ಪ್ರಧಾನಿ ನರೇಂದ್ರ ಮೋದಿ ಯಾವುದೇ ರಾಜ್ಯಕ್ಕೆ ಪ್ರವಾಸ ಹೋದರೂ ಕೋಟಿಗಟ್ಟಲೆ ಹಣ ವೆಚ್ಚವಾಗುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ ಆಗಿದೆ. ಆದರೆ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಿದ್ದರು. ಕರ್ನಾಟಕದಲ್ಲಿ ಚುನಾವಣೆ ಘೋಷಣೆ ಆದ ಬಳಿಕ ನರೇಂದ್ರ ಮೋದಿ ಪ್ರವಾಸಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. 50 ವರ್ಷಗಳ ಟೈಗರ್ ಪ್ರಾಜೆಕ್ಟ್ Tiger Project ಉದ್ಘಾಟನೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಒಂದು ದಿನ ಉಳಿದುಕೊಂಡಿದ್ದರು. ಆ ಹೋಟೆಲ್ ಬಾಡಿಗೆ ಪಾವತಿ ಮಾಡಿಲ್ಲ ಎನ್ನುವ ದೂರು ಕೇಳಿಬಂದಿದೆ.
ಮೈಸೂರಿನಲ್ಲಿ ಪ್ರಧಾನಿ ಮೋದಿ ವಾಸ್ತವ್ಯದ ವೆಚ್ಚ ₹80 ಲಕ್ಷಕ್ಕೂ ಹೆಚ್ಚಾಗಿದ್ದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಲು ಪ್ರಧಾನಿ ಮೋದಿ ಮೈಸೂರಿಗೆ ಬಂದಿದ್ದರು. ಏಪ್ರಿಲ್ 2023 ರಂದು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ರಾಡಿಸನ್ ಬ್ಲೂ ಹೋಟೆಲ್‌ಗೆ ಬಿಲ್ ಪಾವತಿ ಆಗಿಲ್ಲ. ಕರ್ನಾಟಕದ ಬಂಡೀಪುರ ಹಾಗು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಮೋದಿ, ಅರಣ್ಯ ಇಲಾಖೆ ಸಮವಸ್ತ್ರ ಧರಿಸಿ ಕ್ಯಾಮೆರಾ ಹಿಡಿದು ಫೋಟೋ ತೆಗೆದುಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ಹೋಟೆಲ್‌ಗೆ ₹80.6 ಲಕ್ಷ ಮೊತ್ತದ ಬಿಲ್ ಪಾವತಿ ಮಾಡಬೇಕಿದ್ದು, ಹಣ ಪಾವತಿ ಮಾಡದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ ರವಾನೆ ಮಾಡಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF)ಸೂಚನೆಯಂತೆ ರಾಜ್ಯ ಅರಣ್ಯ ಇಲಾಖೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಏಪ್ರಿಲ್ 9 ರಿಂದ 11 ರವರೆಗೆ ₹3 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ನಡೆಸಲು ನಿರ್ದೇಶನ ಬಂದಿತ್ತು. ಶೇಕಡ 100ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುವ ಭರವಸೆಯೂ ಸಿಕ್ಕಿತ್ತು. ಕೇಂದ್ರದ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕಾರ್ಯಕ್ರಮ ನಡೆಸಲಾಯ್ತು. ಆದರೆ ಪ್ರಧಾನಿ ಕಾರ್ಯಕ್ರಮದ ವೆಚ್ಚ₹ 6.33 ಕೋಟಿಗೆ ಏರಿಕೆ ಆಗಿತ್ತು.
