋಪಗಳನ್ನು ನಿರಾಧಾರ ಎಂದು ಅಲ್ಲಗಳೆದ ಅದಾನಿ ಸಮೂಹವು ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ. ಹಿಂಡನ್‌ಬರ್ಗ್ ವರದಿಯನ್ನು ಭಾರತದ ವಿರುದ್ಧ ನಡೆಸಿರುವ ಪಿತೂರಿ ಎಂದು ಆರೋಪಿಸುವ ಮೂಲಕ ಅದಾನಿ ತಮ್ಮ ಔದ್ಯಮಿಕ ಸಾಮ್ರಾಜ್ಯವನ್ನು ಇಡೀ ದೇಶದೊಂದಿಗೆ ಸಮೀಕರಿಸಿರುವುದು ಸಾಕಷ್ಟು ಟೀಕೆಗೂ ಒಳಗಾಗಿದೆ. ಅದಾನಿ ಸಮೂಹವು ಹಿಂಡನ್‌ಬರ್ಗ್ ಸಂಸ್ಥೆಯ ಆರೋಪಗಳಿಗೆ 415 ಪುಟಗಳ ಉತ್ತರವನ್ನು ನೀಡಿದ್ದರೂ, ಇದು ಸಮಾಧಾನಕರವಾಗಿಲ್ಲ ಮತ್ತು ಮುಖ್ಯ ಆರೋಪಗಳಿಗೆ ಯಾವುದೇ ನಿರ್ದಿಷ್ಟ ಉತ್ತರ ನೀಡಿಲ್ಲ ಎಂದು ಸಂಸ್ಥೆಯು ತಿಳಿಸಿದೆ.
ಮಾರುಕಟ್ಟೆ ಆರ್ಥಿಕತೆ ಮತ್ತು ಬಂಡವಾಳ
ಆಧುನಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಷೇರು ಮಾರುಕಟ್ಟೆ ಎನ್ನುವುದು ಬಂಡವಾಳಶಾಹಿಗಳ ಸುಭದ್ರ ಕೋಟೆಯಂತೆ ಕಾರ್ಯನಿರ್ವಹಿಸುತ್ತದೆ. ಬಂಡವಾಳಶಾಹಿ ವ್ಯವಸ್ಥೆ ಪೋಷಿಸುವ ಸ್ಟಾಕ್ ಮಾರುಕಟ್ಟೆಯಲ್ಲಿ ಷೇರುಗಳನ್ನು ಕೊಳ್ಳುವ ಮೂಲಕ ಭಾಗಿದಾರರಾಗುವ ಪ್ರತಿಯೊಬ್ಬ ಬಂಡವಳಿಗನೂ ವಿಶಾಲ ಮಾರುಕಟ್ಟೆಯ ಒಂದು ಭಾಗವಾಗುತ್ತಾನೆ. ಮಾರುಕಟ್ಟೆ ಲಾಭಗಳಿಕೆಯಲ್ಲಿನ ಬಿಕ್ಕಟ್ಟುಗಳು ತೀವ್ರವಾದಂತೆಲ್ಲಾ ಷೇರು ಮಾರುಕಟ್ಟೆಯ ವಹಿವಾಟು ಸಹ ಚುರುಕಾಗುತ್ತದೆ. ಈ ಸಂದರ್ಭದಲ್ಲಿ ದೊಡ್ಡ ಕಂಪನಿಗಳು ಇತರ ಕಂಪನಿಗಳ ಷೇರುಗಳನ್ನು ಖರೀದಿಸಿ, ಅದರ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿ, ಹೆಚ್ಚು ಹಣ ಸಂಪಾದಿಸುವ ವಾಮ ಮಾರ್ಗಗಳನ್ನೂ ಅನುಸರಿಸುತ್ತವೆ. ತಮ್ಮದೇ ಸಮೂಹದ ಇತರ ಉದ್ಯಮಗಳ ಷೇರುಗಳನ್ನು ಇದೇ ರೀತಿಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಿ, ಮಾರುಕಟ್ಟೆ ಸೂಚ್ಯಂಕವನ್ನು ಹೆಚ್ಚಿಸುವ ಮಾದರಿಯೂ ಸಾಮಾನ್ಯವಾಗಿ ಜಾರಿಯಲ್ಲಿರುತ್ತದೆ. 1991ರಲ್ಲಿ ಹರ್ಷದ್ ಮೆಹ್ತಾನಂತಹ ದಲ್ಲಾಳಿಗಳು ಇದೇ ರೀತಿಯಲ್ಲಿ ಹೆಚ್ಚಿಸಿದ ಬೆಲೆಯಲ್ಲಿ ಶೇರುಗಳನ್ನು ಖರೀದಿಸಿ, ತಮ್ಮ ಷೇರುಗಳ ಬೆಲೆಯನ್ನೂ ಹೆಚ್ಚಿಸಿ ಲಾಭ ಗಳಿಸಿದ್ದರು. ಈ ಷೇರುಗಳ ಬೆಲೆಗಳು ದಿಢೀರನೆ ಕುಸಿದಿದ್ದರಿಂದಲೇ ಷೇರು ಮಾರುಕಟ್ಟೆ ಹಠಾತ್ತನೆ ಕುಸಿದಿತ್ತು.
