
ಯುಪಿಐ ಮೂಲಕ ವಿದ್ಯುತ್ ಗ್ರಾಹಕರು ತಮ್ಮ ಮನೆಯ, ಕಚೇರಿಯ ಬಿಲ್‌ಗಳನ್ನು ಪಾವತಿಸಲು ಯಾಕೆ ಅನುಮತಿ ನೀಡುತ್ತಿಲ್ಲ ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ. ಈ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ (BESCOM) ನಿರ್ದೇಶನ ನೀಡಿದೆ. ಹೈಕೋರ್ಟ್ ನ್ಯಾಯಮೂರ್ತಿ ಎನ್.ಎಸ್ ಸಂಜಯ್ ಗೌಡ ಅವರ ಪೀಠ ವಿಚಾರಣೆ ವೇಳೆ ಬೆಸ್ಕಾಂಗೆ ಈ ರೀತಿಯ ನಿರ್ದೇಶನ ನೀಡಿದೆ.
ಇಡೀ ಜಗತ್ತು ಆನ್‌ಲೈನ್ ಮೂಲಕ ಸಾಗುತ್ತಿದೆ. ನೀವಿನ್ನು ಯಾಕೆ ಗ್ರಾಹಕರು ಆನ್‌ಲೈನ್ ಪಾವತಿಗೆ ಕೋರ್ಟ್‌ನಲ್ಲಿ ರಿಟ್ ಹಾಕುವಂತೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಗ್ರಾಹಕರು ಬಿಲ್ ಪಾವತಿಸಲು ಸಿದ್ಧರಿದ್ದಾರೆ. ಸರ್ಕಾರವು ಎಲ್ಲಾ ಕಡೆಯಲ್ಲೂ ಆನ್‌ಲೈನ್ ಪಾವತಿ ಪರಿಚಯಿಸುತ್ತಿದೆ. ನಾಗರಿಕರನ್ನು ಡಿಜಿಟಲೀಕರಣ ಮಾಡಲು ಕೇಳುತ್ತಿದೆ. ಆದರೆ ನೀವಿನ್ನೂ ನೋಟುಗಳ ಮೂಲಕ ಹಳೇ ಕಾಲಕ್ಕೆ ವಾಪಸ್ ಆಗಲು ಬಯಸುತ್ತಿದ್ದೀರಾ..? ಎಂದು ಪ್ರಶ್ನಿಸುವ ಜೊತೆಗೆ, ಈ ಯುಗದಲ್ಲಿ ಬೆಸ್ಕಾಂ ಯುಪಿಐ ಮೂಲಕ ಹಣವನ್ನು ಸ್ವೀಕರಿಸಲು ನಿರಾಕರಿಸುತ್ತಿರುವುದು ವಿಚಿತ್ರ ಎಂದಿದೆ.
ಹೊಸ ವಿದ್ಯುತ್ ಸಂಪರ್ಕ ಸೇರಿದಂತೆ ಪ್ರೀಪೇಯ್ಡ್ ಮೀಟರ್ ಗ್ರಾಹಕರು ಯುಪಿಐ ಬಳಸಿ ಪಾವತಿ ಮಾಡಲು ಬೆಸ್ಕಾಂಗೆ ಅನುಮತಿ ನೀಡುವಂತೆ ಸೀತಾಲಕ್ಷ್ಮಿ ಎಂಬುವರು ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದು, ಆ ಅರ್ಜಿ ವಿಚಾರಣೆ ವೇಳೆಯಲ್ಲಿ ಕರ್ನಾಟಕ ಹೈಕೋರ್ಟ್ ವಿಸ್ತಾರವಾದ ಅಫಿಡವಿಟ್ ಸಲ್ಲಿಸುವಂತೆ ಸೂಚನೆ ಕೊಟ್ಟಿದೆ. ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದ ಮಂಡಿಸಿದ್ದಾರೆ. ಬೆಸ್ಕಾಂ ವಿದ್ಯುತ್ ಪೂರೈಕೆ ಮತ್ತು ಪೂರ್ವಪಾವತಿ ಮೀಟರ್ ಒದಗಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಬಗ್ಗೆ ಅರ್ಜಿದಾರರು ಬೆಸ್ಕಾಂ ಸಂಪರ್ಕಿಸಿ ಯುಪಿಐ ಬಳಸಿ ಕ್ಯಾಶ್ ಕೌಂಟರ್‌ನಲ್ಲಿ ಬಿಲ್ ಮೊತ್ತವನ್ನು ಪಾವತಿಸಲು ಪ್ರಯತ್ನಿಸಿದ್ದಾರೆ. ಆ ವೇಳೆ ಅಂತಹ ಸೌಲಭ್ಯ ಲಭ್ಯವಿಲ್ಲ ಎಂದು ಅವರಿಗೆ ಬೆಸ್ಕಾಂನಲ್ಲಿ ತಿಳಿಸಲಾಗಿದೆ. ಈ ವೇಳೆ ಬೆಸ್ಕಾಂ ಪರ ವಕೀಲರು ಪ್ರಸ್ತುತ, ಗ್ರಾಹಕರು ಬಿಲ್ ಪಾವತಿಗಾಗಿ ಬೆಸ್ಕಾಂ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ್ದರೆ ಮಾತ್ರ ಯುಪಿಐ ಪಾವತಿ ಸ್ವೀಕಾರ ಮಾಡಲಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಗ್ರಾಹಕರು ಮನೆಯಲ್ಲಿ ಕುಳಿತು ಯುಪಿಐ ಬಳಸಬಹುದು. ಆದರೆ ಕೌಂಟರ್‌ನಲ್ಲಿ, ನಗದು ಮೂಲಕವೇ ಪಾವತಿಸಬೇಕಾಗುತ್ತದೆ ಎಂದರು.
ಅಷ್ಟು ಮಾತ್ರವಲ್ಲದೆ ಬಿಲ್ ಮೊತ್ತವು ₹10 ಸಾವಿರಕ್ಕಿಂತ ಹೆಚ್ಚಿದ್ದರೆ, ಅವರು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿ ಮಾಡಬೇಕಾಗುತ್ತದೆ. ಅದೇ ಕಾರಣಕ್ಕೆ ಅವರು ಡಿಡಿ ತೆಗೆದುಕೊಳ್ಳಲು ಬ್ಯಾಂಕ್‌ಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಬಯಸಿ, ಯುಪಿಐ ಸ್ಕ್ಯಾನರ್ ಮೂಲಕ ಪಾವತಿ ಮಾಡಲು ಒತ್ತಾಯಿಸುತ್ತಿದ್ದಾರೆ ಎಂದು ಹೈಕೋರ್ಟ್‌ಗೆ ತಿಳಿಸಿದರು. ಆದರೂ ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು ಮತ್ತು ಎಲ್ಲಾ ರೀತಿಯ ಗ್ರಾಹಕರು ತಮ್ಮ ಬಿಲ್‌ಗಳನ್ನು ಪಾವತಿಸಲು ಬರುತ್ತಾರೆ. ಅವರಿಗೆ ಯುಪಿಐ ಪಾವತಿ ಆಯ್ಕೆ ಸುಲಭವಾಗುತ್ತದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
ನಗದು ಪಾವತಿ ಹಿಂದಿನ ಉದ್ದೇಶ ಏನು ಎಂದು ತಿಳಿಸುವಂತೆ ಬೆಸ್ಕಾಂಗೆ ಹೈಕೋರ್ಟ್ ಪ್ರಶ್ನಿಸಿದೆ. ಈ ಪ್ರಶ್ನೆಗೆ ಉತ್ತರಿಸಲು ಅಫಿಡವಿಟ್ ಸಲ್ಲಿಸಲು ವಿದ್ಯುತ್ ಕಂಪನಿಗೆ ನಿರ್ದೇಶಿಸಿ, ಆಗಸ್ಟ್ 9ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

ಕೃಷ್ಣಮಣಿ