ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ನಿರಂತರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ರಾಜಸ್ಥಾನದ ಅಂಬಾಗಢ್ ಕೋಟೆ ಈಗ ಕೇಸರಿ ಪಡೆಗಳ ಕೋಮು ಧ್ರುವೀಕರಣದ ಸರಕಾಗಿ ಬದಲಾಗಿದೆ. ರಾಜಸ್ಥಾನದ ಬುಡಕಟ್ಟು ಜನಾಂಗವಾದ ‘ಮೀನಾ’ ಸಮುದಾಯದ ಅಸ್ಮಿತೆಗೆ ಸಾಕ್ಷಿಯಾಗಿದ್ದ ಈ ಕೋಟೆ ಈಗ ವಿವಾದದ ಕೇಂದ್ರವಾಗಿದೆ.
ಮೀನಾ ಪರಿಶಿಷ್ಟ ಪಂಗಡ ಮತ್ತು ವಿಶ್ವ ಹಿಂದು ಪರಿಷತ್ ನೇತೃತ್ವದ ಸಂಘಟನೆಗಳು ಈಗ ಪರಸ್ಪರ ಕಚ್ಚಾಟಕ್ಕೆ ತೊಡಗಿವೆ. ಈ ತಿಂಗಳ ಆರಂಭದಲ್ಲಿ ಯುವ ಶಕ್ತಿ ಮೋರ್ಚಾ (ವಿಶ್ವ ಹಿಂದು ಪರಿಷತ್’ನ ಅಂಗ ಸಂಸ್ಥೆ)ಯು ಅಂಬಾಗಢ್ ಕೋಟೆಯ ಮೇಲೆ ಭಗವಾ ಧ್ವಜವನ್ನು ಹಾರಿಸಿತ್ತು. ಇದಕ್ಕೆ ಬಿಜೆಪಿಯ ಪರೋಕ್ಷ ಬೆಂಬಲವೂ ಇತ್ತು. ಈ ಕೋಟೆಯು ಮೀನಾ ಸಮುದಾಯದ ದೇವತೆಯಾದ ಅಂಬಾ ಮಾತೆಯ ಮಂದಿರವನ್ನು ಒಳಗೊಂಡಿದೆ.
‘ಜೈ ಶ್ರೀ ರಾಮ್’ ಎಂದು ಬರೆಯಲಾಗಿದ್ದ ಧ್ವಜವನ್ಜು ಅಂಬಾ ಮಾತೆಯ ದೇಗುಲವಿರುವ ಕೋಟೆಯ ಮೇಲಿನ ವಿದ್ಯುತ್ ಕಂಬದ ಮೇಲೆ ಹಾರಿಸಲಾಗಿತ್ತು. ಇದರಿಂದ ಕುಪಿತಗೊಂಡ ಮೀನಾ ಸಮುದಾಯದ ನಾಯಕರು ಕಳೆದ ವಾರ ಭಗವಾ ಧ್ವಜವನ್ನು ತೆರವುಗೊಳಿಸಿದ್ದರು. ಈ ವೇಳೆ ಭಗವಾ ಧ್ವಜ ಭಾಗಶಃ ಹರಿದುಹೋಗಿತ್ತು.
ಭಗವಾ ಧ್ವಜವನ್ನು ಕೋಟೆಯ ಮೇಲೆ ಹಾರಿಸುವುದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂಬುದು ಮೀನಾ ಜನಾಂಗದ ನಾಯಕರ ವಾದ. ಈ ಕಾರಣಕ್ಕೆ, ಮೀನಾ ಸಮುದಾಯದ ಪಕ್ಷೇತರ ಶಾಸಕರಾದ ರಾಮಕೇಶ್ ಮೀನಾ ಮತ್ತು ಇತರರು ಜುಲೈ 22ರಂದು ಕೋಟೆಯ ಬಳಿ ಜಮಾಯಿಸಿ ಧ್ವಜ ತೆರವುಗೊಳಿಸಿದ್ದರು. ಧ್ವಜಕ್ಕೆ ಹಾನಿಯಾಗಿದ್ದು ಹಿಂದುತ್ವ ಪಡೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರದ ಕುರಿತಾಗಿ ಟ್ರಾನ್ಸ್’ಪೋರ್ಟ್ ನಗರದ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಎರಡೂ ಗುಂಪುಗಳ ನಡುವೆ ವಾಗ್ವಾದವೇ ನಡೆದಿದೆ. ಬುಡಕಟ್ಟು ಜನಾಂಗದ ಅಸ್ಮಿತೆಗೆ ಧಕ್ಕೆ ತಂದು ಹಿಂದು ಧರ್ಮವನ್ನು ಹೇರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೀನಾ ಸಮುದಾಯ ಆರೋಪಿಸಿದರೆ, ಭಗವಾ ಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂದು ಹಿಂದುತ್ವ ಪಡೆಗಳು ಆರೋಪಿಸಿವೆ.
ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ, ಕೋಮು ಪ್ರಚೋದಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಚಾನೆಲ್ ಆದ ಸುದರ್ಶನ್ ನ್ಯೂಸ್ ಕೇಸರಿ ಪಡೆಗಳ ಪರವಾಗಿ ಸರಣಿ ವರದಿಗಳನ್ನು ಬಿತ್ತರಿಸಿದೆ. ಇದರೊಂದಿಗೆ ಆಗಸ್ಟ್ ಒಂದರಂದು ಬೃಹತ್ ಸಂಖ್ಯೆಯಲ್ಲಿ ಹಿಂದೂಗಳು ಜಮಾಯಿಸಿ ಭಗವಾ ಧ್ವಜವನ್ನು ಮತ್ತೆ ಹಾರಿಸಬೇಕು ಎಂದು ಕರೆ ಕೊಟ್ಟಿದೆ. ಈ ಕಾರಣಕ್ಕಾಗಿ ಸುದರ್ಶನ್ ನ್ಯೂಸ್ ಹಾಗೂ ಅದರ ಸಂಪಾದಕರಾದ ಸುರೇಶ್ ಚೌವ್ನಾಂಕೆ ವಿರುದ್ದ ರಾಮಗಢ ಪಚ್ವಾರಾ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮಿನಾ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಹಾಗೂ ಸಮುದಾಯದ ವಿರುದ್ದ ಜನರನ್ನು ಎತ್ತಿ ಕಟ್ಟುವ ಪ್ರಯತ್ನ ಸುರೇಶ್ ಚೌವ್ಹಾಂಕೆ ಮಾಡಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.
ಟ್ರೈಬಲ್ ಆರ್ಮಿ ಸ್ಥಾಪಕ ಹಂಸರಾಜ್ ಮೀನಾ ಅವರು ಬುಡಕಟ್ಟು ಜನಾಂಗದ ಅಸ್ಮಿತೆಯನ್ನು ಕಿತ್ತುಕೊಂಡು ಸಮುದಾಯವನ್ನು ಕೇಸರೀಕರಣ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
“ಆಗಸ್ಟ್ 1ರಂದು ಮೀನಾ ಸಮುದಾಯದ ಜನರಿಗೆ ಅಂಬಾಗಢ ಕೋಟೆಯಲ್ಲಿ ಜಮಾಯಿಸಲು ಸೂಚನೆ ನಿಡಲಾಗಿದೆ. ಅಂದು ಕೋಟೆಯಲ್ಲಿ ಗಿಡ ನೆಟ್ಟು ಭಾರತದ ತ್ರಿವರ್ಣ ಧ್ವಜವನ್ನು ಆರೋಹಣ ಮಾಡಲು ಸೂಚಿಸಲಾಗಿದೆ. ಇದು ಪ್ರಕೃತಿಯ ಪರವಾಗಿ ಹಾಗೂ ದೇಶದ ಪರವಾಗಿ ನಮ್ಮ ಪ್ರೇಮವನ್ನು ತೋರಿಸಲಿದೆ,” ಎಂದು ಅವರು ಹೇಳಿದ್ದಾರೆ.
ಭಾರತೀಯ ಟ್ರೈಬಲ್ ಪಾರ್ಟಿ ಶಾಸಕ ರಾಜಕುಮಾರ್ ರೋಟ್ ಅವರು ‘ದ ವೈರ್’ಗೆ ನೀಡಿರುವ ಹೇಳಿಕೆಯಲ್ಲಿ, ಬುಡಕಟ್ಟು ಜನಾಂಗಗಳ ಕೇಸರೀಕರಣದ ಪ್ರಯತ್ನ ಹೊಸತಲ್ಲ. ಇದೇ ತರಹದ ಪ್ರಯತ್ನ ಕಳೆದ ವರ್ಷ ಉದಯಪುರ ಬಳಿಯ ಸಲುಂಬರ್’ನ ಸೋನಾರ್ ಮಾತಾ ದೇವಾಲಯದಲ್ಲಿಯೂ ನಡೆದಿತ್ತು. ಆರ್ಎಸ್ಎಸ್ ಕಾರ್ಯಕರ್ತರು ಸಾಂಪ್ರದಾಯಿಕ ಬುಡಕಟ್ಟು ಧ್ವಜವನ್ನು ಕೆಳಗಿಳಿಸಿ ಭಗವಾ ಧ್ವಜವನ್ನು ಹಾರಿಸಿದ್ದರು, ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಲಕ್ಷ್ಮಿಕಾಂತ್ ಭಾರಧ್ವಜ್ ಅವರು, ನಮಗೆ ಅಂಬಾ ಮಾತೆ ಎಂದರೆ ಗೌರವವಿದೆ. ಮೀನಾ ಸಮುದಾಯವು ಹಿಂದೂ ಧರ್ಮದ ಭಾಗವಾಗಿದೆ ಎಂಬುದನ್ನು ಸಾಬೀತುಪಡಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಕೆಲವು ಕಾಂಗ್ರೆಸ್ ಬೆಂಬಲಿತ ವಿಘ್ನ ಸಂತೋಷಿಗಳು ಈ ಪ್ರಯತ್ನವನ್ನು ಹಾಳುಗೆಡವುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಹಿಂದೂಗಳ ಒಗ್ಗಟ್ಟನ್ನು ಮುರಿಯುವ ಕಾಂಗ್ರೆಸ್’ನ ಪ್ರಯತ್ನ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಸರ್ಕರಗಳು, ಪುರಾತತ್ವ ಇಲಾಖೆಯಿಂದ ರಕ್ಷಿಸಲ್ಪಡಬೇಕಾಗಿದ್ದ ಕೋಟೆಯೊಂದು ಇಂದು ಕೋಮು ಧ್ರುವೀಕರಣದ ಕೇಂದ್ರವಾಗಿದೆ. ದೇಶದ ಭವ್ಯ ಇತಿಹಾಸವನ್ನು ಹಾಗೂ ಪರಂಪರೆಯನ್ನು ಸಾರುವ ಕೋಟೆಯನ್ನು ಕೂಡಾ ರಾಜಕೀಯ ಲಾಭದ ಉದ್ದೇಶಕ್ಕಾಗಿ ಕೇಸರೀಕರಣಗೊಳಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ.