ಗೌತಮ್ ಅದಾನಿ ಸಮೂಹವೂ ಸಹ ಇದೇ ಮಾದರಿಯನ್ನು ಅನುಸರಿಸುತ್ತಿರುವುದನ್ನು ಹಲವು ಮಾರುಕಟ್ಟೆ ತಜ್ಞರು ಈ ಹಿಂದೆಯೇ ಗುರುತಿಸಿದ್ದರು. ಅದಾನಿ ಸಮೂಹದ ಷೇರುಗಳನ್ನು ಮಾರಿಷಸ್, ಸಿಂಗಪೂರ್ ಮತ್ತಿತರ ದೇಶಗಳಲ್ಲಿರುವ ಕೆಲವು ಸಾಗರೋತ್ತರ ಕಂಪನಿಗಳು ಹೆಚ್ಚಿನ ಮೊತ್ತ ನೀಡಿ ಖರೀದಿಸುವ ಮೂಲಕ ಮಾರುಕಟ್ಟೆಯಲ್ಲಿ ಷೇರು ಬೆಲೆಗಳು ಗಗನಕ್ಕೇರಿದ್ದವು. ಈ ಕಂಪನಿಗಳ ಪೈಕಿ ಬಹಳಷ್ಟು ಗೌತಮ್ ಅದಾನಿ ಸಮೂಹಕ್ಕೇ ಸೇರಿದ ಶೆಲ್ ಕಂಪನಿಗಳು ಎಂದೂ ಹಲವೆಡೆ ವರದಿಯಾಗಿತ್ತು. ಈ ರೀತಿಯಾಗಿ ತಾವೇ ಸೃಷ್ಟಿಸಿರುವ ನಕಲಿ ಅಥವಾ ಸುಳ್ಳು ಕಂಪನಿಗಳ ಮೂಲಕ ತಮ್ಮ ಸಮೂಹದ ಷೇರುಗಳನ್ನು ಖರೀದಿಸಿ, ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ವಿಧಾನ, ಷೇರುಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ಸಹಜವಾಗಿದ್ದು, ಅದಾನಿ ಸಮೂಹವೂ ಇದೇ ಮಾದರಿಯನ್ನು ಅನುಸರಿಸಿದೆ.
