ಬೆಲೆ ಏರಿಕೆ, ಹಣದುಬ್ಬರ ಮತ್ತು ಕರೋನಾ ಸಂಕಷ್ಟದ ನಡುವೆ ಮತ್ತೊಂದು ಬಜೆಟ್ ಮಂಡನೆಯಾಗಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ಬೆಲೆ ಏರಿಕೆಯ ಜೊತೆಗೆ ಧವಸಧಾನ್ಯ, ಎಣ್ಣೆ, ಕಾಳುಬೇಳೆ, ತರಕಾರಿ, ಹಣ್ಣುಹಂಪಲು ಬೆಲೆ ಕೂಡ ಭಾರೀ ಏರಿಕೆಯಾಗಿದ್ದರೆ, ಮತ್ತೊಂದು ಕಡೆ ಕರೋನಾ ಮತ್ತು ಲಾಕ್ ಡೌನ್ ಕಾರಣದಿಂದಾಗಿ ಜನಸಾಮಾನ್ಯರು ವೇತನ ಕಡಿತ, ಉದ್ಯೋಗ ನಷ್ಟದಂತಹ ಸಂಕಷ್ಟಕ್ಕೆ ಸಿಲುಕಿ ಹೈರಾಣಾಗಿದ್ದಾರೆ. ಇಂತಹ ಹೊತ್ತಲ್ಲಿ ದೇಶದ ಜನರಿಗೆ ಉದ್ಯೋಗ ಭದ್ರತೆ, ತೆರಿಗೆ ಭಾರ ಕಡಿತ ಮತ್ತು ಆರೋಗ್ಯ ಮತ್ತು ಆಹಾರದ ಖಾತರಿಪಡಿಸುವ ಬಜೆಟ್ ಎಲ್ಲರ ನಿರೀಕ್ಷೆಯಾಗಿತ್ತು.
ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿರುವ ಬಜೆಟ್ ನಲ್ಲಿ ಬಡವರು, ಕೃಷಿಕರು, ಮಹಿಳೆಯರು ಸೇರಿದಂತೆ ಜನಸಾಮಾನ್ಯರ ಬದುಕಿಗೆ ಆಸರೆಯಾಗುವ, ಅವರ ನೋವು ನಿವಾರಿಸುವ ಯಾವ ಮುಲಾಮೂ ಇಲ್ಲ. ಬದಲಾಗಿ, ಗ್ರಾಮೀಣ ಬಡವರ ಅನ್ನಕ್ಕೆ ಕಲ್ಲು ಹಾಕುವ, ರೈತರ ಕೃಷಿಗೆ ಮುಳ್ಳು ಬಡಿಯುವ ಪ್ರಸ್ತಾವನೆಗಳೇ ಬಜೆಟ್ ನಲ್ಲಿ ಹೆಚ್ಚಿವೆ. ಜೊತೆಗೆ ದೇಶದ ಶ್ರೀಮಂತ ಕಾರ್ಪೊರೇಟ್ ಕುಳಗಳಿಗೆ ಇನ್ನಷ್ಟು ತೆರಿಗೆ ವಿನಾಯ್ತಿ, ಅವರ ಖರೀದಿ ಮತ್ತು ಹೂಡಿಕೆಗೆ ಇನ್ನಷ್ಟು ಅನುಕೂಲಕರ ಪ್ರಸ್ತಾವನೆಗಳನ್ನು ಘೋಷಿಸಲಾಗಿದೆ.
