ಪರಿಷ್ಕರಣೆ ಮಾಡಿ ಶಾಲಾ ಪಠ್ಯ ಜಾರಿ ಮಾಡಲು ಯೋಚಿಸಿದ್ದ ಸಂಘಪರಿವಾರ ಹಾಗೂ ಬಿಜೆಪಿ ಸರ್ಕಾರದ ಎಲ್ಲಾ ಲೆಕ್ಕಾಚಾರಗಳು ತಲೆಗೆಳಗಾಗಿವೆ. ಇದೀಗ ರಾಷ್ಟ್ರಮಟ್ಟದಲ್ಲೂ ಕೂಡ ಪಠ್ಯ ಪಸ್ತಕ ಪರಿಷ್ಕರಣೆ ಸದ್ದು ಮಾಡುತ್ತಿದೆ. ಪಠ್ಯ ಪುಸ್ತಕ ವಿವಾದದ ಬಗ್ಗೆ ಜೆಎನ್‌ಯೂ ಇತಿಹಾಸಕಾರರು ಹಾಗೂ ಪ್ರೊಫೆಸರ್‌ಗಳು ಕೂಡ ಮಾತನಾಡಿದ್ದಾರೆ. ಇತಿಹಾಸ ತಜ್ಞೆ ರೋಮಿಳಾ ಥಾಪರ್, ಪ್ರೊ. ಆದಿತ್ಯ ಮುಖರ್ಜಿ ಸೇರಿದಂತೆ ಹಲವರು ಪತ್ರ ಬರೆಯುವ ಮೂಲಕ ಬಿಜೆಪಿ ಸರ್ಕಾರದ ನಡೆ ಬಗ್ಗೆ ಖಂಡನೆ ವ್ಯಕ್ಯಪಡಿಸಿದ್ದಾರೆ.ತಿರುಚಿದ ಇತಿಹಾಸ ಮಕ್ಕಳಿಗೆ ಕಲಿಸಿಕೊಡಬೇಡಿ ಎಂದು ಪತ್ರದಲ್ಲಿ ಜೆಎನ್ ಯು ಇತಿಹಾಸ ತಜ್ಞರು ಹೇಳಿದ್ದಾರೆ.
ಜೆಎನ್ ಯು ಇತಿಹಾಸ ತಜ್ಞೆ ರೋಮಿಳಾ ಥಾಪರ್ ಪತ್ರದ ಸಾರಾಂಶ
ಒಳ್ಳೆಯ ಶಿಕ್ಷಣಕ್ಕೆ ಉತ್ತಮ ಪಠ್ಯಪುಸ್ತಕವೇ ಅಡಿಪಾಯ. ಇತಿಹಾಸ ಪಠ್ಯದಲ್ಲಿ ಏನೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ಖ್ಯಾತ ಇತಿಹಾಸಕಾರರು ತೀರ್ಮಾನಿಸಬೇಕು. ಇತಿಹಾಸದಲ್ಲಿ ಏನು ತೆಗೆದುಕೊಳ್ಳಬೇಕು ಎಂದು ರಾಜಕಾರಣಿಗಳು, ಅಧಿಕಾರಿಗಳು ನಿರ್ಧರಿಸಬಾರದು. ಸಾರ್ವಜನಿಕರ ಅಭಿಪ್ರಾಯ ಅಥವಾ ರಾಜಕಾರಣಿಗಳ ಪ್ರೊಪಗಂಡಾ ಮೇಲೆ ಪಠ್ಯ ರಚಿಸಲು ಸಾದ್ಯವಿಲ್ಲ. ಭಾರತದ ಮಟ್ಟಿಗೆ ದ್ರಾವಿಡ ಇತಿಹಾಸ ಮಹತ್ವದ ಘಟ್ಟ. ಉತ್ತರ ಭಾರತಕ್ಕೆ ಆರ್ಯ ಸಮಾಜ ಹೇಗೆ ಮಹತ್ವವೋ, ದಕ್ಷಿಣ ಭಾರತಕ್ಕೆ ದ್ರಾವಿಡ ಇತಿಹಾಸ ಕೂಡ ಅತ್ಯಂತ ಮಹತ್ವವಾದದ್ದು. ಉತ್ತರ ಭಾರತದಲ್ಲಿ ಸುಲ್ತಾನರು, ಮೊಘಲರ ಇತಿಹಾಸವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಪಠ್ಯದಲ್ಲಿ ಸಮಾಜಶಾಸ್ತ್ರದ ಇತಿಹಾಸ ಪಾಠವನ್ನು ಇತಿಹಾಸ ತಜ್ಞರು ನಿರ್ಧರಿಸಬೇಕು. ವಿದ್ಯಾರ್ಥಿಗಳಿಗೆ ಪುರತಾನ ಕಾಲದ ಇತಿಹಾಸ ತಿಳಿಸಿಕೊಡುವುದು ಅತ್ಯಂತ ಮಹತ್ವ. ಯಾಕೆಂದರೆ ಇದರ ಮೇಲೆ ವಿದ್ಯಾರ್ಥಿಗಳು ಹೇಗೆ, ಯಾವಾಗ, ಏನು ಎಂಬ ಪ್ರಶ್ನೆಗಳನ್ನು ಕೇಳಲು ಸಾಧ್ಯ. ಇತಿಹಾಸ ಫಿಕ್ಷನ್ ಅಲ್ಲ. ಕೆಲ ದಾಖಲೆಗಳ ಮೇಲೆ ಇತಿಹಾಸ ಅವಲಂಬಿತವಾಗಿರುತ್ತದೆ.