ಆಪ್ತ ಬಂಡವಾಳಶಾಹಿ ಮತ್ತು ಅಭಿವೃದ್ಧಿ ಮಾದರಿ
ಕಳೆದ ನಾಲ್ಕು ದಶಕಗಳಿಂದಲೂ ಭಾರತ ಆಪ್ತ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯನ್ನೇ ಅನುಸರಿಸುತ್ತಿದೆ. ಔದ್ಯಮಿಕ ಬಂಡವಾಳದ ಯುಗದಲ್ಲೂ ಸಹ ಭಾರತದಲ್ಲಿ ಆಡಳಿತಾರೂಢ ಸರ್ಕಾರಗಳು, ಸಮಾಜವಾದಿ ಸ್ವರೂಪದ ಮಿಶ್ರ ಆರ್ಥಿಕ ನೀತಿಗಳು ಮತ್ತು ಕಲ್ಯಾಣ ಪ್ರಭುತ್ವದ ಯೋಜನೆಗಳ ಹೊರತಾಗಿಯೂ, ಬಂಡವಾಳಶಾಹಿಗಳೊಡನೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡೇ ಬಂದಿವೆ. ಭಾರತದ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಎಲ್‌ಐಸಿ, ನಬಾರ್ಡ್ ಮುಂತಾದ ಹಣಕಾಸು ಸಂಸ್ಥೆಗಳೂ ಸಹ ಬಂಡವಳಿಗ ಸಮುದಾಯಕ್ಕೆ ಅಗತ್ಯವಾದ ಮಾರುಕಟ್ಟೆ ಬಂಡವಾಳವನ್ನು ಆಯಾ ಕಾಲದ ಅವಶ್ಯಕತೆಗೆ ತಕ್ಕಂತೆ ಪೂರೈಸುತ್ತಲೇ ಬಂದಿವೆ. ಇಂದಿಗೂ ಸಹ ನೂರು ಕೋಟಿ ರೂಗಳಿಗೂ ಹೆಚ್ಚು ವ್ಯಾಪಾರ ವಹಿವಾಟು ಇರುವ ಕಂಪನಿಗಳಿಗೆ ಅತ್ಯಂತ ಕನಿಷ್ಟ ದರದ ಬಡ್ಡಿಯಲ್ಲಿ ಸಾಲ ದೊರೆಯುವುದನ್ನು ಗಮನಿಸಬಹುದು. ಬ್ಯಾಂಕಿಂಗ್ ವಲಯದಲ್ಲಿ ವಸೂಲಿಯಾಗದ ಸಾಲದ ಪ್ರಮಾಣದಲ್ಲೂ ಈ ಕಂಪನಿಗಳೇ ಹೆಚ್ಚಾಗಿರುವುದನ್ನೂ ಗಮನಿಸಬಹುದು.
ಭಾರತದ ಔದ್ಯಮಿಕ ಜಗತ್ತು ಸರ್ಕಾರಗಳ ಪ್ರೋತ್ಸಾಹ ಮತ್ತು ಬೆಂಬಲದ ಮೂಲಕವೇ ತನ್ನ ಬಂಡವಾಳ ಹೂಡಿಕೆಯ ಪ್ರಶಸ್ತ ವಲಯಗಳನ್ನು ಗುರುತಿಸಿಕೊಳ್ಳುತ್ತಾ ಬೆಳೆದುಬಂದಿದೆ. 1990ರ ದಶಕದಲ್ಲಿ ಮುಖೇಶ್ ಮತ್ತು ಅನಿಲ್ ಅಂಬಾನಿ ಅವರ ರಿಲೈಯನ್ಸ್ ಸಮೂಹವನ್ನು ಪೋಷಿಸಿದ ಭಾರತದ ಆರ್ಥಿಕ ನೀತಿಗಳು ಈಗ ಅದಾನಿ ಸಮೂಹವನ್ನು ಪೋಷಿಸುತ್ತಿದೆ. ಅರ್ಥವ್ಯವಸ್ಥೆಯ ಪರಿಭಾಷೆಯಲ್ಲಿ ಇದನ್ನೇ ಆಪ್ತ ಬಂಡವಾಳಶಾಹಿ ಎಂದು ಕರೆಯಲಾಗುತ್ತದೆ. ಸರ್ಕಾರಗಳು ದೇಶದ ಆರ್ಥಿಕ ಅಭಿವೃದ್ಧಿಗಾಗಿ ರೂಪಿಸುವ ನೀತಿಗಳು ಮತ್ತು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳು ಬಂಡವಾಳ ಹೂಡಿಕೆಗಾಗಿ ಔದ್ಯಮಿಕ ವಲಯವನ್ನು ಅವಲಂಬಿಸುತ್ತದೆ. ಪ್ರಸ್ತುತ ಭಾರತದ ಅಭಿವೃದ್ಧಿ ಪಥವು ನವ ಉದಾರವಾದ ಮತ್ತು