ಅದು ಉದ್ಯೋಗ ಖಾತರಿ ಯೋಜನೆಗೆ ಅನುದಾನ ಕಡಿತವಿರಬಹುದು, ಕೃಷಿ ವಲಯ ಮತ್ತು ಮುಖ್ಯವಾಗಿ ಕನಿಷ್ಟ ಬೆಂಬಲ ಬೆಲೆ ಮತ್ತು ರಸಗೊಬ್ಬರಗಳಿಗೆ ಅನುದಾನ ಕಡಿತವಿರಬಹುದು, ಆಹಾರ ಭದ್ರತಾ ಯೋಜನೆಗೆ ಅನುದಾನ ಕಡಿತವಿರಬಹುದು,.. ಎಲ್ಲವೂ ಅಂತಿಮವಾಗಿ ಗ್ರಾಮೀಣ ಬಡವರು ಮತ್ತು ಕೃಷಿಕರ ಬದುಕಿನ ಮೇಲೆ ಕೊಡುವ ಪೆಟ್ಟುಗಳೇ. ಅದರಲ್ಲೂ ಕರೋನಾ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ನಿಂದಾಗಿ ಈಗಾಗಲೇ ನೆಲಕಚ್ಚಿರುವ ಗ್ರಾಮೀಣ ಆರ್ಥಿಕತೆಯನ್ನು ಉಸಿರುಗಟ್ಟಿಸುವ ಇಂತಹ ಕ್ರಮಗಳು ಅಂತಿಮವಾಗಿ ದೇಶದ ಶೇ.60ರಷ್ಟಿರುವ ಇಡೀ ಗ್ರಾಮೀಣ ಜನಜೀವನವನ್ನೇ ನೆಲ ಹಿಡಿಸಲಿವೆ.
Also Read : Central Budget 2022 | ಜನಸಾಮಾನ್ಯರ ನಿರೀಕ್ಷೆ ಹುಸಿಗೊಳಿಸಿದ ಬಜೆಟ್, ತಂತ್ರಜ್ಞಾನಾಧಾರಿತ ಅಭಿವೃದ್ಧಿಗೆ ಒತ್ತು
ಮುಖ್ಯವಾಗಿ ಕಳೆದ ಎರಡು ವರ್ಷಗಳ ಕರೋನಾ ಲಾಕ್ ಡೌನ್ ನಡುವೆಯೂ ಗ್ರಾಮೀಣ ಜನತೆಯನ್ನು ಜೀವಂತವಾಗಿಟ್ಟ ಗ್ರಾಮೀಣ ಬದುಕು ಮತ್ತು ಆರ್ಥಿಕತೆಯ ಜೀವನಾಡಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಕಳೆದ ಬಾರಿಗಿಂತ ಶೇ.25ರಷ್ಟು ಅನುದಾನ ಕಡಿತ ಮಾಡಲಾಗಿದೆ. ಅದರ ಹಿಂದಿನ ಬಾರಿಗಿಂತ ಕಳೆದ ಬಾರಿ ಸುಮಾರು 37 ಸಾವಿರ ಕೋಟಿ ರೂ. ಅನುದಾನ ಕಡಿತ ಮಾಡಿದ್ದ ಸರ್ಕಾರ, ಈ ಬಾರಿ ಮತ್ತೆ 25 ಸಾವಿರ ಕೋಟಿ ರೂ. ಕಡಿತ ಮಾಡಿ, 98 ಸಾವಿರ ಕೋಟಿಯಿಂದ 73 ಸಾವಿರ ಕೋಟಿಗೆ ಅನುದಾನ ಕುಗ್ಗಿಸಿದೆ. ಜೊತೆಗೆ ಉದ್ಯೋಗ ಖಾತರಿ ಕೂಲಿದಾರರಿಗೆ ಇನ್ನೂ ಪಾವತಿಸಬೇಕಾದ 12,300 ಕೋಟಿ ರೂ. ಬಾಕಿ ಇದೆ. ಅಂದರೆ, ಅಲ್ಲಿಗೆ ಒಟ್ಟಾರೆ ಕಡಿತದ ಪ್ರಮಾಣ ಕಳೆದ ಬಾರಿಯಷ್ಟೇ ಆಗಲಿದೆ!
