
ರಾಜ್ಯದ ಈ ವರ್ಷದ ಬಜೆಟ್ ಗಾತ್ರ 4,48,004 ಕೋಟಿ ರೂ.ಗಳಷ್ಟಾಗಲಿದೆ. 2025-26ರಲ್ಲಿ ನಮ್ಮ ಬಜೆಟ್ ಗಾತ್ರ 4,09,549 ರೂಗಳಷ್ಟಿತ್ತು. ಕಳೆದ ವರ್ಷದ ಆಯವ್ಯಯಕ್ಕೆ ಹೋಲಿಸಿದರೆ ಈ ಆಯವ್ಯಯವು 38,455 ಕೋಟಿ ರೂಗಳಷ್ಟು ಹೆಚ್ಚಿನ ಗಾತ್ರದ್ದಾಗಿದೆ. ಶೇ.9.4ರಷ್ಟು ಬೆಳವಣಿಗೆಯಾಗಿದೆ. ಕೇಂದ್ರ ಸರ್ಕಾರದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.6 ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ (2025 ರಲ್ಲಿ 50.65 ಲಕ್ಷ ಕೋಟಿಗಳ ಬಜೆಟ್ ಮಂಡಿಸಿದ್ದರು. ಈ ವರ್ಷ 53.47 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದಾರೆ].

2025-26 ರಲ್ಲಿ ದೇಶದ ಜಿಡಿಪಿಯು ಸ್ಥಿರ ಬೆಲೆಗಳಲ್ಲಿ ಶೇ.7.4 ರಷ್ಟು ಬೆಳವಣಿಗೆ ದಾಖಲಿಸಿದರೆ, ರಾಜ್ಯದ ಜಿ.ಎಸ್.ಡಿ.ಪಿಯು ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ. ಕರ್ನಾಟಕದ ಜಿಎಸ್ಡಿಪಿ ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚಿರುವುದು ನಮ್ಮ ಸರ್ಕಾರ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಅರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತಿರುವುದನ್ನು ಹೇಳುತ್ತದೆ. ಈ ಮೂಲಕ ರಾಜ್ಯದ ಆರ್ಥಿಕತೆಯನ್ನು ದೇಶದಲ್ಲಿಯೇ ನಂ.1 ಮಾಡುವತ್ತ ಹೆಜ್ಜೆಯಿಟ್ಟಿದ್ದೇವೆ.

ಇಷ್ಟೆಲ್ಲದರ ನಡುವೆ ನಮ್ಮ ವಿತ್ತೀಯ ಶಿಸ್ತನ್ನು ಹಾಳು ಮಾಡಿಲ್ಲ. ನಮ್ಮ ವಿತ್ತೀಯ ಕೊರತೆ 2026-27ನೇ ಸಾಲಿನಲ್ಲೂ ಶೇ.2.95 ರಷ್ಟಿರಲಿದೆ. ನಮ್ಮ ಜಿ.ಎಸ್.ಡಿ.ಪಿ ಈ ವರ್ಷ 33,05,500 ಕೋಟಿ ರೂ. ಗಳಷ್ಟಿರಲಿದೆ ಎಂದು ಅಂದಾಜು ಮಾಡಲಾಗಿದೆ.

[ದೇಶದ ಜಿಡಿಪಿ ಗಾತ್ರವು 2026-27 ರ ಆಯವ್ಯಯದಲ್ಲಿ ಪ್ರಸ್ತಾಪಿಸಿರುವಂತೆ 393 ಲಕ್ಷ ಕೋಟಿ ರೂಗಳಷ್ಟಾಗಲಿದೆ].
ನಮ್ಮ ಒಟ್ಟು ಹೊಣೆಗಾರಿಕೆಗಳು ಜಿ.ಎಸ್.ಡಿ.ಪಿ.ಗೆ ಎದುರಾಗಿ ಶೇ.24.94 ರಷ್ಟಿರಲಿದೆ. ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡದAತೆ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದ್ದೇವೆ. ಆದರೆ ಕೇಂದ್ರ ಸರ್ಕಾರದ ಹೊಣೆಗಾರಿಕೆಗಳು ಜಿ.ಡಿ.ಪಿ.ಗೆ ಎದುರಾಗಿ ಶೇ.55.6 ರಷ್ಟಿದೆ. [ಇದು ಶೇ.40 ರ ಒಳಗೆ ಇರಬೇಕು]
ನಮ್ಮ ವಿತ್ತೀಯ ಕೊರತೆಯು ಜಿಎಸ್ಡಿಪಿಯ ಶೇ.3 ರ ಒಳಗೆ ಇದೆ. ಮುಂದಿನ ವರ್ಷಕ್ಕೆ ಶೇ.2.95 ರಷ್ಟು ಇರಲಿದೆ ಎಂಬುದು ನಮ್ಮ ಅಂದಾಜಾಗಿದೆ. ಆದರೆ 2026-27ನೇ ಸಾಲಿಗೆ ಕೇಂದ್ರದ ವಿತ್ತೀಯ ಕೊರತೆ ಜಿ.ಡಿ.ಪಿ.ಯ ಶೇ.4.3 ರಷ್ಟು ಇರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

16 ನೇ ಹಣಕಾಸು ಆಯೋಗದ ಮಾರ್ಗಸೂಚಿಯ ಅನುಸಾರ ರಾಜ್ಯಗಳು ಶೇ.3 ರೊಳಗೆ ಹಾಗೂ ಕೇಂದ್ರ ಸರ್ಕಾರ ಶೇ.4.2 ರೊಳಗೆ ವಿತ್ತೀಯ ಕೊರತೆ ಹೊಂದಿರಬೇಕು. ಇದನ್ನು ಕೇಂದ್ರ ಸರ್ಕಾರ ಅನುಷ್ಠಾನ ಮಾಡಿಲ್ಲ ಎಂಬುದನ್ನು ಸದನದ ಗಮನಕ್ಕೆ ತರಬಯಸುತ್ತೇನೆ.