ಜಾಗತೀಕರಣದ ನಿಯಮಗಳ ಅನುಸಾರವೇ ಮುನ್ನಡೆಯುತ್ತಿರುವುದರಿಂದ, ತಳಮಟ್ಟದ ಸಮಾಜಕ್ಕೆ ನಿಲುಕದ ಅಭಿವೃದ್ಧಿಯ ನೀಲನಕ್ಷೆಗಳು ಹೆಚ್ಚು ಪ್ರಾಧಾನ್ಯತೆ ಪಡೆದುಕೊಳ್ಳುತ್ತವೆ. ಮೂಲ ಸೌಕರ್ಯಗಳ ಅಭಿವೃದ್ಧಿಯನ್ನೇ ದೇಶದ ಅಭಿವೃದ್ಧಿ ಎಂದು ಬಿಂಬಿಸುವ ಪ್ರಯತ್ನಗಳನ್ನು ಹೆದ್ದಾರಿಗಳು, ಮೇಲ್ ಸೇತುವೆಗಳು, ಅತ್ಯಾಧುನಿಕ ವಿಮಾನ ನಿಲ್ದಾಣಗಳ, ದಶಪಥ ರಸ್ತೆಗಳು, ಆಧುನಿಕ ಬಂದರುಗಳು ಮತ್ತು ಜಾಗತಿಕ ಮಾನದಂಡಗಳಿಗೆ ನಿಲುಕುವಂತಹ ನಗರೀಕರಣ ಪ್ರಕ್ರಿಯೆಗೆ ಈ ಆರ್ಥಿಕ ನೀತಿಗಳೂ ಪೂರಕವಾಗಿರುತ್ತವೆ. ಹಾಗಾಗಿಯೇ ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ರಿಯಲ್ ಎಸ್ಟೇಟ್ ಒಂದು ಪ್ರಧಾನ ಉದ್ಯಮವಾಗಿರುವುದೇ ಅಲ್ಲದೆ, ರಾಜಕೀಯವಾಗಿ, ಮಾರುಕಟ್ಟೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ.
ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಹೆಚ್ಚಿನ ಮಟ್ಟಿಗೆ ತಂತ್ರಜ್ಞಾನದ ಬಳಕೆಯೇ ಪ್ರಧಾನವಾಗಿರುವುದರಿಂದ, ಈ ಕಾಮಗಾರಿಗಳ ಮೂಲಕ ದೇಶದ ಗ್ರಾಮೀಣ ಅಥವಾ ನಗರ ಪ್ರದೇಶಗಳ ಉದ್ಯೋಗಾವಕಾಶಗಳು ಸೀಮಿತವಾಗಿರುತ್ತವೆ. ರಿಯಲ್ ಎಸ್ಟೇಟ್ ಉದ್ಯಮದ ಉತ್ಕರ್ಷದ ಪ್ರಮಾಣ ಎಷ್ಟೇ ಆದರೂ ಅದು ವಲಸೆ ಕಾರ್ಮಿಕರಿಗೆ ಕೂಲಿ ಒದಗಿಸುವ ಒಂದು ಕ್ಷೇತ್ರವಾಗುವುದೇ ಹೊರತು, ತಳಮಟ್ಟದ ಸಮಾಜದಲ್ಲಿ ಸುಸ್ಥಿರ ಬದುಕನ್ನು ರೂಪಿಸುವುದಿಲ್ಲ. ದೇಶದ ನಗರಗಳಲ್ಲಿ ಸೃಷ್ಟಿಯಾಗುತ್ತಿರುವ ಕೊಳೆಗೇರಿಗಳು ಈ ಶ್ರಮಜೀವಿಗಳ ಆಶ್ರಯತಾಣಗಳಾಗುತ್ತವೆ. ಮೆಟ್ರೋ ರೈಲು, ಮೇಲ್ ಸೇತುವೆ, ಸುರಂಗ ಮಾರ್ಗ ಮತ್ತು ಬೃಹತ್ ಕಟ್ಟಡ ನಿರ್ಮಾಣಗಳಲ್ಲಿ ತೊಡಗುವ ಬೃಹತ್ ಶ್ರಮಜೀವಿ ಸಮುದಾಯ ಬಹುಮಟ್ಟಿಗೆ ಅಲೆಮಾರಿ ಬದುಕನ್ನು ಸವೆಸುವುದು ಅನಿವಾರ್ಯವೂ ಆಗಿಬಿಡುತ್ತದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಿಂದಲೇ ನಗರಗಳಿಗೆ ವಲಸೆ ಬರುವ ಈ ಶ್ರಮಿಕ ವರ್ಗವು ನಗರಗಳಲ್ಲಿ ಉದ್ಯೋಗಾವಕಾಶಗಳು ಕುಸಿದಾಗ ಪುನಃ ನೌಕರಿ ಅರಸಿ ಗ್ರಾಮಗಳಿಗೆ ಹಿಂದಿರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಒದಗಿಸುವ ನರೇಗಾದಂತಹ ಯೋಜನೆಗಳಿಗೂ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯದೆ ಇರುವುದು, ಭಾರತ ನಡೆಯುತ್ತಿರುವ ಹಾದಿಯ ಸೂಚನೆಯೇ ಆಗಿದೆ.