ಇದು ದೇಶದ ಶೇ.60ಕ್ಕಿಂತ ಅಧಿಕ ಜನಸಂಖ್ಯೆ ಬದುಕಿನ ಪ್ರಶ್ನೆಯಾದ ಒಂದು ಮಹತ್ವದ ಯೋಜನೆಯ ವಿಷಯದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಧೋರಣೆಗೆ ಹಿಡಿದ ಕನ್ನಡಿ. ಇನ್ನು ಅದೇ ಗ್ರಾಮೀಣ ಬಡವರು ಮತ್ತು ಕೃಷಿ ಕೂಲಿಗಳು, ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರ ಬದುಕಿನ ಮತ್ತೊಂದು ಆಸದೆ ಪಡಿತರ ವ್ಯವಸ್ಥೆಯ ಮೂಲಕ ಆಹಾರ ಧಾನ್ಯ ಸರಬರಾಜು ವ್ಯವಸ್ಥೆ. ಕರೋನಾ ಮತ್ತು ಲಾಕ್ ಡೌನ್ ಸಂಕಷ್ಟದ ಹೊತ್ತಲ್ಲಿ ಆ ವ್ಯವಸ್ಥೆ ಕೂಡ ಗ್ರಾಮೀಣ ಜನರನ್ನು ಅನಾಹುತದಿಂದ, ಸಾವಿನ ದವಡೆಯಿಂದ ಪಾರು ಮಾಡಿದ ಒಂದು ಮಹತ್ವದ ಯೋಜನೆ ಎಂಬುದು ಎರಡು ವರ್ಷಗಳಲ್ಲಿ ಸಾಬೀತಾಗಿರುವ ಸಂಗತಿ. ಹಾಗಾಗಿ ಸಹಜವಾಗೇ ಯಾವುದೇ ಜನಪರ ಮತ್ತು ಬಡವರ ಪರ ಸರ್ಕಾರ ಇಂತಹ ಸಂಕಷ್ಟದ ಹೊತ್ತಲ್ಲಿ ಜನರ ಜೀವ ಉಳಿಸುವ ಅಂತಹ ಯೋಜನೆಗೆ ಹೆಚ್ಚುವರಿ ಅನುದಾನ ನೀಡಬೇಕು. ಆದರೆ, ಮೋದಿ ಸರ್ಕಾರ ಆ ಯೋಜನೆಗೆ ಅನುದಾನ ನೀಡುವ ಬದಲಾಗಿ ಮಾಮೂಲಿ ಸಬ್ಸಿಡಿಯ ಮೊತ್ತವನ್ನೂ ಕಡಿತ ಮಾಡಿದೆ!
ಆಹಾರ ಭದ್ರತೆ ಯೋಜನೆಯಡಿ ಬರುವ ಪಡಿತರ ವ್ಯವಸ್ಥೆಯ ಅನುದಾನದಲ್ಲಿ ಕೂಡ ಈ ಬಾರಿಯ ಬಜೆಟ್ ಶೇ.27ಕ್ಕಿಂತ ಅಧಿಕ ಪ್ರಮಾಣದಲ್ಲಿ ಸಬ್ಸಿಡಿ ಕಡಿತ ಮಾಡಿದೆ. ಕಳೆದ ವರ್ಷ ಆಹಾರ ಸಬ್ಸಿಡಿ ಮೊತ್ತ 2.86 ಲಕ್ಷ ಕೋಟಿ ಇದ್ದಿದ್ದು, ಈ ಬಾರಿ ಕೇವಲ 2.06 ಲಕ್ಷ ಕೋಟಿಗೆ ಕಡಿತವಾಗಿದೆ. ಅಂದರೆ; ಗ್ರಾಮೀಣ ಬಡವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕುವುದು ಕೇಂದ್ರ ಸರ್ಕಾರದ ಈ ಬಜೆಟ್ ಉದ್ದೇಶದಂತಿದೆ.