ಕೇಂದ್ರ ಸರ್ಕಾರ ಮೊದಲು ಹೇಳಿದಂತೆ ₹3 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಆದರೆ ರಾಜ್ಯ ಅರಣ್ಯ ಇಲಾಖೆ ಕಾರ್ಯಕ್ರಮ ಆಯೋಜನೆಗೆ ಒಟ್ಟು 6.33 ಕೋಟಿ ವೆಚ್ಚವಾಗಿದ್ದು, ಇನ್ನೂ 3.33 ಕೋಟಿ ಬಾಕಿ ಪಾವತಿಸಬೇಕಿದೆ. MoEF ಮತ್ತು NTCA ಹೇಳಿದಂತೆ ₹3 ಕೋಟಿ ಪಾವತಿ ಆಗಿದೆ. ಪ್ರಧಾನ ಮಂತ್ರಿ ಕಾರ್ಯಕ್ರಮದ ಅವಶ್ಯಕತೆಗಳ ಪ್ರಕಾರ, ಕಾರ್ಯಕ್ರಮದ ವೆಚ್ಚ 6 ಕೋಟಿಗೆ ಏರಿಕೆ ಆಗಿದೆ. ಇದನ್ನು ಪಾವತಿ ಮಾಡಬೇಕಿರುವುದು ಯಾರು..? ಅನ್ನೋ ಜಿಜ್ಞಾಸೆ ಮೂಡಿದೆ. ಕೇಂದ್ರ ಸರ್ಕಾರದ ಕಾರ್ಯಕ್ರಮ ಆಗಿರುವ ಕಾರಣಕ್ಕೆ ಕೇಂದ್ರವೇ ಪಾವತಿ ಮಾಡಬೇಕು ಅನ್ನೋದು ರಾಜ್ಯ ಸರ್ಕಾರದ ವಾದ. ಆದರೆ ನಾವು ಹೇಳಿದ್ದಷ್ಟು ಪಾವತಿ ಮಾಡಿದ್ದೇವೆ. ಹೆಚ್ಚುವರಿ ಮೊತ್ತಕ್ಕೆ ಸಂಬಂಧ ಇಲ್ಲ ಅನ್ನೋದು ಕೇಂದ್ರ ಸರ್ಕಾರದ ವಾದ.
ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ವಿಭಾಗ ಸೆಪ್ಟೆಂಬರ್ 29, 2023 ಹಾಗು ಫೆಬ್ರವರಿ 12, 2024 ರಂದು ಪತ್ರ ಬರೆದು ನೆನಪು ಮಾಡುವ ಪ್ರಯತ್ನ ಮಾಡಿದೆ. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೀಗ ರಾಡಿಸನ್ ಬ್ಲೂ ಹೋಟೆಲ್ ಫೈನಾನ್ಸ್ ಮ್ಯಾನೇಜರ್ Deputy Conservator of Forests ಬಸವರಾಜು ಅವರಿಗೆ ಮೇ 21, 2024 ರಂದು ಪತ್ರ ಬರೆದಿದ್ದು, 12 ತಿಂಗಳು ಕಳೆದರೂ ಬಿಲ್ ಪಾವತಿ ಆಗಿಲ್ಲ, ಹೀಗಾಗಿ ವಾರ್ಷಿಕ ಶೇಕಡ 18ರಷ್ಟು ಬಡ್ಡಿ ಹಾಗು ಬಿಲ್ ಪಾವತಿ ತಡ ಮಾಡಿದ್ದಕ್ಕೆ ₹12.09 ಲಕ್ಷ ಹೆಚ್ಚುವರಿ ಪಾವತಿ ಮಾಡುವಂತೆ ಪತ್ರ ಬರೆದಿದ್ದಾರೆ. ಒಂದು ವೇಳೆ ಜೂನ್ 1, 2024ರ ಒಳಗಾಗಿ ಬಿಲ್ ಪಾವತಿ ಮಾಡದಿದ್ದರೆ ಕಾನೂನು ಹೋರಾಟದ ಮೊರೆ ಹೋಗುವ ಎಚ್ಚರಿಕೆ ನೀಡಲಾಗಿದೆ.
ಕೃಷ್ಣಮಣಿ