ದೇಶದ ಬಂಡವಾಳಿಗರು ಸರ್ಕಾರದ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಮೂಲ ಸೌಕರ್ಯಗಳ ನಿರ್ಮಾಣದಲ್ಲಿ ಹೆಚ್ಚಿನ ಬಂಡವಾಳ ಹೂಡಲು ಸದಾ ಪೈಪೋಟಿಯಲ್ಲಿರುವುದು ಮಾರುಕಟ್ಟೆಯ ಮೂಲ ಲಕ್ಷಣ. ಸದ್ಯದ ಪರಿಸ್ಥಿತಿಯಲ್ಲಿ ಗೌತಮ್ ಅದಾನಿ ಅವರ ಔದ್ಯಮಿಕ ಸಮೂಹ ಈ ಮಾರುಕಟ್ಟೆಯ ಮುಂಚೂಣಿಯಲ್ಲಿದೆ. ಅಚ್ಚರಿಯ ಅಂಶವೆಂದರೆ ಅದಾನಿ ಸಮೂಹವು ಕಳೆದ ಎಂಟು ವರ್ಷಗಳಲ್ಲಿ ಅಸಾಧಾರಣ ಪ್ರಮಾಣದಲ್ಲಿ ಬೆಳವಣಿಗೆಯಾಗಿರುವುದು ಮಾರುಕಟ್ಟೆ ತಜ್ಞರನ್ನೇ ಅಚ್ಚರಿಗೊಳಪಡಿಸಿದ್ದರೂ, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಲಿ (ಸೆಬಿ) ಆಗಲೀ ಅಥವಾ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವ ಆರ್‌ಬಿಐ ಆಗಲೀ, ಈ ಅಭೂತಪೂರ್ವ ಪ್ರಗತಿಯ ಸೂಕ್ಷ್ಮತೆಗಳನ್ನು ಶೋಧಿಸಲು ಮುಂದಾಗಿಲ್ಲ. ತಾನೇ ಸೃಷ್ಟಿಸಿದ ಷೆಲ್ ಕಂಪನಿಗಳ ಮೂಲಕ ತಮ್ಮ ಔದ್ಯಮಿಕ ಷೇರು ಮೌಲ್ಯಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚಿಸಿಕೊಳ್ಳುವ ವಾಮ ಮಾರ್ಗಗಳು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿದ್ದರೂ, ಇಂತಹ ಷೆಲ್ ಕಂಪನಿಗಳತ್ತ ಗಮನಹರಿಸುವುದು ಸೆಬಿ ಮತ್ತು ಸರ್ಕಾರದ ಆದ್ಯತೆಯಾಗಬೇಕು. ಈ ಹಿಂದೆ ಡಿಆರ್‌ಐ ಸಂಸ್ಥೆಯೂ ಸಹ ಅದಾನಿ ಸಮೂಹದ ಚಟುವಟಿಕೆಗಳ ಬಗ್ಗೆ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿತ್ತು ಎನ್ನಲಾಗುತ್ತಿದೆ. ಸೆಬಿ ಸಂಸ್ಥೆಯಲ್ಲಿ ಗೌತಮ್ ಅದಾನಿಯ ನಿಕಟವರ್ತಿಗಳು ನಿರ್ಣಾಯಕ ಹುದ್ದೆಗಳಲ್ಲಿರುವುದಾಗಿಯೂ ಹೇಳಲಾಗುತ್ತಿದೆ. ಆಪ್ತ ಬಂಡವಾಳಶಾಹಿಯಲ್ಲಿ ಇವೆಲ್ಲವೂ ಸಹಜ ಪ್ರಕ್ರಿಯೆಗಳಾಗಿಯೇ ಕಾಣುತ್ತವೆ.
