ಮಧ್ಯಪೂರ್ವದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಲು ಯಾವುದೇ ವಿಶೇಷ ಅನುಮತಿ ಅಗತ್ಯವಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಈ ಮಧ್ಯೆ ಭಾರತೀಯ ಧ್ವಜ ಹೊಂದಿರುವ ಎಲ್‌ಪಿಜಿ ಹಡಗುಗಳು ನಿರಂತರವಾಗಿ ಸಂಚಾರ ನಡೆಸುತ್ತಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹಾರ್ಮುಜ್ ಜಲಸಂಧಿ ಜಾಗತಿಕ ಇಂಧನ ಸಾಗಣೆಯಲ್ಲಿ ಅತ್ಯಂತ ಪ್ರಮುಖ ಜಲಮಾರ್ಗವಾಗಿದ್ದು, ವಿಶ್ವದ ತೈಲ ಮತ್ತು ಅನಿಲ ಸಾಗಣೆಯ ದೊಡ್ಡ ಭಾಗ ಇದೇ ಮಾರ್ಗದ ಮೂಲಕ ಸಾಗುತ್ತದೆ. ಇತ್ತೀಚಿನ ಭದ್ರತಾ ಆತಂಕಗಳ ಹಿನ್ನೆಲೆ ಈ ಮಾರ್ಗದಲ್ಲಿ ಹಡಗು ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿತ್ತು.ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಭಾರತೀಯ ಧ್ವಜದ ಹಡಗುಗಳಿಗೆ ಯಾವುದೇ ಹೊಸ ನಿರ್ಬಂಧಗಳು ಅಥವಾ ಅನುಮತಿ ಪ್ರಕ್ರಿಯೆ ಇಲ್ಲ ಎಂದು ತಿಳಿಸಿದೆ. ಎಲ್ಲ ಹಡಗುಗಳೂ ಅಂತಾರಾಷ್ಟ್ರೀಯ ಸಮುದ್ರ ಕಾನೂನುಗಳ ಪ್ರಕಾರ ಸಾಮಾನ್ಯವಾಗಿ ಸಂಚರಿಸುತ್ತಿವೆ ಎಂದು ಹೇಳಿದೆ.

ಇದರ ನಡುವೆಯೇ ಭಾರತೀಯ ಧ್ವಜದ ಎಲ್‌ಪಿಜಿ ಸಾಗಣೆ ಹಡಗುಗಳು ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟುತ್ತಿದ್ದು, ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಬಂಧಿತ ಸಂಸ್ಥೆಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಅಗತ್ಯ ಭದ್ರತಾ ಕ್ರಮಗಳನ್ನು ಅನುಸರಿಸುತ್ತಿವೆ.ಮಧ್ಯಪೂರ್ವದ ಬೆಳವಣಿಗೆಗಳ ನಡುವೆ ಭಾರತ ಸರ್ಕಾರ ಈ ಸ್ಪಷ್ಟನೆ ನೀಡಿರುವುದು ದೇಶದ ಇಂಧನ ಭದ್ರತೆ ಕುರಿತು ಆತಂಕ ಕಡಿಮೆ ಮಾಡುವುದಾಗಿ ಪರಿಗಣಿಸಲಾಗಿದೆ.
ಇದನ್ನೂ ಓದಿ






