ಬೀದರ್ ನಲ್ಲಿ (Bidar) ಜನಿವಾರ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿಗಯೊಬ್ಬರಿಗೆ ಸಿಇಟಿ ಪರೀಕ್ಷೆಗೆ (CET Exams) ಅವಕಾಶ ಕೊಡದ ಘಟನೆ,ಜೊತೆಗೆ ಶಿವಮೊಗ್ಗದಲ್ಲಿ (Shimoga) ವಿದ್ಯಾರ್ಥಿಯೊಬ್ಬನ ಜನಿವಾರ ಕಿತ್ತೆಸೆಯಲು ದರ್ಪ ಮೆರೆದ ಘಟನೆಗೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ .ವೈ ವಿಜಯೇಂದ್ರ (BY Vijayendra) ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ರೀತಿಯ ದರ್ಪದ ವರ್ತನೆಯಿಂದ ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿದ ಅಧಿಕಾರಿ,ಸಿಬ್ಬಂದಿಗಳ ವರ್ತನೆ ಅತ್ಯಂತ ಹೇಯವಾದದ್ದು. ಈ ರೀತಿಯ ಬೌದ್ಧಿಕ ವಿಕೃತಿ ಹಾಗೂ ಮನುಷ್ಯತ್ವ ಇಲ್ಲದ ನಡೆ ಇನ್ನೊಂದಿರಲಾರದು, ಇದು ಕಾಂಗ್ರೆಸ್ ಸರ್ಕಾರದ ಹೀನ ಮನಸ್ಥಿತಿಯ ಮುಖವಾಡವನ್ನು ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲ್ಯದಿಂದಲೂ ಕನಸು ಕಟ್ಟಿಕೊಂಡು ಭವಿಷ್ಯದ ತಿರುವಿನಲ್ಲಿ ಆಘಾತ ಎದುರಿಸಿ ವಿದ್ಯಾರ್ಥಿಯೊಬ್ಬನ ಇಂಜಿನಿಯರಿಂಗ್ ಪದವಿಯ ಕನಸಿನ ಮೇಲೆ ಅಟ್ಟಹಾಸಗೈದ ಸಿಇಟಿ ಪರೀಕ್ಷಾ ಸಿಬ್ಬಂದಿಯ ವರ್ತನೆ ಅತ್ಯಂತ ಖಂಡನೀಯ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಪರೀಕ್ಷೆ ಹಾಗೂ ಸಂದರ್ಶನ ಎದುರಿಸುವ ವೇಳೆ ಕೆಲ ವಸ್ತುಗಳನ್ನು ಕೊಂಡೊಯ್ಯುವುದು ನಿಷಿದ್ಧ, ಆದರೆ ಜನಿವಾರ ತೊಡುವುದು ಒಂದು ಕುಟುಂಬ ಹಾಗೂ ಭಾರತೀಯ ಸಮುದಾಯದ ಆಚಾರ ವಿಚಾರಕ್ಕೆ ಸಂಬಂಧಿಸಿದ್ದು, ವಿದ್ಯಾರ್ಥಿ ಬರೆಯುವ ಪರೀಕ್ಷೆಯ ಮೇಲೆ ಜನಿವಾರ ಏನು ಪ್ರಭಾವ ಅಥವಾ ಪರಿಣಾಮ ಬೀರುತ್ತದೆ? ಎಂಬುದಕ್ಕೆ ಸಂಬಂಧಿಸಿದ ಸಚಿವರು ಹಾಗೂ ಸರ್ಕಾರ ಉತ್ತರಿಸಬೇಕು. ಶಿಕ್ಷಣವೆಂದರೆ ಸಂಸ್ಕಾರ, ಅದು ಇಲ್ಲದವರು ಶಿಕ್ಷಣ ಖಾತೆಯನ್ನು ನಿರ್ವಹಿಸಿದರೆ ಏನು ಪರಿಣಾಮ ಬೀರಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಮುಖ್ಯಮಂತ್ರಿಗಳು ಈ ಸಂಬಂಧವಾಗಿ ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿ ಹಿಂದೂ ಸಂಪ್ರದಾಯದ ಆಚಾರ ವಿಚಾರವನ್ನು ಅಪಮಾನಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಲಿ. ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳಿಗೆ ಮಾರ್ಗದರ್ಶನ ತೋರುವ ಸಭ್ಯ ಬ್ರಾಹ್ಮಣ ಸಮುದಾಯವನ್ನು ಅಪಮಾನಿಸಿರುವ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಬೇಷರತ್ ಕ್ಷಮೆಯಾಚಿಸಲಿ ಎಂದು ಬಿ.ವಿ ವಿಜಯೇಂದ್ರ ಆಗ್ರಹಿಸಿದ್ದಾರೆ.