ಅಂತಿಮವಾಗಿ ಹಿಂಡನ್‌ಬರ್ಗ್ ವರದಿಯ ಸತ್ಯಾಸತ್ಯತೆಗಳು ಏನೇ ಆದರೂ ಭಾರತದ ಮಾರುಕಟ್ಟೆ ಆರ್ಥಿಕತೆಯ ಒಳಬಿರುಕುಗಳನ್ನು ಈ ವರದಿಯು ಸ್ಪಷ್ಟವಾಗಿ ತೆರೆದಿಟ್ಟಿದೆ. ಇದು ಕೇವಲ ಒಂದು ಔದ್ಯಮಿಕ ಸಮೂಹ ಅಥವಾ ಒಬ್ಬ ಬಂಡವಾಳಿಗ ಅಥವಾ ಒಂದು ಉದ್ಯಮಿಯ ಪ್ರಶ್ನೆ ಅಲ್ಲ. ಇಲ್ಲಿ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಪದೇ ಪದೇ ಸಂಭವಿಸುವಂತಹ ಪಲ್ಲಟಗಳ ಸೂಕ್ಷ್ಮ ತಂತುಗಳು ಅಡಗಿವೆ. ಭಾರತ ಇದನ್ನು 1990ರ ದಶಕದಲ್ಲಿ ಅನುಭವಿಸಿದೆ. 2010ರ ಅಸುಪಾಸಿನಲ್ಲಿ, ಯುಪಿಎ ಸರ್ಕಾರದ ಎರಡನೆ ಪಾಳಿಯಲ್ಲಿ, ಸ್ಫೋಟಿಸಿದ 2ಜಿ ಹಗರಣ ಇನ್ನೂ ನೆನಪುಗಳಲ್ಲಿ ಹಸಿಯಾಗಿದೆ. 2ಜಿ ಹಗರಣ, ಕಲ್ಲಿದ್ದಲು ಹಗರಣ, ಕಾಮನ್‌ವೆಲ್ತ್ ಹಗರಣ ಇವೆಲ್ಲವೂ ಣ ಭಾರತದ ದೃಶ್ಯ ಮಾಧ್ಯಮಗಳಲ್ಲಿ, ಸುದ್ದಿಮನೆಗಳ ಬೋರ್ಡ್ ರೂಮ್‌ಗಳಲ್ಲಿ, ಸಂಪಾದಕರ ಕಚೇರಿಗಳಲ್ಲಿ ಮೂಡಿಸಿದ ಚಿಂತನ ಮಂಥನವನ್ನು ಅದಾನಿ ಸಮೂಹದ ಪ್ರಸ್ತುತ ಪಲ್ಲಟಗಳು ಸೃಷ್ಟಿಸದಿರುವುದು ಬದಲಾದ ಭಾರತದ ಸಂಕೇತವಾಗಿ ಕಾಣುತ್ತಿದೆ. ಅದಾನಿ ಸಮೂಹ ಕೇವಲ ಮೂರು ನಾಲ್ಕು ವರ್ಷಗಳ ಅವಧಿಯಲ್ಲಿ ಶೇ 300 ರಿಂದ ಶೇ 400ರಷ್ಟು ಬೆಳವಣಿಗೆ ಕಂಡಿರುವುದು, ಸದಾ ರೋಚಕ ಸುದ್ದಿಗಳನ್ನೇ ಬಯಸುವ ಭಾರತದ ದೃಶ್ಯಮಾಧ್ಯಮಗಳಿಗೆ ಗೋಚರಿಸದಿರುವುದಾದರೂ ಹೇಗೆ ? ಬಹುಶಃ ಇತ್ತೀಚೆಗೆ ಎನ್‌ಡಿಟಿವಿಯನ್ನು ಅದಾನಿ ಸಮೂಹವೇ ಸ್ವಾಧೀನಪಡಿಸಿಕೊಂಡಿರುವುದರಲ್ಲಿ ಈ ಪ್ರಶ್ನೆಯ ಉತ್ತರವೂ ಅಡಗಿದೆ ಎನಿಸುತ್ತದೆ.