ಇನ್ನು ಗ್ರಾಮೀಣ ಬದುಕಿಗೆ ಚೈತನ್ಯ ತುಂಬುವ ಮತ್ತೊಂದು ಯೋಜನೆ ಕೃಷಿ ಸಬ್ಸಿಡಿ ಯೋಜನೆ. ಅದರಲ್ಲೂ ಮುಖ್ಯವಾಗಿ ರಾಸಾಯನಿಕ ಗೊಬ್ಬರಕ್ಕೆ ನೀಡುವ ಸಬ್ಸಿಡಿ ಬಹುತೇಕ ಕೃಷಿಯ ಆಸರೆ. ಸಬ್ಸಿಡಿ ರಹಿತ ರಸಗೊಬ್ಬರದ ಬೆಲೆಯನ್ನು ಹತ್ತು ವರ್ಷಗಳಲ್ಲಿ ಹತ್ತಾರು ಪಟ್ಟು ಹೆಚ್ಚಿಸಿರುವ ಸರ್ಕಾರ, ಆ ನಿಟ್ಟಿನಲ್ಲಿ ನೀಡುವ ಸಬ್ಸಿಡಿಯೇ ಸಣ್ಣ ಮತ್ತು ಮಧ್ಯರ ರೈತರನ್ನು ಸಂಕಷ್ಟದಿಂದ ಪಾರು ಮಾಡುವ ನೆರವು. ಕರೋನಾ ಲಾಕ್ ಡೌನ್ ನಿಂದಾಗಿ ವ್ಯಾಪಾರ ವ್ಯವಹಾರ ಮತ್ತು ಸರಕು ಸಾಗಣೆ ವ್ಯವಸ್ಥೆಯೇ ಬುಡಮೇಲಾದ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳ ತೀವ್ರ ಬೆಲೆ ಕುಸಿತದ ಸಂಕಷ್ಟದಲ್ಲಿರುವ ರೈತನಿಗೆ ಇಂತಹ ಸಬ್ಸಿಡಿಯ ಮೂಲಕ ಸರ್ಕಾರ ಆಸರೆಯಾಗಿ ನಿಲ್ಲಬೇಕಿತ್ತು. ಆದರೆ, ಮೋದಿಯವರ ಸರ್ಕಾರ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ರಾಸಾಯನಿಕ ಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕೂಡ ಶೇ.25ರಷ್ಟು ಕಡಿತ ಮಾಡಿದ್ದು, ಕಳೆದ ವರ್ಷದ 1.45 ಲಕ್ಷ ಕೋಟಿ ಅನುದಾನಕ್ಕೆ ಬದಲಾಗಿ ಈ ಬಾರಿ ಕೇವಲ 1.05 ಲಕ್ಷ ಕೋಟಿ ಅನುದಾನ ಘೋಷಿಸಲಾಗಿದೆ!
Also Read : ದೇಶದ ಜ್ವಲಂತ ಸಮಸ್ಯೆಗಳನ್ನು ಬಿಂಬಿಸದೇ ‘ಸುಭಿಕ್ಷತೆ’ಯ ಲೇಪನ ಹಚ್ಚಿದ ಆರ್ಥಿಕ ಸಮೀಕ್ಷೆ
ಇನ್ನು ಗ್ರಾಮೀಣ ಪ್ರದೇಶದ ಕೃಷಿಕರು, ಬಡವರನ್ನು ಹೊರತುಪಡಿಸಿ ನಗರವಾಸಿ ಮಧ್ಯಮವರ್ಗಕ್ಕಾದರೂ(ಬಿಜೆಪಿಯ ಮತಬ್ಯಾಂಕ್) ಮೋದಿಯವರ ಸರ್ಕಾರ ಬದುಕನ್ನು ಹಗುರ ಮಾಡುವ ಏನಾದರೂ ಮಾಡಿದೆಯೇ ಎಂದರೆ ಅದೂ ಕೂಡ ಇಲ್ಲ! ವೇತನದಾರರ ತೆರಿಗೆಯಲ್ಲಾಗಲೀ, ಪಿಂಚಣಿದಾರರ ತೆರಿಗೆಯಲ್ಲಾಗಲೀ ಯಾವುದೇ ರಿಯಾಯ್ತಿ, ಕಡಿತ ಮಾಡಿಲ್ಲ! ಬದಲಾಗಿ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ದಿನಬಳಕೆ ವಸ್ತುಗಳು ಮತ್ತು ಅಗತ್ಯ ಸಾಮಗ್ರಿಗಳ ಮತ್ತಷ್ಟು ಬೆಲೆ ಏರಿಕೆಯ ಬರೆ ಬೀಳುವ ಆತಂಕದ ಸೂಚನೆಯನ್ನು ಈ ಬಜೆಟ್ ದೇಶದ ಜನತೆಗೆ ಕೊಡುಗೆಯಾಗಿ ನೀಡಿದೆ.