ಜೆಎನ್‌ಯೂ ಪ್ರೊ. ಆದಿತ್ಯ ಮುಖರ್ಜಿ ಪತ್ರದ ಸಾರಾಂಶ
ಕರ್ನಾಟಕ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗಳು ಆಶ್ಚರ್ಯ ಉಂಟು ಮಾಡಿದೆ. ಶಿಕ್ಷಣದಲ್ಲಿ ಅತ್ಯುನ್ನತ ಮೈಲಿಗಲ್ಲು ಸಾಧಿಸಿ, ಶ್ರೀಮಂತ ಸಾಂಸ್ಕೃತಿಕ ನೆಲೆ ಹೊಂದಿರುವ ರಾಜ್ಯದಲ್ಲಿ ಈ ಬೆಳವಣಿಗೆ ನಡೆಯುತ್ತಿರುವುದು ಆಶ್ಚರ್ಯ ಮೂಡಿಸಿದೆ. ಕರ್ನಾಟಕ ರಾಜ್ಯದಲ್ಲಿ ಸದ್ಯದ ಬೆಳವಣಿಗೆ ನೋಡಿದ್ರೆ ಇತಿಹಾಸವನ್ನು ತಿರುಚುವ ಕೆಲಸ ಆಗಿದೆ ಎಂದು ತಳಿಯುತ್ತದೆ. ಹೊಸ ವಿಚಾರವನ್ನು ತುರುಕುವ ಮೂಲಕ ದೇಶದ ಜಾತ್ಯತೀತ ಮನೋಭಾವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ. ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವ ಅಂಶಗಳನ್ನು ನೋಡಿ ನಮಗೆ ಗಾಬರಿ ಉಂಟಾಗಿದೆ ಎಂದಿದ್ದಾರೆ.
ಒಟ್ಟಾರೆ ಇದೀಗ ಜೆಎನ್‌ಯೂ ಇತಿಹಾಸಕಾರರು, ಪ್ರೊಫೆಸರ್‌ಗಳು ಕೂಡ ಪಠ್ಯ ಪರಿಷ್ಕರಣೆ ಮಾಡಲು ಹೊರಟಿರುವ ರಾಜ್ಯ ಬಿಜೆಪಿಯ ನಡೆ ಎಷ್ಟು ಅಪಾಯಕಾರಿ ಎಂದು ಹೇಳಿದ್ದಾರೆ. ಈಗಾಗಲೇ ರಾಜ್ಯದಲ್ಲಿನ ಸಾಹಿತಿಗಳು, ಹೋರಾಟಗಾರರೇ ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರೂ ಕೂಡ ಸರ್ಕಾರ ಯಾವುದೇ ಸೊಪ್ಪು ಹಾಕಲಿಲ್ಲ. ಈಗ ಜೆಎನ್‌ಯೂ ಪ್ರಾಧ್ಯಾಪಕರು ಕೂಡ ಮಧ್ಯಪ್ರವೇಶ ಮಾಡಿರುವ ಹಿನ್ನೆಲೆ ಸರ್ಕಾರ ಯಾವ ಪ್ರತಿಕ್ರಿಯೆ ನೀಡಲಿದೆ ಎಂದು ಕಾದು ನೋಡಬೇಕು.
ರೋಮಿಳಾ ಥಾಪರ್, ಪ್ರೊ. ಆದಿತ್ಯ ಮುಖರ್ಜಿ ಸೇರಿದಂತೆ ಹಲವರು ಬರೆದಿರುವ ಪತ್ರದ ಪ್ರತಿ ಇಲ್ಲಿದೆ. ಆಸಕ್ತರು ಡೌನ್‌ಲೋಡ್ ಮಾಡಿ ಓದಬಹುದು.