ಬಂಡವಾಳದ ಅಸೀಮಿತ, ಅನಿರ್ಬಂಧಿತ ಬೆಳವಣಿಗೆ ದೇಶದ ಜಿಡಿಪಿಯನ್ನು ಹೆಚ್ಚಿಸಲು ನೆರವಾಗಬಹುದು. ಏಕೆಂದರೆ ಜಿಡಿಪಿಯನ್ನು ನಿರ್ಧರಿಸುವ ಮಾರುಕಟ್ಟೆ ಸೂಚ್ಯಂಕಗಳು ತಳಮಟ್ಟದ ಜನಸಾಮಾನ್ಯರ ನಡುವೆ ಇರುವ ಹಸಿವು, ಬಡತನ, ಅಸಮಾನತೆ ಮತ್ತು ಸಾಮಾಜಿಕ ಅಸ್ಥಿರತೆಯನ್ನು ನೋಡುವುದೂ ಇಲ್ಲ. ಹಣಕಾಸು ಬಂಡವಾಳದ ಚಂಚಲತೆ ಮತ್ತು ಹರಿವು ದೇಶಗಳ ಅರ್ಥವ್ಯವಸ್ಥೆಗಳನ್ನು ಎಷ್ಟೇ ಬಾಧಿಸಿದರೂ, ಇದನ್ನು ಸರಿದೂಗಿಸುವ ತಂತ್ರಗಳನ್ನೂ ಮಾರುಕಟ್ಟೆಯೇ ಸೃಷ್ಟಿಸಿರುತ್ತದೆ. ಆಪ್ತ ಬಂಡವಾಳಶಾಹಿಯನ್ನು ಪೋಷಿಸುವ ಭಾರತದಂತಹ ದೇಶಗಳಲ್ಲಿ ಆಳುವ ವರ್ಗಗಳೇ ಈ ತಂತ್ರಗಳನ್ನು ಬಳಸಿ, ಬಂಡವಾಳದ ಒಳಬಿರುಕುಗಳನ್ನು ಮುಚ್ಚಿ ಹಾಕುತ್ತವೆ. ಅದಾನಿ ಸಮೂಹದ ಸುತ್ತ ಹಬ್ಬಿರುವ ಅನುಮಾನದ ಹುತ್ತಗಳಲ್ಲಿ ಏನು ಅಡಗಿದೆ ಎನ್ನುವುದಕ್ಕಿಂತಲೂ, ವಿರೋಧ ಪಕ್ಷಗಳು ಈ ನಿಟ್ಟಿನಲ್ಲಿ ಏಕೆ ಜಾಣ ಮೌನ ವಹಿಸಿವೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡಬೇಕಿದೆ. ಎಡಪಕ್ಷಗಳ ಹೊರತು ಉಳಿದೆಲ್ಲಾ ರಾಜಕೀಯ ಪಕ್ಷಗಳೂ ಆಪ್ತ ಬಂಡವಾಳಶಾಹಿಯೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿರುವುದನ್ನು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಕೇಂದ್ರ ವಿತ್ತ ಸಚಿವರ ಅಭಿಪ್ರಾಯದಲ್ಲಿ ಈ ಸಮಸ್ಯೆ ಅದಾನಿ ಸಮೂಹಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಆದರೆ ಭಾರತದ ಜನತೆಯ ದೃಷ್ಟಿಯಿಂದ ಇದು ದೇಶದ ಅರ್ಥವ್ಯವಸ್ಥೆಗೆ, ಮಾರುಕಟ್ಟೆಗೆ ಮತ್ತು ತೆರಿಗೆ ಪಾವತಿಸುವ ಕಟ್ಟಕಡೆಯ ವ್ಯಕ್ತಿಗೆ ಸಂಬಂಧಿಸಿದ ಸಮಸ್ಯೆಯೇ ಅಗಿದೆ. ಇದನ್ನು ಜನತೆಗೆ ಮನದಟ್ಟು ಮಾಡುವುದು ಮಾಧ್ಯಮಗಳ ಆದ್ಯತೆಯಾಗಬೇಕಿತ್ತು. ದುರಾದೃಷ್ಟವಶಾತ್ ಆಗಿಲ್ಲ.