ಕರೋನಾದಂತಹ ಸಾಂಕ್ರಾಮಿಕದಿಂದಾಗಿ ದೇಶದ ಬಡವರು ಮತ್ತು ಮಧ್ಯಮವರ್ಗ ಒಂದು ಕಡೆ ಆರೋಗ್ಯ ವೆಚ್ಚದ ಆಘಾತ ಮತ್ತು ಮತ್ತೊಂದು ಕಡೆ ದುಡಿಮೆ ಇಲ್ಲದೆ ಸಂಪಾದನೆ ಕೈತಪ್ಪಿದ ಆತಂಕದಲ್ಲಿರುವಾಗ ಅಂಥ ಜನರ ನೆರವಿಗೆ ಬರಬೇಕಿದ್ದ ಸರ್ಕಾರ, ಅಂತಹ ಯಾವ ಕ್ರಮಗಳನ್ನೂ ಘೋಷಿಸದೆ ಜನರ ಸಂಕಷ್ಟಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ 25 ವರ್ಷದ ಮುಂದಿನ ಭವಿಷ್ಯದ ಬಗ್ಗೆ ಹುಸಿ ಕನಸುಗಳನ್ನು ಬಿತ್ತುತ್ತಿದೆ. ವಾಸ್ತವವಾಗಿ ಕರೋನಾ ಸಾಂಕ್ರಾಮಿಕದ ಸಂಕಷ್ಟಗಳು ದೇಶವ್ಯಾಪಿ ಸಾಮಾನ್ಯ ಕನಿಷ್ಟ ಆರೋಗ್ಯ ಸೇವೆ ಖಾತರಿಯ ಯೋಜನೆ ಜಾರಿಗೆ ಸರ್ಕಾರವನ್ನು ಪ್ರೇರೇಪಿಸಬೇಕಿತ್ತು. ಬಡವ ಬಲ್ಲಿದ ಎಂದು ನೋಡದೆ ದೇಶದ ಎಲ್ಲ ಜನಸಾಮಾನ್ಯರಿಗೆ ಕನಿಷ್ಟ ಆರೋಗ್ಯ ವೆಚ್ಚವನ್ನು ಸರ್ಕಾರವೇ ಭರಿಸುವ ಯೂನಿವರ್ಸಲ್ ಹೆಲ್ತ್ ಸ್ಕೀಂ ಜಾರಿಗೆ ಮುಂದಾಗಬೇಕಿತ್ತು. ಜೊತೆಗೆ ಆರೋಗ್ಯ ಸೇವೆಯನ್ನು ರಾಷ್ಟ್ರೀಕರಣ ಮಾಡುವ ಮೂಲಕ ಬಡವರಿಗೂ ಗುಣಮಟ್ಟದ ಚಿಕಿತ್ಸೆ ಮತ್ತು ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವುದು ಇಂತಹ ಹೊತ್ತಿನಲ್ಲಿ ಕನಿಷ್ಟ ಮನುಷ್ಯತ್ವದ ಯಾವುದೇ ಆಡಳಿತದ ಆದ್ಯತೆಯಾಗಬೇಕಿತ್ತು. ಆದರೆ, ಅದಕ್ಕೆ ಬದಲಾಗಿ ಮೋದಿಯವರ ಆಡಳಿತ ಆರೋಗ್ಯ ವಲಯದಲ್ಲಿ ಖಾಸಗಿ ಹೂಡಿಕೆ ಮತ್ತು ಪ್ರಭಾವಕ್ಕೆ ರತ್ನಗಂಬಳಿ ಹಾಸುವ ನೀತಿಗಳನ್ನು ಪ್ರಕಟಿಸಿದೆ.
