
ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ರಸ್ತೆಯಲ್ಲಿ ವಾಹನಕ್ಕೆ ಸಿಲುಕಿ ನಾಗರಹಾವು ಸಾವನ್ನಪ್ಪಿತ್ತು. ಹಾವಿನ ಸಾವಿನ ವಿಚಾರವನ್ನು ಕುಕ್ಕೆ ಸುಬ್ರಹ್ಮಣ್ಯದ ಸಿಬ್ಬಂದಿ ಗಮನಕ್ಕೆ ಸ್ಥಳೀಯರು ತಂದಿದ್ದಾರೆ. ಆದರೆ ಕ್ಷೇತ್ರದ ಸಿಬ್ಬಂದಿಯಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮೃತಪಟ್ಟ ನಾಗರಹಾವನ್ನು ದೇವಸ್ಥಾನದ ಆಡಳಿತ ಕಚೇರಿ ಎದುರಿಗಿಟ್ಟು ಪ್ರತಿಭಟನೆ ಮಾಡಲಾಗಿದೆ.

ಹಾವು ಸತ್ತ ತಕ್ಷಣ ಅದಕ್ಕೆ ಅಂತ್ಯಸಂಸ್ಕಾರ ಮಾಡಬೇಕು ಎನ್ನುವ ಪದ್ಧತಿ ಇದೆ. ಆದರೆ ಹಾವು ಸತ್ತು ಒಂದು ಗಂಟೆಯಾದರೂ ಸ್ಥಳಕ್ಕೆ ಆಗಮಿಸದ ಸಿಬ್ಬಂದಿ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದಿದ್ದರು. ದೇವಳದ ಸಿಬ್ಬಂದಿಗೆ ವಿಚಾರ ತಿಳಿಸಿದರೂ ಸ್ಥಳಕ್ಕೆ ಬಂದಿಲ್ಲ ಎಂದು ಆಡಳಿತ ಕಚೇರಿ ಮುಂದೆಯೇ ಸತ್ತ ಹಾವನ್ನು ಇಟ್ಟು ಪ್ರತಿಭಟಿಸಿದ್ದಾರೆ. ಸರ್ಪಸಂಸ್ಕಾರ ವಿಧಿಗೆ ಹಣ ಕೊಟ್ಟರೆ ಮಾತ್ರ ಅರ್ಚಕರು ಸಿಗುತ್ತಾರೆ. ಆದರೆ ಕ್ಷೇತ್ರದಲ್ಲಿ ಆರಾಧಿಸಲ್ಪಡುವ ನಾಗನೇ ಸತ್ತು ಬಿದ್ದಾಗ ನಿಮಗೆ ಅರ್ಚಕರು ಸಿಗುತ್ತಿಲ್ಲ ಎಂದು ಕಿಡಿಕಾರಿದರು.

ನಾಗದೇವರ ಅನ್ನ ತಿಂದು ಇಲ್ಲಿ ಎಲ್ಲರೂ ಬದುಕುತ್ತಿರುವುದು. ಆದರೆ ನಾಗನಿಗೆ ಅಂತ್ಯಸಂಸ್ಕಾರ ನಡೆಸಲು ಮಾತ್ರ ಯಾರೂ ಇಲ್ಲ ಎಂದು ಆಕ್ರೋಶ ಹೊರಹಾಕಿದ್ರು. ಕೊನೆಗೆ ಪುತ್ತೂರು ಸಹಾಯಕ ಆಯುಕ್ತರಿಗೆ ಕರೆ ಮಾಡಿದಾಗ ಅವರು ಸ್ಪಂದಿಸಿದ್ದಾರೆ. ದೇವಸ್ಥಾನದಲ್ಲಿ ಇಷ್ಟೆಲ್ಲಾ ಸಿಬ್ಬಂದಿ ಇರೋದು ಯಾಕೆ..? ಎಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಿಬ್ಬಂದಿ ವಿರುದ್ಧ ಹರಿಹಾಯ್ದಿದ್ದಾರೆ ಸ್ಥಳೀಯರು. ಕೊನೆಗೆ ಸಹಾಯಕ ಆಯುಕ್ತರ ಆದೇಶದ ಬಳಿಕ ನಾಗನಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಅರ್ಚಕರು.