ಕೆಲವು ವರ್ಷಗಳ ಹಿಂದೆ ಒಂದು ಕೃಷ್ಣ ಜನ್ಮಾಷ್ಟಮಿಯಂದು ಓರ್ವ ಬುರ್ಖಧಾರಿ ಮಹಿಳೆ ತನ್ನ ಮಗುವಿಗೆ ಕೃಷ್ಣನ ವೇಷಧರಿಸಿ ಕರೆದೊಯ್ಯುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗಿತ್ತು. ಆದರೆ, ತೀವ್ರ ಹಿಂದೂ ಬಲಪಂಥೀಯರು ಇದಕ್ಕೆ ಅಪಸ್ವರ ಎತ್ತಿದ್ದು, ಹಿಂದೂ ಸಂಸ್ಕೃತಿಯನ್ನು ಛದ್ಮವೇಶಕ್ಕೆ ಸೀಮಿತಗೊಳಿಸಲಾಗುತ್ತಿದೆ ತಕರಾರರು ತೆಗೆದಿದ್ದರು. ಇದರರ್ಥ, ಹಿಂದುಯೇತರರು ಹಿಂದೂ ಸಂಸ್ಕೃತಿಗಳ ಆಚರಣೆಗಳಲ್ಲಿ ಭಾಗಿಯಾಗಬಾರದು ಎನ್ನುವುದು.
ಈಗ ನಡೆಯುತ್ತಿರುವ ಹಿಜಾಬ್ ವಿವಾದವು, ಹಿಂದುಯೇತರರು ಅವರ ಆಚರಣೆಗಳನ್ನೂ ಮಾಡಬಾರದೆಂದು ತಾಕೀತುಗೊಳಿಸುತ್ತಿರುವ ಒಂದು ಭಾಗವಾಗಿದೆ. (ಇತ್ತೀಚೆಗೆ ಕ್ರಿಸ್‌ಮಸ್ ಆಚರಣೆಗೆ ಹಿಂದೂ ಸಂಘಟನೆಗಳು ಅಡ್ಡಿಪಡಿಸಿದ್ದು ಇಲ್ಲಿ ನೆನಪು ಮಾಡಿಕೊಳ್ಳಬಹುದು). ಗೋಮಾಂಸ ತಿನ್ನುವ ಪ್ರಕರಣವು, ಗೋವು ಹಿಂದೂಗಳಿಗೆ ಪವಿತ್ರವಾಗಿರುವುದರಿಂದ, ಹಿಂದೂಯೇತರರು ಗೋವನ್ನು ಕೊಂದು ಅದರ ಮಾಂಸವನ್ನು ಸೇವಿಸುವ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂಬ ಅಂಶದ ಮೇಲೆ ನಿಂತಿದೆ. ಆದರೆ, ಕ್ರಿಸ್‌ಮಸ್ ಆಚರಣೆ ಆಗಲಿ, ಹಿಜಾಬ್ ಆಚರಣೆ ಆಗಲಿ ಬಹುಸಂಖ್ಯಾತ ಹಿಂದೂಗಳಿಗೆ ಭಾವನಾತ್ಮಕವಾಗಿ ಘಾಸಿ ಮಾಡುವ ವಿಷಯಗಳಲ್ಲ.
ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಾಮಾನವು ಹಿಂದುತ್ವ ರಾಜಕಾರಣದ ಮೂರು ಆಯಾಮಗಳನ್ನು ತೆರೆದಿಡುತ್ತಿದೆ. ಮೊದಲನೆಯದು ಕೋಮು ವಿಭಜನೆ ಮೂಲಕ ಮತ ಕ್ರೋಢೀಕರಣ. ಅದಕ್ಕಿಂತಲೂ ಸೂಕ್ಷ್ಮವಾಗಿ ಗಮನಿಸಿದರೆ, ಇದು ಯಾರು ಭಾರತೀಯ, ಯಾರು ಭಾರತೀಯ ಅಲ್ಲ ಅನ್ನುವುದನ್ನು ಮೂಲಭೂತವಾಗಿ ನಿರ್ಧರಿಸುವ ಪ್ರಕ್ರಿಯೆ. ಇದು ಹೆಚ್ಚು ನಿರ್ಣಾಯಕ ರಾಜಕೀಯ ಆಯಾಮವಾಗಿದ್ದು, ರಾಷ್ಟ್ರವನ್ನು ರೂಪಿಸುವುದು ಮತ್ತು ಭಾರತದ ಪ್ರಜೆಗಳಾಗಿರಲು ಯಾರು ಅರ್ಹರು ಎಂಬಂತಹ ವಿಷಯಗಳ ಬಗ್ಗೆ ಇದು ಗಮನ ಸೆಳೆಯುತ್ತದೆ. ಮೂಲಭೂತ ಮಟ್ಟದಲ್ಲಿ, ಅಧಿಕೃತ ಹಿಂದೂ ಆಚರಣೆಗಳನ್ನು ಅನುಸರಿಸದವರ ಪೌರತ್ವವನ್ನು ನಿರಾಕರಿಸಲಾಗುತ್ತಿದೆ. ಹಿಂದುತ್ವದಿಂದ ಅನುಮೋದಿಸಲ್ಪಟ್ಟ ಇಂತಹ ಆಚರಣೆಗಳು ಮಾತ್ರ ಭಾರತೀಯ ಎನ್ನಲು, ಭಾರತೀಯ ಸಂಸ್ಕೃತಿ ಎನ್ನಲು ಸರ್ಕಾರವೇ ಮುಂದಾಗುತ್ತಿದೆ. ಹಿಜಾಬ್ ಭಾರತೀಯ ಸಂಸ್ಕೃತಿ ಅಲ್ಲ ಅಂತ ಹೇಳುವುದರ ಹಿಂದೆಯೂ ಇರುವುದು ಇದೇ ಹುನ್ನಾರ. ಹಿಜಾಬ್ ಅನ್ನು ಧರಿಸುವವರಲ್ಲಿ ಪರಕೀಯ ಭಾವನೆ ಮಾಡುವ, ಕೀಳರಿಮೆ ಉಂಟು ಮಾಡುವ ಹೇಳಿಕೆಗಳನ್ನು ಹಿಂದುತ್ವದ ನಾಯಕರು ಸುಮ್ಮನೆ ನೀಡುತ್ತಿಲ್ಲ.

ಹಿಂದುತ್ವವಾದಿಗಳ ಬಹುಕಾಲದ ಅಭಿಲಾಷೆ ಆಗಿರುವ ಏಕರೂಪಿ ನಾಗರಿಕ ಸಂಹಿತೆಯನ್ನು ಹಾಗೂ ಅದರ ಹಿಂದಿರುವ ಏಕಸಂಸ್ಕೃತಿಯ ಹೇರುವ ಹುನ್ನಾರವನ್ನು ಈ ಮೂಲಕ ವ್ಯಾಪಕವಾಗಿ ಪ್ರಚುರ ಪಡಿಸಲಾಗುತ್ತಿದೆ. ಸಮವಸ್ತ್ರ ಹಾಗೂ ಸಮಾನತೆಯ ಬಗ್ಗೆ ಬಲಪಂಥೀಯರು ಕಟ್ಟುತ್ತಿರುವ ನುಡಿಗಟ್ಟು ಗಮನಿಸಿದರೆ ಇದು ಮೇಲ್ನೋಟಕ್ಕೆ ಇದು ಮುಸ್ಲಿಮರ ವಿರುದ್ಧ ಎಂಬಂತೆ ಕಂಡುಬಂದಿದ್ದರೂ, ಇದು ʼಏಕಸಂಸ್ಕೃತಿʼಯ ರೂಪಕಗಳಾಗಿವೆ.