ನವ ಉದಾರವಾದ, ಮಾರುಕಟ್ಟೆ ಬಂಡವಾಳ ಮತ್ತು ಜಾಗತೀಕರಣದ ನೀತಿಗಳು ದೇಶದ ಶ್ರಮಿಕರಿಗೆ ಈ ರೀತಿಯ ಆಘಾತಗಳನ್ನು ಕಾಲಕಾಲಕ್ಕೆ ನೀಡುತ್ತಲೇ ಇರುತ್ತದೆ. 20ನೆಯ ಶತಮಾನದ ಆರಂಭದಿಂದಲೂ ಬಂಡವಾಳಶಾಹಿಯು ಈ ಆಘಾತಗಳನ್ನು ಎದುರಿಸುತ್ತಲೇ ಬಂದಿದೆ. ಈ ಅರ್ಥವ್ಯವಸ್ಥೆಯ ಮೂಲ ಫಲಾನುಭವಿಗಳಾದ ಬಂಡವಾಳಿಗರು ತಮ್ಮದೇ ಆದ ಸುರಕ್ಷಿತ ತಾಣಗಳಲ್ಲಿ ಅಡಗಿ ಕುಳಿತಿರುತ್ತಾರೆ. ಭಾರತದ ನೀರವ್ ಮೋದಿ, ಚೋಕ್ಷಿ, ವಿಜಯ್ ಮಲ್ಯ, ಕೇತನ್ ಪರೇಖ್, ಹರ್ಷದ್ ಮೆಹ್ತಾ ಈ ಫಲಾನುಭವಿ ಸಮೂಹದ ಪ್ರತಿನಿಧಿಗಳಾಗಿಯೇ ಕಾಣುತ್ತಾರೆ. ಮಾರುಕಟ್ಟೆಗಳಿಗೂ ಈ ಆಘಾತಗಳನ್ನು ಸಹಿಸಿಕೊಂಡು ಪುಟಿದೇಳುವ ಸಾಮರ್ಥ್ಯವನ್ನು ಬಂಡವಾಳ ವ್ಯವಸ್ಥೆಯೇ ಒದಗಿಸುತ್ತದೆ. ಸರ್ಕಾರಗಳೂ ಸಹ ನೆರವಿಗೆ ಧಾವಿಸುತ್ತವೆ. ಆದರೆ ಮಾರುಕಟ್ಟೆ ಮತ್ತು ಬಂಡವಾಳದ ಈ ಒಳಬಿರುಕುಗಳ ನಡುವೆ ಸಿಲುಕುವ ತಳಮಟ್ಟದ ಶ್ರಮಿಕ ವರ್ಗ ಮತ್ತೊಂದು ರೂಪದಲ್ಲಿ ಈ ಆಘಾತಗಳ ಹೊರೆಯನ್ನು ಹೊರಬೇಕಾಗುವುದು ಖಚಿತ. ಭಾರತದಲ್ಲಿ ಹೆಚ್ಚಾಗುತ್ತಲೇ ಇರುವ ಬಡವ-ಶ್ರೀಮಂತರ ನಡುವಿನ ಅಂತರ ಇದನ್ನೇ ಸೂಚಿಸುತ್ತದೆ.