ದೇಶದ ಬಡವರು ಮತ್ತು ಜನಸಾಮಾನ್ಯರ ವಿಷಯದಲ್ಲಿ ಇಷ್ಟು ಕಠಿಣವಾಗಿರುವ ಮೋದಿಯವರ ಆಡಳಿತ, ಅದೇ ಹೊತ್ತಿಗೆ ದೇಶದ ಶೇ.10ರಷ್ಟು ಕೂಡ ಇಲ್ಲದ ಅತಿ ಶ್ರೀಮಂತರು ಮತ್ತು ಕಾರ್ಪೊರೇಟ್ ಕುಳಗಳ ಪರ ಔದಾರ್ಯ ಮೆರೆದಿದೆ. ಕಾರ್ಪೊರೇಟ್ ತೆರಿಗೆಯನ್ನು ಈ ಮೊದಲಿನ ಶೇ.12ರಿಂದ ಶೇ.7ಕ್ಕೆ ಕಡಿತ ಮಾಡಿ, ಬರೋಬ್ಬರಿ ಶೇ.5ರಷ್ಟು ರಿಯಾಯ್ತಿ ಘೋಷಿಸಿದೆ. ಜೊತೆಗೆ ಶ್ರೀಮಂತರ ಖರೀದಿ ವಸ್ತುಗಳಾದ ವಜ್ರ, ಹರಳುಗಳ ಮೇಲೆ ಶೇ.7.5ರಿಂದ 5ಕ್ಕೆ ಸುಂಕ ಕಡಿತ ಮಾಡಲಾಗಿದೆ!
Also Read : 2022ರ ಕೇಂದ್ರ ಬಜೆಟ್ ರೂಪಿಸಿದ ಐವರು ಪ್ರಮುಖ ಅಧಿಕಾರಿಗಳ ಬಗ್ಗೆ ನಿಮಗೆಷ್ಟು ಗೊತ್ತು? : ಇಲ್ಲಿದೆ ಸಂಪೂರ್ಣ ವರದಿ!
ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಸಮಾನತೆಯ ಕಂದಕ ಆತಂಕಕಾರಿ ಪ್ರಮಾಣದಲ್ಲಿ ಹಿಗ್ಗುತ್ತಿದೆ. ಆದಾಯ ಮತ್ತು ಸಂಪತ್ತಿನ ಹಂಚಿಕೆಯಲ್ಲಿನ ಈ ಅಸಮಾನತೆ ದೇಶದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಸೂಚನೆ ಎಂದು ಹಲವು ತಜ್ಞರು ಅಭಿಪ್ರಾಯಪಡುತ್ತಿರುವ ಹೊತ್ತಿನಲ್ಲಿ; ದೇಶದ ಶೇ.10ರಷ್ಟಿರುವ ಅತಿ ಶ್ರೀಮಂತರು ದೇಶದ ಸಂಪತ್ತಿನ ಶೇ.75ರಷ್ಟರ ಒಡೆತನ ಹೊಂದಿದ್ದರೆ, ಇನ್ನುಳಿದ ಶೇ.60ರಷ್ಟಿರುವ ಜನಸಾಮಾನ್ಯರು ಕೇವಲ ಶೇ.5ರಷ್ಟು ಸಂಪತ್ತಿನಲ್ಲೇ ಹಂಚಿಕೊಳ್ಳುತ್ತಿದ್ದಾರೆ. ಕರೋನಾ ಸಾಂಕ್ರಾಮಿಕದ ಹೊತ್ತಲ್ಲಿ ಕೂಡ ಇಡೀ ದೇಶದ ಜನತೆ ಆರ್ಥಿಕ ಮತ್ತು ದೈಹಿಕ ಸಂಕಷ್ಟದಲ್ಲಿ ನರಳುತ್ತಿರುವಾಗ ಕೂಡ ದೇಶದ ಕಾರ್ಪೊರೇಟ್ ಕುಳಗಳ ಆದಾಯ ಹತ್ತಾರು ಪಟ್ಟು ವೃದ್ಧಿಸಿದೆ ಎಂದು ವಿವಿಧ ಸಮೀಕ್ಷೆಗಳೇ ಹೇಳಿದ್ದವು.
