ನಾಡಿನಾದ್ಯಂತ ಸಂಕ್ರಮಣ ಸಂಭ್ರಮ ಮನೆ ಮಾಡಿದ್ರೆ, ಗುರುಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮುಖ್ಯಮಂತ್ರಿ ಆಗುವ ಕನಸು ಬಿಚ್ಚಿಟ್ಟಿದ್ದಾರೆ.
ತಂದೆಯಂತೆ ನಾನೂ ಮುಖ್ಯಮಂತ್ರಿ ಆಗುವ ಕನಸು ಹೇಳಿಕೊಂಡಿರುವ ಬಿ.ವೈ ವಿಜಯೇಂದ್ರ, ಸಮುದಾಯ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ. ನೊಳಂಬ ವೀರಶೈವ ಲಿಂಗಾಯತ ಸಮುದಾಯ ಇಡೀ ಲಿಂಗಾಯತ ಸಮುದಾಯ ಒಂದುಗೂಡಿಸಲು ಶ್ರಮಿಸುತ್ತಿದೆ. ಯಡಿಯೂರಪ್ಪನವರು ಈ ನಾಡಿಗೆ, ಸಮಾಜಕ್ಕೆ ಕೊಟ್ಟ ಕೊಡುಗೆ ಏನೆಂದು ವಿವರಿಸಬೇಕಿಲ್ಲ. ಸಿದ್ದರಾಮೇಶ್ವರರ ಕಾಯಕ ತತ್ವವನ್ನ ಅನುಸರಿಸಿ ಕೆಲಸ ಮಾಡಿದವರು ಎಂದಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ.
ನಮ್ಮ ಸಮಾಜ ಕವಲು ದಾರಿಯಲ್ಲಿ ಸಾಗುವ ಸಂದರ್ಭದಲ್ಲಿ, ಸಮಾಜದ ನಡುವೆ ವಿಷಬೀಜ ಬಿತ್ತುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ತಿದ್ದಾರೆ. ಸಮಾಜವನ್ನ ಒಡೆಯುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಆಗ್ತಿದೆ. ನಾವು ಎಚ್ಚೆತ್ತುಕೊಳ್ಳಬೇಕಿದೆ. ನಾವು ಕಣ್ ಮುಚ್ಚಿ ಕೂತಿದ್ದೇವೆ ಎಂದಿರುವ ವಿಜಯೇಂದ್ರ, ಲಿಂಗಾಯತ ಸಮುದಾಯ ನಮ್ಮ ಸಮಸ್ಯೆ ಬದಿಗಿಟ್ಟು ನಾಡಿನ ಏಳಿಗೆಗಾಗಿ ಒಗ್ಗಟ್ಟಾಗಬೇಕಾದ ಕಾಲಘಟ್ಟದಲ್ಲಿದ್ದೇವೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಎಲ್ಲ ಸಮುದಾಯಕ್ಕು ನ್ಯಾಯ ನೀಡುವ ಕೆಲಸ ಮಾಡಿದ್ದಾರೆ. ರೈತನಿಗೆ ಪ್ರಾಮಾಣಿಕವಾಗಿ ಧೈರ್ಯ ತುಂಬ ಕೆಲಸವನ್ನು ಯಡಿಯೂರಪ್ಪ ಮಾಡಿದ್ದಾರೆ. ಸಮುದಾಯದವರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದೀರ, ಏನೆ ಸಮಸ್ಯೆ ಬಂದರೂ ಅದನ್ನ ಮೆಟ್ಟಿ ನಿಂತು ಸಮಾಜಕ್ಕೆ ಧ್ವನಿಯಾಗುತ್ತೇನೆ. ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ದುಡಿತೇನೆ . ನೀವು ಹೆಮ್ಮೆಪಡುವ ರೀತಿ ಕೆಲಸ ಮಾಡ್ತೇನೆ ಎಂದಿದ್ದಾರೆ ವಿಜಯೇಂದ್ರ.
ಯಡಿಯೂರಪ್ಪ ಅವರು ಎಲ್ಲ ಸಮಸ್ಯೆ ಮೆಟ್ಟಿ ನಿಂತು ಮುಖ್ಯಮಂತ್ರಿ ಆದ್ರು. ಕ್ಷೇತ್ರದ ಜನರ ಆಶೀರ್ವಾದ, ಸ್ವಾಮಿಜಿಗಳು, ಸಮುದಾಯದ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ. ಯಡಿಯೂರಪ್ಪ ರೀತಿ ನಾನು ಸಹ ಎಲ್ಲ ಸಮಸ್ಯೆಯನ್ನ ಧೈರ್ಯವಾಗಿ ಎದುರಿಸುತ್ತೇನೆ. ಸಮುದಾಯದ ಏಳಿಗೆಗೂ ಶ್ರಮಿಸುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ಅವರಂತೆ ತಾನೂ ಸಿಎಂ ಹುದ್ದೆಗೆ ಏರುವ ಇಂಗಿತ ವ್ಯಕ್ತಪಡಿಸಿದ್ದಾರೆ ವಿಜಯೇಂದ್ರ. ಸ್ವಪಕ್ಷೀಯ ವಿರೋಧಿಗಳಿಗೆ ಭಾಷಣದ ಉದ್ದಕ್ಕೂ ಟಾಂಗ್ ಕೊಟ್ಟಿರುವ ವಿಜಯೇಂದ್ರ, ಆನೇ ಅಡೆ ತಡೆ ಬಂದರೂ ನಾನು ಹೆದರೋದಿಲ್ಲ ಎಂಬ ರಾಜಕೀಯ ಸಂದೇಶ ನೀಡಿದ್ದಾರೆ. ರಾಜ್ಯಾಧ್ಯಕ್ಷ ಹುದ್ದೆಗೆ ಇರುವ ಅಡೆತಡೆಗಳ ಬಗ್ಗೆ ಪರೋಕ್ಷವಾಗಿ ಹೇಳಿರುವ ವಿಜಯೇಂದ್ರ, ಯಡಿಯೂರಪ್ಪ ಬಳಿಕ ನಾನೇ ಲಿಂಗಾಯತ ಸಮುದಾಯದ ನಾಯಕ ಅನ್ನೋದನ್ನ ಪರೋಕ್ಷವಾಗಿ ಹೇಳಿದ್ದಾರೆ.
ನಾನು ನಿಮ್ಮ ಜೊತೆಗೆ ಇರ್ತೇನೆ, ಸಮಾಜ ಒಡೆದು ರಾಜಕೀಯ ಬೇಳೆ ಬೆಯಿಸಿಕೊಳ್ಳುವವರಿಗೆ ಅವಕಾಶ ನೀಡಬೇಡಿ ಎಂದು ಪರೋಕ್ಷವಾಗಿ ಯತ್ನಾಳ್ ವಿರುದ್ಧ ವಿಜಯೇಂದ್ರ ಕಿಡಿಕಾರಿದ್ದಾರೆ. ಯತ್ನಾಳ್ ಅವರನ್ನೇ ದೃಷ್ಟಿಯಲ್ಲಿ ಇರಿಸಿಕೊಂಡು ಭಾಷಣದ ಉದ್ದಕ್ಕೂ ನಾನೇ ಲಿಂಗಾಯತ ನಾಯಕ ಎಂದು ಹೇಳಿಕೊಂಡ ವಿಜಯೇಂದ್ರ, ಮುಂದಿನ ದಿನಗಳಲ್ಲಿ ನಾನು ಮುಖ್ಯಮಂತ್ರಿ ಆಗ್ತೀನಿ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.