ವಿಶಾಲ ಭೌಗೋಳಿಕ ಪ್ರದೇಶದ ವಿವಿಧತೆಯನ್ನು ಹಿಂದುತ್ವ ಪರಿಕಲ್ಪನೆ ಒಪ್ಪುವುದಿಲ್ಲ. ಸ್ಥಳೀಯ ಆಚರಣೆ, ವಿವಿಧತೆ ಆರ್‌ಎಸ್‌ಎಸ್ ಹಾಗೂ ಸಂಘಪರಿವಾರದ ಹಿಂದುತ್ವಕ್ಕೆ ಒಂದು ತಡಯಾಗೆ ಇದೆ. ದೇಶದ ಬಹು ಸಂಸ್ಕೃತಿಯ ಜನಾಂಗಕ್ಕೆ “ಪ್ಯಾನ ಇಂಡಿಯಾʼ ದೇವರು ಅನ್ನುವ ಪರಿಕಲ್ಪನೆಯೇ ವ್ಯಾಪಕವಾಗಿ ಇರಲಿಲ್ಲ. ಆಯಾ ಸ್ಥಳೀಯ ಪ್ರಾದೇಶಿಕ ಜಾನಪದಗಳಿಗೆ ತಕ್ಕಂತೆ ಅಲ್ಲಿನ ಸ್ಥಳೀಯ ದೇವರು ಸೇರಿದಂತೆ ಶಿವ, ವಿಷ್ಣುವು ಮೊದಲಾದವರು ಆರಾಧಿಸಲ್ಪಡುತ್ತಾರೆ. ಆದರೆ, ಆರ್‌ಎಸ್‌ಎಸ್ ಪ್ರವರ್ಧಮಾನಕ್ಕೆ ಬಂದದ್ದೇ ದೇಶದಾದ್ಯಂತ ಶ್ರೀರಾಮನನ್ನು ʼಪ್ಯಾನ್ ಇಂಡಿಯಾʼ ದೇವರಾಗಿ ಜನರ ಮನಸ್ಸಿನಲ್ಲಿ ಪ್ರತಿಷ್ಟಾಪಿಸುವ ಮೂಲಕ ಪ್ರಾದೇಶಿಕ ದೇವಿ, ದೇವರುಗಳ ಮೌಲ್ಯವನ್ನು ಕ್ರಮೇಣ ಕ್ಷೀಣಿಸುತ್ತಾ ಬರಲಾಗುತ್ತಿದೆ. ʼರಾಮʼ ಎಂಬ ಕಲ್ಪನೆಯು ವಿಭಿನ್ನ ಸಂಸ್ಕೃತಿ, ಆರಾಧನೆಯ ಹಿಂದೂ ಜನಾಂಗವನ್ನು ಸಂಪರ್ಕಿಸುವ ಕೇಂದ್ರವಾಗುತ್ತದೆ. (ಶ್ರೀಮಚಂದ್ರನ ಬಗ್ಗೆ ಡಿಡಿಯಲ್ಲಿ ಬಂದ ಧಾರವಾಹಿ, ಅದರ ಬೆನ್ನಲ್ಲೇ ಶ್ರೀರಾಮಮಂದಿರಕ್ಕಾಗಿ ಬಾಬರಿ ಮಸೀದಿ ಧ್ವಂಸವನ್ನೆಲ್ಲಾ ಈ ಹಿನ್ನೆಲೆಯಲ್ಲಿ ಇಟ್ಟು ನೋಡಬೇಕು. ಇನ್ನು ಶ್ರೀರಾಮನ ಕಥೆಯೂ ಮಹಾಭಾರತದಂತೆ ಆಂತರಿಕ ದಾಯಾಯದಿ ಕಲಹವಲ್ಲ. ಅದು ಪರದೇಶಿ, ಸ್ತ್ರೀ ಯನ್ನು ಅಪಹರಣ ಮಾಡಿದ ರಾವಣನೊಂದಿಗೆ ನಡೆದ ಯುದ್ಧಗಳ ಬಗೆಗಿನ ಕಥಾನಕ. ಈಗ ಹಿಂದುತ್ವ ಬಳಸುತ್ತಿರುವ “ಲವ್ ಜಿಹಾದ್” ಮುಸ್ಲಿಮರು ಪರಕೀಯರು ಮೊದಲಾದ ಭಾಷೆಗಳನ್ನು ಗಮನಿಸಿ. ಒಂದಕ್ಕೊಂದು ಸಂಬಂಧವಿದೆ.)