ಇಂತಹ ಎಚ್ಚರಿಕೆಗಳ ಹೊರತಾಗಿಯೂ ಮೋದಿಯವರ ಆಡಳಿತ ಸಂಕಷ್ಟದ ಹೊತ್ತಲ್ಲಿ ಮಂಡಿಸಿದ ಬಜೆಟ್ ಯಾರ ಪರ ಇದೆ? ಯಾರಿಗಾಗಿ ಈ ಬಜೆಟ್ ? ಎಂಬ ಪ್ರಶ್ನೆಗಳು ಏಳುವುದು ಸಹಜ. ನಿರುದ್ಯೋಗ, ಬಡತನ, ದುಬಾರಿ ದಿನಗಳು, ಕೃಷಿ ಉತ್ಪನ್ನ ಬೆಲೆ ಕುಸಿತ, ಹೀಗೆ ಹತ್ತು ಹಲವು ಸಂಕಷ್ಟಗಳ ನಡುವೆ ಬೇಯುತ್ತಿರುವ ಭಾರತಕ್ಕೆ ಮೋದಿಯವರು ದಯಪಾಲಿಸಿದ ಬಜೆಟ್ ಬಡವರ, ರೈತರ ಕಣ್ಣೀರು ಒರೆಸುವ ಬಜೆಟ್ ಆಗಿರಬಹುದು ಎಂಬ ನಿರೀಕ್ಷೆ ಕೆಲವರಿಗಾದರೂ ಇತ್ತು.
ಆದರೆ, ಅಂತಿಮವಾಗಿ ಬಜೆಟ್ ಯಾರ ಪರ ಎಂಬುದು ಗೊತ್ತಾಗಿದೆ. ಶ್ರೀಮಂತರ ಐಷಾರಾಮಿ ವಜ್ರ-ವೈಢೂರ್ಯಗಳ ಮೇಲೆ ತೆರಿಗೆ ಕಡಿತ ಮಾಡಿ, ಬಡವರ ಕೊಡೆ(ಛತ್ರಿ)ಯ ಮೇಲೆ ಶೇ.20ರಷ್ಟು ತೆರಿಗೆ ಹೆಚ್ಚಿಸಿರುವ ಒಂದು ಕ್ರಮ ಬಹಳ ಮಾರ್ಮಿಕವಾಗಿದೆ. ಇಡೀ ಬಜೆಟ್ಟಿನ ಒಂದು ರೂಪಕವೆಂಬಂತೆ ಇರುವ ಆ ಕ್ರಮ, ಮೋದಿಯವರ ಬಜೆಟ್ ಎಷ್ಟು ‘ಜನಪರ’ ಎಂಬುದನ್ನು ಸಾರಿ ಹೇಳುತ್ತಿದೆ! ಸಚಿವೆ ನಿರ್ಮಲಮ್ಮನವರೇ ನಿಜಕ್ಕೂ ಇದು ಯಾರ ಬಜೆಟ್ ಎಂಬ ಪ್ರಶ್ನೆಗೆ ಉತ್ತರವೂ ಅದರಲ್ಲಿದೆ.