ಪ್ರತಿಯೊಂದು ಕ್ಷೇತ್ರದಲ್ಲೂ, ಹಿಂದೂ ಎಂಬ ಕಲ್ಪನೆಯ ಈ ಏಕರೂಪೀಕರಣವು ಹಿಂದುತ್ವದ ತಿರುಳಾಗಿದೆ. ಆದ್ದರಿಂದಲೇ ಆಹಾರ ಸೇವನೆಯ ಬಗೆಗಿನ ವೈವಿಧ್ಯತೆಯ ಆಚರಣೆಗಳನ್ನು ಹಿಂದೂ ಧರ್ಮಕ್ಕೆ ವಿರುದ್ಧವೆಂದು ನಿರುತ್ಸಾಹಗೊಳಿಸಲಾಗಿದೆ ಮತ್ತು ಅನಧಿಕೃತಗೊಳಿಸಲಾಗಿದೆ. ಗೋಮಾಂಸದ ಹೊರತಾಗಿ, ಶಾಲೆಯ ಮಧ್ಯಾಹ್ನದ ಊಟದಿಂದ ಮೊಟ್ಟೆಗಳನ್ನು ಬಹಿಷ್ಕರಿಸುವ ಬಗ್ಗೆ ಚರ್ಚೆಗಳು ಕೂಡಾ ನಿಜವಾದ ಮತ್ತು ಶುದ್ಧ ಹಿಂದೂಗಳ ಹುಡುಕಾಟದಿಂದ ನಿರೂಪಿಸಲ್ಪಟ್ಟಿದೆ.

ಶುದ್ಧ ಹಿಂದೂಗಳ ಮೂಲದ ಪರಿಶೋಧಿಸುವಿಕೆಯೂ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರಹಸನದ ಮೂರನೆ ಆಯಾಮ. ಏರೂಪತೆಯ ಗೀಳಿನ ಜೊತೆಗೆ, ಹಿಂದುತ್ವದ ಸಾಂಸ್ಕೃತಿಕ ಆಚರಣೆಗಳು ಮತ್ತೊಂದು ಮಹತ್ವಾಕಾಂಕ್ಷೆಯನ್ನು ಆಧರಿಸಿವೆ. ಇದು ಸಾಮೂಹಿಕ ಮಟ್ಟದಲ್ಲಿ “ಶುದ್ಧ”, ಕಲಬೆರಕೆಯಿಲ್ಲದ ಹಿಂದೂ ಧಾರ್ಮಿಕ-ಸಾಂಸ್ಕೃತಿಕ ಅಸ್ತಿತ್ವವನ್ನು ರೂಪಿಸುವುದು. ಇದರ ಹಿಂದೆ ಜನಾಂಗೀಯ ಶ್ರೇಷ್ಟತೆಯನ್ನು ಪ್ರತಿಶ್ಟಾಪಿಸುವಂತಹ ಕಾರ್ಯತಂತ್ರವೂ ಇದೆ. ಆರ್ಯನ್ ಶುದ್ಧ ರಕ್ತದ ಜನಾಂಗೀಯವಾದವು ನಾಝಿಗಳಲ್ಲಿದ್ದ ಹಾಗೆಯೇ ಶುದ್ಧ ರಕ್ತದ ಪರಿಕಲ್ಪನೆಯನ್ನು ಇಲ್ಲಿ ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತಿದೆ. ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಈ ಶುದ್ಧತೆಯನ್ನು ಪ್ರತಿಪಾದಿಸಲೂಬಹುದು. ಉದಾಹರಣೆಗೆ, ಖುಜರಾಹೋ ಅನ್ನು ಅಪಮೌಲ್ಯಗೊಳಿಸುವುದು, ಇತ್ತೀಚಿನ ಕಾಮಸೂತ್ರ ಪುಸ್ತಕ ಮಳಿಗೆ ಮೇಲಿನ ದಾಳಿ ಎಲ್ಲಾ ಇದರಿಂದ ಪ್ರಚೋದಿತಗೊಂಡಿದೆ.
ಒಟ್ಟಾರೆ, ಈ ಎಲ್ಲಾ ಆಯಾಮಗಳಿಂದಲೂ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಮೇಲಿನ ನಿಷೇಧವನ್ನು, ಅದು ಸೃಷ್ಟಿಸಿರುವ ಉದ್ವಿಗ್ನತೆಯನ್ನೂ ಗಮನಿಸಬೇಕು. ಆಗ ಮಾತ್ರ ಭಾರತದ ನಿಜವಾದ ಸಂಸ್ಕೃತಿಯನ್ನು ಛಿದ್ರಗೊಳಿಸುವ ಅಂಶ ಮನದಟ್ಟಾಗುತ್ತದೆ.